ಕಲಬುರಗಿ: ಓದಿದ್ದು 4ನೇ ತರಗತಿ, ಮಾಡಿದ್ದು 11 ಮಂದಿಗೆ ನಂಬಿಸಿ 14 ಲಕ್ಷ ರೂ. ಪಡೆದು, ವಂಚಿಸಿದ ಆರೋಪಿಗಳು
ಕಲಬುರಗಿಯಲ್ಲಿ ನಕಲಿ ಸರ್ಕಾರಿ ನೇಮಕಾತಿ ಆದೇಶಗಳನ್ನು ನೀಡಿ 14 ಲಕ್ಷ ರೂಪಾಯಿಗೂ ಹೆಚ್ಚು ಹಣ ವಸೂಲಿ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಾಗೇಶ್ ಮತ್ತು ಅಭಿಷೇಕ್ ಎಂಬ ಆರೋಪಿಗಳು ಅಮಾಯಕ ನಿರುದ್ಯೋಗಿಗಳನ್ನು ಗುರಿಯಾಗಿಸಿಕೊಂಡು ವಂಚನೆ ನಡೆಸಿದ್ದರು. ಪೊಲೀಸರು ನಕಲಿ ನೇಮಕಾತಿ ಆದೇಶಗಳು, ಮೊಬೈಲ್ ಮತ್ತು ನಗದು ವಶಪಡಿಸಿಕೊಂಡಿದ್ದಾರೆ. ಇಂತಹ ವಂಚನೆಗಳಿಂದ ಎಚ್ಚರವಾಗಿರಲು ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಕಲಬುರಗಿ, ಮಾರ್ಚ್ 30: ಅಮಾಯಕ ನಿರುದ್ಯೋಗಿ (Unemployment) ಯುವಕರನ್ನೇ ಟಾರ್ಗೆಟ್ ಮಾಡಿ ಸರ್ಕಾರದ ವಿವಿಧ ಇಲಾಖೆಯಲ್ಲಿನ ಡಿ ಗ್ರೂಪ್ ಹುದ್ದೆಯಿಂದ ಹಿಡಿದು ಗ್ರೇಡ್- 2 ತಹಶಿಲ್ದಾರ್ವರೆಗಿನ ಹುದ್ದೆ ಕೊಡಿಸುತ್ತೇನೆ ಅಂತ ನಂಬಿಸಿ ಲಕ್ಷ ಲಕ್ಷ ಹಣ ವಸೂಲಿ ಮಾಡುತ್ತಿದ್ದವರನ್ನು ಕಲಬುರಗಿ (Kalaburagi) ಪೊಲೀಸರು (Police) ಬಂಧಿಸಿದ್ದಾರೆ. ಕಲಬುರಗಿ ಜಿಲ್ಲೆಯ ಮೇಳಕುಂದಾ ಗ್ರಾಮದ ನಿವಾಸಿ ನಾಗೇಶ್, ಬೆಳಗಾವಿ ಜಿಲ್ಲೆಯ ಅಭಿಷೇಕ ಬಂಧಿತ ಆರೋಪಿಗಳು.
ಆರೋಪಿಗಳು ಅಮಾಯಕ ನಿರುದ್ಯೋಗಿ ಯುವಕರನ್ನ ಗುರಿಯಾಗಿಸಿಕೊಂಡು ಅವರಿಗೆ ವಿವಿಧ ಇಲಾಖೆಯಲ್ಲಿ ಸರ್ಕಾರಿ ನೌಕರಿ ಕೊಡಿಸುತ್ತೇನೆ ಅಂತ ಆಮಿಷ ಒಡ್ಡಿ ಅವರಿಂದ ಲಕ್ಷಾಂತರ ರೂಪಾಯಿ ದುಡ್ಡು ವಸೂಲಿ ಮಾಡಿ ನಕಲಿ ನೇಮಕಾತಿ ಆದೇಶಗಳನ್ನ ಕೊಟ್ಟು ಕಳುಹಿಸ್ತಿದ್ದರು. ಈ ನೇಮಕಾತಿ ಆದೇಶ ತೆಗೆದುಕೊಂಡು ಆಯಾ ಇಲಾಖೆಗೆ ಹೋಗಿ ಕೆಲಸಕ್ಕೆ ಸೇರಲು ಮುಂದಾದಾಗ ಇದು ಅಸಲಿಯಲ್ಲ ನಕಲಿ ಅಂತ ಯುವಕರಿಗೆ ಗೋತ್ತಾಗಿದೆ.
