Karnataka Assembly Session Highlights: ವಿಧಾನ ಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆ ಚರ್ಚೆ: ಬಿಲ್ ಕುರಿತ ಚರ್ಚೆಯನ್ನು ನಾಳೆಗೆ ಮುಂದೂಡಿದ ಸ್ಪೀಕರ್
Karnataka Anti Conversion Bill 2021- Assembly Session Live Updates: ನಿನ್ನೆ ವಿಧಾನಸಭೆಯಲ್ಲಿ ಮಂಡನೆಯಾದ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ರಕ್ಷಣಾ ವಿಧೇಯಕ-2021’ರ ಕುರಿತು ನಾಳೆ ಸುವರ್ಣ ಸೌಧದಲ್ಲಿ ಚರ್ಚೆ ನಡೆಯಲಿದೆ.
Karnataka Anti Conversion Bill – Assembly Session Live: ವಿಧಾನಸಭೆಯಲ್ಲಿ ನಿನ್ನೆ (ಮಂಗಳವಾರ) ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ರಕ್ಷಣಾ ವಿಧೇಯಕ-2021’ರ ಮಂಡನೆಯಾಗಿದೆ. ನಾಳೆ ಈ ಬಗ್ಗೆ ಚರ್ಚೆ ನಡೆಯಲಿದೆ. 14 ಸೆಕ್ಷನ್ಗಳನ್ನು ಒಳಗೊಂಡ ವಿಧೇಯಕವನ್ನು ಮತಾಂತರ ನಿಷೇಧ ಕಾಯಿದೆ ಎಂದೂ ಕರೆಯುತ್ತಾರೆ. ಈ ವಿಧೇಯಕದ ಅಡಿಯಲ್ಲಿ ತಪ್ಪು ನಿರೂಪಣೆ, ಮೋಸ, ಅನಗತ್ಯ ಒತ್ತಡ, ಬಲಾತ್ಕಾರ ಆಮಿಷ ಆಕರ್ಷಣೆಗಳ ಹಾಗೂ ಮದುವೆ ಮೂಲಕ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರ ಮಾಡುವುದನ್ನು ನಿಷೇಧಿಸಲಾಗಿದೆ. ಮತಾಂತರದ ಕುರಿತು ನೊಂದ ಅಥವಾ ಪೀಡಿತ ವ್ಯಕ್ತಿ, ನೊಂದ ವ್ಯಕ್ತಿಯ ಸೋದರ, ಸೋದರಿ, ಪಾಲಕ ಪೊಷಕರು, ರಕ್ತ ಸಂಬಂಧಿ ಅಥವಾ ದತ್ತು ಪಡೆದವರು ದೂರು ನೀಡಲು ಅರ್ಹರಾಗಿರುತ್ತಾರೆ. ಈ ವಿಧೇಯಕದ ಪ್ರಕಾರ ನಿಯಮ ಬಾಹಿರವಾಗಿ ಮತಾಂತರ ಮಾಡಿದ್ದು ಸಾಬೀತಾದರೆ 3 ರಿಂದ 5 ವರ್ಷ ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡ ಹಾಗೂ ವಯಸ್ಕರಲ್ಲದವರನ್ನು, ಮಹಿಳೆಯನ್ನು ಹಾಗೂ ಪರಿಶಿಷ್ಟ ವರ್ಗ ಅಥವಾ ಪಂಗಡದವರನ್ನ ನಿಯಮಬಾಹಿರವಾಗಿ ಮತಾಂತರ ಮಾಡಿದರೆ 3 ರಿಂದ 10 ವರ್ಷಗಳವರೆಗೆ ಶಿಕ್ಷೆ ಹಾಗೂ 35 ಸಾವಿರ ರೂ. ದಂಡವನ್ನು ವಿಧಿಸಲು ತಿಳಿಸಲಾಗಿದೆ.
LIVE NEWS & UPDATES
-
ನಾಳೆ ಬೆಳಗ್ಗೆ ಸದನದಲ್ಲಿ ಮತಾಂತರ ಕಾಯ್ದೆ ಚರ್ಚೆ
ವಿಪಕ್ಷಗಳ ಮಾತಿಗೆ ಮಣಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಇಂದು 6 ಗಂಟೆಯವರೆಗೆ ಉತ್ತರ ಕರ್ನಾಟಕ ಬಗ್ಗೆ ಚರ್ಚೆ ನಡೆಸಿ ನಾಳೆ 10 ಗಂಟೆಯಿಂದ ಮಧ್ಯಾಹ್ನ 1.30 ರ ವರೆಗೆ ಮತಾಂತರ ವಿಧೇಯಕ ಬಗ್ಗೆ ಚರ್ಚೆ ನಡೆಸೋಣ ಎಂದಿದ್ದಾರೆ. ನಾಳೆ ಮಧ್ಯಾಹ್ನ 2.30ರಿಂದ ರಿಂದ 5 ಗಂಟೆಯವರೆಗೆ ಉತ್ತರ ಕರ್ನಾಟಕ ಬಗ್ಗೆ ಚರ್ಚೆ ನಡೆಸಿದ ಬಳಿಕ ನಾಳೆ ಸಂಜೆ 5 ಗಂಟೆಗೆ ಪ್ರಶ್ನೋತ್ತರ ನಡೆಯಲಿದೆ ಎಂದು ಸದನದಲ್ಲಿ ಸ್ಪೀಕರ್ ತಿಳಿಸಿದ್ದಾರೆ. ಸದನದಲ್ಲಿ ವಿಪಕ್ಷದ ಒತ್ತಡಕ್ಕೆ ಮಣಿದ ಸ್ಪೀಕರ್ ನಾಳೆಗೆ ಮತಾಂತರ ನಿಷೇಧ ಕಾಯ್ದೆ ಚರ್ಚೆ ಮುಂದೂಡಿಕೆ ಮಾಡಿದ್ದಾರೆ.
-
ನಾಳೆಯೂ ಮತಾಂತರ ನಿಷೇಧ ಕಾಯ್ದೆ ಚರ್ಚೆ ಮುಂದುವರಿಕೆ-ಸ್ಪೀಕರ್
ನಾಳೆ ಮಧ್ಯಾಹ್ನದೊಳಗೆ ಮತಾಂತರ ಕಾಯ್ದೆ ಮಸೂದೆ ಚರ್ಚೆ ಮುಗಿಸಲು ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪೀಕರ್ ಕಾಗೇರಿಗೆ ಮನವಿ ಮಾಡಿದ್ದಾರೆ. ಈ ವೇಳೆ ಮಾಜಿ ಸಿಎಂ ಯಡಿಯೂರಪ್ಪ ಮಧ್ಯಪ್ರವೇಶಿಸಿ ಸಂಜೆ 7 ಗಂಟೆವರೆಗೂ ಕಲಾಪ ನಡೆಸಿ ಚರ್ಚಿಸೋಣ ಎಂದಿದ್ದಾರೆ. ಈ ಬಗ್ಗೆ ಸ್ಪೀಕರ್ ಸಂಜೆ 5 ಗಂಟೆವರೆಗೆ ಉತ್ತರಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಸಂಜೆ 5-6ರವರೆಗೆ ಮತಾಂತರ ನಿಷೇಧ ವಿಧೇಯಕ ಬಗ್ಗೆ ಚರ್ಚೆ ನಡೆಸೋಣ. ನಾಳೆ ಬೆಳಗ್ಗೆ ಮತ್ತೆ ಮತಾಂತರ ನಿಷೇಧ ವಿಧೇಯಕ ಬಗ್ಗೆ ಚರ್ಚೆ ನಡೆಸಿ ಮಧ್ಯಾಹ್ನದ ನಂತರ ರಾಜ್ಯ ಸರ್ಕಾರದ ಉತ್ತರ ಪಡೆಯೋಣ ಎಂದು ವಿಧಾನಸಭೆಯಲ್ಲಿ ಸ್ಪೀಕರ್ ವಿಶ್ವೇಶ್ವರಹೆಗಡೆ ಕಾಗೇರಿ ಹೇಳಿದ್ದಾರೆ.
