Kalaburagi News: ಕಲಬುರಗಿ ಜಿಲ್ಲೆಗೆ ಮುನಿದ ವರುಣ; ಬರಗಾಲ ಘೋಷಣೆಗೆ ರೈತರ ಆಗ್ರಹ
ಜೂನ್ 1 ರಿಂದ ಜುಲೈ 11 ರವರಗೆ ಕಲಬುರಗಿ ಜಿಲ್ಲೆಯಲ್ಲಿ 149 ಮಿಲಿ ಮೀಟರ್ ಮಳೆಯಾಗಬೇಕಿತ್ತು. ಆದ್ರೆ ಆಗಿದ್ದು ಕೇವಲ 96 ಮೀಲಿ ಮೀಟರ್ ಮಾತ್ರ. ಅಂದ್ರೆ 36 ರಷ್ಟು ಮಳೆ ಕೊರತೆಯಿದೆ.
ಕಲಬುರಗಿ: ರಾಜ್ಯದ ಅನೇಕ ಕಡೆ ವರುಣನ ಅಬ್ಬರ ಹೆಚ್ಚಾಗಿದ್ದು, ಜನರು ಅನೇಕ ರೀತಿಯ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಆದ್ರೆ ನಮ್ಮದೇ ರಾಜ್ಯದ ಕಲಬುರಗಿ (Kalaburagi) ಜನರ ಮೇಲೆ ವರುಣದೇವ ಮುನಿಸಿಕೊಂಡಿದ್ದಾನೆ. ವರುಣ ಕೃಪೆಗಾಗಿ ಜನರು ಹತ್ತಾರು ರೀತಿಯ ಆಚರಣೆಗಳನ್ನು ಮಾಡಿದ್ದಾರೆ. ಆದ್ರೆ ಮುನಿಸು ಮರೆತು ವರುಣ ತಂಪೆರೆಯುತ್ತಿಲ್ಲ. ಮತ್ತೊಂದಡೆ ಬರಗಾಲ ಘೋಷಣೆಗೆ ಆಗ್ರಹ ಜೋರಾಗುತ್ತಿದೆ.
ಕಲಬುರಗಿ ಜಿಲ್ಲೆಯಲ್ಲಿ ಮಳೆ ಕೊರತೆ
ಕಲಬುರಗಿ ಜಿಲ್ಲೆಯ ರೈತರು ಮಳೆಯಿಲ್ಲದೇ ಕಂಗಾಲಾಗಿದ್ದಾರೆ. ಜನರಿಗೆ ಕೂಡಾ ಆತಂಕ ಆರಂಭವಾಗಿದೆ. ರಾಜ್ಯದ ಅನೇಕ ಕಡೆ ಮಳೆಯ ಅಬ್ಬರ ಹೆಚ್ಚಾಗಿದೆ. ಆದರೆ ಬಿಸಿಲನಾಡು ಕಲಬುರಗಿ ಜಿಲ್ಲೆಯಲ್ಲಿ ಮಾತ್ರ ನಿರೀಕ್ಷಿತ ಮಳೆಯಾಗುತ್ತಿಲ್ಲಾ. ಜೂನ್ 1 ರಿಂದ ಜುಲೈ 11 ರವರಗೆ ಕಲಬುರಗಿ ಜಿಲ್ಲೆಯಲ್ಲಿ 149 ಮಿಲಿ ಮೀಟರ್ ಮಳೆಯಾಗಬೇಕಿತ್ತು. ಆದ್ರೆ ಆಗಿದ್ದು ಕೇವಲ 96 ಮೀಲಿ ಮೀಟರ್ ಮಾತ್ರ. ಅಂದ್ರೆ 36 ರಷ್ಟು ಮಳೆ ಕೊರತೆಯಿದೆ. ಇನ್ನು ಆಗಿರುವ 96 ಮೀಲಿ ಮೀಟರ್ ಮಳೆ ಕೂಡಾ ಜಿಲ್ಲೆಯ ಚಿಂಚೋಳಿ, ಕಾಳಗಿ, ಸೇಡಂ ತಾಲೂಕಿನಲ್ಲಿ ಮಾತ್ರ. ಅಫಜಲಪುರ,ಕಲಬುರಗಿ, ಆಳಂದ, ಜೇವರ್ಗಿ, ಯಡ್ರಾಮಿ ಸೇರಿದಂತೆ ಕೆಲ ತಾಲೂಕುಗಳಲ್ಲಿ ಶೇಕಾಡ ಎಪ್ಪತ್ತರಿಂದ ಎಂಬತ್ತರಷ್ಟು ಮಳೆ ಕೊರತೆಯಾಗಿದೆ.
