ಕಲಬುರಗಿಯಲ್ಲಿ ವಿವಿಧ ಬಗೆಯ ಹಕ್ಕಿ, ಆಮೆಗಳನ್ನ ಮಕ್ಕಳಂತೆ ಸಾಕಿದ್ದವರಿಗೆ ಶಾಕ್! ಏನಾಯ್ತು?
ವಿವಿಧ ತಳಿಯ ಪಕ್ಷಿಗಳು, ಆಮೆಗಳನ್ನು ನೋಡಿದಾಗ ಅನೇಕರಿಗೆ ಮನೆಯಲ್ಲಿ ನಾವು ಕೂಡಾ ಸಾಕಬೇಕು ಅಂತ ಆಸೆ ಬರುತ್ತದೆ. ಈ ಆಸೆಯಿಂದ ಹಲವರು ತಮ್ಮ ಮನೆಗಳಲ್ಲಿ ಪಂಜರಗಳನ್ನಿಟ್ಟು, ಪಕ್ಷಿಗಳನ್ನು ಸಾಕುತ್ತಾರೆ. ಆದರೆ ಹೀಗೆ ಮಾಡುವಂತಿಲ್ಲ.
ಕಲಬುರಗಿ: ಪಕ್ಷಿಗಳನ್ನು (Birds) ನೋಡುವುದೇ ಕಣ್ಣುಗಳಿಗೆ ಹಬ್ಬ, ಕಿವಿಗೆ ಇಂಪು, ಮನಸ್ಸಿಗೆ ಆನಂದ. ಹಕ್ಕಿಗಳ ಕಲರವಕ್ಕೆ ಎಂಥಾ ಮನಸ್ಸುಗಳು ಕೂಡಾ ಮುದಗೊಳ್ಳುತ್ತವೆ. ಆದರೆ ಇತ್ತೀಚೆಗೆ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಮಾನವನ ಅನೇಕ ಚಟುವಟಿಕೆಗಳಿಂದ ಪಕ್ಷಿಗಳು ಕಾಣಸಿಗುತ್ತಿಲ್ಲ. ಪಕ್ಷಿಗಳನ್ನು ನೋಡುವುದಕ್ಕೆ ಅರಣ್ಯಕ್ಕೆ (Forest) ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅನೇಕರು ತಮ್ಮ ಮನೆಯಲ್ಲಿ ಪಕ್ಷಿಗಳ ಕಲರವ ಇರಲಿ, ಅವುಗಳ ಚಿಲಿಪಿಲಿ ನಿನಾದ ಕಿವಿಗೆ ಕೇಳುತ್ತಿರಲಿ ಅಂತ ಮನೆಯಲ್ಲಿ ಸಾಕುತ್ತಿದ್ದಾರೆ. ಆದರೆ ಈ ರೀತಿ ಮನೆಯಲ್ಲಿ (Home) ಪಕ್ಷಿಗಳನ್ನ ಸಾಕಿದವರಿಗೆ ಕಲಬುರಗಿಯಲ್ಲಿ ಇದೀಗ ಶಾಕ್ ಎದುರಾಗಿದೆ.
