ಮತ್ತೆ ಬಯಲಾಯ್ತು ಕಲಬುರಗಿ ಸೆಂಟ್ರಲ್ ಜೈಲ್ ಕರ್ಮಕಾಂಡ: ಮೊಬೈಲ್, ಗಾಂಜಾ ಬಳಕೆಯೊಂದಿಗೆ ಬಿಂದಾಸ್ ಲೈಫ್!
ಹಣ ಕೊಟ್ಟರೆ ಜೈಲಿನಲ್ಲಿ ಬಿಂದಾಸ್ ಲೈಫ್ ಲೀಡ್ ಮಾಡಬಹುದು ಎಂಬುದು ಜಗಜ್ಜಾಹಿರಾತು ಆಗುತ್ತಲೇ ಇದೆ. ಸದ್ಯ ಕಲಬುರಗಿ ಕೇಂದ್ರ ಕಾರಾಗೃಹದ ಅಧ್ವಾನವನ್ನು ಖುದ್ದು ಖೈದಿಗಳೇ ಬಟಾಬಯಲು ಮಾಡಿದ್ದಾರೆ. ಹಣ ಕೊಟ್ಟರೆ ಅಲ್ಲಿ ಏನೆಲ್ಲಾ ಸಿಗುತ್ತದೆ ಎಂಬ ಕರ್ಮಕಾಂಡವನ್ನು ಬಿಚ್ಚಿಟ್ಟಿದ್ದಾರೆ.
ಕಲಬುರಗಿ, ಅಕ್ಟೋಬರ್ 14: ಕಲಬುರಗಿ ಸೆಂಟ್ರಲ್ ಜೈಲ್ ರಾಜ್ಯದ ಪ್ರತಿಷ್ಠಿತ ಜೈಲುಗಲ್ಲೊಂದು. ಆದರೆ, ಇಲ್ಲಿ ಖೈದಿಗಳನ್ನು ಮನಃವರಿವರ್ತನೆ ಮಾಡಿ ಬಿಡುಗಡೆ ಮಾಡಿದ್ದಕ್ಕಿಂದ, ರಾಜೀತಿಥ್ಯದಿಂದಲೇ ದೊಡ್ಡ ಸುದ್ದಿಯಾಗುತ್ತಲೇ ಇದೆ. ಕಳೆದ ಐದಾರು ತಿಂಗಳ ಹಿಂದಷ್ಟೆ ಕಲಬುರಗಿ ಸೆಂಟ್ರಲ್ ಜೈಲ್ ಕರ್ಮಕಾಂಡವನ್ನು ‘ಟಿವಿ9’ ಬಟಾಬಯಲು ಮಾಡಿತ್ತು. ಜೈಲೊಳಗಡೆ ಐಷಾರಾಮಿ ಜೀವನ ನಡೆಸುತ್ತಿರುವುದನ್ನು ಸಾಕ್ಷಿ ಸಮೇತ ಬಿಚ್ಚಿಟ್ಟಿತ್ತು. ಆ ಘಟನೆಯ ನೆನಪು ಮಾಸುವ ಮುನ್ನವೇ ಅದೇ ಜೈಲಿನ ಕರ್ಮಕಾಂಡವನ್ನು ಖುದ್ದು ವಿಚಾರಣಾಧೀನ ಖೈದಿಗಳು ಬಟಾ ಬಯಲು ಮಾಡಿದ್ದಾರೆ.