ಬಿತ್ತನೆ ಮೇಲೆ ಮಳೆ ಕೊರತೆ ಪರಿಣಾಮ
ಜಿಲ್ಲೆಯಲ್ಲಿ ಒಂಬತ್ತು ಲಕ್ಷ ಹೆಕ್ಟೇರ್ ಬಿತ್ತನೆ ಪ್ರದೇಶವಿದೆ. ಮಳೆಯಾಗದೇ ಇರೋದರಿಂದ, ಜಿಲ್ಲೆಯ ಬಹುತೇಕ ರೈತರು ಇನ್ನು ಬಿತ್ತನೆ ಮಾಡಿಲ್ಲ. ಸಾವಿರಾರು ರೂಪಾಯಿ ಖರ್ಚು ಮಾಡಿ ಬೀಜ, ಗೊಬ್ಬರವನ್ನು ರೈತರು ತಂದಿಟ್ಟುಕೊಂಡಿದ್ದಾರೆ. ಆದರೆ ಮಳೆಯಾಗದೇ ಇರೋದರಿಂದ ಭೂಮಿಯಲ್ಲಿ ಹಸಿಯಿಲ್ಲ. ಹೀಗಾಗಿ ರೈತರು ಬಿತ್ತನೆ ಮಾಡಿಲ್ಲ. ಮುಂಗಾರು ಮಳೆ ಬಂದಿದ್ದರೆ ರೈತರು, ಹೆಸರು, ಉದ್ದು ಬಿತ್ತನೆ ಮಾಡುತ್ತಿದ್ದರು. ಮಳೆಯಾಗದೇ ಇದ್ದಿದ್ದರಿಂದ, ಹೆಸರು, ಉದ್ದು ಬಿತ್ತನೆ ಸಮಯ ಮುಗಿದಿದೆ. ಹೀಗಾಗಿ ರೊಕ್ಕದ ಮಾಲು ಅಂತ ಕರೆಸಿಕೊಳ್ಳುತ್ತಿದ್ದ ಬೆಳೆಗಳು ಇದೀಗ ಬಾರದಂತಾಗಿವೆ. ಇದೀಗ ತೊಗರಿ ಬಿತ್ತನೆಯ ಸಮಯ ಕೂಡಾ ಮುಗಿಯುವ ಹಂತಕ್ಕೆ ಬಂದಿದ್ದು, ವಾರದಲ್ಲಿ ಮಳೆ ಬಾರದೇ ಇದ್ರೆ ತೊಗರಿ ಬಿತ್ತನೆಗೆ ಕೂಡಾ ತೊಂದರೆಯಾಗಲಿದೆ. ಇದು ರೈತರ ಆತಂಕವನ್ನು ಹೆಚ್ಚಿಸಿದೆ.
