ಸರ್ಕಾರಿ ಆಸ್ಪತ್ರೆಯ ಒಪಿಡಿ ಪುಸ್ತಕದಲ್ಲಿ ಸಿನಿಮಾದ ಭಕ್ತಿಗೀತೆ ಬರೆದ ಸಿಬ್ಬಂದಿ: ಲೋಕಾಯುಕ್ತರೇ ಶಾಕ್..!
ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಹೊರ ರೋಗಿಗಳ (ಒಪಿಡಿ) ದಾಖಲಾತಿ ಪುಸ್ತಕದಲ್ಲಿ ಆಸ್ಪತ್ರೆಯ ಸಿಬ್ಬಂದಿ ಸಿನಿಮಾದ ಭಕ್ತಿಗೀತೆ ಬರೆದಿದ್ದಾರೆ. ಪೂಜಿಸಲೆಂದೆ ಹೂಗಳ ತಂದೆ ಎನ್ನೋ ಹಾಡು ಬರೆದಿರುವುದು ಲೋಕಾಯುಕ್ತ ಎಸ್ಪಿ ದೀಢಿರ್ ಭೇಟಿ ವೇಳೆ ತಾಲೂಕಾಸ್ಪತ್ರೆ ಕರ್ಮಕಾಂಡ ಅನಾವರಣಗೊಂಡಿದ್ದು, ಆಸ್ಪತ್ರೆ ಅವ್ಯವಸ್ಥೆ ಕಂಡು ಲೋಕಾಯುಕ್ತರೇ ದಂಗಾಗಿದ್ದಾರೆ.

ಕಲಬುರಗಿ, (ಜುಲೈ 16): ಜಿಲ್ಲೆಯ ಜೇವರ್ಗಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ (Jewargi Governmnet Hospital) ಹೊರ ರೋಗಿಗಳ (ಒಪಿಡಿ) ದಾಖಲಾತಿ ಪುಸ್ತಕದಲ್ಲಿ ಆಸ್ಪತ್ರೆಯ ಸಿಬ್ಬಂದಿ ಸಿನಿಮಾದ ಭಕ್ತಿಗೀತೆ ಬರೆದಿರುವುದು ಲೋಕಾಯುಕ್ತರ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಲು ಕಲಬುರಗಿ (Kalaburagi) ಲೋಕಾಯುಕ್ತ ಎಸ್ಪಿ ಸಿದ್ದರಾಜು, ಡಿವೈಎಸ್‌ಪಿ ಗೀತಾ ಬೇನಾಳ ಅವರು ಭೇಟಿ ನೀಡಿದರು. ಇದೇ ವೇಳೆ ಆಸ್ಪತ್ರೆಯ ವ್ಯವಸ್ಥೆಯ ಪರಿಶೀಲಿಸುವಾಗ ಭಕ್ತಿಗೀತೆ ಬರೆದಿರುವುದು ಕಂಡುಬಂದಿದ್ದು, ಲೋಕಾಯುಕ್ತ ಅಧಿಕಾರಿಗಳು ದಂಗಾಗಿದ್ದಾರೆ.
ಒಪಿಡಿ ಪುಸ್ತಕದಲ್ಲಿ ‘ಎರಡು ಕನಸು’ ಚಲನಚಿತ್ರದ, ‘ಪೂಜಿಸಲೆಂದೇ ಹೂಗಳ ತಂದೆ ದರುಶನ ಕೋರಿ ನಾ ನಿಂದೇ ತೆರೆಯೋ ಬಾಗಿಲನು ರಾಮ… ಮೋಡದಮೇಲೆ ಚಿನ್ನದ ನೀರು ಚೆಲ್ಲುತ ಸಾಗಿದೆ ಹೊನ್ನಿನ ತೇರು ಮಾಣಿಕ್ಯದಾರತಿ ಉಷೆತಂದಿಹಳು…ತಾಮಸವೇಕಿನ್ನು ಸ್ವಾಮಿ, ತೆರೆಯೋ ಬಾಗಿಲನು, ರಾಮ…’ ಎಂದು ಇಡೀ ಹಾಡನ್ನು ಒಪಿಡಿ ದಾಖಲಾತಿಯಲ್ಲಿ ಬರೆದಿದ್ದಾರೆ.
ಆಸ್ಪತ್ರೆ ಸಿಬ್ಬಂದಿಯ ಈ ಬರಹಕ್ಕೆ ಕಲಬುರಗಿ ಲೋಕಾಯುಕ್ತ ಎಸ್ಪಿ ಸಿದ್ದರಾಜು ಆಕ್ರೋಶ ವ್ಯಕ್ತಪಡಿಸಿದ್ದು, ಮಾಜಿ ಮುಖ್ಯಮಂತ್ರಿ ದಿ. ಧರ್ಮಸಿಂಗ್ ಕ್ಷೇತ್ರದ ಆಸ್ಪತ್ರೆನಾ ಇದು ಎಂದು ಪ್ರಶ್ನಿಸಿದ್ದಾರೆ.