ಹಣ ಕೊಟ್ಟರೆ ಜೈಲಿನಲ್ಲಿ ಬಿಂದಾಸ್ ಆಗಿ ಇರಬಹುದು ಎಂಬುದಕ್ಕೆ ವಿಡಿಯೋ ಸಮೇತ ಸಾಕ್ಷಿ ನೀಡಿದ್ದಾರೆ ವಿಚಾರಣಾಧೀನ ಖೈದಿಗಳು. ಯಾಕೆಂದರೆ, ಜೈಲಿನ ಸೆಲ್ನಲ್ಲಿ ಮದ್ಯದ ಬಾಟಲ್ಗಳು, ಖೈದಿಗಳೆಲ್ಲಾ ಗುಂಪಾಗಿ ಕುಳಿತು ಗಾಂಜಾ ಹೊಡೆಯುತ್ತಿರುವ ವಿಡಿಯೋ ಒಂದಡೆಯಾದರೆ, ಮತ್ತೊಂದಡೆ ಸ್ಮಾರ್ಟ್ ಪೋನ್ ಮೂಲಕ ವಿಡಿಯೋ ಕಾಲ್ ಮೂಲಕ ತಮ್ಮ ಸ್ನೇಹಿತ ಜೊತೆ ಬಿಂದಾಸ್ ಆಗಿ ಮಾತನಾಡುತ್ತಿರುವ ವಿಡಿಯೋಗಳನ್ನ ಖುದ್ದು ಜೈಲು ಹಕ್ಕಿಗಳೇ ವೈರಲ್ ಮಾಡಿದ್ದಾರೆ.
ವಿಚಾರಣಾಧೀನ ಖೈದಿಗಳ ವಿಡಿಯೋ ವೈರಲ್
ಸದ್ಯ ಕಲಬುರಗಿ ಜೈಲಿನಲ್ಲಿರುವ ವಿಶಾಲ್, ಸಾಗರ್, ಸೋನು ಎಂಬ ವಿಚಾರಣಾಧೀನ ಖೈದಿಗಳ ವಿಡಿಯೋ ವೈರಲ್ ಆಗಿದೆ. ಇವರೆಲ್ಲ ಕಳೆದ ಹಲವಾರು ದಿನಗಳಿಂದ ಕಲಬುರಗಿ ಸೆಂಟ್ರಲ್ ಜೈಲಿನಲ್ಲಿಯೇ ಇದ್ದಾರೆ. ಇವರೇ ಇದೀಗ ವಿಡಿಯೋ ಕಾಲ್ ಮೂಲಕ ಜೈಲಿನ ಕರ್ಮಕಾಂಡವನ್ನ ಬಯಲು ಮಾಡಿದ್ದಾರೆ.
ಇದಿಷ್ಟೇ ಯಾಕೆ, ರಾಜ್ಯವನ್ನೆ ಬೆಚ್ಚಿ ಬಿಳಿಸಿರುವ ರೇಣುಕಾಸ್ವಾಮಿ ಕೊಲೆ ಆರೋಪಿ, ಚಿತ್ರನಟ ದರ್ಶನ್ ಮ್ಯಾನೆಜರ್ ನಾಗರಾಜ್ ಕೂಡಾ ಇದೇ ಜೈಲಿನಲ್ಲಿದ್ದಾರೆ. ಹೀಗಾಗಿ ಈ ವಿಡಿಯೋ ಹಲವು ಅನುಮಾನಗಳಿಗೆ ಕಾರಣವಾಗಿದೆ. ಯಾಕೆಂದರೆ, ಸಾಮಾನ್ಯ ಖೈದಿಗಳೇ ಇಷ್ಟೊಂದು ಬಿಂದಾಸ್ ಆಗಿ ಇದ್ದಾರೆ ಎಂದರೆ, ವಿಐಪಿ ಖೈದಿ ಆಗಿರುವ ದರ್ಶನ್ ಮ್ಯಾನೆಜರ್ಗೆ ಯಾವ ರೀತಿ ರಾಜಾತಿಥ್ಯ ಸಿಗುತ್ತಿರಬಹುದು ಎಂಬ ಪ್ರಶ್ನೆ ಉಂಟಾಗಿದೆ.
ಜೈಲು ಅಧಿಕಾರಿಗಳು ಹೇಳುವುದೇನು?
