AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚಾದ ಕಳ್ಳತನ; ದೇವಸ್ಥಾನ, ಮಠ, ದರ್ಗಾಗಳಲ್ಲಿನ ಹುಂಡಿ ಹಣ ಮಂಗಮಾಯ

ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚಾಗಿ ನಗರದಲ್ಲಿರುವ ದೊಡ್ಡ ದೊಡ್ಡ ಶ್ರೀಮಂತರ ಮನೆಗಳು ಕಳ್ಳತನವಾಗುತ್ತಿದ್ದವು. ಲಾಕ್ ಡೌನ್ ಸಡಿಲಿಕೆ ನಂತರ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು ಇದೀಗ ನಗರ ಮಾತ್ರವಲ್ಲ, ಗ್ರಾಮೀಣ ಭಾಗದಲ್ಲಿ ಕೂಡಾ ಕಳ್ಳರ ಗ್ಯಾಂಗ್ಗಳು ಸಕ್ರೀಯವಾಗಿವೆ. ಅದರಲ್ಲೂ ಇದೀಗ ಮನೆಗಳ್ಳತನಗಿಂತ ದೇವಸ್ಥಾನ, ದರ್ಗಾ, ಮಠಗಳಲ್ಲಿಯೇ ಕಳ್ಳತನಗಳು ಹೆಚ್ಚಾಗುತ್ತಿವೆ.

ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚಾದ ಕಳ್ಳತನ; ದೇವಸ್ಥಾನ, ಮಠ, ದರ್ಗಾಗಳಲ್ಲಿನ ಹುಂಡಿ ಹಣ ಮಂಗಮಾಯ
ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚಾದ ಕಳ್ಳತನ
TV9 Web
| Updated By: ಆಯೇಷಾ ಬಾನು|

Updated on:Aug 17, 2021 | 1:43 PM

Share

ಕಲಬುರಗಿ: ಜಿಲ್ಲೆಯಲ್ಲಿ ಇದೀಗ ಕಳ್ಳರು, ದೇವಸ್ಥಾನ, ಮಠ, ದರ್ಗಾದಲ್ಲಿನ ಹುಂಡಿ ಮೇಲೆ ಕಣ್ಣಿಟ್ಟಿದ್ದಾರೆ. ದೇವರನ್ನು ಕಂಡರೆ ಅನೇಕರಿಗೆ ಭಕ್ತಿ ಭಯವಿದ್ರೆ, ಕಳ್ಳರಿಗೆ ಮಾತ್ರ ದೇವರು, ದೇವರ ಹುಂಡಿಗಳೇ ಕಳ್ಳತನಕ್ಕೆ ಟಾರ್ಗೆಟ್ ಆಗಿವೆ. ಹೀಗಾಗಿ ಮಠ, ದೇವಸ್ಥಾನ, ದರ್ಗಾದಲ್ಲಿನ ಹುಂಡಿಗಳು ಕಳ್ಳರ ಪಾಲಾಗುತ್ತಿವೆ. ಇದು ಸಿಬ್ಬಂದಿ ಮತ್ತು ಭಕ್ತರ ಆತಂಕವನ್ನು ಹೆಚ್ಚಿಸಿದೆ.

ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚಾಗಿ ನಗರದಲ್ಲಿರುವ ದೊಡ್ಡ ದೊಡ್ಡ ಶ್ರೀಮಂತರ ಮನೆಗಳು ಕಳ್ಳತನವಾಗುತ್ತಿದ್ದವು. ಲಾಕ್ ಡೌನ್ ಸಡಿಲಿಕೆ ನಂತರ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು ಇದೀಗ ನಗರ ಮಾತ್ರವಲ್ಲ, ಗ್ರಾಮೀಣ ಭಾಗದಲ್ಲಿ ಕೂಡಾ ಕಳ್ಳರ ಗ್ಯಾಂಗ್ಗಳು ಸಕ್ರೀಯವಾಗಿವೆ. ಅದರಲ್ಲೂ ಇದೀಗ ಮನೆಗಳ್ಳತನಗಿಂತ ದೇವಸ್ಥಾನ, ದರ್ಗಾ, ಮಠಗಳಲ್ಲಿಯೇ ಕಳ್ಳತನಗಳು ಹೆಚ್ಚಾಗುತ್ತಿವೆ.

ಎರಡು ದಿನದ ಹಿಂದೆ, ಜಿಲ್ಲೆಯ ಅಫಜಲಪುರ ತಾಲೂಕಿನ ಹಿರೇ ಜೇವರ್ಗಿ ಗ್ರಾಮದಲ್ಲಿರುವ ಶಾಂತಲಿಂಗೇಶ್ವರ ಸಂಸ್ಥಾನ ಮಠದಲ್ಲಿ ಕಳ್ಳತನವಾಗಿದೆ. ಮಠದ ಕೋಣೆಯಲ್ಲಿನ ಅಲಮಾರಿಯಲ್ಲಿಟ್ಟಿದ್ದ ನೂರಾ ಹತ್ತು ಗ್ರಾಮ ಚಿನ್ನಾಭರಣ, ಮತ್ತು ಮೂವತ್ತು ಸಾವಿರ ನಗದು ಕಳ್ಳತನವಾಗಿದೆ. ಕೋಣೆಯ ಬಾಗಿಲು ಮುರಿದು ಒಳ ನುಗ್ಗಿರೋ ಕಳ್ಳರು, ಅಲಮಾರಿಯನ್ನು ಮುರಿದು, ಚಿನ್ನಾಭರಣ ಮತ್ತು ಹಣವನ್ನು ಕದ್ದುಕೊಂಡು ಹೋಗಿದ್ದಾರೆ.

