ಸಂಗೀತ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ: ಬಾಲ ವಿಕಾಸ ಅಕಾಡೆಮಿಯ ಬಾಲ ಗೌರವ ಪ್ರಶಸ್ತಿಗೆ ಯಾದಗಿರಿ ಜಿಲ್ಲೆಯ ಬಾಲಕಿ ಆಯ್ಕೆ

ಸಂಗೀತ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ: ಬಾಲ ವಿಕಾಸ ಅಕಾಡೆಮಿಯ ಬಾಲ ಗೌರವ ಪ್ರಶಸ್ತಿಗೆ ಯಾದಗಿರಿ ಜಿಲ್ಲೆಯ ಬಾಲಕಿ ಆಯ್ಕೆ
ಕರ್ನಾಟಕ ಬಾಲ ವಿಕಾಸ ಅಕಾಡಮಿ ಪ್ರಶಸ್ತಿಗೆ ಆಯ್ಕೆಯಾಗಿರುವ ಕುಸುಮಾ

ಕರ್ನಾಟಕ ಬಾಲ ವಿಕಾಸ ಅಕಾಡಮಿ ವತಿಯಿಂದ ಪ್ರಶಸ್ತಿ ಪ್ರದಾನ ಸಮಾರಂಭ ಇಂದು ಧಾರವಾಡದಲ್ಲಿ ನಡೆಯಲಿದೆ.ಈ ಸಮಾರಂಭದಲ್ಲಿ ಕುಸುಮಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಹಲವು ಜಿಲ್ಲೆಗಳಿಂದಲೂ ಸಹ ಬಾಲ ಪ್ರತಿಭೆಗಳು ಪ್ರಶಸ್ತಿ ಪಡೆಯಲು ಆಗಮಿಸಲಿದ್ದಾರೆ.

preethi shettigar

| Edited By: Lakshmi Hegde

Feb 28, 2021 | 12:05 PM


ಯಾದಗಿರಿ: ಬಡತನದ ನಡುವೆಯೂ ಸಂಗೀತದಲ್ಲಿ ಅಪ್ರತಿಮ ಸಾಧನೆ ಮಾಡಿದ ಬಾಲಕಿಗೆ ಇದೀಗ ಕರ್ನಾಟಕ ಬಾಲ ವಿಕಾಸ ಅಕಾಡಮಿಯ ಬಾಲ ಗೌರವ ಪ್ರಶಸ್ತಿ ಒಲಿದು ಬಂದಿದ್ದು, ಗಿರಿನಾಡಿಗೆ ಸಾಧನೆಯ ಕಿರೀಟ ಮೂಡಿದಂತಾಗಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರ ಪಟ್ಟಣದ ಬಾಲಕಿ ಕುಸುಮಾ ಅಯ್ಯಣ್ಣ ಭೋಯಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದು, ಆಕೆಗೆ ಒಲಿದ ಬಾಲ ಗೌರವ ಪ್ರಶಸ್ತಿ ಜಿಲ್ಲೆಗೆ ಹೆಮ್ಮೆ ತಂದಿದೆ.  

ಚಿಕ್ಕಂದಿನಿಂದಲೇ ಸಂಗೀತದ ಅಪಾರ ಒಲವು ಬೆಳೆಸಿಕೊಂಡಿದ್ದ ಬಾಲಕಿಯ ಪ್ರಯತ್ನಕ್ಕೆ ಕೊನೆಗೂ ಸರ್ಕಾರವೇ ಸ್ಪಂದಿಸಿದೆ. ಪ್ರಶಸ್ತಿಗಾಗಿ ಸರ್ಕಾರದ ಮಟ್ಟದಲ್ಲಿ ಲಾಬಿ ಮಾಡುವವರನ್ನೂ ನಾವು ನೋಡಿದ್ದೇವೆ. ಆದರೆ ಮನೆ ಬಾಗಿಲಿಗೆ ಪ್ರಶಸ್ತಿ ಬಂದಿದ್ದು, ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಸಂಗೀತದಲ್ಲಿಯೂ ಗಿರಿನಾಡಿನವರು ಸಾಧನೆ ಮಾಡಬಲ್ಲೇವು ಎಂದು ಸಾಬೀತು ಮಾಡುವ ಮೂಲಕ ರಾಜ್ಯ ತುಂಬ ಕೀರ್ತಿಯನ್ನು ಪಸರಿಸಿದ್ದಾಳೆ ಈ ಬಾಲಕಿ.