-
ವಿಧಾನಸಭೆ ಕಲಾಪ ಪುನರಾರಂಭ: 5 ಗಂಟೆಗೆ ಮತಾಂತರ ನಿಷೇಧ ವಿಧೇಯಕದ ಚರ್ಚೆ
ಭೋಜನ ವಿರಾಮದ ಬಳಿಕ ವಿಧಾನಸಭೆ ಕಲಾಪ ಮತ್ತೆ ಆರಂಭವಾಗಿದೆ. ಈಗಿನ ಕಲಾಪದಲ್ಲಿ ಮತಾಂತರ ನಿಷೇಧ ಕಾಯ್ದೆಯ ಬಗ್ಗೆ ಚರ್ಚೆ ನಡೆಯಲಿದೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಮಸೂದೆಯ ಕುರಿತು ಚರ್ಚಿಸಲು ಅವಕಾಶ ನೀಡಿದ್ದಾರೆ. ಸಂಜೆ 5 ಗಂಟೆಯಿಂದ 6 ಗಂಟೆಯವರೆಗೆ ಮತಾಂತರ ನಿಷೇಧ ವಿಧೇಯಕದ ಪರ್ಯಾಲೋಚನೆ ಕೈಗೆತ್ತಿಕೊಳ್ಳುವುದಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಮತಾಂತರ ನಿಷೇಧ ಕಾಯ್ದೆಯಿಂದ ನಮಗೆ ಯಾವುದೇ ಭಯವಿಲ್ಲ-ಮೈಸೂರಿನ ಕ್ರೈಸ್ತ ಧರ್ಮಾಧಿಕಾರಿ
ಮತಾಂತರ ನಿಷೇಧ ಕಾಯ್ದೆಯಿಂದ ನಮಗೆ ಯಾವುದೇ ಭಯವಿಲ್ಲ. ಸಮಾಜ ಸೇವೆಯೇ ಕ್ರೈಸ್ತ ಧರ್ಮದ ಮೂಲ ಉದ್ದೇಶವಾಗಿದೆ. ನಾವು ಯಾರನ್ನೂ ಬಲವಂತವಾಗಿ ಮತಾಂತರ ಮಾಡುತ್ತಿಲ್ಲ ಏನೂ ಇಲ್ಲದೆ ಅಪವಾದ, ತೊಂದರೆ ಕೊಡುವುದು ಸರಿಯಲ್ಲ. ಕರ್ನಾಟಕದಲ್ಲಿ ಮತಾಂತರ ನಿಷೇಧ ವಿಧೇಯಕದ ಅಗತ್ಯವಿರಲಿಲ್ಲ. ಉದ್ದೇಶಿತ ಕಾಯ್ದೆ ದುರ್ಬಳಕೆ ಮಾಡಿಕೊಂಡು ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಯಾವುದೇ ಕಾಯ್ದೆ ಒಂದು ಧರ್ಮಕ್ಕೆ ತೊಂದರೆ ಕೊಡಬಾರದು ಮತಾಂತರ ನಿಷೇಧ ಕಾಯ್ದೆ ಕೇವಲ ಕ್ರೈಸ್ತರಿಗೆ ಸಂಬಂಧಿಸಿದ್ದಲ್ಲ ಎಂದು ಮೈಸೂರಿನ ಕ್ರೈಸ್ತ ಧರ್ಮಾಧಿಕಾರಿ ಡಾ.ಕೆ.ಎ.ವಿಲಿಯಮ್ ಮತಾಂತರ ಕಾಯ್ದೆ ನಿಷೇಧದ ಕುರಿತು ಹೇಳಿದ್ದಾರೆ.
3 ಗಂಟೆಗೆ ವಿಧಾನಸಭೆ ಕಲಾಪ ಮುಂದೂಡಿಕೆ
ಬೆಳಗಾವಿಯ ಸುವರ್ಣ ಸೌಧದಲ್ಲಿ ಅಧಿವೇಶನ ನಡೆಯುತ್ತಿದೆ. ಮತಾಂತರ ನಿಷೇಧ ಕಾಯಿದೆ ಕುರಿತಾದ ಮಸೂದೆಯ ಚರ್ಚೆ ಇಂದು ನಡೆಯಲಿದೆ. ಇದೀಗ ವಿಧಾನಸಭೆ ಕಲಾಪ ಮಧ್ಯಾಹ್ನ 3 ಗಂಟೆಗೆ ಮುಂದೂಡಿಕೆ ಮಾಡಲಾಗಿದೆ. ಭೋಜನ ವಿರಾಮ ತೆಗೆದುಕೊಂಡ ಹಿನ್ನೆಲೆಯಲ್ಲಿ ವಿಧಾನಸಭೆ ಕಲಾಪ ಮುಂದೂಡಿಕೆ ಮಾಡಲಾಗಿದೆ. ಮಧ್ಯಾಹ್ನ 3 ಗಂಟೆಯ ಬಳಿಕ ಮತಾಂತರ ನಿಷೇಧ ಕಾಯಿದೆಯ ಕುರಿತು ಚರ್ಚೆ ನಡೆಯಲಿದೆ.
ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮತಾಂತರ ಕಾಯ್ದೆಯನ್ನು ಕಾಂಗ್ರೆಸ್ಸಿಗರು ವಿರೋಧ ಮಾಡುತ್ತಿದ್ದಾರೆ- ಶೋಭಾ ಕರಂದ್ಲಾಜೆ
ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮತಾಂತರ ಕಾಯ್ದೆಯನ್ನು ಕಾಂಗ್ರೆಸ್ಸಿಗರು ವಿರೋಧ ಮಾಡುತ್ತಿದ್ದಾರೆ. ಕಾಂಗ್ರೆಸ್ಸಿಗರ ಮನಸ್ಸಿನಲ್ಲಿರುವುದು ಕೇವಲ ವೋಟ್ ಬ್ಯಾಂಕ್ ಮಾತ್ರ. ಧರ್ಮದ ಮೂಲಕ ವೋಟ್ ಬ್ಯಾಂಕ್ ಮಾಡಿಕೊಳ್ಳಬೇಕು ಎಂಬುದು ಕಾಂಗ್ರೆಸ್ಸಿನ ಮಾನಸಿಕತೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಈ ಸಮಾಜದಲ್ಲಿ ಮತಾಂತರ ನಡೆಯಬಾರದು. ಪ್ರತಿಯೊಬ್ಬರು ಅವರವರ ಧರ್ಮದಲ್ಲಿ ಬದುಕಬೇಕು ಎಂಬುದು ನಮ್ಮ ಅಪೇಕ್ಷೆ. ಮತಾಂತರ ಮಾಡುವುದರಿಂದ ಸಮಾಜದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗುತ್ತೆ ಎಂದು ಚಿಕ್ಕಮಗಳೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಅನಾರೋಗ್ಯ ಹಿನ್ನೆಲೆ ಸದನದಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಪಸ್
ಅನಾರೋಗ್ಯ ಹಿನ್ನೆಲೆ ಸದನದಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ ಬೆಳಗಾವಿಯ ಮನೆಗೆ ವಾಪಸ್ಸಾಗಿದ್ದಾರೆ. ಮತಾಂತರ ಕಾಯಿದೆ ನಿಷೇಧ ಮಸೂದೆ ಚರ್ಚೆ ಇಂದು ನಡೆಯುವ ಹಿನ್ನೆಲೆಯಲ್ಲಿ ಕೆಲ ಹೊತ್ತು ವಿಶ್ರಾಂತಿ ಪಡೆದು ಮತ್ತೆ ಮಧ್ಯಾಹ್ನ ಸದನಕ್ಕೆ ವಾಪಸಾಗಲಿದ್ದಾರೆ. ಬೆಳಿಗ್ಗೆಯಿಂದ ತೀವ್ರ ನೆಗಡಿಯಿಂದ ಬಳಲುತ್ತಿರುವ ಸಿದ್ದರಾಮಯ್ಯ ಆಸ್ಪತ್ರೆಯಲ್ಲಿ ಆರೋಗ್ಯ ಪರೀಕ್ಷೆ ಬಳಿಕ ವಿಶ್ರಾಂತಿಗೆಂದು ಮನೆಗೆ ತೆರಳಿದ್ದಾರೆ. ಕೆಲ ಹೊತ್ತು ವಿಶ್ರಾಂತಿ ಬಳಿಕ ಮಧ್ಯಾಹ್ನ ಸದನಕ್ಕೆ ವಾಪಸ್ ಆಗುವ ಸಾಧ್ಯತೆಯಿದೆ.
ಆರ್ಎಸ್ಎಸ್ ನ ಒತ್ತಡಕ್ಕೆ ಮತಾಂತರ ಕಾಯ್ದೆ ಜಾರಿ-ಲೈಂಗಿಕ ಹೋರಾಟಗಾರ್ತಿ ಅಕ್ಕೈ ಪದ್ಮಸಾಲಿ
ಆರ್ಎಸ್ಎಸ್ ನ ಒತ್ತಡಕ್ಕೆ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಹೊರಟಿದೆ. ಸಮಾಜವನ್ನ ಒಡೆಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಲೈಂಗಿಕ ಹೋರಾಟಗಾರ್ತಿ ಅಕ್ಕೈ ಪದ್ಮಸಾಲಿ ಹೇಳಿದ್ದಾರೆ. ಬಲವಂತದ ಮತಾಂತರ ನಿಷೇಧ ಈ ಹಿಂದೆನೇ ಜಾರಿಯಲ್ಲಿದೆ. ಅದನ್ನ ಮತ್ತೆ ತರುವ ಉದ್ದೇಶವಾದ್ರೂ ಏನು? ಯಾವುದೇ ಕಾರಣಕ್ಕೂ ಈ ಕಾಯ್ದೆ ಜಾರಿಗೆ ತರಬಾರದು ಎಂದು ಲೈಂಗಿಕ ಹೋರಾಟಗಾರ್ತಿ ಅಕ್ಕೈ ಪದ್ಮಸಾಲಿ ಆಗ್ರಹಿಸಿದ್ದಾರೆ. ಐಕ್ಯತೆಯನ್ನ ಒಡೆದುಹಾಕುವ ಕೆಲಸ ಬಿಜೆಪಿ ಮಾಡುತ್ತಿದೆ ಅಕ್ಕೈ ಪದ್ಮಸಾಲಿ ಅಂತ ಆರೋಪಿಸಿದ್ದಾರೆ.
