AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಬೈನಿಂದ ಆಫ್ರಿಕಾವರೆಗೆ: ನಟಿ ರನ್ಯಾ ರಾವ್ ಡೀಲಿಂಗ್ ಬಗ್ಗೆ ಆಘಾತಕಾರಿ ಮಾಹಿತಿ ಬಯಲಿಗೆ

ಕನ್ನಡ ಚಿತ್ರರಂಗದ ನಟಿ ರನ್ಯಾ ರಾವ್ ಅಂಡ್ ಟೀಂ ನಡೆಸುತ್ತಿದ್ದ ಅಂತಾರಾಷ್ಟ್ರೀಯ ಚಿನ್ನದ ಸ್ಮಗ್ಲಿಂಗ್ ದಂಧೆ ಬಗ್ಗೆ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಕೇವಲ ಒಂದು ವರ್ಷದಲ್ಲಿ ಬರೋಬ್ಬರಿ 102 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಭಾರತಕ್ಕೆ ಸಾಗಿಸಿರುವ ನಟಿ ವಿರುದ್ಧ ಜಾರಿ ನಿರ್ದೇಶನಾಲಯ (ED) ಬೆಂಗಳೂರಿನಲ್ಲಿ ಚಾರ್ಜ್‌ಶೀಟ್ ಸಲ್ಲಿಸಿದ್ದು, ಸ್ಫೋಟಕ ಅಂಶ ಬಯಲಾಗಿದೆ.

ದುಬೈನಿಂದ ಆಫ್ರಿಕಾವರೆಗೆ: ನಟಿ ರನ್ಯಾ ರಾವ್  ಡೀಲಿಂಗ್ ಬಗ್ಗೆ ಆಘಾತಕಾರಿ ಮಾಹಿತಿ ಬಯಲಿಗೆ
Ranya Rao
ರಮೇಶ್ ಬಿ. ಜವಳಗೇರಾ
|

Updated on:Mar 22, 2026 | 9:22 PM

Share

ಬೆಂಗಳೂರು, (ಮಾರ್ಚ್ 22): ರನ್ಯಾ ರಾವ್ (Ranya Rao) ಚಿನ್ನ ಕಳ್ಳಸಾಗಣೆ (Gold Smuggling) ಪ್ರಕರಣ ಸಂಬಂಧ 50 ಕೆಜಿ ಚಿನ್ನ ಸಾಗಣೆಗೆ ಉಗಾಂಡ (Uganda) ಮೂಲದ ಏಜೆಂಟ್ ಜೊತೆ ರನ್ಯಾ ರಾವ್ ಸಂಪರ್ಕದಲ್ಲಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ. ಸುಮಾರು 102.55 ಕೋಟಿ ರೂ. ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಭಾರತಕ್ಕೆ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಬುಧವಾರ ಬೆಂಗಳೂರಿನ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದು, ಇದರಲ್ಲಿ ಉಗಾಂಡಾ ಮೂಲದ ಏಜೆಂಟರೊಂದಿಗೆ ನಟಿ ನಡೆಸಿದ್ದ ಡೀಲಿಂಗ್ ಬಗ್ಗೆ ಆಘಾತಕಾರಿ ಮಾಹಿತಿ ಬಯಲಿಗೆ ಬಂದಿದೆ.

ತನಿಖಾ ವರದಿಗಳ ಪ್ರಕಾರ, ರನ್ಯಾ ರಾವ್ ಕೇವಲ ದುಬೈನಿಂದ ಮಾತ್ರವಲ್ಲದೆ, ಆಫ್ರಿಕನ್ ರಾಷ್ಟ್ರಗಳಿಂದಲೂ ಚಿನ್ನ ಪಡೆಯಲು ಸಂಚು ರೂಪಿಸಿದ್ದರು. ಇದಕ್ಕಾಗಿ ಅವರು ಉಗಾಂಡಾ ಮೂಲದ ಏಜೆಂಟ್ ಜೊತೆ ನಿರಂತರ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಆರಂಭದಲ್ಲಿ 5 ಕೆಜಿ ಚಿನ್ನವನ್ನು ಪ್ರಾಯೋಗಿಕವಾಗಿ ಸಾಗಿಸಲು ಯತ್ನಿಸಿದ್ದ ಈ ತಂಡ, ನಂತರ ಬರೋಬ್ಬರಿ 50 ಕೆಜಿ ಚಿನ್ನದ ಸಾಗಣೆಗೆ ಉಗಾಂಡಾ ಏಜೆಂಟ್ ಜೊತೆ ಡೀಲಿಂಗ್ ಕುದುರಿಸಿತ್ತು. ಇದಕ್ಕಾಗಿ ದುಬೈನಲ್ಲಿ ‘ವೀರಾ ಡೈಮಂಡ್ಸ್ ಟ್ರೇಡಿಂಗ್’ ಎಂಬ ಹೆಸರಿನ ಕಂಪನಿಯನ್ನು ಕೂಡ ತೆರೆಯಲಾಗಿತ್ತು.

