
ಬೆಂಗಳೂರು (ಆಗಸ್ಟ್.12): ಕರ್ನಾಟಕದಲ್ಲಿ (Karnataka) ಮತ್ತೆ ಕಾವೇರಿ ನದಿ ನೀರು ವಿವಾದ (Cauvery Water Dispute) ಮುನ್ನೆಲೆಗೆ ಬಂದಿದ್ದು, ಬರದ ಮಧ್ಯೆ ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಆದೇಶ ಹೊರಡಿಸಿರುವುದು ರಾಜ್ಯದ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನಾಳೆ (ಆಗಸ್ಟ್ 13, ಗುರುವಾರ) ‘ಕರ್ನಾಟಕ ಬಂದ್’ (Karnataka Bandh) ಗೆ ಕರೆ ನೀಡಿದ್ದಾರೆ. ಆದರೆ, ಈ ಬಂದ್‌ಗೆ ರೈತ ಸಂಘಟನೆಗಳು ಬಿಟ್ಟರೆ ಬೇರೆ ಯಾವುದೇ ಸಂಘಟನೆಗಳು ಬೆಂಬಲಿಸಿಲ್ಲ. ಆರಂಭದಲ್ಲೇ ಬಂದ್‌ಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದವು. ಆದ್ರೆ, ಇದೇ ಸಮಯಕ್ಕೆ ಸ್ವಲ್ಪ ಮಳೆಯಾಗಿದ್ದರಿಂದ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದೆ. ಇನ್ನು ಸಿಎಂ ಡಿಕೆ ಶಿವಕುಮಾರ್ ಸಹ ರೈತರ ಪರ ನಿರ್ಧಾರ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಕೆಲ ಸಂಘಟನೆಗಳು ಬಂದ್‌ಗೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದುಕೊಂಡಿವೆ. ಈ ಹಿನ್ನೆಲೆಯಲ್ಲಿ ನಾಳಿನ ಬಂದ್ ಫ್ಲಾಪ್ ಆಗುವ ಸಾಧ್ಯತೆಯಿದ್ದು, ರಾಜ್ಯಾದ್ಯಂತ ಜನಜೀವನ ಎಂದಿನಂತೆ ಯಥಾಸ್ಥಿತಿಯಲ್ಲಿ ಇರಲಿದೆ.
ಖಾಸಗಿ ಶಾಲೆಗಳ ಒಕ್ಕೂಟ, ಖಾಸಗಿ ಬಸ್ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ನೈತಿಕ ಬೆಂಬಲ ಘೋಷಣೆ ಮಾಡಿದ್ದರಿಂದ ಶಾಲಾ-ಕಾಲೇಜುಗಳು, ಸಾರಿಗೆ ಸೇವೆಗಳು ಹಾಗೂ ವಾಣಿಜ್ಯ ಚಟುವಟಿಕೆಗಳು ಯಥಾರೀತಿ ನಡೆಯಲಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ.
ನಾಳೆ ರಾಜ್ಯದಾದ್ಯಂತ ಬಹುತೇಕ ಎಲ್ಲಾ ಅಗತ್ಯ ಹಾಗೂ ಪ್ರಮುಖ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಸಾರಿಗೆ ಸೇವೆಗಳಾದ KSRTC, BMTC ಬಸ್‌ಗಳು, ನಮ್ಮ ಮೆಟ್ರೋ (Namma Metro), ರೈಲ್ವೆ ಸೇವೆಗಳು, ಆಟೋ ರಿಕ್ಷಾ ಹಾಗೂ ಟ್ಯಾಕ್ಸಿ (Ola/Uber) ಸೇವೆಗಳು ಎಂದಿನಂತೆ ಲಭ್ಯವಿರಲಿವೆ. ಮುಖ್ಯವಾಗಿ ಶಾಲಾ-ಕಾಲೇಜುಗಳು ಎಂದಿನಂತೆ ಓಪನ್ ಇರಲಿವೆ.
ಇನ್ನು ಆರೋಗ್ಯ ಸೇವೆಗಳಾದ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು, ಮೆಡಿಕಲ್ ಶಾಪ್‌ಗಳು ಹಾಗೂ ಆಂಬ್ಯುಲೆನ್ಸ್ ಸೇವೆಗಳು ಯಥಾರೀತಿ ಇರಲಿವೆ.
