ಕೆರೆ ಒತ್ತುವರಿ ವೀಕ್ಷಿಸಲು ಕಾರು ಬಿಟ್ಟು ಬೈಕ್ ಹತ್ತಿಬಂದ ಕಲಬುರಗಿ ಜಿಲ್ಲಾಧಿಕಾರಿ
ಕಲಬುರಗಿ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಅವರು ಕೆರೆ ಒತ್ತುವರಿ ಪ್ರದೇಶ ವೀಕ್ಷಿಸಲು ಕಾರು ಬಿಟ್ಟು ಬೈಕ್ ಏರಿ ಹೊರಟರು.
ಕಲಬುರಗಿ: ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಅಡಿಯಲ್ಲಿ ಜಿಲ್ಲಾಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡುತ್ತಿದ್ದಾರೆ. ಕಲಬುರಗಿ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಅವರು ಕೂಡ ಇಂದು ಅಫಜಲಪುರ ತಾಲೂಕಿನ ಅರ್ಜುಣಗಿ ಗ್ರಾಮಕ್ಕೆ ಭೇಟಿ ನೀಡಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಯಶವಂತ್ ಗುರುಕರ್ ಅವರು ಜಿಲ್ಲಾಧಿಕಾರಿಯಾಗೆ ಕಲಬುರಗಿ ಜಿಲ್ಲೆಗೆ ಬಂದ ಮೇಲೆ ಅನೇಕ ಜನೋಪಯೋಗಿ ಕೆಲಸಗಳನ್ನು ಮಾಡುತ್ತಿದ್ದಾರೆ. ಗ್ರಾಮದಲ್ಲಿ ಜನರಿಂದ ಅಹವಾಲು ಆಲಿಸುವ ಸಂದರ್ಭದಲ್ಲಿ ಬಹುತೇಕ ಗ್ರಾಮಸ್ಥರು, ಗ್ರಾಮದ 32 ಎಕರೆ ಕೆರೆ ಪ್ರದೇಶ ಒತ್ತುವರಿಯಾಗಿದ್ದು, ಇದನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಸಂಬಂಧ ಜಿಲ್ಲಾಧಿಕಾರಿಗಳು ಮಧ್ಯಾಹ್ನ ವಸತಿ ಶಾಲೆಯಲ್ಲಿ ಊಟ ಮುಗಿಸಿ ಖುದ್ದಾಗಿ ತಾವೇ ಕೆರೆ ಒತ್ತುವರಿ ಜಾಗ ವೀಕ್ಷಣೆಗೆ ಕಾರು ಹತ್ತಿ ಹೊರಟರು. ಅಧಿಕಾರಿಗಳು-ಗ್ರಾಮಸ್ಥರು ಜಿಲ್ಲಾಧಿಕಾರಿಗಳನ್ನು ಹಿಂಬಾಲಿಸಿದರು. ಕೆರೆ ಜಮೀನು ಪ್ರದೇಶ ಮುಖ್ಯ ರಸ್ತೆಯಿಂದ ಅರ್ಧ ಕಿ.ಮೀ. ಒಳಗಡೆ ಇದ್ದು, ಈ ರಸ್ತೆ ಎತ್ತಿನ ಬಂಡಿಹೋಗುವ ರಸ್ತೆಯಾಗಿದ್ದರಿಂದ ಇಲ್ಲಿ ಕಾರು ಚಲಿಸುವಂತಿರಲಿಲ್ಲ. ಹಾಗಂತ ಜಿಲ್ಲಾಧಿಕಾರಿ ಅಲ್ಲಿಂದ ಸುಮ್ಮನೇ ಮರಳಲಿಲ್ಲ. ಬದಲಾಗಿ ತಮ್ಮ ಕಾರಿನಿಂದ ಇಳಿದು ಸ್ಥಳೀಯರೊಬ್ಬರ ಬೈಕ್ ಹತ್ತಿ ಕೆರೆ ಒತ್ತುವರಿ ಪ್ರದೇಶಕ್ಕೆ ತಲುಪಿದರು. ಅಲ್ಲಿ ಕೆರೆಯನ್ನು ಒತ್ತುವರಿ ಮಾಡದಲಾದ ಪ್ರದೇಶವನ್ನು ವೀಕ್ಷಿಸಿದರು. ನಂತರ ಆದಷ್ಟು ಬೇಗನೆ ಒತ್ತುವರಿ ತೆರವುಗೊಳಿಸಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು. ಜಿಲ್ಲಾಧಿಕಾರಿಯ ನಡೆಗೆ ಗ್ರಾಮದ ಜನರು ಸಂತೋಷ ವ್ಯಕ್ತಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:29 pm, Sat, 15 October 22