ಇನ್ನು ಕಲಬುರಗಿ ನಗರದ ವಿಠಲ್ ನಗರದಲ್ಲಿರುವ ಹನಮಂತ ದೇವರ ದೇವಸ್ಥಾನದಲ್ಲಿ ಕೂಡಾ ಕೆಲ ದಿನಗಳ ಹಿಂದೆ ಕಳ್ಳತನ ನಡೆದಿದೆ. ದೇವಸ್ಥಾನಕ್ಕೆ ಬಂದಿದ್ದ ಕಳ್ಳ, ಕಬ್ಬಿಣದ ರಾಡ್ ನಿಂದ ದೇವಸ್ಥಾನದಲ್ಲಿನ ಹುಂಡಿಯನ್ನು ಮುರಿದು, ಹುಂಡಿಯಲ್ಲಿದ್ದ ಹಣವನ್ನು ಕದ್ದುಕೊಂಡು ಹೋಗಿದ್ದ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸಿಸಿಟಿವಿಯಲ್ಲಿ ತಾನು ಮಾಡುತ್ತಿರುವ ಕೆಲಸ ರೆಕಾರ್ಡ್ ಆಗುತ್ತಿರುವುದು ಗೊತ್ತಾದರು ಕೂಡಾ ಹುಂಡಿಯಲ್ಲಿನ ಹಣ ತಗೆದುಕೊಂಡು ಹೋಗಿದ್ದಾನೆ.

ವಾರದ ಹಿಂದಷ್ಟೇ, ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರದಲ್ಲಿರುವ ಸುಪ್ರಸಿದ್ದ ಹಾಜಿಸರ್ವರ್ ದರ್ಗಾದಲ್ಲಿದ್ದ ಹುಂಡಿಯನ್ನು ಕಳ್ಳನೋರ್ವ ಕದ್ದುಕೊಂಡು ಹೋಗಿದ್ದ. ಕಲಬುರಗಿ ನಗರದಲ್ಲಿಯೇ ಬ್ರಹ್ಮಪುರ ದಲ್ಲಿರುವ ಆಂಜನೇಯ ದೇವಸ್ಥಾನ, ಆಳಂದ ಕಾಲೋನಿಯಲ್ಲಿರುವ ಶಿವ ದೇವಸ್ಥಾನದಲ್ಲಿ ಕೂಡಾ ಕೆಲ ದಿನಗಳ ಹಿಂದೆ ಕಳ್ಳತನವಾಗಿದೆ. ಮತ್ತೊಂದಡೆ ಜಿಲ್ಲೆಯ ಕಾಳಗಿ, ಕಮಲಾಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಅನೇಕ ದೇವಸ್ಥಾನಗಳಲ್ಲಿ ಕೂಡಾ ಕಳ್ಳತನ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ.

ದೇವಸ್ಥಾನಗಳೇ ಏಕೆ ಟಾರ್ಗೆಟ್? ಜಿಲ್ಲೆಯಲ್ಲಿ ಕಳ್ಳರು, ಇತ್ತೀಚೆಗೆ ಮನೆಗಳಿಗಿಂತ ದೇವಸ್ಥಾನಗಳನ್ನೇ ಹೆಚ್ಚು ಟಾರ್ಗೆಟ್ ಮಾಡಿಕೊಂಡಿದ್ದಾರೆ. ಯಾಕಂದ್ರೆ ಬಹುತೇಕ ದೇವಸ್ಥಾನಗಳಲ್ಲಿ ಕಾವಲು ಸಿಬ್ಬಂದಿ ಇರೋದಿಲ್ಲ. ರಾತ್ರಿಯಾದ್ರೆ ಅರ್ಚಕರು ದೇವಸ್ಥಾನಕ್ಕೆ ಬೀಗ ಹಾಕಿಕೊಂಡು ಮನೆಗೆ ಹೋಗ್ತಾರೆ. ಮತ್ತೊಂದೆಡೆ ರಾತ್ರಿ ಸಮಯದಲ್ಲಿ ಹೆಚ್ಚಿನ ಜನ ಸಂಚಾರ ಕೂಡಾ ದೇವಸ್ಥಾನದ ಆವರಣದಲ್ಲಿ ಇರೋದಿಲ್ಲಾ. ಹೀಗಾಗಿ ಅಮಾಯಕರಂತೆ ಬರೋ ಕಳ್ಳರು, ದೇವಸ್ಥಾನದ ಹುಂಡಿಯನ್ನು, ದೇವರ ಬೆಳ್ಳಿ ವಿಗ್ರಹಗಳನ್ನು ಕದ್ದುಕೊಂಡು ಪರಾರಿಯಾಗುತ್ತಿದ್ದಾರೆ. ದೊಡ್ಡ ದೊಡ್ಡ ದೇವಸ್ಥಾನಗಳ ಬದಲಿಗೆ, ಸುಲಭವಾಗಿ ಕಳ್ಳತನ ಮಾಡಿಕೊಂಡು ಹೋಗಲು ಅನಕೂಲವಾಗಿರುವ ಸಣ್ಣ ದೇವಸ್ಥಾನಗಳನ್ನೆ ಕಳ್ಳರು ಟಾರ್ಗೆಟ್ ಮಾಡಿಕೊಂಡಿದ್ದಾರೆ.