ಕಲಬುರಗಿ ಜೈಲಾಧಿಕಾರಿಗಳು ಮಾತ್ರ ವೈರಲ್ ಆಗಿರುವ ವಿಡಿಯೋ ತಮ್ಮ ಜೈಲಿನದ್ದಲ್ಲ ಎನ್ನುತ್ತಿದ್ದಾರೆ. ಯಾಕೆಂದರೆ, ವಿಡಿಯೋದಲ್ಲಿ ಕಾಣುವ ರೀತಿಯ ಸೆಲ್ಗಳು ನಮ್ಮಲ್ಲಿಲ್ಲ ಎಂಬ ಸಬೂಬು ಹೇಳುತ್ತಿದ್ದಾರೆ. ಆದರೆ, ಆ ಖೈದಿಗಳು ಮಾಡಿರುವ ವಿಡಿಯೋ ಕಾಲ್ ಸ್ಕ್ರಿನ್ ರೆಕಾರ್ಡ್ ಮಾತ್ರ ಸಾಕ್ಷ್ಯ ನುಡಿಯುತ್ತಿವೆ. ಸೆಪ್ಟೆಂಬರ್ 17 ರಂದು ವಿಡಿಯೋ ಕಾಲ್ ಮಾಡಿರುವುದು ಸ್ಕ್ರೀನ್ನಲ್ಲಿ ಸ್ಪಷ್ಟವಾಗಿ ಗೊಚರಿಸುತ್ತಿದೆ. ಆದರೂ ಜೈಲು ಮೂಲಗಳು ಮಾತ್ರ ವಿಡಿಯೋಗಳು ತಮ್ಮ ಜೈಲಿನದ್ದಲ್ಲ ಎನ್ನುತ್ತಿದ್ದಾರೆ.
ಇದನ್ನೂ ಓದಿ: ದರ್ಶನ್ ಕೇಸ್ ಬಳಿಕವೂ ನಿಲ್ಲದ ರಾಜಾತಿಥ್ಯ: ಜೈಲಿನಿಂದಲೇ ಜೀವ ಬೆದರಿಕೆ ಸಂದೇಶ ರವಾನೆ
ಅಸಲಿಗೆ ವಿಡಿಯೋದಲ್ಲಿರುವ ಸಾಗರ್, ವಿಶಾಲ್ ಗ್ಯಾಂಗ್ಗೂ ಶಿವಮೊಗ್ಗ ಖೈದಿಗಳ ಮಧ್ಯೆ ಕೋಲ್ಡ್ ವಾರ್ ನಡೆಯುತ್ತಿದೆಯಂತೆ. ಆ ಕಾರಣಕ್ಕಾಗಿಯೇ ಜೈಲೊಳಗಡೆಯ ಕರ್ಮಕಾಂಡದ ಒಂದೊಂದೇ ವಿಡಿಯೋಗಳನ್ನ ಬಹಿರಂಗ ಮಾಡಲಾಗುತ್ತಿದೆ ಎನ್ನಲಾಗಿದೆ. ಹೀಗಾಗಿ ಜೈಲೋಳಗಡೆ ಸಿಬ್ಬಂದಿ ಹಾಗೂ ಅಧಿಕಾರಿಗಳ ಸಾಥ್ ಇಲ್ಲದೇ ಇಷ್ಟೆಲ್ಲಾ ನಡೆಸಲು ಸಾಧ್ಯವೇ ಇಲ್ಲ ಎಂಬ ಮಾತು ಕೇಳಿಬಂದಿದೆ. ಜೈಲು ಅಧಿಕಾರಿಗಳೇ ಹಣಕ್ಕಾಗಿ ಖೈದಿಗಳಿಗೆ ರಾಜೀತಿಥ್ಯ ನೀಡುತ್ತಿದ್ದಾರೆ ಎಂಬ ಗಂಭೀರ ಅರೋಪ ಮತ್ತು ಅದಕ್ಕೆ ಸಾಕ್ಷ್ಯಗಳು ಕೂಡಾ ಸಿಕ್ಕಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