ಬೆಂಗಳೂರು: ಪೊಲೀಸ್ ಸಬ್ಇನ್ಸ್ಟೆಕ್ಟರ್ಗಳ ಅಕ್ರಮ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಅವರಿಗೆ ಸಿಐಡಿ ಅಧಿಕಾರಿಗಳು ಮತ್ತೊಮ್ಮೆ ನೊಟೀಸ್ ನೀಡಿದ್ದು, ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದ್ದಾರೆ. 545 ಪಿಎಸ್‌ಐಗಳ ನೇಮಕಾತಿ ಅಕ್ರಮ ಪ್ರಕರಣದ ತನಿಖೆಗೆ ಸಹಕರಿಸಬೇಕು ಎಂದು ಅಧಿಕಾರಿಗಳು ಕೋರಿದ್ದಾರೆ. ಈ ಹಿಂದೆ ಸಿಐಡಿ ನೊಟೀಸ್ ಕೊಟ್ಟಿದ್ದರೂ ಪ್ರಿಯಾಂಕ್ ಖರ್ಗೆ ವಿಚಾರಣೆಗೆ ಹಾಜರಾಗಿರಲಿಲ್ಲ. ನೊಟೀಸ್ಗೆ ಲಿಖಿತ ಉತ್ತರ ಕೊಟ್ಟಿದ್ದರು. ಕಳೆದ ಬಾರಿ ನೊಟೀಸ್ ನೀಡಿದ್ದಾಗ ಕೆಪಿಸಿಸಿ ಸೂಚನೆ ಮೇರೆಗೆ ಪ್ರಿಯಾಂಕ್ ವಿಚಾರಣೆಯಿಂದ ದೂರ ಉಳಿದಿದ್ದರು. ಇದೀಗ ಮತ್ತೊಮ್ಮೆ ನೊಟೀಸ್ ನೀಡಿರುವ ಹಿನ್ನೆಲೆಯಲ್ಲಿ ಖರ್ಗೆ ವಿಚಾರಣೆಗೆ ಹಾಜರಾಗುವ ಬಗ್ಗೆ ಪ್ರಶ್ನೆಗಳು ಮೂಡಿವೆ.
ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದ ಮತ್ತಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಸಿಐಡಿ ಈಗಾಗಲೇ ಪ್ರಾಥಮಿಕ ತನಿಖೆ ಪೂರ್ಣಗೊಳಿಸಿದ್ದು, ಎರಡನೇ ಹಂತದ ತನಿಖೆ ಆರಂಭವಾಗಿದೆ. ತನಿಖೆ ಚುರುಕಾಗಿ ನಡೆಯುತ್ತಿದ್ದು, ಹಲವು ಅಭ್ಯರ್ಥಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಅಭ್ಯರ್ಥಿಗಳ ಪರೀಕ್ಷಾ ಅಕ್ರಮದಲ್ಲಿ ಪೊಲೀಸ್ ಇಲಾಖೆಯೇ ಭಾಗಿಯಾಗಿದೆ ಎಂಬ ಮಾತುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಪೊಲೀಸರ ನೆರವಿಲ್ಲದೆ ಪರೀಕ್ಷಾ ಅಕ್ರಮ ನಡೆಸಿ, ಅಕ್ರಮ ನೇಮಕಾತಿ ಮಾಡಲು ಸಾಧ್ಯವಿಲ್ಲ. ಒಟ್ಟಾರೆ ಪ್ರಕರಣದಲ್ಲಿ ನೇಮಕಾತಿ ವಿಭಾಗದ ಪೊಲೀಸ್ ಅಧಿಕಾರಿಗಳ ಪಾತ್ರವೇನು ಎಂಬ ಅಂಶ ತನಿಖೆಯ ನಂತರ ಬಯಲಾಗಲಿದೆ. ವರ್ಗಾವಣೆಗೊಂಡ ಎಡಿಜಿಪಿ ಅಮೃತ್ ಪಾಲ್ ಮತ್ತು ಒಂದೇ ಸ್ಥಳದಲ್ಲಿ ವರ್ಷಗಟ್ಟಲೆ ಇದ್ದ ಶಾಂತಕುಮಾರ್ ಅವರನ್ನು ಸದ್ಯದಲ್ಲೇ ಮತ್ತೊಮ್ಮೆ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.