ಇದನ್ನೂ ಓದಿ: ಅಕ್ರಮ ಚಿನ್ನ ಸಾಗಣೆ ಕೇಸ್: ನಟಿ ರನ್ಯಾ ರಾವ್​ಗೆ 102.55 ಕೋಟಿ ರೂಪಾಯಿ ದಂಡ

ವಂಚನೆಗೊಳಗಾಗಿದ್ದ ರನ್ಯಾ ರಾವ್

ಅಕ್ರಮ ಹಾದಿಯಲ್ಲಿ ಕೋಟ್ಯಂತರ ರೂಪಾಯಿ ಗಳಿಸಲು ಹೊರಟಿದ್ದ ರನ್ಯಾ ರಾವ್ ಮತ್ತು ಆಕೆಯ ಸ್ನೇಹಿತ ರಾಜು ಎಂಬುವವರಿಗೆ ಉಗಾಂಡಾದ ಮಧ್ಯವರ್ತಿಯೇ ಕೈಕೊಟ್ಟಿದ್ದಾನೆ. ಚಿನ್ನ ಖರೀದಿಗಾಗಿ ಅಡ್ವಾನ್ಸ್ ಆಗಿ 33 ಲಕ್ಷ ರೂಪಾಯಿ ಪಾವತಿಸಲಾಗಿತ್ತು. ಜನವರಿ 2024ರಲ್ಲಿ ರಾಜು ಎಂಬಾತ ಚಿನ್ನ ತರಲು ಉಗಾಂಡಾದ ಕಂಪಾಲಕ್ಕೆ ತೆರಳಿದ್ದಾಗ, ಏಜೆಂಟ್ ಹೆಚ್ಚುವರಿಯಾಗಿ 1.7 ಕೋಟಿ ರೂಪಾಯಿ ಬೇಡಿಕೆಯಿಟ್ಟಿದ್ದ ಎನ್ನಲಾಗಿದೆ. ರನ್ಯಾ ರಾವ್ ದುಬೈ ಮೂಲದ ವ್ಯಕ್ತಿಯ ಮೂಲಕ ಈ ಹಣ ನೀಡುವುದಾಗಿ ಒಪ್ಪಿಕೊಂಡಿದ್ದರೂ, ಕೊನೆಗೆ ತಾವು ವಂಚನೆಗೆ ಒಳಗಾಗಿದ್ದೇವೆ ಎಂದು ತಿಳಿದು ಅಲ್ಲಿನ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದರು ಎಂಬ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ನಟಿ ರನ್ಯಾ ರಾವ್, 2025ರ ಮಾರ್ಚ್ 3ರಂದು ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಡಿಆರ್‌ಐ (DRI) ಅಧಿಕಾರಿಗಳು ತಪಾಸಣೆ ಮಾಡಿದ್ದು, ಆಗ ಚಿನ್ನ ಇರುವುದು ಖಚಿತವಾಗದ ಕೂಡಲೇ ಆಕೆಯನ್ನು ವಶಕ್ಕೆ ಪಡೆದು ಪೂರ್ಣವಾಗಿ ತಪಾಸಣೆ ಮಾಡಿದಾಗ ನಟಿಯ ಬಳಿ 14.213 ಕೆಜಿ ಚಿನ್ನ ಪತ್ತೆಯಾಗಿತ್ತು. ಇದಾದ ನಂತರ ತನಿಖೆಗಿಳಿದ ಸರ್ಕಾರಿ ತನಿಖಾ ಸಂಸ್ಥೆಗಳು ಒಂದೊಂದೇ ಹಗರಣವನ್ನು ಬಯಲಿಗೆಳೆಯುತ್ತಾ ಹೋದವು. ತನಿಖಾ ವರದಿಯಲ್ಲಿ ಮಾರ್ಚ್ 2024ರಿಂದ ಮಾರ್ಚ್ 2025ರ ಅವಧಿಯಲ್ಲಿ ಈ ಜಾಲವು ಸುಮಾರು 127.287 ಕೆಜಿ ವಿದೇಶಿ ಚಿನ್ನವನ್ನು ಭಾರತಕ್ಕೆ ಅಕ್ರಮವಾಗಿ ಸಾಗಿಸಿದೆ. ಇದನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಿ ಬಂದ ಹಣವನ್ನು ಹವಾಲಾ ಮಾರ್ಗವಾಗಿ ವರ್ಗಾಯಿಸಲಾಗಿದೆ ಎಂಬ ಅಂಶವೂ ಕಂಡುಬಂದಿದೆ.

ಈ ಪ್ರಕರಣದ ಗಂಭೀರತೆ ಪರಿಗಣಿಸಿರುವ ಇಡಿ, ರನ್ಯಾ ರಾವ್ ಹೆಸರಿನಲ್ಲಿದ್ದ 34.12 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿದೆ. ಜೊತೆಗೆ ದಾಳಿ ವೇಳೆ 2.67 ಕೋಟಿ ರೂಪಾಯಿ ನಗದು ಮತ್ತು 2.06 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ನಟಿ ರನ್ಯಾ ರಾವ್, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

Published On - 9:21 pm, Sun, 22 March 26

Follow Us