ಬಳಿಕ, ಯುವಕ ನೌಕರಿ ಕೊಡಿಸುತ್ತೇನೆ ಅಂತ ದುಡ್ಡು ತೆಗೆದುಕೊಂಡ ಆರೋಪಿಗಳ ಬಳಿ ಹೊದರೇ, ದುಡ್ಡು ವಾಪಸ್ ಕೊಡದೆ ದೂರು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ. “ಇದರಲ್ಲಿ ನೀನು ಜೈಲಿಗೆ ಹೋಗುತ್ತೀಯಾ” ಅಂತ ಹೆದರಿಸಿ ಕೇಳುಹಿಸಿದ್ದಾರೆ. ಹೀಗೆ, ನಕಲಿ ನೇಮಕಾತಿ ಆದೇಶಗಳನ್ನು ನೀಡುತ್ತಿದ್ದ ನಾಗೇಶ್ ಮತ್ತು ಅಭಿಷೇಕ್ ಇಬ್ಬರನ್ನು ಕಲಬುರಗಿ ಜಿಲ್ಲಾ ಸೆನ್ ಪೊಲೀಸರು ಬಂಧಿಸಿ ಕಂಬಿ ಹಿಂದೆ ಕಳುಹಿಸಿದ್ದಾರೆ.
ಆರೋಪಿಗಳಾದ ನಾಗೇಶ್ ಮತ್ತು ಅಭಿಷೇಕ್ ಇಬ್ಬರು ಕೂಡ ಇಲ್ಲಿಯವರೆಗೆ ಸುಮಾರು 11 ಜನರಿಗೆ ನಕಲಿ ನೇಮಕಾತಿ ಆದೇಶಗಳನ್ನ ಕೊಟ್ಟು ಬರೊಬ್ಬರಿ 14 ಲಕ್ಷ ರೂಪಾಯಿಗೂ ಹೆಚ್ಚು ವಸೂಲಿ ಮಾಡಿದ್ದಾರೆ. ಆದರೆ, ದುರುಂತ ಅಂದರೆ ನಕಲಿ ನೇಮಕಾತಿ ಆದೇಶ ಪಡೆದು ವಂಚನೆಗೆ ಒಳಗಾದವರು ಒಬ್ಬರು ಕೂಡ ಇದುವರೆಗೂ ದೂರು ನೀಡಿರಲಿಲ್ಲ. ಹೀಗಾಗಿ, ಇವರು ಇದನ್ನೇ ಬಂಡವಾಳವಾಗಿಸಿಕೊಂಡು ಬಿಂದಾಸ್ ಆಗಿ ನಕಲಿ ನೇಮಕಾತಿ ಆದೇಶಗಳನ್ನ ತಯಾರು ಮಾಡಿ ವಂಚನೆ ಮಾಡುತ್ತಿದ್ದಾರೆ.
ಕಲಬುರಗಿ ಜಿಲ್ಲೆಯ ಕಮಾಲಾಪುರ ತಾಲ್ಲೂಕಿನ ಅಮರದೀಪ್ ಎಂಬ ಯುವಕನಿಗೆ ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯ ಪರಿಚಾರಕ ಹುದ್ದೆಯ ನೇಮಕಾತಿ ಆದೇಶ ನೀಡಿರುವುದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಚಾರ ತಿಳಿದ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಈ ಸಂಬಂಧ ದೂರು ನೀಡಿದರು. ದೂರು ದಾಖಲಿಸಿಕೊಂಡ ಸೆನ್ ಪೊಲೀಸರು ಅಮರದೀಪ್ ಸಹಾಯದಿಂದ ಆರೋಪಿಗಳು ಮಹಾರಾಷ್ಟ್ರದ ಪುಣೆಯಲ್ಲಿ ಅಡಗಿರುವ ಮಾಹಿತಿ ಪಡೆದು ದಾಳಿ ಮಾಡಿ ಅರೆಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಸ್ನೇಹಿತರಿಂದಲೇ ಗೆಳೆಯನ ಬರ್ಬರ ಹತ್ಯೆ: ತಲೆ ಮೇಲೆ ಕಲ್ಲೆತ್ತಿ ಹಾಕುವ ಭಯಾನಕ ದೃಶ್ಯ ಸೆರೆ
ಕಲಬುರಗಿಯ ಸೆನ್ ಪೊಲೀಸರು ಇಬ್ಬರು ಆರೋಪಿಗಳಿಂದ 11 ನಕಲಿ ನೇಮಕಾತಿ ಆದೇಶ, ಮೊಬೈಲ್ ಮತ್ತು ನಗದು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಓದಿದ್ದು, ಕೇವಲ ನಾಲ್ಕನೇ ತರಗತಿಯವರೆಗೆ. ಇವರಿಂದ ವಂಚನೆಗೆ ಒಳಗಾದವರು ಮುಂದೆ ಬಂದು ದೂರು ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಜೊತೆಗೆ ಯುವಕರು ಇಂತಹ ವಂಚನೆಕೋರರ ಜಾಲದಿಂದ ಎಚ್ಚರದಿಂದ ಇರುವಂತೆ ಸೂಚನೆ ಕೂಡ ಪೊಲೀಸರು ನೀಡಿದ್ದಾರೆ.