ಪೊಲೀಸ್ ಸಿಬ್ಬಂದಿ ವಿಚಾರಣೆ
ಎಡಿಜಿಬಿ ಅಮೃತ್ ಪಾಲ್ ಕಚೇರಿಯ ಓರ್ವ ಸಿಬ್ಬಂದಿಯನ್ನು ಈಗಾಗಲೇ ಸಿಐಡಿ ವಿಚಾರಣೆಗೆ ಒಳಪಡಿಸಿದೆ. ಅಕ್ರಮದ ಹಿಂದಿರುವ ಕಾಣದ ಕೈಗಳು ಯಾರದು? ಹೇಗೆಲ್ಲಾ ಅವ್ಯವಹಾರ ನಡೆಸಲಾಗಿತ್ತು? ಅಕ್ರಮ ನೇಮಕಾತಿಯಲ್ಲಿ ಇಲಾಖೆ ಅಧಿಕಾರಿಗಳ ಪಾತ್ರ ಎಷ್ಟರಮಟ್ಟಿಗಿದೆ? ನೇಮಕಾತಿ ವಿಭಾಗದಲ್ಲಿ ಹಿಡಿತ ಸಾಧಿಸಿದ್ದ ಡಿವೈಎಸ್ಪಿ ಶಾಂತಕುಮಾರ್ ಜೊತೆಗೆ ಯಾರೆಲ್ಲಾ ಸಹಕರಿಸಿದ್ದರು? ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ಹೇಗೆ ನಡೆಯುತ್ತಿತ್ತು? ಪರೀಕ್ಷೆ ಬಳಿಕ ಸೀಲ್ ಆಗಿ ಬರುತ್ತಿದ್ದ ಉತ್ತರ ಪತ್ರಿಕೆಗಳ ನಿರ್ವಹಣೆ ಮಾಡುತ್ತಿದ್ದವರು ಯಾರು? ಯಾರ ನೇತೃತ್ವದಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯುತ್ತಿತ್ತು ಎಂಬುದೂ ಸೇರಿದಂತೆ ಹಲವು ಪ್ರಶ್ನೆಗಳಿಗೆ ಸಿಐಡಿ ಉತ್ತರ ಕಂಡುಕೊಳ್ಳಬೇಕಿದೆ.
ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆಯ ಕೆಲ ಅಧಿಕಾರಿಳ ಮೇಲೆ ಅನುಮಾನ ವ್ಯಕ್ತವಾಗಿದೆ. ಅಭ್ಯರ್ಥಿಗಳ ಪರವಾಗಿ ಕಿಂಗ್ಪಿನ್ಗಳೊಂದಿಗೆ ಡೀಲ್ ಕುದುರಿಸಿದ ಆರೋಪದ ಮೇಲೆ ರಾಯಚೂರು ಜಿಲ್ಲೆ ಲಿಂಗಸುಗೂರು ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಅವರನ್ನು ಸಿಐಡಿ ಅಧಿಕಾರಿಗಳು ಬರೋಬ್ಬರಿ ಐದು ಗಂಟೆ ಕಾಲ ವಿಚಾರಣೆ ನಡೆಸಿದರು.