ಕಕ್ಕೇರ ಪಟ್ಟಣದಲ್ಲಿಯೇ ಇರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಕಲಾ ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ಬಾಲಕಿ ಎಸ್ಎಸ್ಎಲ್​ಸಿಯಲ್ಲಿ ಶೇ.82.04 ಅಂಕ ಪಡೆದುಕೊಂಡು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಆದರೆ ಆರ್ಥಿಕ ಸಮಸ್ಯೆಯಿಂದಾಗಿ ವಿಜ್ಞಾನ ವಿಭಾಗಕ್ಕೆ ಸೇರಿಸಲು ಸಾಧ್ಯವಾಗದೇ ಕಲಾ ವಿಭಾಗದಲ್ಲಿ ಅಧ್ಯಯನ ಮಾಡುವಂತಾಗಿದೆ. ಜೊತೆಗೆ ಸಂಗೀತದ ಅಭ್ಯಾಸದಲ್ಲಿಯೂ ತೊಡಗಿದ್ದು, ಕಠಿಣವಾಗಿ ಅಭ್ಯಾಸ ಮಾಡಿದ ಪರಿಣಾಮ ಸಾಧನೆ ಶಿಖರ ಏರುವಂತಾಗಿದೆ.

BALAVIKAS AWARD

ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಕುಸುಮಾ

ಸಂಗೀತ ವಿಭಾಗದ ಜೂನಿಯರ್ ಪರೀಕ್ಷೆಯಲ್ಲಿ ಶೇ.400 ಅಂಕಗಳಿಗೆ 275 ಅಂಕ ಪಡೆದಿದ್ದಾಳೆ. ಸಂಗೀತ ವಿಭಾಗದ ಸಿನಿಯರ್ ಪರೀಕ್ಷೆಯಲ್ಲಿ ಒಟ್ಟು 600 ಕ್ಕೆ 567 ಅಂಕ ಪಡೆದಿದ್ದು, ಎರಡು ಪರೀಕ್ಷೆಯಲ್ಲಯೂ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾಳೆ. ಇದು ಪ್ರತಿಭೆಗೆ ಹಿಡಿದ ಕೈಗನ್ನಡಿಯಾಗಿದೆ. ಸಂಗೀತ ಹಿನ್ನಲೆ ಇಲ್ಲದ ಕುಟುಂಬದ ಈ ಪ್ರತಿಭೆ ಗುರುಗಳ ನೆರವಿನೊಂದಿಗೆ ಉತ್ತಮವಾಗಿ ಸಾಧನೆ ಮಾಡುತ್ತಿದ್ದಾಳೆ. ಕಳೆದ 7 ವರ್ಷಗಳಿಂದಲೂ ಬಸಣ್ಣ ಗುರಿಕಾರ ಕಕ್ಕೇರ ಅವರಿಂದ ಹಿಂದೂಸ್ಥಾನಿ ಸಂಗೀತ ಕಲೆಯುತ್ತಿದ್ದಾಳೆ.

BALAVIKAS AWARD

ಕುಸುಮಾಗೆ ಬಾಲ ಗೌರವ ಪ್ರಶಸ್ತಿ

ಅಯ್ಯಣ್ಣ ಭೋವಿ ಅವರಿಗೆ ಮೂವರು ಹೆಣ್ಣು ಮಕ್ಕಳು ಹಾಗೂ ಓರ್ವ ಗಂಡು ಮಗುವಿದ್ದು, ಕುಸುಮಾ ಮೊದಲನೇ ಪುತ್ರಿ ಆಗಿದ್ದಾಳೆ. ವೈನ್ ಶಾಪ್​ನಲ್ಲಿ ಕೆಲಸ ಮಾಡುವ ಅಯ್ಯಣ್ಣ ಅವರು ತುಂಬ ಕಷ್ಟಪಟ್ಟು ಮಗಳನ್ನು ಓದಿಸುತ್ತಿದ್ದಾರೆ. ಇದಲ್ಲದೇ ಆತನ ಪತ್ನಿ ನಿತ್ಯ ಕೂಲಿ ಕೆಲಸಕ್ಕೆ ಹೋಗುತ್ತಾಳೆ. ಸಂಸಾರ ನಡೆಯುವ ಜೊತೆಗೆ ಮಕ್ಕಳ ಸಾಧನೆಗೂ ಯಾವುದೇ ರೀತಿಯಿಂದ ಅಡ್ಡಿ ಆತಂಕ ಆಗದಂತೆ ನೋಡಿಕೊಳ್ಳುವುದು ಕೂಡ ಸವಾಲಿನ ಕೆಲಸವಾಗಿದೆ. ಯಾರಾದರೂ ಆರ್ಥಿಕ ನೆರವು ನೀಡಿದರೆ ಮಗಳಿಗೆ ಸಂಗೀತ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿರುವವರ ಬಳಿ ತರಬೇತಿ ಕೊಡಿಸಬೇಕು ಎಂಬ ಹಂಬಲವಿದೆ. ಆದರೆ ಆರ್ಥಿಕ ಪರಸ್ಥಿತಿ ಅಡ್ಡಿಯಾಗಿದೆ ಎಂದು ಅಯ್ಯಣ್ಣ ಭೋವಿ ಹೇಳಿದ್ದಾರೆ.

BALAVIKAS AWARD

ಸಮಾರಂಭಗಳಲ್ಲಿ ಕುಸುಮಾ ಹಾಡುತ್ತಿರುವ ದೃಶ್ಯ

ಕರ್ನಾಟಕ ಬಾಲ ವಿಕಾಸ ಅಕಾಡಮಿ ವತಿಯಿಂದ ಪ್ರಶಸ್ತಿ ಪ್ರದಾನ ಸಮಾರಂಭ ಇಂದು ಧಾರವಾಡದಲ್ಲಿ ನಡೆಯಲಿದೆ.ಈ ಸಮಾರಂಭದಲ್ಲಿ ಕುಸುಮಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಹಲವು ಜಿಲ್ಲೆಗಳಿಂದಲೂ ಸಹ ಬಾಲ ಪ್ರತಿಭೆಗಳು ಪ್ರಶಸ್ತಿ ಪಡೆಯಲು ಆಗಮಿಸಲಿದ್ದಾರೆ. ಇಂತಹ ಪ್ರತಿಭೆಗಳಿಗೆ ಪ್ರೋತ್ಸಾಹ ಮಾಡಿದ್ದರೆ ಇನ್ನಷ್ಟು ಎತ್ತರಕ್ಕೆ ಬೆಳೆಯಲು ಅನುಕೂಲವಾಗುತ್ತದೆ.

ಸಂಗೀತ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವ ಹಂಬಲವಿದ್ದು ಅದನ್ನು ಮಾಡಿ ತೋರಿಸುತ್ತೆನೆಂಬ ವಿಶ್ವಾಸ ಕೂಡ ನನಗಿದೆ. ನನ್ನ ಸಾಧನೆಗೆ ತಂದೆ ತಾಯಿ ಮತ್ತು ಗುರು ಹಿರಿಯರು ಕಾರಣರಾಗಿದ್ದಾರೆ ಎಂದು ಬಾಲ ಗೌರವ ಪ್ರಶಸ್ತಿಗೆ ಆಯ್ಕೆಯಾಗಿರುವ ಕುಸುಮಾ ಭೋವಿ ಹೇಳಿದ್ದಾರೆ.

ಇದನ್ನೂ ಓದಿ: ವಸುಧೇಂದ್ರ, ಶಿವಾನಂದ ಕಳವೆ ಸೇರಿ ಹಲವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಘೋಷಣೆ


Follow us on

Related Stories

Most Read Stories

Click on your DTH Provider to Add TV9 Kannada