ಮತಾಂತರ ಬಿಲ್ ಅನ್ನು ಪೂರ್ಣ ಹೃದಯದಿಂದ ಸ್ವಾಗತಿಸುತ್ತೇವೆ-ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಮುಜಾಮಿಲ್
ಮತಾಂತರ ಬಿಲ್ ಅನ್ನು ಪೂರ್ಣ ಹೃದಯದಿಂದ ಸ್ವಾಗತಿಸುತ್ತೇವೆ. ಬಿಜೆಪಿ ಹೇಳಿದ್ದನ್ನು ಮಾಡಿ ತೋರಿಸುತ್ತಿದೆ. ಹುಡುಗಿಗೆ ಆಸೆ ತೋರಿಸಿ ಮದುವೆ ಆಗೋದು ತಪ್ಪು. ಎಲ್ಲರ ಧರ್ಮ ಅವರವರಿಗೆ ಮುಖ್ಯ ಅಂತ ನಮ್ಮ ಕುರಾನ್ ನಲ್ಲಿ ಹೇಳಿದೆ ಮದುವೆ, ದುಡ್ಡು, ಆಸೆಗೋಸ್ಕರ ಮತಾಂತರ ಆಗೋದನ್ನು ಯಾವ ಧರ್ಮವೂ ಕೂಡ ಒಪ್ಪಿಕೊಳ್ಳೋದಿಲ್ಲ. ಕಾಂಗ್ರೆಸ್ ಜೆಡಿಎಸ್ ಕೇವಲ ಮಾತನಾಡುತ್ತಾರೆ ಅಷ್ಟೇ. ಕಾಂಗ್ರೆಸ್ನವರು ಮುಸ್ಲಿಂ ವೋಟ್ ಬ್ಯಾಂಕ್ ಮಾಡಿಕೊಂಡಿದ್ದಾರೆ. ಹಜ್ ಬ್ಯಾಂಕ್ ಅನ್ನು ಯಡಿಯೂರಪ್ಪ, ಕಾಂಗ್ರೆಸ್ ನವರು ಮಾಡಿದ್ದಲ್ಲ. ಒಂದು ಕೈಯಲ್ಲಿ ಕುರಾನ್, ಇನ್ನೊಂದು ಕೈಯ್ಯಲ್ಲಿ ಕಂಪ್ಯೂಟರ್ ಅಂತ ಮೋದಿಜಿ ಹೇಳಿದ್ದಾರೆ. ಕಾಂಗ್ರೆಸ್ ವೋಟ್ ಬ್ಯಾಂಕ ಹೋಗುತ್ತದೆ ಅಂತ ವಿರೋಧ ಮಾಡ್ತಿದ್ದಾರೆ. ಸೋನಿಯಾ ಗಾಂಧಿ ಪ್ರಿಯಾಂಕಾ ಗಾಂಧಿಯವರನ್ನು ಯಾಕೆ ಹಿಂದೂಗೆ ಮದುವೆ ಮಾಡಿಕೊಡಲಿಲ್ಲ ಕ್ರಿಶ್ಚಿಯನ್ ಸಮುದಾಯದ ವಾದ್ರಾಗೆ ಯಾಕೆ ಮದುವೆ ಮಾಡಿಕೊಟ್ಟರು ಸೋನಿಯಾ? ಸುಮ್ಮ ಸುಮ್ಮನೆ ಬಾಯಿಬಿಟ್ಟರೆ ಬಿಜೆಪಿ ಆರ್ ಎಸ್ ಎಸ್ ಅಂತ ಬಾಯಿಗೆ ಬಂದಹಾಗೆ ಮಾತನಾಡುತ್ತಾರೆ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಮುಜಾಮಿಲ್ ಹೇಳಿದ್ದಾರೆ.
ಇದು ಹೊಸದಾಗಿ ತಂದಿರುವ ಬಿಲ್ ಅಲ್ಲ ಇದರ ಬಗ್ಗೆ ಸಮಗ್ರ ಚರ್ಚೆಗೆ ಅವಕಾಶ ನೀಡಲಾಗಿದೆ- ಅಶ್ವತ್ಥ ನಾರಾಯಣ್
ಮತಾಂತರ ದೇಶಾದ್ಯಂತ ಸಾಮಾಜಿಕ ಪಿಡುಗು. ಕೇವಲ ಒಂದು ಜಾತಿ ಧರ್ಮಕ್ಕೆ ಮತಾಂತರ ಸೀಮಿತವಲ್ಲ. ಕೆಲವು ಧರ್ಮಾಂಧರು ಉದ್ದೇಶಪೂರ್ವಕವಾಗಿ ರಾಷ್ಟ್ರ ಘಾತಕ ಮತಾಂತರ ಮಾಡುತ್ತಿದ್ದಾರೆ. ಇದು ಹೊಸದಾಗಿ ತಂದಿರುವ ಬಿಲ್ ಅಲ್ಲ, ಇದರ ಬಗ್ಗೆ ಸಮಗ್ರ ಚರ್ಚೆಗೆ ಅವಕಾಶ ನೀಡಲಾಗಿದೆ. ಕಾಂಗ್ರೆಸ್ ಮುಖಂಡರು ಮೊದಲು ಬಿಲ್ ಓದಲಿ. ಅವರ ಸಮಸ್ಯೆ ಎಂದರೆ ಯಾವುದೇ ಬಿಲ್ ತಂದರೆ ಸರಿಯಾಗಿ ಅದನ್ನು ಓದೋದೇ ಇಲ್ಲ. ಕಾಂಗ್ರೆಸ್ ನವರು ಹೋಂ ವರ್ಕ್ ಮಾಡಲ್ಲ, ಕೇವಲ ವಿರೋಧ ಮಾಡುವುದನ್ನು ರೂಢಿಸಿಕೊಂಡಿದ್ದಾರೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣ್ ಹೇಳಿದ್ದಾರೆ. ಸೋನಿಯಾ ಗಾಂಧಿ ಓಲೈಕೆಗೆ ಡಿಕೆಶಿವಕುಮಾರ್ ಸಿದ್ದರಾಮಯ್ಯ ಮಸೂದೆಯನ್ನು ವಿರೋಧ ಮಾಡ್ತಿದ್ದಾರೆ. ಕೇವಲ ಕ್ರಿಸ್ಚಿಯನ್ ಧರ್ಮ ಗುರಿಯಾಗಿಟ್ಟುಕೊಂಡು ತಂದಿರುವ ಬಿಲ್ ಅಲ್ಲ ಯಾವುದೇ ಮತಾಂತರದ ಬಗ್ಗೆ ಬಿಲ್ ಬಗ್ಗೆ ಕ್ಲ್ಯಾರಿಟಿ ಇದೆ. 1936, 42, 56 ರಲ್ಲಿ ಈ ಬಿಲ್ ಬಗ್ಗೆ ಚರ್ಚೆ ಆಗಿದೆ ನಿಯೋಗಿ ಎಂಬುವವರ ಸಮಿತಿ 1956 ರಲ್ಲಿಯೇ ಚರ್ಚೆ ಮಾಡಿ ವರದಿ ಕೊಟ್ಟಿದೆ. ಛತ್ತೀಸ್ ಗಡ, ಪೂರ್ವಾಂಚಲ ರಾಜ್ಯಗಳಲ್ಲೂ ಇಂತ ಬಿಲ್ ಬಂದಿದೆ ಸೇವೆಯ ನೆಪದಲ್ಲಿ ಮತಾಂತರ ಮಾಡೋದು ತಪ್ಪು ಎನ್ನೋದು ವರದಿಗಳಲ್ಲಿದೆ. ಒಪ್ಪಿತ ಮತಾಂತರದಲ್ಲಿ ಯಾವುದೇ ಅಭ್ಯಂತರ ಇಲ್ಲ ಆದರೆ ಹಿಂದೂ ಧರ್ಮಕ್ಕೆ ಯಾರೋ ಒತ್ತಾಯವಾಗಿ ಕರೆತಂದರೆ ಅದೂ ಕೂಡ ತಪ್ಪೇ. ಕೇವಲ ಕ್ರಿಶ್ಚಿಯನ್ ಸಮುದಾಯ ಮಾತ್ರ ಶಿಕ್ಷಣ ಸಂಸ್ಥೆ ನಡೆಸುತ್ತಿಲ್ಲ. ಎಲ್ಲ ಮಠಗಳೂ ಕೂಡ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿವೆ. ಆದರೆ ಅನ್ನದಾಸೋಹ ನಡೆಸುವ ಯಾವ ಮಠಗಳೂ ಲಿಂಗಾಯತ ಧರ್ಮಕ್ಕೆ ಮತಾಂತರ ಆಗಿ ಅಂತ ಹೇಳಲ್ಲ. ಕ್ರಿಸ್ಚಿಯನ್ ಸಂಸ್ಥೆಗಳು ಮಾತ್ರ ಶಾಲೆಗಳನ್ನು ನಡೆಸುತ್ತವೆ ಎನ್ನೋದು ಸುಳ್ಳು ರೋಮನ್ ಕ್ಯಾಥೋಲಿಕ್ ಪ್ರೊಟೆಸ್ಟಂಟ್ ಅಂತ ಅವರಲ್ಲೇ ಹಲವು ವರ್ಗಗಳಿವೆ. ಕ್ರಿಸ್ಚಿಯನ್ ಸಮುದಾಯ ಮಾತ್ರ ಮತಾಂತರ ಆಗಿ ಅಂತ ಒತ್ತಡ ಹೇರುತ್ತವೆ. ಮಂಗಳೂರಲ್ಲಿ ಬಾಗಲಕೋಟೆಯ ನಾಗೇಶ್ ಎಂಬಾತ ಮತಾಂತರದ ಪಿಡುಗಿಗೆ ಹೆದರಿ ಕುಟುಂಬವನ್ನು ಸಾಯಿಸುವುದರ ಜೊತೆಗೆ ತಾನೂ ಆತ್ಮಹತ್ಯೆ ಮಾಡಿಕೊಳ್ತಾನೆ ಬಲವಂತದ ಮತಾಂತರದಿಂದ ಇವತ್ತು ಸೌತ್ ಆಫ್ರಿಕಾ ಏನಾಗಿದೆ ನೋಡಿ ಎಂದು ಪ್ರಶ್ನಿಸಿದ್ದಾರೆ. ಮುಂದುವರೆದು ಮಾತನಾಡಿ, ಡಿಕೆಶಿವಕುಮಾರ್ ಕೂಡ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಕೇವಲ ಕ್ರಿಶ್ಚಿಯನ್ ಸಮುದಾಯದ ವಿರುದ್ದ ಮಾತ್ರ ಬಿಲ್ ಅಲ್ಲ ಎಂದು ಹೇಳಿದ್ದಾರೆ.
