ಕಲಬುರಗಿಯಲ್ಲಿ ಕಲುಷಿತ ನೀರು ಕುಡಿದು 15ಕ್ಕೂ ಹೆಚ್ಚು ಜನರು ಅಸ್ವಸ್ಥ

ಕಳೆದ 2 ದಿನದಿಂದ ಕಲಬುರಗಿಯ ಗ್ರಾಮದಲ್ಲಿ ವಾಂತಿ ಭೇದಿ ಪ್ರಕರಣಗಳು ಹೆಚ್ಚಾಗಿವೆ. ಅಸ್ವಸ್ಥಗೊಂಡವರನ್ನು ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಕಲಬುರಗಿಯಲ್ಲಿ ಕಲುಷಿತ ನೀರು ಕುಡಿದು 15ಕ್ಕೂ ಹೆಚ್ಚು ಜನರು ಅಸ್ವಸ್ಥ
ಕಲುಷಿತ ನೀರು ಕುಡಿದು 15ಕ್ಕೂ ಹೆಚ್ಚು ಜನರು ಅಸ್ವಸ್ಥ
TV9kannada Web Team

| Edited By: Ayesha Banu

Sep 20, 2022 | 8:04 AM


ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ವಾಂತಿ, ಭೇದಿ ಪ್ರಕರಣಗಳು ಹೆಚ್ಚಾಗುತ್ತಿದ್ದು ಜನರ ಆತಂಕವನ್ನು ಹೆಚ್ಚಿಸಿದೆ. ಕಳೆದ ವಾರ ಕಲಬುರಗಿ ಜಿಲ್ಲೆಯ ಹಲವು ಗ್ರಾಮದಲ್ಲಿ ವಾಂತಿ, ಭೇದಿ ಪ್ರಕರಣಗಳು ವರದಿಯಾಗಿದ್ದವು. ಇದೀಗ ಜಿಲ್ಲೆಯ ಚಿಂಚೋಳಿ ತಾಲೂಕಿನ ಪೆಂಚನಪಳ್ಳಿ ಗ್ರಾಮದಲ್ಲಿ ವಾಂತಿ ಭೇದಿ ಉಲ್ಭಣವಾಗಿದ್ದು, ಕಲುಷಿತ ನೀರು ಕುಡಿದು 15 ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದಾರೆ‌. ಪೆಂಚನಪಳ್ಳಿ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ವಾಂತಿ ಭೇದಿ ಪ್ರಕರಣಗಳು ಹೆಚ್ಚಾಗಿವೆ. ಅಸ್ವಸ್ಥರನ್ನು, ಚಿಂಚೋಳಿ ಸರ್ಕಾರಿ ಆಸ್ಪತ್ರೆ, ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಗ್ರಾಮಸ್ಥರಿಗೆ ವಾಂತಿ ಭೇದಿ ಹೆಚ್ಚಾಗಲು ಅಶುದ್ಧ ನೀರೆ ಕಾರಣವಾಗಿದೆ. ಶುದ್ದ ಕುಡಿಯುವ ನೀರು ಪೂರೈಕೆ ಮಾಡದ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮಕ್ಕೆ ನೀರು ಪೂರೈಕೆ ಮಾಡುವ ವ್ಯವಸ್ಥೆ ಹಾಳಾಗಿ ಹೋಗಿದೆ. ಕೂಡಲೇ ಶುದ್ದ ಕುಡಿಯುವ ನೀರು ಪೂರೈಕೆ ಮಾಡಬೇಕು ಅಂತ ಆಗ್ರಹಿಸಿದ್ದಾರೆ.

ಗಾಂಜಾ ಅಮಲಿನಲ್ಲಿ ಗುಂಪುಗಳ ಮಧ್ಯೆ ಗ್ಯಾಂಗ್ ವಾರ್

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಪುರಸಭೆ ಮುಂಭಾಗ ಗಾಂಜಾ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗ್ಯಾಂಗ್‌ ಗಳ ನಡುವೆ ವಾರ್ ಆಗಿದೆ. ಇಡ್ಲಿ ವಿಚಾರಕ್ಕೆ 2 ಗುಂಪು ಪರಸ್ಪರ ಹೊಡೆದಾಡಿಕೊಂಡಿದೆ.

ಇಡ್ಲಿ ನನಗೆ ಬೇಗ ಕೊಡಬೇಕು ಅಂತ ದಿನೇಶ್, ತನಜೀಂ ಎಂಬುವವರ ನಡುವೆ ಗಲಾಟೆ ಶುರುವಾಗಿ ಅದು ವಿಕೋಪಕ್ಕೆ ತಲುಪಿದೆ. ಗಲಾಟೆಯಲ್ಲಿ ಚಾಕುವಿನಿಂದ ಇರಿದಿದ್ದಕ್ಕೆ ತನಜೀಂ ಕಾರು ಜಖಂಗೊಂಡಿದೆ. ಕಾರಿನ ಗ್ಲ್ಯಾಸ್​ಗಳನೆಲ್ಲ ಪುಡಿ ಪುಡಿ ಮಾಡಿ ದಾಂಧಲೆ ನಡೆದಿದೆ. ಗಾಂಜಾ ಕಿಕ್‌ನಲ್ಲಿ ಸಣ್ಣಸಣ್ಣ ವಿಚಾರಕ್ಕೂ ಪುಡಿರೌಡಿಗಳ ಗಲಾಟೆ ಹೆಚ್ಚಾಗಿದೆ. ಪುಡಿರೌಡಿಗಳ ವಿರುದ್ಧ ಕಠಿಣಕ್ರಮಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಇದನ್ನೂ ಓದಿ: Mysuru Dasara 2022: ಮೈಸೂರಿನ ಶಾಲೆಗಳಿಗೆ ಸೆ.26 ರಿಂದ ದಸರಾ ರಜೆ ಶುರು

ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಅರೆಸ್ಟ್

ಮೈಸೂರು: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಗೌಸಿಯಾನಗರದ ಸುಲ್ತಾನ್ ರಸ್ತೆಯಲ್ಲಿ ಗಾಂಜಾ ಮಾರುತ್ತಿದ್ದಾಗ ಆರೋಪಿಗಳನ್ನು ಬಂಧಿಸಿ 5 ಕೆಜಿ 300 ಗ್ರಾಂ ಗಾಂಜಾ ಹಾಗೂ 9,500 ನಗದು, ಒಂದು ಸ್ಕೂಟರ್ ವಶಕ್ಕೆ ಪಡೆಯಲಾಗಿದೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದ್ವಿಚಕ್ರ ಕಳ್ಳತನ ಮಾಡುತ್ತಿದ್ದ 3 ಬಾಲಕರು ವಶಕ್ಕೆ

ಮೈಸೂರು: ನಗರದ ಯಾದವಗಿರಿ ಬಳಿ ಬೈಕ್​ಗಳನ್ನ ಕದಿಯುತ್ತಿದ್ದ ಮೂವರು ಬಾಲಕರನ್ನ ವಿ.ವಿ.ಪುರಂ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಂಬರ್​ ಪ್ಲೇಟ್​​ ಇಲ್ಲದ ಬೈಕ್​​ನಲ್ಲಿ ತೆರಳುತ್ತಿದ್ದಾಗ ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳಿಂದ 3.25 ಲಕ್ಷ ಮೌಲ್ಯದ 5 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: Kantara: ‘ಕಾಂತಾರ’ ಚಿತ್ರಕ್ಕೆ ಪುನೀತ್​ ಹೀರೋ ಆಗ್ಬೇಕಿತ್ತು; ಆ ಸ್ಥಾನಕ್ಕೆ ರಿಷಬ್ ಶೆಟ್ಟಿ ಬಂದಿದ್ದು ಹೇಗೆ? ಇಲ್ಲಿದೆ ಉತ್ತರ

ಟೇಬಲ್ ಮೇಲಿದ್ದ ದಾಖಲೆ ಎಸೆದು ತಾಲ್ಲೂಕು ಕಚೇರಿಯಲ್ಲಿ ಹೈಡ್ರಾಮ

ಹೆಚ್ ಡಿ ಕೋಟೆ ತಾಲ್ಲೂಕು ಕಚೇರಿಯಲ್ಲಿ ಹೈಡ್ರಾಮ ನಡೆದಿದೆ. ಟೇಬಲ್ ಮೇಲಿದ್ದ ದಾಖಲೆ ಎಸೆದು ಕೂಗಾಡಿ ತಹಶೀಲ್ದಾರ್ ರತ್ನಾಂಬಿಕಾ ಹೈಡ್ರಾಮ ಮಾಡಿದ್ದಾರೆ. ಅವರ ಈ ವಿಡಿಯೋ ವೈರಲ್ ಆಗಿದೆ. ಪ್ರಕೃತಿ ವಿರೋಪದಡಿ ಮನೆಗಳ ಪರಿಹಾರ ವಿಚಾರ ಸಂಬಂಧ ಆಯ್ಕೆ ಪ್ರಕ್ರಿಯೆಯಲ್ಲಿ ಗ್ರಾಮಲೆಕ್ಕಿಗರು, ರಾಜಸ್ವ ನಿರೀಕ್ಷಕರು ಲಂಚ ಪಡೆಯುತ್ತಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಮಾಹಿತಿ ನೀಡಲು ರೈತ ಸಂಘದ ನಾಗರಾಜು ಮತ್ತು ದಸಂಸ ಚಾ.ಶಿವಕುಮಾರ್ ಹೋಗಿದ್ದರು. ಈ ವೇಳೆ ತಹಶೀಲ್ದಾರ್ ಹಾಗೂ ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆದಿದೆ. ಆಗ ಕೆಂಡಾಮಂಡಲರಾದ ತಹಶೀಲ್ದಾರ್ ರತ್ನಾಂಬಿಕ, ಟೇಬಲ್ ಮೇಲಿದ್ದ ದಾಖಲೆಗಳನ್ನು ಎಸೆದು ಆಕ್ರೋಶ ಹೊರ ಹಾಕಿದ್ರು. ಸಿಬ್ಬಂದಿ, ತಹಶೀಲ್ದಾರ್ ಸಮಾಧಾನ ಪಡಿಸಲು ಹರಸಾಹಸಪಟ್ರು. ತಹಶೀಲ್ದಾರ್ ಕಚೇರಿಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada