ಏಪ್ರಿಲ್ 24 ರಂದು ಪಂಚಾಯತ್ ರಾಜ್ ದಿನದ ಅಂಗವಾಗಿ ಕಲಬುರಗಿ ಜಿಲ್ಲೆಗೆ ಪ್ರಧಾನಿ ಮೋದಿ ಭೇಟಿ ಸಾಧ್ಯತೆ

| Updated By: preethi shettigar

Updated on: Mar 05, 2022 | 3:52 PM

ತಿಂಗಳ ಹಿಂದೆಯೇ ರಾಜ್ಯ ಗ್ರಾಮೀಣಾಭಿವೃದ್ದಿ ಇಲಾಖೆ, ರಾಜ್ಯದ ಮೂರು ಜಿಲ್ಲೆಗೆಳ ಆಯ್ದ ಗ್ರಾಮ ಪಂಚಾಯತಿಗಳ ಪಟ್ಟಿಯನ್ನು ಕಳುಹಿಸಿದೆ. ಅದರಲ್ಲಿ ಕಲಬುರಗಿ ತಾಲೂಕಿನ ಭೀಮಳ್ಳಿ ಗ್ರಾಮ ಪಂಚಾಯತ್ ಕೂಡ ಒಂದು.

ಏಪ್ರಿಲ್ 24 ರಂದು ಪಂಚಾಯತ್ ರಾಜ್ ದಿನದ ಅಂಗವಾಗಿ ಕಲಬುರಗಿ ಜಿಲ್ಲೆಗೆ ಪ್ರಧಾನಿ ಮೋದಿ ಭೇಟಿ ಸಾಧ್ಯತೆ
ಪ್ರಧಾನಿ ನರೇಂದ್ರ ಮೋದಿ
Follow us on

ಕಲಬುರಗಿ:  ರಾಷ್ಟ್ರೀಯ ಪಂಚಾಯತ್ ರಾಜ್ ದಿವಸ್(National Panchayat Raj Diwas) ಅಂಗವಾಗಿ ಗ್ರಾಮ ಸಭೆಯಲ್ಲಿ ಭಾಗವಹಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ(Narendra modi) ಅವರು, ಏಪ್ರಿಲ್ 24 ರಂದು ಕಲಬುರಗಿ ತಾಲೂಕಿನ ಭೀಮಳ್ಳಿ ಗ್ರಾಮ ಪಂಚಾಯತಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಏಪ್ರಿಲ್ 24 ರಂದು ಶಿವಮೊಗ್ಗ, ವಿಜಯ ನಗರ ಅಥವಾ ಕಲಬುರಗಿ ಜಿಲ್ಲೆ ಪೈಕಿ ಯಾವುದಾದರು ಒಂದು ಜಿಲ್ಲೆಯನ್ನು ಪ್ರವಾಸಕ್ಕೆ ಪ್ರಧಾನ ಮಂತ್ರಿಗಳು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಒಂದು ವೇಳೆ ಕಲಬುರಗಿ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಲ್ಲಿ ಭೀಮಳ್ಳಿ ಗ್ರಾಮಕ್ಕೆ ಪ್ರಧಾನ ಮಂತ್ರಿಗಳು ಭೇಟಿ ನೀಡಲಿದ್ದಾರೆ. ಅಂದು ರಾಷ್ಟ್ರೀಯ ಪಂಚಾಯತ್ ರಾಜ್ ದಿವಸ್ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೀಮಳ್ಳಿಯಿಂದಲೇ ವರ್ಚುವಲ್ ಮೂಲಕ ದೇಶದ 2.50 ಲಕ್ಷ ಗ್ರಾಮ ಪಂಚಾಯತಿಗಳ(Grama Panchayat) ಪ್ರತಿನಿಧಿಗಳನ್ನು ಸಂಬೋಧಿಸಿ ಮಾತನಾಡಲಿದ್ದಾರೆ. ಜೊತೆಗೆ ಸ್ಥಳೀಯ ಚುನಾಯಿತ ಪ್ರತಿನಿಧಿಗಳೊಂದಿಗೂ ಸಂವಾದ ನಡೆಸಲಿದ್ದಾರೆ. ಈ ನಿಟ್ಟಿನಲ್ಲಿ ಇದೇ ಮಾರ್ಚ್ 8 ಅಥವಾ 9 ರಂದು ಪ್ರಧಾನ ಮಂತ್ರಿಗಳ ಭದ್ರತಾ ತಂಡ ಜಿಲ್ಲೆಗೆ ಆಗಮಿಸುವ ಸಾಧ್ಯತೆ ಕೂಡ ಇದೆ.

ಭೀಮಳ್ಳಿ ಗ್ರಾಮ ಪಂಚಾಯತ್ ಆಯ್ಕೆ ಏಕೆ?

ಪಂಚಾಯತ್ ರಾಜ್ ದಿವಸ್ ಅಂಗವಾಗಿ ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಲು ನಿರ್ಧರಿಸಿರುವುದರಿಂದ ಪ್ರಧಾನಿ ಕಚೇರಿ, ರಾಜ್ಯದ ಉತ್ತಮ ಗ್ರಾಮ ಪಂಚಾಯತ್​ಗಳ ಪಟ್ಟಿಯನ್ನು ಕಳುಹಿಸುವಂತೆ ಗ್ರಾಮೀಣಾಭಿವೃದ್ದಿ ಇಲಾಖೆಗೆ ಸೂಚಿಸಿತ್ತು. ಹೀಗಾಗಿ ತಿಂಗಳ ಹಿಂದೆಯೇ ರಾಜ್ಯ ಗ್ರಾಮೀಣಾಭಿವೃದ್ದಿ ಇಲಾಖೆ, ರಾಜ್ಯದ ಮೂರು ಜಿಲ್ಲೆಗೆಳ ಆಯ್ದ ಗ್ರಾಮ ಪಂಚಾಯತಿಗಳ ಪಟ್ಟಿಯನ್ನು ಕಳುಹಿಸಿದೆ. ಅದರಲ್ಲಿ ಕಲಬುರಗಿ ತಾಲೂಕಿನ ಭೀಮಳ್ಳಿ ಗ್ರಾಮ ಪಂಚಾಯತ್ ಕೂಡ ಒಂದು.

ಕಲಬುರಗಿ ಜಿಲ್ಲೆಯಲ್ಲಿ 242 ಗ್ರಾಮ ಪಂಚಾಯತ್​ಗಳಿವೆ. ಆದರೆ ಸರ್ಕಾರದ ಸೌಲಭ್ಯಗಳನ್ನು ಸರಿಯಾಗಿ ಜನರಿಗೆ ಒದಗಿಸುವುದು ಸೇರಿದಂತೆ ಸರ್ಕಾರಿ ಸೌಲಭ್ಯಗಳನ್ನು ಬಳಸಿಕೊಂಡು, ಮಾದರಿ ಗ್ರಾಮ ಪಂಚಾಯತ್​ಗಳು ಅನಿಸಿಕೊಂಡಿರುವ ಕೆಲವೇ ಕೆಲವು ಗ್ರಾಮ ಪಂಚಾಯತ್​ಗಳು ಇವೆ. ಅದರಲ್ಲಿ ಭೀಮಳ್ಳಿ ಗ್ರಾಮ ಪಂಚಾಯತ್ ಕೂಡಾ ಒಂದು. ಭೀಮಳ್ಳಿ ಗ್ರಾಮ ಪಂಚಾಯತ್ ಸ್ವಂತ ಕಟ್ಟಡವನ್ನು ಹೊಂದಿದೆ. ಪಂಚಾಯತ್​ನಲ್ಲಿ ಗ್ರಂಥಾಲಯವಿದೆ. ಭೀಮಳ್ಳಿ ಮತ್ತು ಭೀಮಳ್ಳಿ ಪಂಚಾಯತ್​ನಲ್ಲಿ ಬರುವ ಹಳ್ಳಿಗಳಲ್ಲಿ, ಉದ್ಯೋಗಖಾತ್ರಿ ಯೋಜನೆಯನ್ನು ಸರಿಯಾಗಿ ಅನುಷ್ಠಾನ ಮಾಡಲಾಗಿದೆ. ಸರ್ಕಾರದ ಸೌಲಭಗ್ಯಗಳನ್ನು ಜನರಿಗೆ ಸರಿಯಾಗಿ ಮುಟ್ಟಿಸುವ ಕೆಲಸವಾಗುತ್ತಿದೆ.  ಹೀಗಾಗಿ ಭೀಮಳ್ಳಿ ಗ್ರಾಮ ಪಂಚಾಯತ್ ಅನ್ನು ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆ ಆಯ್ಕೆ ಮಾಡಿ, ಪ್ರಧಾನಿಯವರ ಕಚೇರಿಗೆ ಕಳುಹಿಸಿತ್ತು.

ಜಿಲ್ಲಾಡಳಿತ ಸಭೆ

ಕಲಬುರಗಿ ಜಿಲ್ಲೆಯ ಭೀಮಳ್ಳಿ ಗ್ರಾಮ ಪಂಚಾಯತ್​ಗೆ ಪ್ರಧಾನಿ ಮೋದಿಯವರು ಭೇಟಿ ನೀಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಕಲಬುರಗಿ ಜಿಲ್ಲಾಧಿಕಾರಿ ಯಶವಂತ ಗುರುಕಾರ್ ಅವರು ಇಂದು ಸಭೆ ನಡೆಸಿದರು. ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಧಾನ ಮಂತ್ರಿ ಅವರಿಂದ ಚಾಲನೆಗೆ ಕಾರ್ಯಕ್ರಮ ರೂಪಿಸಿ: ಡಿಸಿ ಯಶವಂತ ವಿ. ಗುರುಕರ್

ವಿವಿಧ ಇಲಾಖೆಗಳ ಕಾರ್ಯಕ್ರಮ ಅನುಷ್ಠಾನ, ಉದ್ಘಾಟನೆಯಂತಹ ಕಾರ್ಯಕ್ರಮಗಳ ಪೈಕಿ ಪ್ರಧಾನ ಮಂತ್ರಿಗಳ ಅಮೃತ ಹಸ್ತದಿಂದ ಚಾಲನೆ ನೀಡಬಹುದಾದ ಜನಪರ ಕಾರ್ಯಕ್ರಮಗಳಿದ್ದಲ್ಲಿ ಅದರ ಕ್ರಿಯಾ ಯೋಜನೆಯನ್ನು ಒಂದು ವಾರದೊಳಗೆ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು. ಹೊಸ ಕ್ರಿಯಾತ್ಮಕ, ನಾವೀನ್ಯತೆವುಳ್ಳ ಕಾರ್ಯಕ್ರಮ ಆಯೋಜಿಸಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ಕೂಡಲೆ ಈ ಮೂರು ಗ್ರಾಮಗಳಿಗೆ ತೆರಳಿ ತಮ್ಮ ಇಲಾಖೆ ವ್ಯಾಪ್ತಿಗೊಳಪಡುವ ಏನಾದರೂ ಸಮಸ್ಯೆಗಳಿದ್ದಲ್ಲಿ ಬಗೆಹರಿಸಬೇಕು. ಕ್ಲಿಷ್ಟಕರ ಸಮಸ್ಯೆಗಳಿದ್ದಲ್ಲಿ ತಮ್ಮ ಗಮನಕ್ಕೆ ತರಬೇಕು ಎಂದು ಯಶವಂತ ವಿ. ಗುರುಕರ್ ತಿಳಿಸಿದರು. ದೇಶದ ಪ್ರಧಾನ ಮಂತ್ರಿಗಳು ಭೇಟಿ ನೀಡುತ್ತಿರುವ ಕಾರಣ ಭೀಮಳ್ಳಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ತಿಳಿಸಿದ್ದಾರೆ.

ಜಿಲ್ಲಾ ಪಂಚಾಯತ್ ಸಿಇಓ ಡಾ.ದಿಲೀಷ್ ಸಾಸಿ, ಸಭೆಯಲ್ಲಿ ಮಾತನಾಡಿ, ಭೀಮಳ್ಳಿ ಗ್ರಾಮ ಪಂಚಾಯತಿಗೆ ಒಳಪಡುವ ಭೀಮಳ್ಳಿ, ಕೆರಿಭೋಸಗಾ ಹಾಗೂ ಜಾಫರಾಬಾದ ಗ್ರಾಮದ ಪ್ರತಿ ಮನೆಗೆ ಕಂದಾಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳ ಅಧಿಕಾರಿಗಳು ಭೇಟಿ ನೀಡಿ ಸರ್ಕಾರಿ ಯೋಜನೆಗಳು ತಲುಪಿರುವ ಬಗ್ಗೆ ಖಾತ್ರಿ ಮಾಡಿಕೊಳ್ಳಬೇಕು. ಪಿಂಚಣಿ, ಪಡಿತರ ಚೀಟಿ, ಕುಡಿಯುವ ನೀರು, ಪ್ರಾಪರ್ಟಿ ಕಾರ್ಡ್ ವಿತರಣೆ, ರಸ್ತೆ, ಶೌಚಾಲಯ, ಬ್ಯಾಂಕಿಂಗ್ ಸೇವೆ. ಬೀದಿ ದೀಪ, ಬಸ್ ವ್ಯವಸ್ಥೆ, ಶಾಲೆ-ಆರೋಗ್ಯ-ಅಂಗನವಾಡಿ ಕೇಂದ್ರ ಸುಧಾರಣೆದಂತಹ ಸಮಸ್ಯೆಗಳಿದಲ್ಲಿ ಕೂಡಲೆ ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಇದಲ್ಲದೆ ಜಿಲ್ಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಯೋಜನೆಗಳನ್ನು ಶೇ.100ರಷ್ಟು ಪ್ರಗತಿ ಸಾಧಿಸಬೇಕು. ವಿಶೇಷವಾಗಿ ಫಲಾನುಭವಿ ಅಧಾರಿತ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಿ ಮಾರ್ಚ್ ಒಳಗಾಗಿ ಅನುಷ್ಠಾನಗೊಳಿಸಲು ತಿಳಿಸಿದ ಅವರು, ವಿವಿಧ ಇಲಾಖೆಗಳು ಕಚೇರಿ ಮುಖ್ಯಸ್ಥರು ಈ ಹಳ್ಳಿಗಳಿಗೆ ಭೇಟಿ ನೀಡಿ ತಮ್ಮ ಇಲಾಖೆಯ ಯೋಜನೆಗಳು ತಳ ಹಂತದಲ್ಲಿ ಅನುಷ್ಠಾನವಾಗಿವೆಯೇ ಎಂಬುದನ್ನು ಸಹ ಖಾತ್ರಿಪಡಿಸಿಕೊಳ್ಳಬೇಕು ಎಂದರು.

ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ವೈ.ಎಸ್.ರವಿಕುಮಾರ ಅವರು ಮಾತನಾಡಿ, ಪ್ರಧಾನ ಮಂತ್ರಿಗಳ ಪ್ರವಾಸ ಕಾರ್ಯಕ್ರಮ ಅಂತಿಮವಾದಲ್ಲಿ ಮುಖ್ಯಮಂತ್ರಿಗಳು, ಹಿರಿಯ ಸಚಿವರು, ಮುಖ್ಯ ಕಾರ್ಯದರ್ಶಿಗಳು ಸಹ ಆಗಮಿಸುವದರಿಂದ ಹೆಚ್ಚಿನ ಭದ್ರತೆ ಮತ್ತು ಸಾರಿಗೆ ಸೇವೆ ಒದಗಿಸಲು ನೆರೆಯ ಜಿಲ್ಲೆಗಳ ಸಿಬ್ಬಂದಿಗಳ ಮತ್ತು ಸಾರಿಗೆ ಸೇವೆ ಪಡೆಯಬೇಕಾಗುತ್ತದೆ. 8-10 ದಿನಗಳ ಮುನ್ನವೆ ಪ್ರಧಾನ ಮಂತ್ರಿಗಳ ಕ್ಷಣ-ಕ್ಷಣದ ಕಾರ್ಯಕ್ರಮಗಳ ಪಟ್ಟಿ ಅಂತಿಮಗೊಂಡಲ್ಲಿ ಅನುಕೂಲವಾಗಲಿದೆ. ಕೊನೆ ಹಂತದಲ್ಲಿ ಕಾರ್ಯಕ್ರಮ ಸೇರ್ಪಡೆ ಮಾಡುವುದು, ಭದ್ರತೆಯ ದೃಷ್ಠಿಯಿಂದ ಸಮಂಜಸವಲ್ಲ. ಎಲ್ಲಾ ಕಾರ್ಯಕ್ರಮಗಳು ಎಸ್.ಪಿ.ಜಿ. ತಂಡ ಮತ್ತು ಪಿ.ಎಂ.ಓ ಕಚೇರಿಯೆ ಅಂತಿಮಗೊಳಿಸಿ ನಿರ್ದೇಶನ ನೀಡುವುದರಿಂದ ಅದರಂತೆ ಎಲ್ಲಾ ಅಧಿಕಾರಿಗಳು ಕಾರ್ಯನುಷ್ಠಾನಕ್ಕೆ ಸಿದ್ಧರಿರಬೇಕಾಗುತ್ತದೆ ಎಂದು ಹೇಳಿದ್ದಾರೆ.

ವರದಿ: ಸಂಜಯ್ ಚಿಕ್ಕಮಠ

ಇದನ್ನೂ ಓದಿ:

ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ 2022: ಬೆಂಗಳೂರಿನಲ್ಲಿ ಇಬ್ಬರು ಬಾಲಕರಿಗೆ ಬಾಲ ಪುರಸ್ಕಾರ ಪ್ರಶಸ್ತಿ

ಗೌರಿಬಿದನೂರಿನ ವಾಟದ ಹೊಸಹಳ್ಳಿ ಗ್ರಾ.ಪಂ ಅಧ್ಯಕ್ಷರ ಜತೆ ಮೋದಿ ಏನು ಮಾತಾಡಿದ್ರು?