ವಿಧಾನಸಭೆ ಕಲಾಪ: ಎರಡನೇ ದಿನವೂ ವಾಲ್ಮೀಕಿ ಹಗರಣದ್ದೇ ಸದ್ದು, ಬಿಜೆಪಿ – ಕಾಂಗ್ರೆಸ್ ವಾಕ್ಸಮರ

| Updated By: Ganapathi Sharma

Updated on: Jul 16, 2024 | 2:17 PM

ಕರ್ನಾಟಕ ವಿಧಾನಮಂಡಲದ ಮುಂಗಾರು ಅಧಿವೇಶನದ ಎರಡನೇ ದಿನವೂ ವಿಧಾನಸಭೆಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ್ದೇ ಸದ್ದು ಜೋರಾಯಿತು. ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದರು. ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಬಿಜೆಪಿ ಶಾಸಕ ಅಶ್ವತ್ಥ್ ನಾರಾಯಣ್ ಮಧ್ಯೆ ತೀವ್ರ ವಾಕ್ಸಮರ ನಡೆಯಿತು.

ವಿಧಾನಸಭೆ ಕಲಾಪ: ಎರಡನೇ ದಿನವೂ ವಾಲ್ಮೀಕಿ ಹಗರಣದ್ದೇ ಸದ್ದು, ಬಿಜೆಪಿ - ಕಾಂಗ್ರೆಸ್ ವಾಕ್ಸಮರ
ಡಿಕೆ ಶಿವಕುಮಾರ್, ಅಶ್ವತ್ಥ್ ನಾರಾಯಣ್
Follow us on

ಬೆಂಗಳೂರು, ಜುಲೈ 16: ಕರ್ನಾಟಕ ವಿಧಾನಮಂಡಲದ ಮುಂಗಾರು ಅಧಿವೇಶನದ ಎರಡನೇ ದಿನವಾದ ಇಂದೂ ಸಹ ವಿಧಾನಸಭೆ ಕಲಾಪದಲ್ಲಿ ವಾಲ್ಮೀಕಿ ನಿಗಮದ ಹಗರಣ ತೀವ್ರವಾಗಿ ಸದ್ದು ಮಾಡಿತು. ಮೊದಲೇ ಸಿದ್ಧವಾಗಿ ಬಂದಿದ್ದ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಮುಗಿ ಬೀಳಲು ಮುಂದಾದರು. ಆದರೆ ಮುಖ್ಯಮಂತ್ರಿಗಳು ಕಲಾಪದಲ್ಲಿ ಇರಲಿಲ್ಲ. ಈ ಕಾರಣಕ್ಕೆ ಬಿಜೆಪಿ ನಾಯಕರು ಮತ್ತಷ್ಟು ಸಿಡಿದೆದ್ದರು. ಮುಖ್ಯಮಂತ್ರಿಗಳ ವಿರುದ್ಧವೇ ಆರೋಪ ಕೇಳಿ ಬಂದಿದೆ. ಆರ್ಥಿಕ ಇಲಾಖೆ ಮೇಲೆ ನೇರ ಆರೋಪ ಇದೆ. ಮುಖ್ಯಮಂತ್ರಿಗಳನ್ನು ಕರೆಸಿ ಎಂದು ಬಿಜೆಪಿ ನಾಯಕರು ಪಟ್ಟು ಹಿಡಿದರು. ಇಲ್ಲದಿದ್ದರೆ ಕಲಾಪವನ್ನ ಮುಂದೂಡಿ ಎಂದು ಶಾಸಕ ಅಶ್ವತ್ಥ್ ನಾರಾಯಣ್ ಏರು ಧ್ವನಿಯಲ್ಲೇ ಆಗ್ರಹಿಸಿದರು.

ಅಶ್ವತ್ಥ್ ನಾರಾಯಣ್ VS ಡಿಕೆ ಶಿವಕುಮಾರ್ ಜಟಾಪಟಿ

ಅಶ್ವತ್ಥ್ ನಾರಾಯಣ್ ಆಗ್ರಹದಿಂದ ಕೆರಳಿದ ಡಿಸಿಎಂ ಡಿಕೆ ಶಿವಕುಮಾರ್, ‘ನೀನು ಮಾಡಬಾರದ್ದನ್ನು ಮಾಡಿರುವುದಕ್ಕೇ ನಾವು ಈಗ ಇಲ್ಲಿ ಕುಳಿತಿರುವುದು’ ಎಂದು ಗುಡುಗಿದರು. ಲೂಟಿ ಮಾಡುವುದರಲ್ಲಿ ಅಶ್ವತ್ಥ್ ನಾರಾಯಣ್ ಪಿತಾಮಹ ಅಂತ ಡಿಕೆ ಹೇಳಿದರು. ಈ ವೇಳೆ ಸದನದಲ್ಲಿ ಗದ್ದಲ ಉಂಟಾಯಿತು.

