ಕಲಬುರಗಿ, ಮಾರ್ಚ್ 16: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರಾದ ಕಲಬುರಗಿಯಲ್ಲಿ (Kalaburagi) ಪ್ರಧಾನಿ ನರೇಂದ್ರ ಮೋದಿ (Narendra Modi) ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ಮೂಲಕ ಮುಂಬರುವ ಲೋಕಸಭೆ ಚುನಾವಣೆಗೆ (Lok Sabha Elections) ಕರ್ನಾಟಕದಲ್ಲಿ ಪ್ರಚಾರದ ರಣಕಹಳೆ ಮೊಳಗಿಸಿದರು.
ಕಲಬುರಗಿ ಜನತೆಗೆ ನಮಸ್ಕಾರಗಳು ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಪ್ರಧಾನಿ ಮೋದಿ, ನಾನು ಹೆಲಿಪ್ಯಾಡ್ನಿಂದ ಬರುವಾಗ ರಸ್ತೆಯಲ್ಲಿ ಜನರ ಉತ್ಸಾಹ ನೋಡಿ ನನಗೆ ಬಹಳ ಸಂತಸವಾಯಿತು. ನಾನು 2 ದಿನಗಳಲ್ಲಿ 4 ದಕ್ಷಿಣ ರಾಜ್ಯಗಳಿಗೆ ಭೇಟಿ ನೀಡಿದೆ. ದಕ್ಷಿಣ ಭಾರತ ರಾಜ್ಯಗಳಲ್ಲಿ ಜನ ಬಿಜೆಪಿ ಬಗ್ಗೆ ಉತ್ಸುಕತರಾಗಿದ್ದಾರೆ. ಜನರ ಉತ್ಸಾಹ ನೋಡಿ ನನಗೆ ಬಹಳ ಆನಂದವಾಯಿತು ಎಂದರು. ಜತೆಗೆ ಮತ್ತೊಮ್ಮೆ ಬಿಜೆಪಿ ಸರ್ಕಾರ ಎಂದು ಘೋಷಣೆ ಕೂಗಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಬಗ್ಗೆ ಜನ ಆಕ್ರೋಶಗೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರ ಇಷ್ಟು ಬೇಗ ಜನರ ಆಕ್ರೋಶಕ್ಕೆ ಗುರಿಯಾಗಿದೆ. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಜನರ ಮನಸ್ಸಿನಲ್ಲಿ ಭರವಸೆಯೇ ಇಲ್ಲದಂತಾಗಿದೆ. ಕಾಂಗ್ರೆಸ್ ಸರ್ಕಾರ ಲೂಟಿಯಲ್ಲಿ ತೊಡಗಿದೆ. ಕಾಂಗ್ರೆಸ್ಗೆ ಭ್ರಷ್ಟಾಚಾರವೇ ಉಸಿರಾಗಿದೆ. ಚುನಾವಣೆಗೂ ಮೊದಲೇ ದೊಡ್ಡದೊಡ್ಡ ಭರವಸೆ ನೀಡಿದರು. ಚುನಾವಣೆ ಬಳಿಕ ನಿಮ್ಮ ಜೇಬಿಗೆ ಕೈಹಾಕಿದರು ಎಂದು ಮೋದಿ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ನಲ್ಲಿ ಕುಟುಂಬ ರಾಜಕಾರಣ ಹೆಚ್ಚಾಗಿದೆ. ಕಾಂಗ್ರೆಸ್ ಹೈಕಮಾಂಡ್ಗೆ ಹಣ ಕಳುಹಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳಗಿದೆ. ಕರ್ನಾಟಕ ಕತ್ತಲಲ್ಲಿ ಇದೆ. ಬಿಜೆಪಿ ಸರ್ಕಾರ ಕೊಡುತ್ತಿದ್ದ ಹಣವನ್ನು ಈ ಕಾಂಗ್ರೆಸ್ ಸರ್ಕಾರ ಕಡಿತಗೊಳಿಸಿದೆ. ಸರ್ಕಾರದ ಹುಂಡಿಯಲ್ಲಿ ಹಣವಿಲ್ಲ. ಸರ್ಕಾರದ ಖಜಾನೆಯಲ್ಲಿ ದುಡ್ಡು ಇಲ್ಲ. ಸರ್ಕಾರದಲ್ಲಿ ದುಡ್ಡು ಇಲ್ಲದ ಇವರು ಸರ್ಕಾರ ನಡೆಸಬಹುದಾ ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಸ್ಕಾಲರ್ ಶಿಪ್ ಸಹ ಕಡಿತ ಮಾಡಿದೆ. ಕರ್ನಾಟಕದಲ್ಲಿ ಹೆಚ್ಚು ಬಿಜೆಪಿ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿ ಎಂದು ನಿಮ್ಮ ಬಳಿ ಮನವಿ ಮಾಡುತ್ತೇನೆ. ಈ ಕಾಂಗ್ರೆಸ್ ಸರ್ಕಾರ ಲೂಟಿ ನಡೆಸುತ್ತಿದೆ. ಇದಕ್ಕೆ ಕರ್ನಾಟಕ ಜನ ಲೋಕಸಭಾ ಚುನಾವಣೆಯಲ್ಲಿ ಜನ ಉತ್ತರ ಕೊಡುತ್ತಾರೆ. ಮತ್ತೆ ಮೋದಿ ಬರುತ್ತಾರೆ ಎಂದು ಜನ ಹೇಳುತ್ತಿದ್ದಾರೆ. ಕಲ್ಯಾಣ ಕರ್ನಾಟಕಕ್ಕೆ ಒಂದು ಸಾವಿರ ಕೋಟಿ ರೂಪಾಯಿ ಅನುದಾನವನ್ನು ಬಿಜೆಪಿ ಸರ್ಕಾರ ಕೊಟ್ಟಿದೆ. ವಂದೇ ಭಾರತ್ ಟ್ರೈನ್ ಕಲಬುರಗಿಗೆ ಬಂದು ತಲುಪಿದೆ ಎಂದು ಮೋದಿ ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್, ಬಿಆರ್‌ಎಸ್ ತೆಲಂಗಾಣದ ಎಲ್ಲಾ ಕನಸುಗಳನ್ನು ಭಗ್ನಗೊಳಿಸಿದೆ: ನಾಗರ್‌ಕರ್ನೂಲ್‌ನಲ್ಲಿ ಪಿಎಂ ಮೋದಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:15 pm, Sat, 16 March 24