ವಿಧಾನಮಂಡಲ ಕಲಾಪ: ವಿಧಾನಸೌಧದಲ್ಲಿ ಶಾಸಕರ ಹಾಜರಾತಿ ದಾಖಲು ಮಾಡುತ್ತೆ ಎಐ ಕ್ಯಾಮರಾ!
ಕರ್ನಾಟಕ ವಿಧಾನಮಂಡಲ ಮುಂಗಾರು ಅಧಿವೇಶನ ಸೋಮವಾರ ಆರಂಭವಾಗಿದೆ. ಈ ಬಾರಿ ವಿಧಾನಸಭೆಗೂ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಲಾಗಿದೆ. ಶಾಸಕರ ಹಾಜರಾತಿ ದಾಖಲು ಮಾಡಿಕೊಳ್ಳಲು, ಅವರು ಎಷ್ಟು ಹೊತ್ತು ಕಲಾಪದಲ್ಲಿ ಭಾಗವಹಿಸಿದ್ದರು ಎಂಬುದನ್ನು ದಾಖಲಿಸುವ ಎಐ ಕ್ಯಾಮರಾಗಳನ್ನು ಇದೇ ಮೊದಲ ಬಾರಿಗೆ ವಿಧಾನಸೌಧದ ಎಲ್ಲ ದ್ವಾರಗಳಲ್ಲಿ ಅಳವಡಿಸಲಾಗಿದೆ.
ಬೆಂಗಳೂರು, ಜುಲೈ 16: ಕರ್ನಾಟಕ ವಿಧಾನಮಂಡಲ ಮುಂಗಾರು ಅಧಿವೇಶನ ಸೋಮವಾರ ಆರಂಭವಾಗಿದ್ದು, ಇದೇ ಮೊದಲ ಬಾರಿಗೆ ವಿಧಾನಸಭೆಯಲ್ಲಿ ಶಾಸಕರ ಹಾಜರಾತಿಯನ್ನು ದಾಖಲಿಸುವ ಕೆಲಸಕ್ಕೆ ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸ್ಪರ್ಶ ನೀಡಲಾಗಿದೆ. ಶಾಸಕರು ಸದನವನ್ನು ಪ್ರವೇಶಿಸುವ ಎಲ್ಲಾ ಮೂರು ಬಾಗಿಲುಗಳಲ್ಲಿ ಕೃತಕ ಎಐ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಈ ಎಲ್ಲಾ ಕ್ಯಾಮರಾಗಳು ಮತ್ತು ಸದನದ ಹೊರಗೆ ಅಳವಡಿಸಲಾಗಿರುವ ಇನ್ನೊಂದು ಕ್ಯಾಮರಾವು ಶಾಸಕರು ವಿಧಾನಸೌಧ ಪ್ರವೇಶಿಸುವಾಗ ಅವರ ಮುಖಗಳನ್ನು ರೆಕಾರ್ಡ್ ಮಾಡುತ್ತದೆ ಮತ್ತು ಶಾಸಕರು ಸದನದೊಳಗೆ ಎಷ್ಟು ನಿಮಿಷ ಅಥವಾ ಗಂಟೆಗಳ ಕಾಲ ಇದ್ದರು ಎಂಬ ರಿಯಲ್ ಟೈಮ್ ದತ್ತಾಂಶವನ್ನು ನೀಡುತ್ತದೆ.
