ಕಲಬುರಗಿ, ಆ.25: ಕಲಬುರಗಿ(Kalaburagi) ತಾಲೂಕಿನ ಶರಣಸಿರಗಿ ಗ್ರಾಮದ ಕಮಲಾಬಾಯಿ ಜಾಧವ್ ಎಂಬುವವರಿಗೆ ಪ್ರತಿ ಎರಡೂ ದಿನಕ್ಕೊಮ್ಮೆ ಡಯಾಲಿಸಿಸ್ ಮಾಡಿಸಬೇಕು. ಆದ್ರೆ, ಜಿಮ್ಸ್ನಲ್ಲಿ ನಂಬರ್ ಬರೆಸಿ ಎರಡೂ ತಿಂಗಳು ಕಳೆದರೂ ಇವರ ಸರತಿಯೇ ಬಂದಿಲ್ಲವಂತೆ. ಆಸ್ಪತ್ರೆಗೆ ಹೋಗಿ ಕೇಳಿದರೆ ನಮ್ಮಲ್ಲಿರುವ ಡಯಾಲಿಸಿಸ್ ಮಷೀನ್ಗಳು ಕೆಟ್ಟು ಹೋಗಿವೆ. ನಾವೇನು ಮಾಡೋಣ ಎನ್ನುತ್ತಿದ್ದಾರೆ. 200 ಕ್ಕೂ ಹೆಚ್ಚು ರೋಗಿಗಳು ನಂಬರ್ ಬರೆಯಿಸಿದ್ದಾರೆ. ಅವರ ಸರತಿಯೇ ಬಂದಿಲ್ಲ ಎಂದು ಉಢಾಪೆ ಉತ್ತರ ನೀಡುತ್ತಿದ್ದಾರೆ. ಇದರಿಂದ ಕಂಗಾಲಾಗಿರುವ ಕಮಲಬಾಯಿ ಕುಟುಂಬ, ಸಧ್ಯ ಖಾಸಗಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸಿದೆ.
ಇನ್ನು ಖಾಸಗಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸಲು ತಿಂಗಳಿಗೆ ಎನಿಲ್ಲಾ ಅಂದರೂ 80 ರಿಂದ 90 ಸಾವಿರ ರೂಪಾಯಿ ಬೇಕು. ಅಷ್ಟೊಂದು ದುಡ್ಡು ಎಲ್ಲಿಂದ ತರುವುದು ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಬಡ ರೋಗಿಗಳಿಗೆ ನಿರ್ಮಿಸಿರುವ ಜಿಮ್ಸ್ ಆಸ್ಪತ್ರೆಯಲ್ಲಿ ಮಷೀನ್ಗಳೇ ಇಲ್ಲ ಅಂದರೆ ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ.
ಇದನ್ನೂ ಓದಿ:ಡೆಂಗ್ಯೂ ಸಂಕಷ್ಟದಲ್ಲೂ ಜಿಮ್ಸ್ ವೈದ್ಯರ ನಿರ್ಲಕ್ಷ್ಯ; ಲಕ್ಷ ಲಕ್ಷ ಸಂಬಳ ಪಡೆದು ಡ್ಯೂಟಿಗೆ ಚಕ್ಕರ್
ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಒಟ್ಟು 8 ಕಿಡ್ನಿ ಡಯಾಲಿಸಿಸ್ ಮಷೀನಗಳಿದ್ದವು. ಆದರೆ ಅದರಲ್ಲಿ ಸಧ್ಯ 6 ಮಷೀನ್ಗಳು ಕೆಟ್ಟು ನಿಂತಿದ್ದು, ಕೇವಲ 2 ಮಷೀನ್ ಮಾತ್ರ ಕಾರ್ಯನಿರ್ವಹಿಸುತ್ತಿವೆ. ಒಬ್ಬರಿಗೆ ಡಯಾಲಿಸಿಸ್ ಮಾಡಿಸಬೇಕು ಅಂದರೂ ಕನಿಷ್ಟ 40 ರಿಂದ 50 ನಿಮಿಷ ಬೇಕು. ಹೀಗಾಗಿ ದಿನ ನಿತ್ಯ ಡಯಾಲಿಸಿಸ್ ರೋಗಿಗಳು ಪರದಾಡುತ್ತಿದ್ದಾರೆ. ಇನ್ನು ಈ ಬಗ್ಗೆ ಟಿವಿ9 ವಿಸ್ತೃತ ಸುದ್ದಿ ಪ್ರಸಾರ ಮಾಡುತ್ತಿದ್ದಂತೆ ಎಚ್ಚೆತ್ತ ವೈಧ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ‘ಜಿಲ್ಲೆಯಲ್ಲಿ ಹೆಚ್ಚುವರಿಯಾಗಿರುವ ಡಯಾಲಿಸಿಸ್ ಯಂತ್ರಗಳನ್ನ ಜಿಮ್ಸ್ಗೆ ತರಲು ಸೂಚನೆ ನೀಡಿದ್ದಾರೆ.
ಅಲ್ಲದೇ ಇನ್ನು ಎರಡೂ ದಿನದಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವರ ತವರಲ್ಲೆ ಈ ಅದ್ವಾನಕ್ಕೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಸಧ್ಯ ಖುದ್ದು ಸಚಿವರೇ ಎರಡೂ ದಿನ ಡೆಡ್ ಲೈನ್ ನೀಡಿದ್ದಾರೆ. ಅಷ್ಟರೊಳಗೆ ಸಮಸ್ಯೆ ಬಗೆಹರಿದರೆ ನೂರಾರು ರೋಗಿಗಳು ನೆಮ್ಮದಿಯ ನಿಟ್ಟುಸಿರು ಬಿಡುವುದು ಗ್ಯಾರೆಂಟಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