
ಬೆಂಗಳೂರು, ಮೇ 26: ಕರ್ನಾಟಕ ರಾಜ್ಯ ಭೋವಿ ಅಭಿವೃದ್ಧಿ ನಿಗಮದ (Karnataka Bhovi Development Corporation) ಬಹುಕೋಟಿ ಹಗರಣದ ಆರೋಪಿಗಳಿಗೆ ಸೇರಿದ 26.27 ಕೋಟಿ ಮೌಲ್ಯದ ಸ್ಥಿರಾಸ್ತಿಯನ್ನು ಜಾರಿ ನಿರ್ದೇಶನಾಲಯ (ED) ಮುಟ್ಟುಗೋಲು ಹಾಕಿಕೊಂಡಿದೆ. ಪ್ರಕರಣದ ಆರೋಪಿಗಳಾದ ಬಿ.ಕೆ.ನಾಗರಾಜಪ್ಪ. ಆರ್.ಲೀಲಾವತಿ ಮತ್ತು ಇತರೆ ಆರೋಪಿಗಳಿಗೆ ಸೇರಿದ ಆಸ್ತಿಯನ್ನು ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದ್ದು, ತನಿಖೆ ಮುಂದುವರೆಸಿದೆ.
ಭೋವಿ ಸಮುದಾಯದ ಅಭ್ಯುದಯಕ್ಕೆ ಸರ್ಕಾರವು ಭೋವಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದೆ. 2021-22ನೇ ಸಾಲಿನಲ್ಲಿ ಉದ್ಯಮಿಗಳಿಗೆ ಸಾಲ ನೀಡುವಾಗ ಅಕ್ರಮ ನಡೆದಿದ್ದು, ಲಕ್ಷಾಂತರ ರೂ. ಸಾಲಕೊಡಿಸುವುದಾಗಿ ಸಾರ್ವಜನಿಕರ ದಾಖಲೆ ದುರ್ಬಳಕೆ ಜೊತೆಗೆ 10 ಕೋಟಿ ರೂಪಾಯಿಗೂ ಹೆಚ್ಚು ಹಣ ಅಕ್ರಮವಾಗಿ ವರ್ಗಾವಣೆ ಮಾಡಿದ್ದ ಆರೋಪ ಕೇಳಿಬಂದಿತ್ತು.
ಪ್ರಕರಣ ಮುಚ್ಚಿಹಾಕಲು ನಿಗಮದ ಅಧೀಕ್ಷಕ ಸುಬ್ಬಪ್ಪ, ‘ಭೋವಿ ಅಭಿವೃದ್ಧಿ ನಿಗಮದ ಲೆಕ್ಕಪತ್ರ ಕಡತ, ನಗದು ಪುಸ್ತಕಗಳು, ಯೋಜನಾ ಕಡತ, ಬ್ಯಾಂಕ್ ಚೆಕ್ ಸೇರಿದಂತೆ 200ಕ್ಕೂ ಹೆಚ್ಚು ಕಡತಗಳನ್ನು ಕಳವು ಮಾಡಿದ್ದ ಕುರಿತು ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕಲಬುರಗಿ ಜಿಲ್ಲೆಯಲ್ಲಿ ದೂರು ದಾಖಲಾಗಿದ್ದವು.
ಇನ್ನು, ಪ್ರಕರಣದ ತನಿಖೆಯನ್ನು ಸಿಐಡಿ ಮತ್ತು ಲೋಕಾಯುಕ್ತ ಕೂಡ ನಡೆಸಿವೆ. ಸಿಐಡಿ ತನಿಖೆ ವೇಳೆ 2018-2023ರವರೆಗೆ ಐದು ವರ್ಷಗಳಲ್ಲಿ ಸುಮಾರು 90 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅಕ್ರಮ ನಡೆದಿರುವುದು ಬಯಲಾಗಿತ್ತು.
ಇದನ್ನೂ ಓದಿ:ಭೋವಿ ನಿಗಮದ ಅವ್ಯವಹಾರದಲ್ಲಿ ಹೆಸರು ಪ್ರಸ್ತಾಪ: ಆರೋಪ ಹಿಂಪಡೆಯುವಂತೆ ಸಿಎಂಗೆ ಕೋಟ ಶ್ರೀನಿವಾಸ ಪತ್ರ
ED, Bengaluru Zonal Office has provisionally attached various immovable properties worth Rs. 26.27 Crore (approx.), (with current market value of Rs. 40 Crore) belonging to B K Nagarajappa, Ms. R Leelavathy and other accused, under the provisions of PMLA, 2002, in a case related…
— ED (@dir_ed) May 26, 2025
ಭೋವಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಲೀಲಾವತಿ, ನಿಗಮದ ಪ್ರಧಾನ ವ್ಯವಸ್ಥಾಪಕ ಬಿ.ಕೆ.ನಾಗರಾಜಪ್ಪ, ಮಾಜಿ ಅಧೀಕ್ಷಕ ಸುಬ್ಬಪ್ಪ ಅವರು ತಮ್ಮ ನೆರೆಹೊರೆಯವರು, ಬಾಡಿಗೆದಾರರು ಸಂಬಂಧಿಕರ ಹೆಸರಿನಲ್ಲಿ ನಕಲಿ ಕಂಪನಿ ತೆರೆದಿದ್ದು, ಅವರ ಖಾತೆಗಳಿಗೆ ಹಣ ಜಮೆಯಾಗಿತ್ತು. ಭೋವಿ ಅಕ್ರಮ ಹಣ ವರ್ಗಾವಣೆ ಶೋಧಿಸಿರುವ ಸಿಐಡಿ, ಐದು ಕಂಪನಿಗಳಿಗೆ 34.18 ಕೋಟಿ ರೂ. ಅಕ್ರಮವಾಗಿ ವರ್ಗಾವಣೆಯಾಗಿದ್ದನು ಪತ್ತೆ ಹಚ್ಚಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