ಪತ್ತೆಯಾಗದ ದೇವರ ಕಳ್ಳರು ಅನೇಕ ದೇವಸ್ಥಾನಗಳಲ್ಲಿ ಕಳ್ಳತನ ನಡೆದು ತಿಂಗಳು ಕಳೆದ್ರೂ ಕೂಡಾ ಕಳ್ಳರು ಮಾತ್ರ ಪತ್ತೆಯಾಗುತ್ತಿಲ್ಲಾ. ಸದ್ಯ ದೇವಸ್ಥಾನದ ಹುಂಡಿ ಮತ್ತು ವಿಗ್ರಹಗಳ ಮೇಲೆ ಕಣ್ಣು ಹಾಕಿ, ಕಳ್ಳತನ ಮಾಡುತ್ತಿರುವ ಖತರ್ನಾಕ ಕಿಲಾಡಿಗಳನ್ನು ಬಂಧಿಸಬೇಕು ಅಂತ ಸಾರ್ವಜನಿಕರು ಪೊಲೀಸರಿಗೆ ಆಗ್ರಹಿಸಿದ್ದಾರೆ. ಹೌದು ಕಲಬುರಗಿ ನಗರ ಸೇರಿದಂತೆ ಜಿಲ್ಲೆಯ ಅನೇಕ ಕಡೆ ಕಳೆದ ಕೆಲ ತಿಂಗಳಿಂದ ನಿರಂತರವಾಗಿ ಕಳ್ಳತನಗಳು ನಡೆಯುತ್ತಲೇ ಇವೆ. ಅನೇಕ ದೇವಸ್ಥಾನಗಳಲ್ಲಿನ ಕಳ್ಳತನಗಳು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿವೆ. ಸಿಸಿಟಿವಿ ಸಮೇತ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿವೆ. ಆದರೆ ಖತರ್ನಾಕ ಕಳ್ಳರು ಮಾತ್ರ ಪತ್ತೆಯಾಗುತ್ತಿಲ್ಲಾ. ಕಲಬುರಗಿ ಜಿಲ್ಲೆಯ ಮತ್ತು ನೆರೆಯ ತೆಲೆಂಗಾಣ ಮತ್ತು ಮಹರಾಷ್ಟ್ರದಿಂದ ಬರುವ ಅನೇಕ ಕಳ್ಳರು, ಹುಂಡಿ ಮತ್ತು ದೇವರ ಮೂರ್ತಿಗಳನ್ನು ಕದ್ದುಕೊಂಡು ಪರಾರಿಯಾಗುತ್ತಿದ್ದಾರೆ. ಇನ್ನು ಈ ಬಗ್ಗೆ ಕಲಬುರಗಿ ಜಿಲ್ಲೆಯಲ್ಲಿ ಮಠ, ದೇವಸ್ಥಾನಗಳ ಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ತಗೆದುಕೊಂಡಿದ್ದೇವೆ. ಕಳ್ಳರ ಪತ್ತೆಗಾಗಿ ಪ್ರತ್ಯೇಕ ಪೊಲೀಸರ ತಂಡವನ್ನು ರಚಿಸಲಾಗಿದೆ. ಆದಷ್ಟು ಬೇಗನೆ ಕಳ್ಳರನ್ನು ಪತ್ತೆ ಮಾಡುತ್ತೇವೆ ಎಂದು ಕಲಬುರಗಿ ಎಸ್ಪಿ ಡಾ. ಸಿಮಿ ಮರಿಯಮ್ ಜಾರ್ಜ್ ತಿಳಿಸಿದ್ದಾರೆ.

ವರದಿ-ಸಂಜಯ್ ಚಿಕ್ಕಮಠ

ಇದನ್ನೂ ಓದಿ: India vs England 2nd Test: ದಾಖಲೆಯ ಜೊತೆಯಾಟ ಆಡಿ ಡ್ರೆಸ್ಸಿಂಗ್ ರೂಮ್​ಗೆ ಬಂದ ಶಮಿ-ಬುಮ್ರಾಗೆ ಬಿಗ್ ಸರ್​ಪ್ರೈಸ್

Published On - 12:10 pm, Tue, 17 August 21