ಸದನದಲ್ಲಿ ಹೆಚ್ಚು ಗಂಟೆಗಳ ಕಾಲ ಕುಳಿತುಕೊಳ್ಳುವ ಶಾಸಕರಿಗೆ ಪ್ರಶಸ್ತಿ ನೀಡಲಾಗುವುದು ಎಂದು ಸ್ಪೀಕರ್ ಯುಟಿ ಖಾದರ್ ಈ ಹಿಂದೆ ಘೋಷಿಸಿದ್ದರು. ಸೋಮವಾರ ಮುಂಗಾರು ಅಧಿವೇಶನದ ಮೊದಲ ದಿನದಂದು, ಈ ಕ್ಯಾಮರಾಗಳ ಮುಂದೆ ಫೇಸ್ ರೆಕಗ್ನಿಷನ್ ತಂತ್ರಜ್ಞಾನದಡಿ ಹಾಜರಾತಿ ದಾಖಲು ಮಾಡಿಕೊಳ್ಳಲು ಶಾಸಕರು ಸರತಿ ಸಾಲಿನಲ್ಲಿ ನಿಂತಿರುವುದು ಕಂಡುಬಂದಿದೆ. ಸದನದ ಒಳಗೆ ಮತ್ತು ಹೊರಗೆ ಇರುವ ಕ್ಯಾಮರಾಗಳಲ್ಲಿ ಶಾಸಕರು ಎಷ್ಟು ಬಾರಿ ಸದನಕ್ಕೆ ಪ್ರವೇಶಿಸಿದರು ಮತ್ತು ನಿರ್ಗಮಿಸಿದರು ಮತ್ತು ಎಷ್ಟು ಗಂಟೆ ಒಳಗೆ ಕುಳಿತರು ಎಂಬುದೂ ದಾಖಲಾಗುತ್ತದೆ. ಇಷ್ಟೇ ಅಲ್ಲದೆ, ವಿಧಾನಸೌಧದ ಪಶ್ಚಿಮ ಭಾಗದ ಪ್ರವೇಶದ್ವಾರದಲ್ಲಿ ಅನೇಕ ಕಾಮಗಾರಿಗಳನ್ನು ಮಾಡಿಸಲಾಗಿದ್ದು, ರೋಸ್‌ವುಡ್‌ನಿಂದ ಕೆತ್ತಿದ ಹೊಸ ಮುಖ್ಯ ಬಾಗಿಲನ್ನು ಸ್ಥಾಪಿಸಲಾಗಿದೆ.
ಕಾಮಗಾರಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಸೌಧದ ಪಶ್ಚಿಮ ಭಾಗದ ಪ್ರವೇಶದ್ವಾರದಿಂದ ಹೆಚ್ಚಿನ ಶಾಸಕರು ಮತ್ತು ಸಚಿವರು ಪ್ರವೇಶಿಸುತ್ತಾರೆ. ಈ ಪ್ರವೇಶದ್ವಾರದ ಹಿಂದಿನ ಲೋಹದ ಗೇಟ್‌ಗಳನ್ನು ರೋಸ್‌ವುಡ್ ಬಾಗಿಲಿನಿಂದ ಬದಲಾಯಿಸಲಾಗಿದೆ. ಪ್ರವೇಶ ದ್ವಾರದ ಪಕ್ಕದಲ್ಲಿ ಸಂವಿಧಾನದ ಪೀಠಿಕೆಯನ್ನು ಕೆತ್ತಲಾಗಿದೆ. ಇದು ಬಹಳ ಸೂಕ್ತವಾದ ಕೆಲಸ. ನಾವೆಲ್ಲರೂ ಶಾಸಕರಾಗಿದ್ದು, ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿಧಾನಸಭೆ ಅಧಿವೇಶನದ ಮೊದಲ ದಿನವೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಡಿದೆದ್ದ ಬಿಜೆಪಿ
ಕಾರಿಡಾರ್‌ಗೆ ದಟ್ಟವಾದ ಹಸಿರು ಕಾರ್ಪೆಟ್ ಹಾಸಲಾಗಿದೆ. ತೆರೆದ ಸ್ಥಳಗಳಿಗೆ ಗಾಜಿನ ಫಲಕಗಳನ್ನು ಅಳವಡಿಸಲಾಗಿದೆ. ಒಳಾಂಗಣ ವಿನ್ಯಾಸದಲ್ಲಿ ಇನ್ನೂ ಕೆಲವು ಮಾರ್ಪಾಡುಗಳನ್ನು ಮಾಡಲಾಗಿದೆ. ಸದನದ ಒಳಗೆ ಮತ್ತು ಪ್ರವೇಶ ದ್ವಾರಗಳಲ್ಲಿ ಗಂಡಬೇರುಂಡದ ಆಕಾರದಲ್ಲಿ ನೇತಾಡುವ ಗಡಿಯಾರಗಳನ್ನು ಹಾಕಲಾಗಿದೆ.
ವಿಧಾನಸೌಧವು ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದ್ದು, ದೇಶ ಮತ್ತು ಪ್ರಪಂಚದ ಅನೇಕ ಜನರು ಇಲ್ಲಿಗೆ ವೀಕ್ಷಣೆಗೆ ಭೇಟಿ ನೀಡುತ್ತಾರೆ. ನಾವು ಹಂತ ಹಂತಗಳಲ್ಲಿ ಸಣ್ಣ ಬದಲಾವಣೆಗಳನ್ನು ಮಾಡುತ್ತಿದ್ದೇವೆ ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