ಪಂಜರಗಳಲ್ಲಿಟ್ಟು ಪಕ್ಷಿ ಸಾಕುವವರಿಗೆ ಶಾಕ್! ವಿವಿಧ ತಳಿಯ ಪಕ್ಷಿಗಳು, ಆಮೆಗಳನ್ನು ನೋಡಿದಾಗ ಅನೇಕರಿಗೆ ಮನೆಯಲ್ಲಿ ನಾವು ಕೂಡಾ ಸಾಕಬೇಕು ಅಂತ ಆಸೆ ಬರುತ್ತದೆ. ಈ ಆಸೆಯಿಂದ ಹಲವರು ತಮ್ಮ ಮನೆಗಳಲ್ಲಿ ಪಂಜರಗಳನ್ನಿಟ್ಟು, ಪಕ್ಷಿಗಳನ್ನು ಸಾಕುತ್ತಾರೆ. ಆದರೆ ಹೀಗೆ ಮಾಡುವಂತಿಲ್ಲ. ಅರಣ್ಯ ಇಲಾಖೆಯ ನಿಯಮದ ಪ್ರಕಾರ, ಪಕ್ಷಿಗಳನ್ನು ಮನೆಯಲ್ಲಿ ಅನಧಿಕೃತವಾಗಿ ಸಾಕಲು ಅವಕಾಶವಿಲ್ಲ. ಕಲಬುರಗಿ ಅರಣ್ಯ ಇಲಾಖೆ ಸಿಬ್ಬಂದಿ ಮನೆ, ಅಂಗಡಿಗಳ ಮೇಲೆ ದಾಳಿ ನಡೆಸಿ ಪಕ್ಷಿ, ಆಮೆಗಳನ್ನ ವಶಕ್ಕೆ ಪಡೆದಿದ್ದಾರೆ. ಕಲಬುರಗಿಯ ಪ್ರಾಣಿ ಕಲ್ಯಾಣಿ ಮಂಡಳಿಯವರು ನೀಡಿದ್ದ ದೂರಿನ ಮೇಲೆ ಅನೇಕ ಕಡೆ ದಾಳಿ ಮಾಡಿದ್ದ ಅರಣ್ಯ ಇಲಾಕೆ ಸಿಬ್ಬಂದಿ, ವಿವಿಧ ಬಗೆಯ ಪಕ್ಷಿಗಳನ್ನು ರಕ್ಷಿಸಿದ್ದಾರೆ.
ಮನೆಯಲ್ಲಿ, ಭಾರತೀಯ ಮೂಲದ ಪಕ್ಷಿಗಳನ್ನು ಮತ್ತು ಆಮೆಗಳನ್ನು ಪೆಟ್ ಆಗಿ ಸಾಕಲು ಅವಕಾಶವಿಲ್ಲ. ಮನೆಯಲ್ಲಿ ಅವುಗಳನ್ನು ಪಂಜರದಲ್ಲಿ ಅಕ್ರಮವಾಗಿ ಬಂಧಿಸಿಡುವಂತಿಲ್ಲ. ಅದರಲ್ಲೂ ಭಾರತೀಯ ಮೂಲದ ಪಕ್ಷಿಗಳಾದ ಅಲಂಕ್ಸಾಂಡರ್ ಇನ್ ಪ್ಯಾರಾ ಕಿಟ್, ರೋಸ್ ರಿಂಗ್ ಪ್ಯಾರಾ ಕಿಟ್, ಪ್ಲ್ಯಾಪ್ ಶೆಲ್ ಆಮೆ, ಇವುಗಳು ಶೆಡ್ಯೂಲ್ 1 ರಲ್ಲಿ ಬರುವ ಪಕ್ಷಿಗಳು. ಇವುಗಳನ್ನು ಅನಧಿಕೃತವಾಗಿ ಸಾಕುವುದು, ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಪ್ರಕಾರ ಅಪರಾಧವಾಗಿದೆ. ಅನಧಿಕೃತವಾಗಿ ಸಾಕಿದರೆ ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.
ವಿದೇಶಿ ಪಕ್ಷಿಗಳನ್ನು ಸಾಕಲು ಪರವಾನಗಿ ಅಗತ್ಯ ವಿದೇಶಿ ಪಕ್ಷಿಗಳಾದ ಲವ್ ಬರ್ಡ್ಸ್ ಸೇರಿದಂತೆ ಕೆಲ ಪಕ್ಷಿಗಳನ್ನು ಮನೆಯಲ್ಲಿ ಸಾಕಬಹುದು. ಆದರೆ ಅದಕ್ಕೂ ಕೂಡಾ ಪರವಾನಗಿಯನ್ನು ಪಡೆದಿರಬೇಕು. ಯಾರಾದರು ವಿದೇಶಿ ಪಕ್ಷಿಗಳನ್ನು ಸಾಕುತ್ತಿದ್ದರೆ, ಮೊದಲು ಅವರು ಪರಿವೇಶ್ ಪೋರ್ಟಲ್ನಲ್ಲಿ ಪಕ್ಷಿಗಳ ಸಾಕುವ ಬಗ್ಗೆ ತಮ್ಮ ನೋಂದಣಿಯನ್ನು ಮಾಡಿಕೊಳ್ಳಬೇಕು. ನಂತರ ಇಲಾಖೆಯಿಂದ ಪರವಾನಗಿಯನ್ನು ಪಡೆಯಬೇಕು. ತಮ್ಮ ಬಳಿ ಇರುವ ಪಕ್ಷಿಗಳ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಅದು ಕೂಡಾ ಅಪರಾಧವಾಗುತ್ತದೆ.