ವಿಚಾರಣೆ ವೇಳೆ ಅನೇಕ ಪ್ರಶ್ನೆಗಳನ್ನು ಅಧಿಕಾರಿಗಳು ಕೇಳಿದ್ದಾರೆ. ಮೊದಲು ಕಲಬುರಗಿ ಜಿಲ್ಲೆಯಲ್ಲಿ ಕೆಲಸ ಮಾಡಿದ್ದರಿಂದ ರುದ್ರಗೌಡ ಪಾಟೀಲ್ ಪರಿಚಯವಿದೆ. ಆದರೆ ಯಾವುದೇ ಅಕ್ರಮದಲ್ಲಿ ಭಾಗಿಯಾಗಿಲ್ಲ. ಪರೀಕ್ಷೆಯ ಡೀಲ್ನಲ್ಲಿ ನನ್ನ ಕೈವಾಡವಿಲ್ಲವೆಂದು ಡಿವೈಎಸ್ಪಿ ಸಾಲಿ ಹೇಳಿದ್ದಾರೆ. ಸತತ ಐದು ಗಂಟೆಗಳ ವಿಚಾರಣೆ ನಂತರ ಡಿವೈಎಸ್ಪಿ ಸಾಲಿ ಅವರನ್ನು ಸಿಐಡಿ ಹೊರಗೆ ಕಳಿಸಿತು. ಮತ್ತೆ ವಿಚಾರಣೆ ಕರೆದರೆ ಬರಬೇಕು ಎಂದು ಸೂಚಿಸಲಾಗಿದೆ.
ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಕಿಂಗ್ಪಿನ್ ರುದ್ರಗೌಡ ಪಾಟೀಲ್ ಜೊತೆ ಸಂಪರ್ಕಗಲ್ಲಿದ್ದವರಿಗೆ ಆತಂಕ ಶುರುವಾಗಿದೆ. ಅನುಮಾನ ಬಂದವರ ಮೇಲೆ ಕಣ್ಣಿಟ್ಟು ವಿಚಾರಣೆಗೆ ಒಳಪಡಿಸಲು ಪೊಲೀಸರು ಮುಂದಾಗಿದ್ದಾರೆ. ವಾರದ ಹಿಂದೆ ಕೂಡಾ ಓರ್ವ ನಿವೃತ್ತ ಡಿವೈಎಸ್ಪಿಯನ್ನು ಸಿಐಡಿ ವಿಚಾರಣೆಗೆ ಒಳಪಡಿಸಿ, ಅವರ ಮೊಬೈಲ್ ಜಪ್ತಿ ಮಾಡಿತ್ತು. ಸಿಐಡಿ ಪಟ್ಟಿಯಲ್ಲಿ ಕಲಬುರಗಿ ಜಿಲ್ಲೆಯ ಕೆಲ ಸಿಪಿಐ, ಡಿವೈಎಸ್ಪಿಗಳ ಹೆಸರು ಇದೆ. ಸಿಐಡಿ ಒಬ್ಬೊಬ್ಬರನ್ನೇ ಕರೆದು ವಿಚಾರಣೆಗೆ ಒಳಪಡಿಸುತ್ತಿದೆ. ಕಿಂಗ್ಪಿನ್ಗಳು ವಿಚಾರಣೆ ವೇಳೆ ಒದಗಿಸಿರುವ ಮಾಹಿತಿಯ ಜೊತೆಗೆ ಕಾಲ್ ಹಿಸ್ಟರಿಯನ್ನೂ ಸಿಐಡಿ ಪರಿಶೀಲಿಸುತ್ತಿದೆ. ಸಮರ್ಪಕ ಸಾಕ್ಷಿ ಸಿಕ್ಕರೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಸಿಕ್ಕಿಬೀಳುವುದು ಖಚಿತ ಎನ್ನಲಾಗಿದೆ.
ಇದನ್ನೂ ಓದಿ: ಪಿಎಸ್‌ಐ ಮರುಪರೀಕ್ಷೆ: ಬಡತನದಲ್ಲಿ ಓದಿ ಪಾಸಾದ ಬಾಗಲಕೋಟೆಯ ಈ ಯುವತಿ ಕಷ್ಟ ಕೇಳೋರು ಯಾರು?
Published On - 7:42 am, Thu, 5 May 22