Kalaburagi News: ವಿದ್ಯಾರ್ಥಿನಿಗೆ ನೀನು ಮುಸಲ್ಮಾನಳಾಗಿದ್ದರೆ ಬುರ್ಖಾ ಧರಿಸಿ ಮಾತನಾಡು ಎಂದಿದ್ದ KKRTC ಬಸ್ ಚಾಲಕ ಸಸ್ಪೆಂಡ್
ನೀನು ಮುಸಲ್ಮಾನಳಾಗಿದ್ದರೆ ಬುರ್ಖಾ ಧರಿಸಿ ಮಾತನಾಡು ಎಂದು ವಿದ್ಯಾರ್ಥಿನಿಗೆ ಕೆಕೆಆರ್ಟಿಸಿ (KKRTC) ಬಸ್ ಚಾಲಕ ಹೇಳಿದ್ದಾಗಿ ನಿನ್ನೆ(ಜು.26) ಆರೋಪ ಕೇಳಿಬಂದಿತ್ತು. ಈ ಸಂಬಂಧ ಚಾಲಕ ಮೆಹಬೂಬ್ ಪಟೇಲ್ ಎಂಬಾತನನ್ನ ಅಮಾನತು ಮಾಡಲಾಗಿದೆ.
ಕಲಬುರಗಿ, ಜು.28: ನೀನು ಮುಸಲ್ಮಾನಳಾಗಿದ್ದರೆ ಬುರ್ಖಾ ಧರಿಸಿ ಮಾತನಾಡು ಎಂದು ವಿದ್ಯಾರ್ಥಿನಿಗೆ ಕೆಕೆಆರ್ಟಿಸಿ (KKRTC) ಬಸ್ ಚಾಲಕ ಹೇಳಿದ್ದಾಗಿ ನಿನ್ನೆ(ಜು.26) ಆರೋಪ ಕೇಳಿಬಂದಿತ್ತು. ಈ ಸಂಬಂಧ ಕಲಬುರಗಿ(Kalaburagi) ಜಿಲ್ಲೆಯ ಕಮಲಾಪುರ ಬಸ್ ನಿಲ್ದಾಣದಲ್ಲಿ ಶಿಕ್ಷಕ ಮತ್ತು ಚಾಲಕನ ನಡುವೆ ನಡೆದ ವಾಗ್ವಾದದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬಳಿಕ ಕಲಬುರಗಿ ಬಸ್ ಡಿಪೋ 3 ರ ಚಾಲಕ ಮೆಹಬೂಬ್ ಪಟೇಲ್ ವಿರುದ್ದ ಕಮಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಹಿನ್ನಲೆ ಬುರ್ಖಾ ಧರಿಸಿ ಮಾತನಾಡುವಂತೆ ಮುಸ್ಲಿಂ ವಿದ್ಯಾರ್ಥಿನಿಗೆ ಹೇಳಿದ್ದ ಡ್ರೈವರ್ನನ್ನ ಇದೀಗ ಕೆಕೆಆರ್ಟಿಸಿ ಕಲಬುರಗಿ ವಿಭಾಗದ ಡಿಸಿ ಅಮಾನತು ಮಾಡಿದ್ದಾರೆ.
ಬುರ್ಖಾ ಧರಿಸಿ ಬನ್ನಿ ಎಂದು ಮುಸ್ಲಿಂ ವಿದ್ಯಾರ್ಥಿನಿಗೆ ಹೇಳಿದ್ದ ಬಸ್ ಚಾಲಕ
ಜಿಲ್ಲೆಯ ಓಕಳಿ ಎಂಬ ಗ್ರಾಮಕ್ಕೆ ಹೋಗಲು ಬಸ್ ಹತ್ತುತ್ತಿದ್ದ ವಿದ್ಯಾರ್ಥಿನಿಯರ ಜೊತೆ ಚಾಲಕ ಮೆಹಬೂಬ್ ಪಟೇಲ್ ದರ್ಪದಿಂದ ವರ್ತಿಸಿದ್ದ. ಈ ವೇಳೆ ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನ ನೀನು ಮುಸ್ಲಿಂ ಇದ್ದೀಯಾ ಅಲ್ವಾ, ಬುರ್ಖಾ ಧರಿಸಿ ಬಾ ಎಂದು ಹೇಳಿದ್ದ. ಇದಕ್ಕೆ ಶಿಕ್ಷಕರು ಮತ್ತು ಬಸ್ ಚಾಲಕನ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಇದೀಗ ಪ್ರಯಾಣಿಕರೊಂದಿಗೆ ಅಸಭ್ಯ ವರ್ತನೆ ಆರೋಪದ ಮೇಲೆ ಕೆಕೆಆರ್ಟಿಸಿ ಬೀದರ್ ಡಿಸಿಯಿಂದ ಅಮಾನತ್ತು ಮಾಡಲಾಗಿದೆಯಂತೆ. ಈ ಕುರಿತು ಕೆಕೆಆರ್ಟಿಸಿ ಎಂ ಡಿ, ಎಂ ರಾಚಪ್ಪ ಎಂಬುವವರು ದೃಢಪಡಿಸಿದ್ದಾರೆ.
ಇದನ್ನೂ ಓದಿ:ಮುಸಲ್ಮಾನಳಾಗಿದ್ದರೆ ಬುರ್ಖಾ ಧರಿಸಿ ಮಾತನಾಡು: KKRTC ಬಸ್ ಚಾಲಕನ ಉದ್ಧಟತನದ ಮಾತಿಗೆ ಆಕ್ರೋಶ
ಘಟನೆ ವಿವರ
ಈ ಕುರಿತು ವಿದ್ಯಾರ್ಥಿ ಮಾತನಾಡಿ ‘ನಾವು ಬಸ್ ಹತ್ತುವಾಗ ನೀನು ಮುಸಲ್ಮಾನಳಾ ಎಂದು ಪ್ರಶ್ನಿಸಿ ಹೆಸರು ಹೇಳುವಂತೆ ಚಾಲಕ ಕೇಳಿದ್ದರು. ಆದರೆ, ನಾವು ಹೆಸರು ಹೇಳಲಿಲ್ಲ. ಈ ವೇಳೆ ಚಾಲಕ, ನೀನು ಮುಸಲ್ಮಾನಳಾಗಿದ್ದರೆ ಮೊದಲು ಬುರ್ಖಾ ಹಾಕಿಕೊಂಡು ಮಾತನಾಡು ಎಂದು ಹೇಳಿದ್ದರು. ಅದಾಗ್ಯೂ, ಬಸ್ ಹತ್ತಲು ಯತ್ನಿಸಿದಾಗ ಹತ್ತಲು ಬಿಡಲಿಲ್ಲ ಎಂದು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರು. ಈ ಬಗ್ಗೆ ವಿದ್ಯಾರ್ಥಿಗಳು ಶಿಕ್ಷಕರ ಗಮನಕ್ಕೆ ತಂದಿದ್ದಾರೆ. ಕೂಡಲೇ ಶಿಕ್ಷಕರೊಬ್ಬರು ಬಸ್ ನಿಲ್ದಾಣದಲ್ಲಿ ಚಾಲಕನನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿತ್ತು.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