ಅಗತ್ಯ ಸರಕುಗಳಾದ ದಿನಸಿ ಅಂಗಡಿಗಳು, ಹಾಲು, ತರಕಾರಿ, ಮಾರುಕಟ್ಟೆಗಳು, ಬೇಕರಿ, ಜ್ಯೂಸ್ ಅಂಗಡಿಗಳು ಹಾಗೂ ಬೀದಿ ಬದಿ ವ್ಯಾಪಾರ ವಹಿವಾಟು ನಡೆಯಲಿದೆ.
ವಾಣಿಜ್ಯ ವಲಯಗಳಾದ ಮಾಲ್‌ಗಳು, ಚಿತ್ರಮಂದಿರಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಕೈಗಾರಿಕಾ ಕ್ಷೇತ್ರಗಳು ಹಾಗೂ ಸರ್ಕಾರಿ ಆಫೀಸ್‌ಗಳು ಎಂದಿನಂತೆ ಓಪನ್ ಇರಲಿವೆ.
ನಾಳಿನ ಬಂದ್‌ಗೆ ಕೆಲ ಸಂಘಟನೆಗಳು ಬೆಂಬಲ ವಾಪಸ್ ಪಡೆದಿದ್ದಕ್ಕೆ ವಾಟಾಳ್ ನಾಗರಾಜ್ ಬೇಸರ ವ್ಯಕ್ತಪಡಿಸಿದ್ದಾರೆ. ಮಂಡ್ಯದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ವಾಟಾಳ್, ಬಂದ್ ಆಗಬೇಕು ಎಂದು ಮೊದಲು ಹೇಳಿದವರೇ ಅವರು. ವಾಟಾಳ್ ನೇತೃತ್ವದಲ್ಲಿ ಬಂದ್ ಆಗಬೇಕೆಂದು ಹೇಳಿದ್ದರು. ಆದರೆ ಕೊನೇ ಕ್ಷಣದಲ್ಲಿ ಹಿಂದೆ ಸರಿದು ಕೈಕೊಟ್ಟಿದ್ದಾರೆ. 9 ತಿಂಗಳ ಗರ್ಭಿಣಿ ಕೊನೇ ಕ್ಷಣದಲ್ಲಿ ಹೆರಿಗೆ ಬೇಡ ಅನ್ನುವಂತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ನಾನು 53 ಬಂದ್ಗಳನ್ನ ಮಾಡಿದ್ದೇನೆ. ಕರ್ನಾಟಕ ಬಂದ್ ಅವರಿಬ್ಬರ ಕೈಯಲ್ಲಿಲ್ಲ. ಕೈಕೊಟ್ಟವರ ಜೊತೆ ಮತ್ತೆ ಸಂಬಂಧ ಬೆಳೆಸುವ ಪ್ರಶ್ನೆ ಇಲ್ಲ.ನಾನು ಜೀವನದಲ್ಲಿ ಅವರ ಜೊತೆ ಸೇರಲ್ಲ ಎಂದು ಪರೋಕ್ಷವಾಗಿ ಪ್ರವೀಣ್ ಶೆಟ್ಟಿ ಹಾಗೂ ಸಾರಾ ಗೋವಿಂದ್ ಹೆಸರು ಹೇಳದೇ ಕಿಡಿಕಾರಿದ ವಾಟಾಳ್, ಎಲ್ಲರೂ ನಾಳಿನ ಬಂದ್‌ಗೆ ಬೆಂಬಲ ಕೊಡಬೇಕು.ಹೋಟೆಲ್ ಮಾಲೀಕರು ಮೊದಲು ಬೆಂಬಲ ಎಂದು ಹೇಳಿದ್ರು. ಈಗ ಹೋಟೆಲ್ನವರು ನೈತಿಕ ಬೆಂಬಲ ಎಂದು ಹೇಳ್ತಿದ್ದಾರೆ. ಹೋಟೆಲ್ನವರು ಆಹಾರ ಪದಾರ್ಥಗಳ ದರ ಹೆಚ್ಚಿಸಿದ್ದಾರೆ. ಮುಂದಿನ ದಿನಗಳಲ್ಲಿ ನಿಮ್ಮ ವಿರುದ್ಧವೂ ಹೋರಾಡಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ನಾಳಿನ ಕರ್ನಾಟಕ ಬಂದ್‌ಗೆ ಹಲವು ಸಂಘಟನೆಗಳು ಬೆಂಬಲ ಘೋಷಿಸಿಲ್ಲ. ಹೀಗಾಗಿ ಎಂದಿನಂತೆ ಜನಜೀವನ, ವ್ಯಾಪಾರ ವಹಿವಾಟುಗಳು ನಡೆಯಲಿವೆ.
Published On - 6:46 pm, Wed, 12 August 26