ಫಲ ನೀಡದ ಆಚರಣೆಗಳು
ಇನ್ನು ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಮಳೆಗಾಗಿ ಜನರು ಹತ್ತಾರು ರೀತಿಯ ಆಚರಣೆಗಳನ್ನು ಮಾಡುತ್ತಿದ್ದಾರೆ. ಕತ್ತೆ ಮದುವೆ, ಕಪ್ಪೆಗಳ ಮದುವೆ, ಗೊಂಬೆ ಮದುವೆ ಮಾಡಿದ್ರೆ ಮಳೆ ಬರುತ್ತೆ ಅನ್ನೋ ನಂಬಿಕೆಯಿದ್ದು, ಇದರ ಆಧಾರದ ಮೇಲೆ ಅನೇಕ ಆಚರಣೆಗಳನ್ನು ಮಾಡಿದ್ದಾರೆ. ಹತ್ತಾರು ದೇವರಿಗೆ ಪೂಜೆ ಮಾಡಿದ್ದಾರೆ. ಆದ್ರೆ ಮಳೆ ಮಾತ್ರ ಬರ್ತಿಲ್ಲ.
ಬರಗಾಲ ಘೋಷಣೆಗೆ ರೈತರ ಆಗ್ರಹ
ನಿರೀಕ್ಷಿತ ಪ್ರಮಾಣದಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಮಳೆಯಾಗಿಲ್ಲ. ಮಳೆ ಬರುವ ಸೂಚನೆಗಳು ಕೂಡಾ ಕಾಣುತ್ತಿಲ್ಲ. ಹೀಗಾಗಿ ಬರಗಾಲ ಘೋಷಣೆ ಮಾಡಬೇಕು. ರೈತರ ನೆರವಿಗೆ ಸರ್ಕಾರ ಬರಬೇಕು ಅಂತ ರೈತರು ಆಗ್ರಹಿಸಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಆಗ್ರಹಿಸಿರೋ ರೈತ ಆದಿನಾಥ್ ಹೀರಾ, ರೈತರು ಸಂಕಷ್ಟದಲ್ಲಿದ್ದಾರೆ. ಕಳೆದ ವರ್ಷ ಅತಿವೃಷ್ಟಿಯಿಂದ ರೈತರು ಸಂಕಷ್ಟಕ್ಕೆ ತುತ್ತಾಗಿದ್ದರು. ಈ ಬಾರಿ ಮಳೆ ಬಾರದೇ ಇರೋದರಿಂದ ಕಂಗಾಲಾಗಿದ್ದಾರೆ. ಹೀಗಾಗಿ ಸರ್ಕಾರ ರೈತರ ನೆರವಿಗೆ ನಿಲ್ಲಬೇಕು ಅಂತ ಆಗ್ರಹಿಸಿದ್ದಾರೆ.
ಇದನ್ನೂ ಓದಿ: Kalaburagi News: ಬಾಡಿಗೆ ಶಿಕ್ಷಕಿ ಮೂಲಕ ಮಕ್ಕಳಿಗೆ ಪಾಠ ಮಾಡಿಸಿದ ಶಿಕ್ಷಕ ಅಮಾನತು
ಇನ್ನು ಬರಗಾಲ ಘೋಷಣೆ ಬಗ್ಗೆ ಪ್ರತಿಕ್ರಿಯೇ ನೀಡಿರುವ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಪ್ರಿಯಾಂಕ್ ಖರ್ಗೆ, ಜುಲೈ 15 ರಂದು ಸಂಪುಟ ಉಪ ಸಮಿತಿ ಸಭೆಯಿದ್ದು, ಸಭೆಯ ನಂತರ ಬರಗಾಲ ಘೋಷಣೆ ಬಗ್ಗೆ ನಿರ್ಧಾರ ಮಾಡೋದಾಗಿ ಹೇಳಿದ್ದಾರೆ.
ಕಲಬುರಗಿ ಜಿಲ್ಲೆಗೆ ಮಳೆ ಬರ್ತಿಲ್ಲ. ರೈತರು ಬಿತ್ತನೆಗೆ ಭೂಮಿ ಹಸಿ ಇಲ್ಲದೇ ಇರೋದರಿಂದ ಮಳೆಗಾಗಿ ಕಾದು ಕೂತಿದ್ದಾರೆ. ಇಂತಹ ಸಮಯದಲ್ಲಿ ಸರ್ಕಾರ ರೈತರ ನೆರವಿಗೆ ನಿಲ್ಲೋ ಕೆಲಸ ಮಾಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