ಜಮೀನು ವಿಚಾರಕ್ಕೆ ದಾಯಾದಿ ಕಲಹ: ಹಿಂಬದಿಯಿಂದ ಚಾಕು ಇರಿದು ಬರ್ಬರವಾಗಿ ವ್ಯಕ್ತಿಯ ಕೊಲೆ

ಜಮೀನು ವಿಚಾರವಾಗಿ ಕುಟುಂಬದ ನಡುವೆ ಉಂಟಾದ ದಾಯಾದಿ ಕಲಹಕ್ಕೆ ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಹಂಗನಹಳ್ಳಿ ಗ್ರಾಮದಲ್ಲಿ ಓರ್ವ ಬಲಿಯಾಗಿದ್ದಾನೆ. ಸೋದರ ಸಂಬಂಧಿಯೇ ಕೃತ್ಯ ಎಸಗಿದ್ದು, ಘಟನೆ ಬಳಿಕ ಆರೋಪಿ ಎಸ್ಕೇಪ್​​ ಆಗಿದ್ದಾನೆ. ತಲೆ ಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

ಜಮೀನು ವಿಚಾರಕ್ಕೆ ದಾಯಾದಿ ಕಲಹ: ಹಿಂಬದಿಯಿಂದ ಚಾಕು ಇರಿದು ಬರ್ಬರವಾಗಿ ವ್ಯಕ್ತಿಯ ಕೊಲೆ
ಸಾಂದರ್ಭಿಕ ಚಿತ್ರ
Image Credit source: Google
Edited By:

Updated on: Jan 31, 2026 | 7:29 PM

ಕಲಬುರಗಿ, ಜನವರಿ 31: ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ದಾಯಾದಿ ಕಲಹ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಹಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಬಸವರಾಜ್ ತಳವಾರ ಮೃತ ದುರ್ದೈವಿಯಾಗಿದ್ದು, ಮೃತನ ದೊಡ್ಡಪ್ಪನ ಮಗ ಗೂಳೇಶ್​​ ಎಂಬವನೇ ಕೊಲೆ ಆರೋಪಿಯಾಗಿದ್ದಾನೆ. ಘಟನೆ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದು, ಗೂಳೆಶ್​​ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಸಿಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದ ಬಸವರಾಜ್ ಹೆಂಡತಿ ಜೊತೆ ಊಟ ಮಾಡಿ ಕೂತಿದ್ದರು. ಈ ವೇಳೆ ಸ್ನೇಹಿತರಿಂದ ಕರೆ ಬಂದ ಹಿನ್ನೆಲೆ ಮನೆಯಿಂದ ಆಚೆ ಬಂದು ಅಂಗಡಿಯ ಬಳಿ ಗೆಳೆಯರ ಜೊತೆ ಬಸವರಾಜ್​​ ಮಾತಾಡಿಕೊಂಡಿದ್ದರು. ಈ ವೇಳೆ ಅಲ್ಲಿಗೆ ಬಂದ ಗೂಳೇಶ್,​​​​ ಅನ್ನ ಇಲ್ಲದಿದ್ರು ದೊಡ್ಡ ದೊಡ್ಡ ಮಾತು ಹೇಳ್ತೀಯಾ? ಜಮೀನು ಮಾರಾಟ ವಿಚಾರದಲ್ಲಿ ಎಂಟ್ರಿ ಕೊಡ್ತೀಯಾ? ಅಂತಾ ಬೈಯೋದಕ್ಕೆ ಶುರು ಮಾಡಿದ್ದಾನೆ‌. ಬಸವರಾಜ್ ಮೇಲಿನ ಕೋಪಕ್ಕೆ ಆತನ ಸ್ನೇಹಿತನ ಜೊತೆಯೂ ಗಲಾಟೆ ತೆಗೆದು ಹಲ್ಲೆ ಮಾಡಿದ್ದಾನೆ. ಹೀಗಾಗಿ ತಕ್ಷಣ ಅಲ್ಲಿದ್ದವರು ಬಸವರಾಜ್​​ಗೆ ಮನೆಗ ಹೋಗುವಂತೆ ಹೇಳಿದ್ದಾರೆ. ಅವರು ಕೂಡ ಮನೆಯತ್ತ ಹೆಜ್ಜೆ ಹಾಕಿದ್ದು, ಈ ವೇಳೆ ಹಿಂದಿನಿಂದ ಬಂದ ಆರೋಪಿ ಚಾಕುವಿನಿಂದ ಎರಡ್ಮೂರು ಬಾರಿ ಬಸವರಾಜ್​​ಗೆ ಇರಿದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಸವರಾಜ್ ತನ್ನ ಸಹೋದರ ಮತ್ತು ಚಿಕ್ಕಪ್ಪಂದಿರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ‌. ತಕ್ಷಣ ಸ್ಥಳಕ್ಕೆ ಬಂದವರೆ ಆತನನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಯತ್ನಿಸಿದರೂ ಅಷ್ಟರಲ್ಲಾಗಲೇ ಬಸವರಾಜ್ ಉಸಿರು ಚೆಲ್ಲಿದ್ದರು.