ಮತಾಂತರ ತಡೆಯಲು ಶ್ರೀರಾಮ ಸೇನೆಯಿಂದ ಪ್ರತಿ ಜಿಲ್ಲೆಯಲ್ಲಿ ಹತ್ತು ಜನರ ಟಾಸ್ಕಪೋರ್ಸ್ ತಂಡ ರಚನೆ-ಸಿದ್ದಲಿಂಗ ಸ್ವಾಮೀಜಿ
ಮತಾಂತರ ತಡೆಯಲು ಶ್ರೀರಾಮ ಸೇನೆಯಿಂದ ಪ್ರತಿ ಜಿಲ್ಲೆಯಲ್ಲಿ ಹತ್ತು ಜನರ ಟಾಸ್ಕಪೋರ್ಸ್ ತಂಡ ರಚಿಸಲಾಗುವುದು ಎಂದು ಕಲಬುರಗಿ ನಗರದಲ್ಲಿ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ. ಮತಾಂತರ ತಡೆಯುವದು, ಮತಾಂತರ ಮಾಡಿದವರನ್ನು ಮರಳಿ ನಮ್ಮ ಧರ್ಮಕ್ಕೆ ಕರೆತರುವ ಕೆಲಸವನ್ನು ಟಾಸ್ಕಪೋರ್ಸ್ ಮಾಡಲಿದೆ. ಅವರು ಅನೈತಿಕವಾಗಿ ಮತಾಂತರ ಮಾಡಿದ್ರೆ ನಾವು ನೈತಿಕಗಿರಿ ಮಾಡಲೇಬೇಕಾಗುತ್ತದೆ ಡಿಸೆಂಬರ್ 25 ರಿಂದ ರಾಜ್ಯಾದ್ಯಂತ ಈ ಟಾಸ್ಕಪೋರ್ಸ್ ಕಾರ್ಯನಿರ್ವಹಿಸಲಿದೆ. ಮತಾಂತರ ನಡೆಯುತ್ತಿರೋ ಬಗ್ಗೆ ಟಾಸ್ಕಪೋರ್ಸ್ ಪೊಲೀಸರಿಗೆ ಮಾಹಿತಿ ನೀಡಲಿದೆ ಅವರು ತಡೆಯದೇ ಇದ್ರೆ ನಾವೇ ಹೋಗಿ ಮತಾಂತರ ತಡೆಯುತ್ತೇವೆ. ರಾಜ್ಯದಲ್ಲಿ ಕ್ರಿಶ್ಚಿಯನ್ ರ ಮತಾಂತರ ಪಿಡುಗು ಬಹಳ ತೊಂದರೆ ನೀಡುತ್ತಿದೆ. ರಾಜ್ಯದಲ್ಲಿ ವಿಪರೀತವಾಗಿ ಮತಾಂತರವಾಗುತ್ತಿದೆ. ಪ್ರತಿವರ್ಷ ಎಂಟು ಲಕ್ಷ ಜನ ಕ್ರಿಶ್ಚಿಯನ್ ರಾಗಿ ಮತಾಂತರ ಆಗುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಹಿಂದು ಧರ್ಮಕ್ಕೆ ದೊಡ್ಡ ಪೆಟ್ಟು ಬೀಳುತ್ತದೆ. ಇದನ್ನು ಸಿಎಂ ಬಸವರಾಜ್ ಬೊಮ್ಮಾಯಿಗೆ ಮನವಿ ಮಾಡಿದ್ದೆವು. ಅನೇಕ ಸ್ವಾಮೀಜಿ ಗಳ ನೇತೃತ್ವದಲ್ಲಿ ಮನವಿ ಮಾಡಲಾಗಿತ್ತು. ಇದೀಗ ಮತಾಂತರ ನಿಷೇಧ ಕಾಯ್ದೆಯಿಂದ ಇದಕ್ಕೆ ಬ್ರೇಕ್ ಬೀಳುವ ನಿರೀಕ್ಷೆ ಇದೆ. ಮತಾಂತರ ನಿಷೇಧ ಕಾಯ್ದೆ ಮಂಡನೆ ಮಾಡಿದ್ದು ಸ್ವಾಗತಾರ್ಹ. ಮತಾಂತರ ನಿಷೇದ ಕಾಯ್ದೆಯನ್ನು ಪ್ರತಿಪಕ್ಷಗಳು ಸ್ವಾಗತಿಸಬೇಕು. ಡಿ.ಕೆ.ಶಿವಕುಮಾರ್ ಮಸೂದೆಯ ಪ್ರತಿ ಹರಿದು, ಹಿಂದು ಧರ್ಮದವರಿಗೆ ನೋವು ಮಾಡಿದ್ದಾರೆ. ಇಟಲಿ ರಾಣಿ ಓಲೈಸಲು ಕಾನೂನಿಗೆ ವಿರೋಧಿಸಿದ್ದೀರಿ ಆದ್ರೆ ನೀವು ಹಿಂದು ಧರ್ಮದಲ್ಲಿ ಹುಟ್ಟಿ, ಈ ರೀತಿ ಮಾಡಿದ್ದು ಸರಿಯಲ್ಲಾ ಎಂದು ಡಿಕೆಶಿ ವಿರುದ್ಧ ಕಿಡಿಕಾರಿದ್ದಾರೆ.
