ಬೆಂಗಳೂರು: ಹೆಚ್ಚುತ್ತಿರೋ ಹೆಮ್ಮಾರಿ ಕಟ್ಟಿಹಾಕೋಕೆ ದಾರಿಯಾವುದು, ದಿಕ್ಯಾವುದು, ಕರುನಾಡಿನಲ್ಲಿ ಕರಾಳತೆ ಸೃಷ್ಟಿಸಿರೋ, ಹೆಜ್ಜೆ ಹೆಜ್ಜೆಗೂ ಭೀಕರತೆಯನ್ನುಂಟು ಮಾಡ್ತಿರೋ ಕೊರೊನಾ ಅಟ್ಟಹಾಸ ಮಟ್ಟಹಾಕಲು ಇರೋ ಅಸ್ತ್ರವಾದ್ರೂ ಯಾವುದು. ಅದು ಲಾಕ್ಡೌನಾ.. ಜನತಾ ಕರ್ಫ್ಯೂನಾ.. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ 144 ಸೆಕ್ಷನ್ ಜಾರಿ ಮಾಡೋದಾ.. ಅಥವಾ ನೈಟ್ ಕರ್ಫ್ಯೂ ಟೈಂ ಹೆಚ್ಚಿಸಿ, ರಾಜ್ಯಾದ್ಯಂತ ರಾತ್ರಿ ಲೈಫ್ಗೆ ಲಾಕ್ಹಾಕೋದಾ..? ಯಾವ ನಿರ್ಧಾರಕ್ಕೆ ಬರೋದು ಅಂತಾ ಸರ್ಕಾರ ಒದ್ದಾಡುತ್ತಿದೆ. ಹೀಗೆ ಕನ್ಫ್ಯೂಸ್ಗೆ ಬಿದ್ದ ಸರ್ಕಾರ ನಿನ್ನೆ ಎಲ್ಲ ಗೊಂದಲ ನಿವಾರಣೆಗೆ ಬೆಂಗಳೂರಿನ ಜನಪ್ರತಿನಿಧಿಗಳ ಜೊತೆ ಮಹತ್ವದ ಮೀಟಿಂಗ್ ನಡೆಸಿತು.
ಕೊರೊನಾ ಮೀಟಿಂಗ್‌ನಲ್ಲಿ ಕರ್ಫ್ಯೂ ಕಾದಾಟ
ನಿನ್ನೆ ಸಭೆ ಮೇಲೆ ಬೆಂಗಳೂರಿಗೆ ಬೆಂಗಳೂರೇ ಕಣ್ಣಿಟ್ಟಿತ್ತು. ಸಭೆ ನಡೆಸಿ ಹೊಸ ಮಾರ್ಗಸೂಚಿ ಬಂದೇ ಬಿಡುತ್ತೆ ಅಂತಾನೇ ಹೇಳಲಾಗಿತ್ತು. ಆದ್ರೆ, ಸಭೆಯಲ್ಲಿ ಆಗಿದ್ದೇ ಬೇರೆ. ಕಾಂಗ್ರೆಸ್ ಸದಸ್ಯರು ವಿರೋಧ ಮಾಡ್ಲಿ ಬಿಡ್ಲಿ, ನೈಟ್ ಕರ್ಫ್ಯೂ ವಿಸ್ತರಣೆ ಮಾಡೋಣ ಅಂತಾ ಪ್ಲ್ಯಾನ್ ಮಾಡಿಕೊಂಡಿದ್ದ ಸರ್ಕಾರಕ್ಕೆ ಕೈಪಡೆ ಬೆವರಿಳಿಸಿತು. ಬೆಡ್, ಐಸಿಯು, ವೆಂಟಿಲೇಟರ್, ಬೆಂಗಳೂರಿನ ಇವತ್ತಿನ ಪರಿಸ್ಥಿತಿ ನೋಡಿದ್ದೀರಾ ಅಂತಾ ಒಂದೊಂದೇ ವಿಚಾರ ತೆಗದು ಸರ್ಕಾರಕ್ಕೆ ತಿವಿದ್ರು.
