ಕಲಬುರಗಿಯಲ್ಲಿ ಅನ್ನಭಾಗ್ಯ ಅಕ್ಕಿ ಅಕ್ರಮ ದಾಸ್ತಾನು, 35 ಕ್ವಿಂಟಾಲ್ ಅಕ್ಕಿ ಜಪ್ತಿ: ಮಾಹಿತಿ ನೀಡಿದ್ದವನ ಮೇಲೆ ಹಲ್ಲೆ

ಕಲಬುರಗಿ ಜೇವರ್ಗಿಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 35 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಅನ್ನಭಾಗ್ಯ ಅಕ್ಕಿ ಅಕ್ರಮ ದಾಸ್ತಾನು ಮಾಡಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಮಾಹಿತಿ ನೀಡಿದ್ದರು. ಈ ಕಾರಣಕ್ಕೆ ಅವರ ಮೇಲೆ ಹಲ್ಲೆ ಮಾಡಲಾಗಿದೆ ಹಾಗೂ ಜೀವ ಬೆದರಿಕೆ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಪ್ರಕರಣ ದಾಖಲಾಗಿದೆ.

ಕಲಬುರಗಿಯಲ್ಲಿ ಅನ್ನಭಾಗ್ಯ ಅಕ್ಕಿ ಅಕ್ರಮ ದಾಸ್ತಾನು, 35 ಕ್ವಿಂಟಾಲ್ ಅಕ್ಕಿ ಜಪ್ತಿ: ಮಾಹಿತಿ ನೀಡಿದ್ದವನ ಮೇಲೆ ಹಲ್ಲೆ
ಅನ್ನಭಾಗ್ಯ ಅಕ್ಕಿ
Image Credit source: tv9
Edited By:

Updated on: Sep 03, 2026 | 7:27 AM

ಮುಖ್ಯಾಂಶಗಳು

  • ಅಕ್ರಮ ಅಕ್ಕಿ ದಾಸ್ತಾನು ಮಾಹಿತಿ ನೀಡಿದ್ದಕ್ಕೆ ಹಲ್ಲೆ
  • 35 ಕ್ವಿಂಟಾಲ್ ಪಡಿತರ ಅಕ್ಕಿ ಜಪ್ತಿ
  • ಅಕ್ಕಿ ದಂಧೆ ವಿರುದ್ಧ ಕಠಿಣ ಕಾನೂನು ಚಿಂತನೆ

ಕಲಬುರಗಿ, ಸೆಪ್ಟೆಂಬರ್ 3: ಬಡವರ ಹಸಿವು ನೀಗಿಸುವ ಉದ್ದೇಶದಿಂದ ಜಾರಿಗೆ ಬಂದಿರುವ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಅಕ್ರಮ ಅಕ್ಕಿ ದಾಸ್ತಾನು ಕುರಿತು ಮಾಹಿತಿ ನೀಡಿದ್ದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಹೊರವಲಯದಲ್ಲಿ ಅಕ್ರಮವಾಗಿ ಅಕ್ಕಿ ದಾಸ್ತಾನು ಮಾಡಲಾಗಿದೆ ಎಂಬ ಮಾಹಿತಿ ಆಗಸ್ಟ್ 29ರಂದು ಸಾಮಾಜಿಕ ಕಾರ್ಯಕರ್ತ ಮಡಿವಾಳಪ್ಪ ಅವರಿಗೆ ಲಭಿಸಿತ್ತು. ಈ ಕುರಿತು ಅವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಮಾಹಿತಿ ಆಧರಿಸಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, 35 ಕ್ವಿಂಟಾಲ್ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಓರ್ವ ವ್ಯಕ್ತಿಯ ವಿರುದ್ಧ ಪ್ರಕರಣವೂ ದಾಖಲಾಗಿತ್ತು.

ಮಡಿವಾಳಪ್ಪ ಮೇಲೆ ಹಲ್ಲೆ ಆರೋಪ

ಆದರೆ, ಅಕ್ರಮ ಅಕ್ಕಿ ದಾಸ್ತಾನು ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದ ಮಡಿವಾಳಪ್ಪ ಅವರ ಮೇಲೆ ಕೆಲವರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಇದೀಗ ಕೇಳಿಬಂದಿದೆ. ಅಕ್ಕಿಯ ಅಕ್ರಮ ದಾಸ್ತಾನು ಕುರಿತು ಮಾಹಿತಿ ನೀಡಿದ್ದು ನೀನೇ ಎಂದು ಆರೋಪಿಸಿ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಪೊಲೀಸರಿಗೆ ಮಾಹಿತಿ ನೀಡಿದ್ದಕ್ಕೆ ಜೀವ ಬೆದರಿಕೆ

ಅಷ್ಟೇ ಅಲ್ಲದೆ, ಮಡಿವಾಳಪ್ಪ ಅವರಿಗೆ ಜೀವ ಬೆದರಿಕೆಯನ್ನೂ ಹಾಕಲಾಗಿದೆ ಎಂದು ಆರೋಪಿಸಲಾಗಿದೆ. ‘ನೀನೇ ಅಕ್ಕಿಯ ಮಾಹಿತಿ ನೀಡಿದ್ದೀಯಾ, ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ’ ಎಂದು ಬೆದರಿಕೆ ಹಾಕಿದ ಆರೋಪದ ಹಿನ್ನೆಲೆಯಲ್ಲಿ ನೂರಾರು ಮಂದಿ ಜೇವರ್ಗಿ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದರು ಎನ್ನಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಅಕ್ಕಿ ಅಕ್ರಮ ದಂಧೆಯಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿರುವ ಚಂದ್ರು ಮ್ಯಾಗೇರಿ ಸೇರಿದಂತೆ ಇತರರ ವಿರುದ್ಧ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.