ಮತಾಂತರ ಕಾಯಿದೆ ವಿಚಾರ: ನಮ್ಮ ದೇಶ ಧರ್ಮಛತ್ರವಲ್ಲ ಎಂದ ಗೃಹ ಸಚಿವ ಆರಗ ಜ್ಞಾನೇಂದ್ರ
ಹೇಗೆಂದರೆ ಹಾಗೆ ಬದುಕುವುದಕ್ಕೆ ನಮ್ಮದೇಶ ಇದೇನು ಧರ್ಮಛತ್ರವಲ್ಲ. ಸ್ವಾತಂತ್ರ್ಯ ಸಿಕ್ಕಿದೆ ಎಂದು ದುರುಪಯೋಗಪಡಿಸಿಕೊಳ್ಳಬಾರದು. ನಮ್ಮ ಸಂವಿಧಾನ ದೊಡ್ಡ ಮಟ್ಟದ ಸ್ವಾತಂತ್ರ್ಯ ನೀಡಿದೆ. ಭಾರತ ಯಾರಬೇಕಾದರೂ ಹೇಗೆಬೇಕಾದರು ಬಂದು ಬದುಕಿ ಏನು ಬೇಕಾದ್ರು ಅಲ್ಲೋಲ್ಲ ಕಲ್ಲೋಲ್ಲ ಮಾಡುವ ಛತ್ರ ಅಲ್ಲ. ಸ್ವಾತಂತ್ರ್ಯದುರುಪಯೋಗ ಆಗಬಾರದು. ಸಾವಿರಾರು ಕುಟುಂಬಗಳನ್ನು ಮತಾಂತರ ಮಾಡಿ ದೇಶದಲ್ಲಿ ಗಲಬೆ ಸೃಷ್ಠಿಸುವ ಕೆಲಸ ಆಗುತ್ತಿದೆ. ನಮ್ಮ ಶಾಸಕರೇ ಕಳೆದ ಸದನದಲ್ಲಿ ಮತಾಂತರ ಬಗ್ಗೆ ಮಾತನಾಡುತ್ತಾ ನನ್ನ ತಾಯಿಯನ್ನೇ ಮತಾಂತರ ಮಾಡಿದ್ದಾರೆ ಎಂದು ಆರೋಪಿಸಿದ್ದರು ಎಂದು ಮತಾಂತರ ನಿಷೇಧ ಕಾಯಿದೆ ಕುರಿತು ಬೆಳಗಾವಿಯಲ್ಲಿ ರಾಯಭಾಗ ಪಟ್ಟಣದ ಅಗ್ನಿಶಾಮಕ ದಳದ ನೂತನ ಕಟ್ಟಡದ ಉದ್ಘಾಟನೆ ವೇಳೆ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಮತಾಂತರ ನಿಷೇಧ ಮಸೂದೆ ವಿರೋಧಿಸಿ ಎಐಸಿಸಿಟಿ, ಅಖಿಲ ಭಾರತ ಜನವಾದಿ ಸಂಘಟನೆಯಿಂದ ಪ್ರತಿಭಟನೆ
ಸಂವಿಧಾನಿಕ ಮತಾಂತರ ನಿಷೇಧ ಮಸೂದೆ ವಿರೋಧಿಸಿ ಎ ಐ ಸಿ ಸಿ ಟಿ , ಅಖಿಲ ಭಾರತ ಜನವಾದಿ ಸಂಘಟನೆಯಿಂದ ಪ್ರತಿಭಟನೆ ಆರಂಭವಾಗಿದೆ. ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಮತಾಂತರ , ಧರ್ಮವನ್ನ ನಿರಾಕರಿಸುವ ಹಕ್ಕು ಬೇಕೆಂದು ಒತ್ತಾಯಿಸಿ ಸರ್ಕಾರದ ವಿರುದ್ಧ ಸಿಡಿದೆದ್ದ ಸಂಘಟನೆಗಳು, ಘೋಷಣೆ ಕೂಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ತಮಟೆ ಹೊಡೆದು ವಿಶೇಷವಾಗಿ ಘೋಷಣೆ ಕೂಗುತ್ತಿದ್ದಾರೆ. 40 ಕ್ಕೂ ಹೆಚ್ಚು ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗುವ ಸಾಧ್ಯತೆಯಿದ್ದು ಮೈಸೂರು ಬ್ಯಾಂಕ್ ಸರ್ಕಲ್ ನಿಂದ ಫ್ರೀಡಂ ಪಾರ್ಕ್ ವರೆಗೂ ಪ್ರತಿಭಟನಾ ರ್ಯಾಲಿ ನಡೆಯಲಿದೆ.
ಕಾಯ್ದೆಯ ವಿರುದ್ಧ ಸದನದ ಒಳಗೆ, ಹೊರಗೆ ಹೋರಾಟ ಮಾಡುತ್ತೇವೆ- ವಿಪಕ್ಷ ನಾಯಕ ಸಿದ್ದರಾಮಯ್ಯ
ಮತಾಂತರ ಕಾಯ್ದೆಯನ್ನು ಸರಕಾರದವರು ಕಳ್ಳರ ಹಾಗೆ ಜಾರಿಗೆ ತರಲು ಹೊರಟ್ಟಿದ್ದಾರೆ. ಕಾಯ್ದೆಯ ವಿರುದ್ಧ ಸದನದ ಒಳಗೆ, ಹೊರಗೆ ಹೋರಾಟ ಮಾಡುತ್ತೇವೆ.ಮಾದ್ಯಮಗಳನ್ನು ಹೊರಗಿಟ್ಟು ಚರ್ಚೆ ಮಾಡುತ್ತಿರುವುದು. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ ಸರ್ಕಾರ. ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳು ಇವೆ ಇದರ ಬಗ್ಗೆ ಸರ್ಕಾರಕ್ಕೆ ಚಿಂತೆ ಇಲ್ಲ. 2019ರಲ್ಲಿ ನೆರೆಯಿಂದ ಮನೆ ಕಳೆದುಕೊಂಡವರಿಗೆ ಪರಿಹಾರ ಕೊಟ್ಟಿಲ್ಲ ಎಂದು ಸರ್ಕಾರದ ನಡೆ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾವು ಮತಾಂತರ ನಿಷೇಧ ಕಾಯಿದೆಗೆ ವಿರೋಧ ಮಾಡುತ್ತೇವೆ- ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ
ನಿನ್ನೆ ಸದನಲ್ಲಿ ಅಜೆಂಡಾ ದಲ್ಲಿ ಇಲ್ಲದೇ ಮತಾಂತರ ಕಾಯಿದೆ ಮಂಡಿಸಿದ್ದಾರೆ. ನಾವು ಮತಾಂತರ ನಿಷೇಧ ಕಾಯಿದೆಗೆ ವಿರೋಧ ಮಾಡುತ್ತೇವೆ ಎಂದು ಸುವರ್ಣ ಸೌಧದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಈ ಬಗ್ಗೆ ಅವರು ವಿಧಾನಪರಿಷತ್ ನಲ್ಲಿಯೂ ಕಾಯಿದೆಯನ್ನು ನಾವು ವಿರೋಧ ಮಾಡುತ್ತೇವೆ. ನಾವಂತೂ ಸದನದಲ್ಲಿ ಇದನ್ನು ವಿರೋಧಿಸುತ್ತೇವೆ. ಆದರೆ ಕಾಂಗ್ರೆಸ್ ನವರು ಸಭಾತ್ಯಾಗ ಮಾಡಿ, ಕಾಯಿದೆ ಪಾಸ್ ಮಾಡಿಕೊಳ್ಳಲು ಸರ್ಕಾರಕ್ಕೆ ಅನುಕೂಲ ಮಾಡಿಕೊಡುತ್ತಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳು, ಕೇವಲ ಮತಬ್ಯಾಂಕ್ ಗೆ ಸದನದಲ್ಲಿ ಚರ್ಚೆ ಮಾಡ್ತಿದ್ದಾರೆ. ಇವರಿಗೆ ಜನರ ಸಮಸ್ಯೆಗಳಿಗೆ ಪರಿಹಾರ ಬೇಕಿಲ್ಲ, ಕೇವಲ ಪ್ರಚಾರಕ್ಕಾಗಿ ಅಷ್ಟೇ ಸದನ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಬಿಜೆಪಿ ನಾಯಕರ ವಿರುದ್ಧ ಹೆಚ್ ಡಿ ಕುಮಾರಸ್ವಾಮಿ ಬೆಳಗಾವಿಯಲ್ಲಿ ಕಿಡಿಕಾರಿದ್ದಾರೆ.
ಮತಾಂತರ ನಿಷೇಧ ವಿಧೇಯಕ ವಿರೋಧಿಸಿ ಕ್ರೈಸ್ತ ಸಂಘಟನೆಗಳಿಂದ ಪ್ರತಿಭಟನೆ
ಮತಾಂತರ ನಿಷೇಧ ವಿಧೇಯಕ ವಿರೋಧಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ಆರಂಭವಾಗಿದೆ. ಮಸೂದೆ ವಿರುದ್ಧ ಕ್ರೈಸ್ತ ಸಂಘಟನೆಗಳಿಂದ ಬೆಂಗಳೂರಿನಲ್ಲಿ ಪ್ರತಿಭಟನೆ ಆರಂಭವಾಗಿದೆ. ಮೈಸೂರು ಬ್ಯಾಂಕ್ ವೃತ್ತದಿಂದ ಫ್ರೀಡಂಪಾರ್ಕ್‌ವರೆಗೆ ಕ್ರೈಸ್ತ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟನಾ ರ್ಯಾಲಿ ನಡೆಸುತ್ತಿದ್ದಾರೆ. ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಇಂದು ಮತಾಂತರ ನಿಷೇಧ ಕಾಯಿದೆ ಕುರಿತು ಚರ್ಚೆ ನಡೆಯಲಿದೆ ಇದನ್ನು ವಿರೋಧಿಸಿ ಕ್ರೈಸ್ತ ಸಂಘಟನೆಗಳಿಂದ ಪ್ರತಿಭಟನೆ ಆರಂಭವಾಗಿದೆ.