ಕೊರೊನಾದಿಂದ ಆಸ್ಪತ್ರೆ ಸೇರಿರೋ ಸಿಎಂ ಬಿಎಸ್ವೈ ಕೂಡಾ ವಿಡಿಯೋ ಕಾನ್ಫ್ರೆನ್ಸ್ ಸಭೆಯಲ್ಲಿ ಭಾಗವಹಿಸಿದ್ರು. ಇಡೀ ಸಭೆ ಮುಗಿಯೋವರೆಗೂ ಎಲ್ಲರ ಅಭಿಪ್ರಾಯವನ್ನ ಪಡೆದುಕೊಂಡ್ರು. ಎಲ್ಲರ ಜೊತೆಗೂ ಚರ್ಚೆ ನಡೆಸಿದ್ರು. ಅಂತಿಮವಾಗಿ ಸರ್ಕಾರ ಒಂದು ಫೈನಲ್ ನಿರ್ಧಾರಕ್ಕೆ ಬರೋ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಬೆಂಗಳೂರು ಭವಿಷ್ಯವನ್ನ ನಿರ್ಧರಿಸೋಕೆ, ಕರುನಾಡನ್ನ ಕೊರೊನಾದಿಂದ ಕಾಪಾಡೋದಕ್ಕೆ ಇಂದು ಮುಹೂರ್ತ ಫಿಕ್ಸ್ ಮಾಡಿದೆ.
ಇಂದು ನಿರ್ಧಾರವಾಗಲಿದೆ ರಾಜ್ಯ-ರಾಜಧಾನಿ ಭವಿಷ್ಯ
ಹೌದು, ಹೆಮ್ಮಾರಿ ಕಟ್ಟಿಹಾಕೋಕೆ ದೆಹಲಿ ಮತ್ತೆ ಲಾಕ್ಡೌನ್ ಮೋಡ್ಗೆ ಜಾರಿದೆ, ರಾಜಸ್ಥಾನದಲ್ಲಿ ಮೇ 3 ರವರೆಗೆ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಪಕ್ಕದ ಮಹಾರಾಷ್ಟ್ರದಲ್ಲಿ ಜನತಾ ಕರ್ಫ್ಯೂ ಅರ್ಥಾತ್ 144 ಸೆಕ್ಷನ್ ಜಾರಿಯಲ್ಲಿದೆ. ಹೀಗಾಗೇ, ರಾಜ್ಯದಲ್ಲಿ ಅದ್ರಲ್ಲೂ ಬೆಂಗಳೂರಿನಲ್ಲಿ ದೆಹಲಿ, ರಾಜಸ್ಥಾನದಂತೆ ಲಾಕ್ಡೌನ್ ಜಾರಿಯಾಗುತ್ತಾ..? ಅಥವಾ ಮಹಾರಾಷ್ಟ್ರದಂತೆ 144 ಸೆಕ್ಷನ್ ಜಾರಿ ಮಾಡ್ತಾರಾ ಅನ್ನೋ ಪ್ರಶ್ನೆ ಮೂಡಿತ್ತು. ನಿನ್ನೆ ನಡೆದ ಸಭೆಯಲ್ಲಿ ಈ ವಿಚಾರವೂ ಪ್ರಸ್ತಾಪವೂ ಆಯ್ತು. ಸಭೆಯಲ್ಲಿ ಎಲ್ಲರೂ ಲಾಕ್ಡೌನ್ ವಿರುದ್ಧವೇ ಮಾತನಾಡಿದ್ರು.