ಇಷ್ಟಕ್ಕೆ ಸುಮ್ಮನಾಗದ ಅಶ್ವತ್ಥ್ ನಾರಾಯಣ್, ನನ್ನ ಹೆಸರು ಹೇಳಿ ಆರೋಪ ಮಾಡಿದ್ದಾರೆ. ನಾನೇನು ಮಾಡಬಾರದ್ದನ್ನು ಮಾಡಿದ್ದೇನೆ ಹೇಳಿ ಎಂದು ಪಟ್ಟು ಹಿಡಿದರು. ಈ ವೇಳೆ ಡಿಕೆ ಶಿವಕುಮಾರ್ ಮತ್ತು ಅಶ್ವತ್ಥ್ ನಾರಾಯಣ್ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಇದಾದ ಬಳಿಕ ಅಶ್ವತ್ಥ್ ನಾರಾಯಣ್ ಡಿಸಿಎಂ ಕ್ಷಮೆ ಕೇಳಬೇಕು ಎಂದಿದ್ದಕ್ಕೆ ಮತ್ತೆ ಡಿಕೆ ಕೆರಳಿದರು. ಲೂಟಿಕೋರನ ಪಿತಾಮಹ ಅಂತ ಮತ್ತೊಮ್ಮೆ ಏರು ಧ್ವನಿಯಲ್ಲೇ ಹೇಳಿದರು. ಆಗ ಬಿಜೆಪಿ ಸದಸ್ಯರು ಅಶ್ವತ್ಥ್ ಬೆಂಬಲಕ್ಕೆ ಬಂದರು. ಡಿಕೆ ಶಿವಕುಮಾರ್ ಪಿತಾಮಹನ ಅಪ್ಪ ಎಂದರು.

ದಲಿತರ ಹಣ ಗ್ಯಾರಂಟಿಗೆ ಬಳಕೆ: ಸುನೀಲ್ ಕುಮಾರ್ ಆಕ್ರೋಶ

ದಲಿತರ ಹಣವನ್ನು ಲೂಟಿ ಮಾಡಿ ಸಮರ್ಥನೆ ನಿಂತಿದ್ದಾರೆ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸದನದಲ್ಲಿ ಕೋಲಾಹಲವೇ ಉಂಟಾಯಿತು.

ವಾಲ್ಮೀಕಿ ನಿಗಮ ಹಗರಣ: ಸ್ಫೋಟಕ ಮಾಹಿತಿ ಬಹಿರಂಗ

ಇತ್ತ ವಾಲ್ಮೀಕಿ ನಿಗಮ ಹಗರಣ ಕೇಸ್​ನ ವಿಚಾರಣೆಯಲ್ಲಿ ಮತ್ತಷ್ಟು ಸ್ಫೋಟಕ ಸತ್ಯಗಳು ಹೊಬೀಳುತ್ತಿವೆ. ನಾಗೇಂದ್ರ ಆಪ್ತ ಸಹಾಯಕ ನೆಕ್ಕಂಟಿ ನಾಗರಾಜ್ ಮೂಲಕ ರಾಯಚೂರಿನ ಕೋನಮ್ ವೆಂಕಟರೆಡ್ಡಿ ಹಾಗೂ ಮೂವರು ಕುಟುಂಬಸ್ಥರಿಗೆ ಕರ್ನಾಟಕ ಗ್ರಾಮೀಣ ಬ್ಯಾಂಕ್​ನ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ. ವೆಂಕಟರೆಡ್ಡಿ ಖಾತೆಗೆ 12 ಲಕ್ಷ ರೂಪಾಯಿ, ಲಕ್ಷ್ಮೀದೇವಿ ಖಾತೆಗೆ 25 ಲಕ್ಷ, ರತ್ನಕುಮಾರಿ ಖಾತೆಗೆ 25 ಲಕ್ಷ, ಸಂದೀಪ್ ಅನ್ನೋನ ಖಾತೆಗೆ 25 ಲಕ್ಷ ಜಮೆ ಮಾಡಲಾಗಿರುವುದು ತಿಳಿದುಬಂದಿದೆ.

ಇದನ್ನೂ ಓದಿ: ಸದನದಲ್ಲಿ ಅಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ಯಾರು ಹೆಚ್ಚು ಲೂಟಿಕೋರರು ಅಂತ ಕಾದಾಟ!

ಈ ಹಿನ್ನೆಲೆ ಸಿಬಿಐ ಸೂಚನೆ ನೀಡಿರುವ ಬೆನ್ನಲ್ಲೇ ಇಮೇಲ್ ಮತ್ತು ಬ್ಯಾಂಕ್​ಗೆ ನೋಟಿಸ್ ನೀಡಿ ನಾಲ್ವರ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲುಹಾಕಿಕೊಳ್ಳಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