ಮತಾಂತರ ನಿಷೇಧ ವಿಧೇಯಕ ಮಂಡಿಸಿ ಡೈವರ್ಟ್ ಮಾಡುತ್ತಿದ್ದಾರೆ – ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ
ಅಧಿವೇಶನಕ್ಕೆ ಬರುವುದು ಜನರ ಸಮಸ್ಯೆ ಬಗ್ಗೆ ಚರ್ಚಿಸುವುದಕ್ಕೆ ಬದಲಾಗಿ ಸುಮ್ಮನೆ ಕೂರುವುದಕ್ಕೆ ಅಲ್ಲ. ಆದರೆ ಅಧಿವೇಶನದಲ್ಲಿ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡದೆ ಡೈವರ್ಟ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಮತಾಂತರ ನಿಷೇಧ ವಿಧೇಯಕ ಮಂಡಿಸಿ ಡೈವರ್ಟ್ ಮಾಡುತ್ತಿದ್ದಾರೆ. ಅದೂ ಅಲ್ಲದೆ ಸದನದಲ್ಲಿ ಚರ್ಚೆ ವಿಷಯ ಜನರಿಗೆ ಗೊತ್ತಾಗುತ್ತದೆ ಎಂದು ಮಾಧ್ಯಮಗಳಿಗೆ ನಿರ್ಬಂಧ ವಿಧಿಸಲು ಮುಂದಾಗಿದ್ದಾರೆ ಎಂದು ಬೆಳಗಾವಿಯಲ್ಲಿ ಸಿದ್ದರಾಮಯ್ಯ ಹೇಳಿಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ನಾಡಿನ ಸಮಸ್ಯೆಗಳನ್ನು ವಿಷಯಾಂತರ ಮಾಡಲು ಸರಕಾರ ಮತಾಂತರ ಗುಮ್ಮವನ್ನು ತಂದು ನಿಲ್ಲಿಸಿದೆ- ಹೆಚ್ ಡಿ ಕೆ ಟ್ವೀಟ್
ಸುವರ್ಣಸೌಧಕ್ಕೆ ಮಾಧ್ಯಮಗಳನ್ನು ನಿರ್ಬಂಧ ಮಾಡಿರುವ ಕ್ರಮ ಅನೇಕ ಅನುಮಾನಗಳನ್ನು ಹುಟ್ಟುಹಾಕಿದೆ. ಈಗಾಗಲೇ ಜನರ ಆಕ್ರೋಶಕ್ಕೆ ತುತ್ತಾಗಿರುವ ಬಿಜೆಪಿ ಸರಕಾರ ನಾಡಿನ ಸಮಸ್ಯೆಗಳನ್ನು ವಿಷಯಾಂತರ ಮಾಡಲು ಮತಾಂತರ ಗುಮ್ಮವನ್ನು ತಂದು ನಿಲ್ಲಿಸಿದೆ. ನಾಡಿನ ಜನರು ಮತ್ತು ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ರಾಜಕೀಯದ ಲಾಭದ ದುರಾಸೆಗೆ ರಾಜ್ಯದ ಸಾಮರಸ್ಯಕ್ಕೆ ಬೆಂಕಿ ಇಡುವ ಮತಾಂತರ ನಿಷೇಧ ಮಸೂದೆಯ ನಿಜಬಣ್ಣ ಎಲ್ಲಿ ಬಯಲಾಗುತ್ತದೋ ಎಂದು ಅಂಜಿ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ ಎಂಬ ಸಂಶಯ ಇದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಂತೆ ಮಾಧ್ಯಮ ರಂಗವು ಸಂವಿಧಾನದ ಒಂದು ಅಂಗ. ಈಗ ಮಾಧ್ಯಮ ಪ್ರವೇಶಕ್ಕೆ ನಿರ್ಬಂಧ ಹೇರುವ ಮೂಲಕ ʼಸಂವಿಧಾನದ ಒಂದು ಕಾಲು ಮುರಿಯುವ ಪ್ರಯತ್ನʼ ಮಾಡಲಾಗುತ್ತಿದೆ. ಇದು ಸಂವಿಧಾನವನ್ನೇ ಬದಲಾವಣೆ ಮಾಡುತ್ತೇವೆ ಎನ್ನುವವರ ದರ್ಪದ ಹೆಜ್ಜೆಯಷ್ಟೇ. ಅವರ ದುರುದ್ದೇಶ ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ. ಈ ಮಧ್ಯೆ ಮಾನ್ಯ ಸ್ಪೀಕರ್ ಅವರು ಮಾಧ್ಯಮ ನಿರ್ಬಂಧದ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ. ಹಾಗಾದರೆ, ನಿರ್ಬಂಧ ಹೇರಿದವರು ಯಾರು? ಸ್ಪೀಕರ್ ಅವರಿಗೆ ಗೊತ್ತಿಲ್ಲದೆ ನಿರ್ಬಂಧದ ಸಂದೇಶ ಮಾಧ್ಯಮಗಳಿಗೆ ಕೊಟ್ಟವರು ಯಾರು? ಈ ಬಗ್ಗೆ ಜನರಿಗೆ ಸತ್ಯಾಂಶ ಗೊತ್ತಾಗಬೇಕಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಕಾಟಚಾರಕ್ಕೆ ಕಾಂಗ್ರೆಸ್ ವಿರೋಧ ಮಾಡುತ್ತಿದೆ ಹಿಂದಿನಿಂದ ಕಾಯ್ದೆಗೆ ಬೆಂಬಲವಿದೆ ಎಂದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್
ದೇಶದಲ್ಲಿ ಮತಾಂತರ ಅನ್ನೋದು ಅವ್ಯಾಹತವಾಗಿ ನಡೆಯುತ್ತಿದೆ. ಹೀಗಾಗೇ ನಮ್ಮ ಸರ್ಕಾರ ಕಾಯ್ದೆ ತರುತ್ತಿದೆ ಎಂದು ಬೆಳಗಾವಿಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಕಾಟಚಾರಕ್ಕೆ ಕಾಂಗ್ರೆಸ್ ವಿರೋಧ ಮಾಡುತ್ತಿದೆ. ಹಿಂದಿನಿಂದ ಕಾಯ್ದೆಗೆ ಬೆಂಬಲ ನೀಡುತ್ತಿದ್ದಾರೆ ಎಂದು ಯತ್ನಾಳ್ ಹೇಳಿಕೆ ನೀಡಿದ್ದಾರೆ. ಹಿಂದೂಗಳನ್ನ ಇಸ್ಲಾಂಗೆ ಮತಾಂತರ ಮಾಡೊದು ನಡೆದಿದೆ. ಅದು ದೇಶದ ಭದ್ರತೆಗೆ ದಕ್ಕೆ ತರುತ್ತಿದೆ. ಕಾಂಗ್ರೆಸ್ ಪಾಕಿಸ್ತಾನ ಪಾರ್ಟಿ. ಅವರ ಪಕ್ಷದ ಅಧ್ಯಕ್ಷರೇ ಹಿಂದೂಗಳಲ್ಲ. ಅದರಲ್ಲಿ ಯಾವುದೇ ಧರ್ಮದ ಹೆಸರು ತೆಗದುಕೊಂಡಿಲ್ಲ ಆಸೆ ಆಮಿಷಗಳನ್ನ ಒಡ್ಡಿ ಮತಾಂತರ ಮಾಡುವವರಿಗೆ ಇದು ಅನ್ವಯವಾಗುತ್ತೆ. ಕಾಯ್ದೆ ಬಗ್ಗೆ ನಮ್ಮ ಪಕ್ಷದ ನಿಲುವಿತ್ತು, ಅದಕ್ಕೆ ಕಾಯ್ದೆ ಮಂಡನೆಯಾಗಿದೆ. ನಿನ್ನೆ ಬಿಎಸಿ ಮೀಟಿಂಗ್ ನಲ್ಲಿ ಹೇಳಿದ್ದೆವು. ಆಗ ಕಾಂಗ್ರೆಸ್ ಜೆಡಿಎಸ್ ಮುಖ್ಯ ಸಚೇತಕರಿಗೆ ಮಾಹಿತಿ ನೀಡಿದ್ದೇವೆ. ಅವರು ಹೊರಗಡೆ ಹೋಗಿದ್ದೆ, ಕಾಯ್ದೆ ಪಾಸ್ ಆಗಲಿ ಎಂದಿದ್ದರು. ಕಾಟಚಾರಕ್ಕೆ ಕಾಂಗ್ರೆಸ್ ವಿರೋಧ ಮಾಡುತ್ತಿದೆ. ಹಿಂದಿನಿಂದ ಕಾಯ್ದೆಗೆ ಬೆಂಬಲ ನೀಡುತ್ತಿದ್ದಾರೆ. ಯಾಕೆಂದ್ರೆ ಡಿಕೆಶಿ,ಸಿದ್ದರಾಮಯ್ಯ ಅವರಿಗೂ ಈ ಕಾಯ್ದೆ ಬೇಕು. ಇಲ್ಲದೇ ಹೋದ್ರೆ ಮುಂದೆ ಅವರು ಗೆಲ್ಲಲ್ಲ. ಇಲ್ಲ ಅಂದ್ರೆ ಮತಾಂತರ ಆಗಿ ಚುನಾವಣೆ ಗೆಲ್ಲಬೇಕಾಗುತ್ತೆ. ಇಲ್ಲವಾದರೆ ಅವರ ವಿರುದ್ದ ಜಮೀರ್ ಅಂತವರು ಗೆಲ್ಲಬೇಕಾಗುತ್ತೆ ಎಂದು ಯತ್ನಾಳ್ ಹೇಳಿದ್ದಾರೆ.