ಕಂಪ್ಲೀಟ್ ಲಾಕ್ಡೌನ್ ಮೇಲೆ ಒಲವು ತೋರದ ಸರ್ಕಾರ
ಯೆಸ್, ಡೇ ಒನ್ನಿಂದಲೂ ಸಿಎಂ ಬಿಎಸ್ವೈ ಲಾಕ್ಡೌನ್ ಹೊರತು ಪಡಿಸಿ ಬೇರೆ ನಿಯಮ ಜಾರಿಗೆ ತರೋ ವಿಚಾರವಾಗಿ ಹೇಳ್ತಾ ಇದ್ರು. ನಿನ್ನೆಯ ಸಭೆಯಲ್ಲೂ ಸರ್ಕಾರ ಲಾಕ್ಡೌನ್ ಮೇಲೆ ಅಷ್ಟಾಗಿ ಒಲವು ತೋರಿಲ್ಲ ಅನ್ನೋದು ಸ್ಪಷ್ಟವಾಗಿತ್ತು.. ಸಭೆ ಬಳಿಕ ಸಚಿವ ಆರ್.ಅಶೋಕ್ ಸಹ ಲಾಕ್ಡೌನ್ ಇಲ್ಲ ಅಂತಾನೇ ಹೇಳಿದ್ರು.
ಸರ್ವಪಕ್ಷ ಸಭೆ ಬಳಿಕ ಬೆಂಗಳೂರು ಭವಿಷ್ಯ ನಿರ್ಧಾರ
ನಿನ್ನೆ ಒಂದು ಸುತ್ತಿನ ಮಾತುಕತೆ ನಡೆಸಿರೋ ಸರ್ಕಾರ, ಇಂದು ರಾಜ್ಯಪಾಲರ ಅಧ್ಯಕ್ಷತೆಯಲ್ಲೇ ವಿಡಿಯೋ ಕಾನ್ಫ್ರೆನ್ಸ್ ಮೂಲಕವೇ ಸರ್ವ ಪಕ್ಷ ಸಭೆ ನಡೆಯಲಿದೆ. ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಸೇರಿದಂತೆ ಇನ್ನು ಹಲವು ನಾಯಕರು ಭಾಗಿಯಾಗಲಿದ್ದಾರೆ. ಸಿಎಂ ಯಡಿಯೂರಪ್ಪ ಮತ್ತು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕೋವಿಡ್ ಸೋಂಕಿಗೊಳಗಾಗಿ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿರುವ ಕಾರಣ ಆಸ್ಪತ್ರೆಯಿಂದಲೇ ವರ್ಚುವಲ್ ಮೀಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನು ತಾಂತ್ರಿಕ ಸಲಹ ಸಮಿತಿ ಅಧ್ಯಕ್ಷರು, ಸದಸ್ಯರು ಸಹ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಸಭೆಯಲ್ಲಿ ಪಾಲ್ಗೊಳ್ಳಲಿರುವ ತಜ್ಞರು
ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಸುದರ್ಶನ್, ಜಯದೇವ ಸಂಸ್ಥೆ ನಿರ್ದೇಶಕ ಡಾ. ಮಂಜುನಾಥ್, ಮಣಿಪಾಲ್ ಆಸ್ಪತ್ರೆ ಮುಖ್ಯಸ್ಥ ಡಾ. ಸುದರ್ಶನ್ ಬಲ್ಲಾಳ್, ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ. ಗಿರಿಧರ್ ಬಾಬು ಇಂದು ನಡೆಯುವ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಒಟ್ನಲ್ಲಿ, ಬೆಂಗಳೂರು ಸೇರಿದಂತೆ ಇಡೀ ರಾಜ್ಯದ ಭವಿಷ್ಯ ಇಂದು ನಿರ್ಧಾರವಾಗಲಿದೆ. ಇಂದಿನ ಸಭೆಯ ಬಳಿಕ ಫೈನಲ್ ನಿರ್ಧಾರ ಹೊರ ಬೀಳಲಿದೆ.
ಇದನ್ನೂ ಓದಿ: Coronavirus Death in Maharashtra : Maharashtra ದಲ್ಲಿ ಒಂದೇ ದಿನ Coronaಗೆ 351 ಜನರ Death.!