ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ: ಧಾರವಾಡದಲ್ಲಿ 29 ಮಕ್ಕಳಿಗೆ ಬಾಲ ಗೌರವ ಪ್ರಶಸ್ತಿ ಪ್ರದಾನ
ಪಾಲಕರು ಮಕ್ಕಳ ಮೇಲೆ ಒತ್ತಡ ಹೇರದೆ, ಅವರಿಗೆ ಆಸಕ್ತಿ ಇರುವ ಕ್ಷೇತ್ರ ಹಾಗೂ ವಿಷಯಗಳಲ್ಲಿ ಮುಂದುವರೆಯಲು ಪ್ರೋತ್ಸಾಹ ನೀಡಬೇಕು. ಆಗ ಮಾತ್ರ ಮಕ್ಕಳು ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿ, ಸಾಧನೆ ಮಾಡಲು ಸಾಧ್ಯ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಧಾರವಾಡ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕರ್ನಾಟಕ ಬಾಲವಿಕಾಸ ಅಕಾಡೆಮಿ ಸಹಯೋಗದಲ್ಲಿ, ಭಾನುವಾರ (ಫೆ.28) ನಗರದ ಡಾ. ಮಲ್ಲಿಕಾರ್ಜುನ ಮನ್ಸೂರ ಕಲಾಭವನದಲ್ಲಿ ಬಾಲವಿಕಾಸ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಈ ಸಮಾರಂಭವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಉದ್ಘಾಟಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಒಟ್ಟು 29 ಮಕ್ಕಳಿಗೆ, ಸಚಿವೆ ಶಶಿಕಲಾ ಜೊಲ್ಲೆ ಅಕಾಡೆಮಿ ಬಾಲ ಗೌರವ ಪ್ರಶಸ್ತಿ ಪ್ರದಾನ ಮಾಡಿ, ಸನ್ಮಾನಿಸಿದರು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ, ಪಾಲಕರು ಮಕ್ಕಳ ಮೇಲೆ ಒತ್ತಡ ಹೇರದೆ, ಅವರಿಗೆ ಆಸಕ್ತಿ ಇರುವ ಕ್ಷೇತ್ರ ಹಾಗೂ ವಿಷಯಗಳಲ್ಲಿ ಮುಂದುವರೆಯಲು ಪ್ರೋತ್ಸಾಹ ನೀಡಬೇಕು. ಆಗ ಮಾತ್ರ ಮಕ್ಕಳು ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿ, ಸಾಧನೆ ಮಾಡಲು ಸಾಧ್ಯ. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವ ಉದ್ದೇಶದಿಂದ ಪ್ರತಿ ಜಿಲ್ಲೆಯಲ್ಲಿ ಅಕಾಡೆಮಿ ವತಿಯಿಂದ ವಿವಿಧ ಸ್ಪರ್ಧೆಗಳನ್ನು ಹಾಗೂ ವಿಚಾರ ಸಂಕೀರ್ಣಗಳನ್ನು ಏರ್ಪಡಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್, ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಬಾಲವಿಕಾಸ ಅಕಾಡೆಮಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ. ಕರ್ನಾಟಕ ಬಾಲ ವಿಕಾಸ ಅಕಾಡೆಮಿಗೆ ಈ ಬಾರಿಯ ಬಜೆಟ್ನಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಹೆಸರೇ ಸೂಚಿಸುವಂತೆ ಬಾಲವಿಕಾಸ ಅಕಾಡೆಮಿ ಮಕ್ಕಳ ವಿಕಾಸವನ್ನು ಪ್ರೋತ್ಸಾಹಿಸುವಂತದ್ದು. ಮಕ್ಕಳಲ್ಲಿರುವ ಸೂಕ್ತ ಪ್ರತಿಭೆಯನ್ನು ಗುರುತಿಸಿ, ಪುರಸ್ಕರಿಸುತ್ತಿರುವುದು ಉಳಿದ ಮಕ್ಕಳಿಗೆ ಸ್ಫೂರ್ತಿದಾಯಕ. ಇನ್ನು ಅನೇಕ ಮಕ್ಕಳಿಗೆ ಪ್ರಶಸ್ತಿ ಸಿಗಬೇಕು. 2017-18, 2018-19ನೇ ಸಾಲಿನ ಅಕಾಡೆಮಿ ಗೌರವ ಹಾಗೂ 2017 -18ನೇ ಸಾಲಿನ ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿಯನ್ನು ಈ ವರ್ಷ ಕೊಡಲಾಗುತ್ತಿದೆ. ಇನ್ನು ಮುಂದೆ ಪ್ರತಿ ವರ್ಷವು ಪ್ರಶಸ್ತಿ ನೀಡುವಂತಹ ಕೆಲಸ ಆಗಬೇಕು ಎಂದು ಸಚಿವ ಜಗದೀಶ ಶೆಟ್ಟರ್ ತಿಳಿಸಿದ್ದು, ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಿ, ಸನ್ಮಾನಿಸಿದರು.
ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿ ಪ್ರದಾನ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿ ಕೃಷಿ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ 6 ಅಥವಾ 8 ನೇ ತರಗತಿಯ ಪಠ್ಯದಲ್ಲಿ ಕೃಷಿ ಕುರಿತು ಪಾಠ ಅಳವಡಿಸುವಂತೆ ಶಿಕ್ಷಣ ಸಚಿವರಿಗೆ ಪತ್ರ ಬರೆಯುತ್ತೇನೆ ಎಂದು ಹೇಳಿದರು.
ಅಕಾಡೆಮಿ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ಅಕಾಡೆಮಿಯ ಪರಿಚಯ ಪುಸ್ತಕ, ಅಕಾಡೆಮಿ ಕ್ಯಾಲೆಂಡರ್, ಕರಪತ್ರವನ್ನು ಬಿಡುಗಡೆ ಮಾಡಿದ್ದು, ಅಕಾಡೆಮಿಯ ಅಧ್ಯಕ್ಷ ಈರಣ್ಣ ಜಡಿ ಅವರು ಸಮಾರೋಪ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷ ಸಿದ್ಧನಗೌಡ ಈಶ್ವರಗೌಡ ಚಿಕ್ಕನಗೌಡರು, ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ್ ಕಲಬುರ್ಗಿ, ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಶಂಕರ ಹಲಗತ್ತಿ, ಮಹೇಶ ಟೆಂಗಿನಕಾಯಿ, ವೇದವ್ಯಾಸ ಕೌಲಗಿ, ಡಾ.ಕಿಕ್ಕೇರಿ ಕೃಷ್ಣಮೂರ್ತಿ, ರಂಗಾಯಣದ ನಿರ್ದೇಶಕ ರಮೇಶ ಪರವಿನಾಯ್ಕರ್, ಮನೋವೈದ್ಯ ಡಾ. ಆನಂದ ಪಾಂಡುರಂಗಿ, ಸೀಮಾ ಅಶೋಕ ಮಸೂತಿ, ನಿರ್ಮಲಾ ಯಲಿಗಾರ, ಧಾರವಾಡ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ.ಖಾಜಿ, ಯೋಜನಾಧಿಕಾರಿ ಭಾರತಿ ಶೆಟ್ಟರ್, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ: ಸಂಗೀತ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ: ಬಾಲ ವಿಕಾಸ ಅಕಾಡೆಮಿಯ ಬಾಲ ಗೌರವ ಪ್ರಶಸ್ತಿಗೆ ಯಾದಗಿರಿ ಜಿಲ್ಲೆಯ ಬಾಲಕಿ ಆಯ್ಕೆ