ಅಕ್ಕಿ ದಂಧೆ ವಿರುದ್ಧ ಕಠಿಣ ಕಾನೂನಿಗೆ ಚಿಂತನೆ

ಕಲಬುರಗಿ ಜಿಲ್ಲೆಯಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುವ ದಂಧೆ ನಡೆಯುತ್ತಿದೆ ಎಂಬ ಆರೋಪಗಳ ನಡುವೆ, ಇದೀಗ ದಂಧೆಕೋರರು ಅಕ್ಕಿ ಸಾಗಣೆ ಮಾತ್ರವಲ್ಲದೆ, ಅಕ್ರಮವನ್ನು ಪ್ರಶ್ನಿಸುವವರ ಮೇಲೂ ಹಲ್ಲೆ ನಡೆಸುವ ಹಂತಕ್ಕೆ ತಲುಪಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಅಕ್ರಮ ಪಡಿತರ ಅಕ್ಕಿ ದಂಧೆ ತಡೆಗೆ ಕಠಿಣ ಕಾನೂನು ರೂಪಿಸುವ ಕುರಿತು ಆಹಾರ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಗದಗದಲ್ಲಿ ಅನ್ನಭಾಗ್ಯ ಅಕ್ಕಿಗೆ ಕನ್ನ: ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 32 ಟನ್ ಜಪ್ತಿ

ಕಠಿಣ ಕಾನೂನು ಜಾರಿಗೆ ತರುವ ಮುನ್ನ ರಾಜ್ಯ ಸರ್ಕಾರ ಜಿಲ್ಲಾವಾರು ಅಕ್ಕಿ ಅಕ್ರಮ ದಂಧೆಯಲ್ಲಿ ತೊಡಗಿರುವವರ ಪಟ್ಟಿಯನ್ನೂ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ. ಹೀಗಾಗಿ ಅಕ್ರಮ ಪಡಿತರ ಅಕ್ಕಿ ದಂಧೆಕೋರರ ವಿರುದ್ಧ ಸರ್ಕಾರ ಯಾವ ರೀತಿಯ ಕಠಿಣ ಕ್ರಮ ಕೈಗೊಳ್ಳಲಿದೆ ಎಂಬುದು ಇದೀಗ ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:26 am, Thu, 3 September 26

ದತ್ತಾತ್ರೇಯ ಪಾಟೀಲ್​

ಮೂಲತಃ ಕಲಬುರಗಿ ಜಿಲ್ಲೆಯವರಾದ ದತ್ತಾತ್ರೇಯ ಪಾಟೀಲ್ ಸಧ್ಯ ಟಿರ್ವಿ ಕನ್ನಡ ವಾಹಿನಿಯ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 9 ವರ್ಷಗಳಿಂದ ಟಿರ್ವಿ ಸಂಸ್ಥೆಯಲ್ಲಿ ಕೆಲಸ‌ ಮಾಡುತ್ತಿದ್ದು ಜ,2015 ರಿಂದ 22 ರವೆಗೆ ಹುಬ್ಬಳ್ಳಿಯ ವರದಿಗಾರಾಗಿ, ಕಳೆದೊಂದು ವರ್ಷ ಕೊಪ್ಪಳ ಸಧ್ಯ ಮೂರು ತಿಂಗಳಿಮದ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದು, ಕೊರೊನಾ ಸಮಯದಲ್ಲಿ ವೈದ್ಯರ ಕಳ್ಳಾಟದ ಮಾಡಿದ ರಹಸ್ಯ ಕಾರ್ಯಚರಣೆ.ಆಪರೇಷನ್ ಕಮಲದ ಕುರಿತು ಸ್ಪೋಟಕ ಬಿಎಸ್ ವೈ ವಿಡಿಯೋ ದ ಎಕ್ಸಕ್ಲೂಸಿವ್ ವರದಿಯ ಜೊತೆಗೆ ರಾಜಕೀಯ ವರದಿಗಾರಿಕೆಯಲ್ಲಿಯೂ ಆಸಕ್ತಿ ಹೊಂದಿದ್ದು, ಬಿಡುವಿನ ಸಮಯದಲ್ಲಿ ಪುಸ್ತಕ ಓದುವುದು,ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳ ಪ್ರವಾಸ,ಮತ್ತು ಟ್ರೆಕ್ಕಿಂಗ್ ಹವ್ಯಾಸ ರೂಢಿಸಿಕೊಂಡಿದ್ದಾರೆ.

Read More
Loading...
Unable to load recommendations.
Follow Us