ಇಂತಹ ವಿಧೇಯಕಗಳು ಕೇವಲ ಬೂಟಾಟಿಕೆ ಎಂದ ಹೆಚ್ ಡಿ ಕುಮಾರಸ್ವಾಮಿ
ಮತಾಂತರ ನಿಷೇಧ ಕಾಯ್ದೆಯಿಂದ ಯಾವ ಪ್ರಯೋಜನವಿಲ್ಲ ಮತಾಂತರ ನಿಷೇಧ ವಿಧೇಯಕವನ್ನು ನಾವು ವಿರೋಧಿಸುತ್ತೇವೆ ಎಂದು ಬೆಳಗಾವಿಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ನಮ್ಮಲ್ಲಿರುವ ಲೋಪಗಳನ್ನು ಮೊದಲು ಸರಿಪಡಿಸಿಕೊಳ್ಳಬೇಕು. ರಾಜ್ಯದಲ್ಲಿ ಹಿಂದುಳಿದವರನ್ನ ಆರ್ಥಿಕವಾಗಿ ಸದೃಢಗೊಳಿಸಬೇಕು. ಆಗ ಯಾವುದೇ ರೀತಿಯ ಮತಾಂತರಗಳು ನಡೆಯುವುದಿಲ್ಲ. ಇದು ಕೇವಲ ವೋಟ್ ಬ್ಯಾಂಕ್‌ಗಾಗಿ ಮಾಡಿದ ವಿಧೇಯಕ. ಎರಡೂ ರಾಷ್ಟ್ರೀಯ ಪಕ್ಷಗಳು ಜನರ ದಿಕ್ಕು ತಪ್ಪಿಸುತ್ತಿವೆ. ಕಲಾಪದಲ್ಲಿ ಮೌಲ್ಯಾಧಾರಿತ ಚರ್ಚೆಗಳು ನಡೆಯುತ್ತಿಲ್ಲ. ಕ್ಷುಲ್ಲಕ ವಿಧೇಯಕಗಳನ್ನು ಜಾರಿ ಮಾಡಲಾಗುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಕೇವಲ ಮತಬ್ಯಾಂಕ್‌ಗಾಗಿ ವಿಧೇಯಕ ಮಂಡಿಸುತ್ತಿದ್ದಾರೆ ರಾಜ್ಯದ ಜನತೆ ಸಾವಿರಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆ ಸಮಸ್ಯೆಗಳ ಬಗ್ಗೆ ಚರ್ಚಿಸದೆ ಸಮಯ ವ್ಯರ್ಥ ಮಾಡುತ್ತಿದ್ದಾರೆ. ದುಡಿಯುವ ಕೈಗಳಿಗೆ ಕೆಲಸ ಕೊಟ್ಟರೆ ಸಮಸ್ಯೆಯಾಗುವುದಿಲ್ಲ ಇಂತಹ ವಿಧೇಯಕಗಳು ಕೇವಲ ಬೂಟಾಟಿಕೆ ಎಂದು ಹೆಚ್ ಡಿ ಕೆ ತಿಳಿಸಿದ್ದಾರೆ.
ಮಾಧ್ಯಮಗಳ ನಿರ್ಬಂಧದ ಕುರಿತು ಸ್ಪೀಕರ್ ಜತೆ ಆರಗ ಜ್ಞಾನೇಂದ್ರ ಚರ್ಚೆ
ಸುವರ್ಣ ಸೌಧದಲ್ಲಿ ಮಾಧ್ಯಮ ನಿರ್ಬಂಧ ವಿಚಾರದ ಕುರಿತು ವಿಧಾನಸಭೆ ಸ್ಪೀಕರ್ ಜೊತೆ ಗೃಹಸಚಿವ ಆರಗ ಜ್ಞಾನೇಂದ್ರ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಮಾಧ್ಯಮ ನಿರ್ಬಂಧ ವಿಚಾರದ ಬಗ್ಗೆ ಚರ್ಚೆ ನಡೆಸಿದ ಬಳಿಕ ಅವರು ಈ ಬಗ್ಗೆ ಅವರು ಮಿಸ್ ಕಮ್ಯುನಿಕೇಶನ್ ನಿಂದ ಹೀಗೆ ಆಗಿದೆ, ಹಿಂದಿನಂತೆಯೇ ಪ್ರವೇಶ ಮಾಡಬಹುದು, ಸ್ಪೀಕರ್ ಜೊತೆ ಮಾತನಾಡಿದ್ದೇನೆ ಎಂದು ಬೆಳಗಾವಿಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟನೆ ನೀಡಿದ್ದಾರೆ.
ಇದುವರೆಗೆ ಇದ್ದಂತೆಯೇ ಅಧಿವೇಶನದ ಚಿತ್ರೀಕರಣಕ್ಕೆ ಅನುಮತಿ – ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ
ಧರಣಿ ನಿರತ ಮಾಧ್ಯಮ ಪ್ರತಿನಿಧಿಗಳ ಜತೆ ಸ್ಪೀಕರ್ ಕಾಗೇರಿ ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ಅವರು ಮಾಧ್ಯಮಗಳನ್ನು ತಡೆಯುವಂತೆ ನಾನು ಆದೇಶ ಮಾಡಿಲ್ಲ. ನಾನು ಯಾವುದೇ ರೀತಿಯ ಹೊಸ ಆದೇಶವನ್ನು ಮಾಡಿಲ್ಲ. ಯಾವುದೋ ಒಂದು ಹಂತದಲ್ಲಿ ಗೊಂದಲ ಸೃಷ್ಟಿಯಾಗಿದೆ. ಮಾಧ್ಯಮಗಳನ್ನು ತಡೆಯುವಂತೆ ನಾನು ಆದೇಶ ಮಾಡಿಲ್ಲ. ಇದುವರೆಗೆ ಇದ್ದಂತೆಯೇ ಅಧಿವೇಶನದ ಚಿತ್ರೀಕರಣಕ್ಕೆ ಅನುಮತಿ ನೀಡಲು ಸೂಚಿಸುವೆ. ಪೊಲೀಸರು, ಮಾರ್ಷಲ್‌ಗಳಿಗೆ ಈಗಲೇ ಸೂಚನೆ ನೀಡುವೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಸುವರ್ಣಸೌಧದ ಪ್ರವೇಶಕ್ಕೆ ಅನುಮತಿಸುವಂತೆ ಮಾಧ್ಯಮದವರಿಂದ ಮೌನ ಪ್ರತಿಭಟನೆ
ವಿಧಾನಸಭಾ ಅಧಿವೇಶನದಲ್ಲಿ ನಡೆಯುತ್ತಿರುವ ಚರ್ಚೆಯನ್ನು ಚಿತ್ರೀಕರಣ ಮಾಡದಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ನಿರ್ಬಂಧ ಹೇರಿದ್ದರು. ಬಳಿಕ ಒಂದು ಗೇಟ್ನಲ್ಲಿ ಮಾತ್ರ ಒಳಗೆ ಪ್ರವೇಶಿಸಲು ಅವಕಾಶ ನೀಡಿದ್ದರು. ಆದರೆ ಸುವರ್ಣ ಸೌಧ ಒಳಗಡೆ ನಡೆಯುವ ಸುದ್ದಿಗೋಷ್ಟಿಗಳ ಚಿತ್ರೀಕರಣಕ್ಕೆ ನಾಲ್ಕು ದ್ವಾರಗಳಲ್ಲಿ ಅವಕಾಶ ಕೊಡಬೇಕು ಎಂದು ಮಾಧ್ಯಮದವರಿಂದ ಮೌನ ಪ್ರತಿಭಟನೆ ನಡೆಯುತ್ತಿದೆ. ಸುವರ್ಣ ಸೌಧದ ಪಶ್ಚಿಮ ದ್ವಾರದ ಮುಂದೆ ಮಾಧ್ಯಮ ಪ್ರತಿನಿಧಿಗಳು ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ.