ಪಕ್ಷಿಗಳನ್ನು ತಿನ್ನುವುದು ಕೂಡಾ ಅಪರಾಧ ಕೌಜುಗ ಸೇರಿದಂತೆ ಕೆಲ ಪಕ್ಷಿಗಳನ್ನು ಭೇಟಿಯಾಡಿ, ಅವುಗಳನ್ನು ತಿನ್ನುತ್ತಾರೆ. ನವಿಲುಗಳನ್ನು ಭೇಟಿಯಾಡುತ್ತಾರೆ. ಇದು ಕೂಡಾ ಕಾನೂನಿನ ಪ್ರಕಾರ ಅಪರಾಧ. ಭಾರತೀಯ ಮೂಲದ ಯಾವುದೇ ಪಕ್ಷಿಗಳನ್ನು ಆಹಾರವಾಗಿ ತಿನ್ನಲು ಅವಕಾಶವಿಲ್ಲ. ಭೇಟಿಯಾಡುವುದು, ಅದನ್ನು ತಿನ್ನುವುದು ಅಪರಾಧವಾಗಿದ್ದು, ಕಾನೂನು ಮೀರಿ ವರ್ತಿಸುವವರ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಅಂತ ಅರಣ್ಯ ಇಲಾಖೆಯ ಅಧಿಕಾರಿ ತಿಳಿಸಿದರು.
ಕಲಬುರಗಿಯಲ್ಲಿ ಅನೇಕರು ಅನಧಿಕೃತವಾಗಿ ಪಕ್ಷಿಗಳನ್ನು ಸಾಕುವುದು ಮತ್ತು ಮಾರಾಟ ಮಾಡುವುದು ಕಂಡುಬಂದಿದ್ದು, ಅವರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತಿದೆ. ಅನೇಕ ಆಮೆಗಳನ್ನು, ಪಕ್ಷಿಗಳನ್ನು ರಕ್ಷಿಸಲಾಗಿದೆ. ಭಾರತೀಯ ಮೂಲದ ಪಕ್ಷಿಗಳನ್ನು ಮನೆಯಲ್ಲಿ ಅಕ್ರಮವಾಗಿ ಸಾಕಿದರೆ, ಮಾರಾಟ ಮಾಡಿದ್ರೆ, ಅಂತವರ ವಿರುದ್ಧ ಕಠೀಣ ಕ್ರಮ ಕೈಗೊಳ್ಳಲಾಗುತ್ತದೆ ಅಂತ ಕಲಬುರಗಿ ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಹೇಳಿದರು.
ವರದಿ: ಸಂಜಯ್ ಚಿಕ್ಕಮಠ
ಇದನ್ನೂ ಓದಿ
ದೈನಂದಿನ ಜೀವನದಲ್ಲಿ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ: ಹೃದಾಯಾಘಾತದಿಂದ ದೂರವಿರಿ
ಲಸಿಕೆ ಪ್ರಮಾಣಪತ್ರ ಕಡ್ಡಾಯವಲ್ಲ ಎಂದು ಸುಪ್ರೀಂಗೆ ತಿಳಿಸಿದ ಕೇಂದ್ರ; ಗೊಂದಲದಲ್ಲಿವೆ ಚಿತ್ರಮಂದಿರಗಳು
Published On - 4:15 pm, Tue, 18 January 22