ಇದನ್ನೂ ಓದಿ: ತನ್ನ ತಂದೆ-ತಾಯಿ, ಸಹೋದರಿಯನ್ನು ಕೊಂದ ಯುವಕ; ಮಿಸ್ಸಿಂಗ್ ಕೇಸ್ ಕೊಡಲು ಹೋಗಿ ಸತ್ಯ ಕಕ್ಕಿದ ಭೂಪ!

ಇನ್ನು ಕೊಲೆಯಾದ ಬಸವರಾಜ್ ಮತ್ತು ಗೂಳೇಶ್ ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳು. ಬಸವರಾಜ್ ತಂದೆ-ತಾಯಿ ಮೃತರಾದ ಬಳಿಕ ಬಸವರಾಜ್ ಸಹೋದರರನ್ನ ಗೂಳೇಶ್ ತಂದೆ-ತಾಯಿಯೇ ಸಾಕಿದ್ದು, ಮದುವೆಯನ್ನೂ ಮಾಡಿದ್ದರು. ಆದ್ರೆ ಮದುವೆ ಖರ್ಚು ಅದು ಇದು ಅಂತಾ ಸಾಕಷ್ಟು ಸಾಲ ಆಗಿದೆ. ಹೀಗಾಗಿ ಬಸವರಾಜ್ ಪಾಲಿನ ಜಮೀನು ನಾವೇ ಖರಿದಿ ಮಾಡಿ ಸಾಲ ತೀರಿಸುತ್ತೇವೆ ಎಂದು ಗೂಳೇಶ್​​ ಕುಟುಂಬ ಹೇಳಿತ್ತು. ಬಸವರಾಜ್ ಪತ್ನಿ ಸ್ವಲ್ಪ ಓದು ಬರಹ ಗೊತ್ತಿದ್ದವರಾಗಿದ್ದು, ಇವರು ಮೋಸ ಮಾಡಿ ನಮ್ಮ ಜಮೀನು ಲಪಟಾಯಿಸೋದಕ್ಕೆ ಮುಂದಾಗಿದ್ದಾರೆ ಅಂತಾ ಗಂಡನಿಗೆ ಹೇಳಿದ್ದರು. ಹೀಗಾಗಿ ಮನೆಯಿಂದ ಆಚೆ ಬಂದು ಇವರು ವಾಸ ಮಾಡುತ್ತಿದ್ದರು. ಇದ್ರಿಂದ ಕೆರಳಿ ಕೆಂಡವಾಗಿ ಬಸವರಾಜ್ ಮೇಲೆ ಹಲ್ಲೆ ಮಾಡಿ ಗೂಳೇಶ್​​ ಒಮ್ಮೆ ಪೊಲೀಸ್ ಠಾಣೆಯ ಮೆಟ್ಟಿಲೇರಿ ಬಂದಿದ್ದ. ಅದಾದ ಬಳಿಕವೂ ಪದೇ ಪದೇ ಬಸವರಾಜ್ ಜೊತೆ ಗಲಾಟೆ ಮಾಡ್ತಿದ್ದ. ಕೆಲ ತಿಂಗಳ ಹಿಂದೆ ಈ ಗೂಳೇಶ್​​ನ ಮತ್ತೊಬ್ಬ ಚಿಕ್ಕಪ್ಪ ಕೂಡ ಜಮೀನು ಮಾರಾಟ ಮಾಡೋದಕ್ಕೆ ಮುಂದಾಗಿದ್ದರು. ಆ ಜಮೀನನ್ನು ಕಡಿಮೆದರಲ್ಲಿ ಖರೀದಿಸಲು ಆರೋಪಿಯ ಕುಟುಂಬ ನಿರ್ಧರಿಸಿತ್ತು. ಆದರೆ ಅದಾಗಲೇ ಅವರು ಬೇರೆಯವರಿಗೆ ಜಮೀನು ಮಾರಲು ಒಪ್ಪಿ ಮುಂಗಡ ಹಣವನ್ನೂ ಪಡೆದಿದ್ದರು. ಚಿಕ್ಕಪ್ಪನ ಬೆಂಬಲಕ್ಕೆ ಬಸವರಾಜ್​​​​ ಕೂಡ ನಿಂತಿದ್ದರು. ಈ ವಿಚಾರವಾಗಿಯೂ  ಗೂಳೇಶ್​​ಗೆ ಸಿಟ್ಟಿತ್ತು ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.