ಯಾರನ್ನು ಕೂಡ ಬಲವಂತವಾಗಿ ಮತಾಂತರ ಮಾಡಬಾರದು: ಸುವರ್ಣ ಸೌಧದಲ್ಲಿ ಕೆ ಎಸ್ ಈಶ್ವರಪ್ಪ ಹೇಳಿಕೆ
ಯಾರನ್ನು ಕೂಡ ಬಲವಂತವಾಗಿ ಮತಾಂತರ ಮಾಡಬಾರದು ಅಸೆ,ಆಮಿಷವೊಡ್ಡಿ, ಬಡತನ ದುರಪಯೋಗ ಪಡಿಸಿಕೊಂಡು ಮತಾಂತರ ಮಾಡಬಾರದು ಎಂದು ಸುವರ್ಣಸೌಧದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಇಬಗ್ಗೆ ಅವರು ಕಾನೂನುಬದ್ದವಾಗಿ ಮತಾಂತರ ಮಾಡಬಹುದು.ಕದ್ದುಮುಚ್ಚಿ ಮತಾಂತರ ಮಾಡುವಂತಿಲ್ಲ. ಅರ್ಜಿ ಹಾಕಿ ಮತಾಂತರ ಆಗಬಹುದು. ಅರ್ಜಿ ಹಾಕಿದ 2 ತಿಂಗಳ ಒಳಗೆ ಮನಪರಿವರ್ತನೆಯಾಗಿ ವಾಪಸ್ ಪಡೆಯಬಹುದು. ಹೀಗಿದ್ದರೂ ಯಾಕೆ ಜೆಡಿಎಸ್, ಕಾಂಗ್ರೆಸ್ ನೋರು ವಿರೋಧ ಮಾಡ್ತಿದ್ದಾರೆ ಗೊತ್ತಿಲ್ಲ. ಹೆಣ್ಣುಮಕ್ಕಳ ನ್ನ ಮತಾಂತರ ಮಾಡಿ ದೇಹ ದುರ್ಬಳಕೆ ಮಾಡಿಕೊಂಡು ಹೆಣ್ಣು ಮಕ್ಕಳನ್ನು ಮತಾಂತರ ಹೆಸರಲ್ಲಿ ಹಾಳು ಮಾಡುತ್ತಿದ್ದಾರೆ. ಬಹುಷಃ ಇದು ಡಿಕೆ ಶಿವಕುಮಾರ್ ಗೆ ಗೊತ್ತಿಲ್ಲ ನಾನು ಡಿಕೆಶಿಗೆ ಅಂಥಹ ಹೆಣ್ಣು ಮಕ್ಕಳ ದುಸ್ಥಿತಿಯನ್ನು ತೋರಿಸುತ್ತೇನೆ. ಈ ಬಗ್ಗೆ ಅವರಿಗೆ ಗೊತ್ತಿಲ್ಲ ಅದಕ್ಕೆ ವಿರೋಧ ಮಾಡುತ್ತಿದ್ದಾರೆ. ಆಸೆ, ಆಮಿಷ ಬಲವಂತದಿಂದ ಮತಾಂತರ ಮಾಡುವಂತಿಲ್ಲ. ಈ ಉದ್ದೇಶದಿಂದ ಈ ಬಿಲ್ ಮಂಡಿಸಲಾಗುತ್ತಿದೆ ಎಂದು ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಮತಾಂತರ ಕಾಯ್ದೆ ವಿರೋಧಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಮುಂದಾದ ಕ್ರೈಸ್ತ ಸಮುದಾಯ
ಮತಾಂತರ ಕಾಯ್ದೆ ವಿರೋಧಿಸಿ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಕ್ರೈಸ್ತ ಸಮುದಾಯ ಮುಂದಾಗಿದೆ. ಈ ಬಗ್ಗೆ ಮಾತನಾಡಿದ ಭಾರತೀಯ ಕ್ರೈಸ್ತ ಸಮುದಾಯದ ಕಾನೂನು ಸಲಹೆಗಾರ ರಮೇಶ್ ನಾವು ಈಗಾಗಲೇ ಸುಪ್ರೀಂ ಕೋರ್ಟ್ ಗೆ ಹೋಗಲು ತೀರ್ಮಾನ ಮಾಡಿದ್ದೇವೆ. ನಮ್ಮ ಎಲ್ಲ ಮುಖಂಡರು, ಪಾದ್ರಿಗಳು ಸಭೆ ಮಾಡಿ ತೀರ್ಮಾನಿಸಿದ್ದು, ಈ ಕಾಯ್ದೆ ನಮ್ಮ ಹೆಗಲ ಮೇಲೆ ಬಂದೂಕು ಇಟ್ಟು ಎಲ್ಲ ಹಿಂದುಳಿದ ವರ್ಗದವರಿಗೆ ಹೊಡೆಯಲು ಹೊರಟ್ಟಿದ್ದಾರೆ. ಸರ್ಕಾರ ಮತ್ತು ವಿರೋಧ ಪಕ್ಷದ ಮೇಲಿರುವವರ ನಂಬಿಕೆ ಹೊರಟು ಹೋಗಿದೆ. ಹೀಗಾಗಿ ನ್ಯಾಯಕ್ಕಾಗಿ ನಾವು ಸುಪ್ರೀಂ ಕೋರ್ಟ್ ಮೊರೆಹೋಗುತ್ತಿದ್ದೇವೆ. ಕಲ್ಲು ತೂರಾಟ ಮಾಡುವುದು ಗಲಾಟೆ ಮಾಡುವುದನ್ನ ನಾವು ಮಾಡುವುದಿಲ್ಲ. ನಾವು ಶಾಂತಿಯುತವಾಗಿ ಹೋರಾಟ ಮಾಡಿ ನ್ಯಾಯ ಪಡೆಯುತ್ತೇವೆ. ವಾಕ್ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ ಅಡಿ ಸೇರಿ ಮೂರ್ನಾಲ್ಕು ಅಂಶಗಳನ್ನಿಟ್ಟುಕೊಂಡು ಕೋರ್ಟ್ ಹೋಗುತ್ತೇವೆ ಎಂದು ಬೆಳಗಾವಿಯಲ್ಲಿ ರಮೇಶ್ ತಿಳಿಸಿದ್ದಾರೆ.
ಒಂದು ಗೇಟ್ ಮೂಲಕ ಮಾಧ್ಯಮಗಳ ಪ್ರವೇಶಕ್ಕೆ ಅನುಮತಿ
ಮತಾಂತರ ಕಾಯ್ದೆ ನಿಷೇಧದ ಕುರಿತು ಅಧಿವೇಶನದಲ್ಲಿ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸುವರ್ಣ ಸೌಧಕ್ಕೆ ಮಾಧ್ಯಮಗಳಿಗೆ ನಿರ್ಬಂಧ ಹೇರಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆದೇಶ ಹೊರಡಿಸಿದ್ದರು. ಆದರೆ ಈಗ ಸುವರ್ಣಸೌಧದ ಒಂದು ಗೇಟಿನ ಮೂಲಕ ಮಾಧ್ಯಮಗಳಿಗೆ ಪ್ರವೇಶ ನೀಡಲು ಅನುಮತಿ ನೀಡಿದ್ದಾರೆ.
ಸುವರ್ಣಸೌಧ ಪ್ರವೇಶಕ್ಕೆ ಮಾಧ್ಯಮಗಳಿಗೆ ನಿರ್ಬಂಧ
ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಇಂದು ಮತಾಂತರ ನಿಷೇಧ ಕಾಯಿದೆ ಕುರಿತು ಚರ್ಚೆ ಹಿನ್ನೆಲೆಯಲ್ಲಿ ಸುವರ್ಣಸೌಧಕ್ಕೆ ಮಾಧ್ಯಮಗಳಿಗೆ ನಿಷೇಧ ಹೇರಲಾಗಿದೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾಧ್ಯಮ ಪ್ರತಿನಿಧಿಗಳನ್ನು ಅಧಿವೇಶನ ನಡೆಯುತ್ತಿರುವಲ್ಲಿಗೆ ಬಿಡದಂತೆ ಮಾರ್ಷಲ್‌ಗಳಿಗೆ ಸೂಚನೆ ನೀಡಿದ್ದಾರೆ. ವಿಧಾನಸಭೆ ಲಾಂಜ್ ಮತ್ತು ವಿರೋಧ ಪಕ್ಷಗಳ ಕೊಠಡಿ ಸೇರಿದಂತೆ ಸುವರ್ಣ ಸೌಧದ ಯಾವುದೇ ಗೇಟ್ ನಿಂದಲೂ ಮಾಧ್ಯಮಗಳ ಕ್ಯಾಮರಾ ಒಳ ಪ್ರವೇಶ ಮಾಡಲು ನಿರ್ಬಂಧ ವಿಧಿಸಲಾಗಿದೆ.
ಇಂದು ವಿಧಾನ ಸಭಾ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಚರ್ಚೆ
ಇಂದು ಬೆಳಗಾವಿ ಸುವರ್ಣ ಸೌಧದಲ್ಲಿ ಮತಾಂತರ ನಿಷೇಧ ಕಾಯ್ದೆ ಕುರಿತು ಚರ್ಚೆ ನಡೆಯಲಿದೆ.ನಿನ್ನೆ ಮಂಡನೆಯಾದ ವಿಧೇಯಕವು ಇಂದು ಚರ್ಚೆ ಬಳಿಕ ಸದನದಲ್ಲಿ ಪಾಸ್ ಆಗಲಿದೆ. ಈ ಬಗ್ಗೆ ಆಢಳಿತಾರೂಡ ಪಕ್ಷ ಬಿಜೆಪಿ ಸನ್ನದ್ಧವಾಗಿದೆ. ಇಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಈ ಬಗ್ಗೆ ಚರ್ಚಿಸಲು ಅವಕಾಶ ನೀಡಿದ್ದಾರೆ. ಪ್ರತಿಪಕ್ಷಗಳು ವಿಧೆಯಕವನ್ನು ವಿರೋಧಿಸುತ್ತಿದ್ದು, ಅಧಿವೇಶನದಲ್ಲಿ ಇಂದು ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ರಕ್ಷಣಾ ವಿಧೇಯಕ-2021 ಹೈ ವೋಲ್ಟೇಜ್ ಚರ್ಚೆ ನಡೆಯಲಿದೆ.
Published On - Dec 22,2021 9:56 AM