ವಿಧಾನ ಪರಿಷತ್ ಚುನಾವಣೆಗೆ ಕರ್ನಾಟಕ ಬಿಜೆಪಿ ತಯಾರಿ: ಪದಾಧಿಕಾರಿಗಳ ನೇಮಕ
4 ವಿಧಾನ ಪರಿಷತ್ ಸ್ಥಾನಗಳ ಚುನಾವಣೆಗೆ ಕರ್ನಾಟಕ ಬಿಜೆಪಿ ಸಿದ್ಧತೆ ಆರಂಭಿಸಿದೆ. ವಿವಿಧ ಕ್ಷೇತ್ರಗಳಿಗೆ ಸಂಚಾಲಕರನ್ನು ನೇಮಿಸಲಾಗಿದ್ದು, ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಹೊಸ ಅಭ್ಯರ್ಥಿಯ ಹುಡುಕಾಟದಲ್ಲಿದ್ದು, ವಸಂತಕುಮಾರ್ ಮತ್ತು ವೈ.ಎ. ನಾರಾಯಣಸ್ವಾಮಿ ಹೆಸರು ಚರ್ಚೆಯಲ್ಲಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು JDSಗೆ ಬಿಟ್ಟುಕೊಡುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬೆಂಗಳೂರು, ಅಕ್ಟೋಬರ್ 28: ವಿಧಾನ ಪರಿಷತ್ನ 4 ಸ್ಥಾನಗಳ ಚುನಾವಣೆಗೆ ರಾಜ್ಯ ಬಿಜೆಪಿ (BJP) ಸಿದ್ಧತೆ ಆರಂಭಿಸಿದೆ. ಎಲೆಕ್ಷನ್ ಸಂಬಂಧ ಸಂಚಾಲಕರು, ಸಹ ಸಂಚಾಲಕರನ್ನು ನೇಮಿಸಿ ಆದೇಶಿಸಲಾಗಿದೆ. ಈಶಾನ್ಯ ಶಿಕ್ಷಕರ ಕ್ಷೇತ್ರ-ಸಂಚಾಲಕರಾಗಿ ಅಮರನಾಥ್ ಪಾಟೀಲ್, ಸಹ ಸಂಚಾಲಕರಾಗಿ ನವೀನ್ ಗುಳಗಣ್ಣನವರ್ ನೇಮಕವಾಗಿದ್ದಾರೆ. ಪಶ್ಚಿಮ ಪದವೀಧರ ಕ್ಷೇತ್ರ-ಸಂಚಾಲಕರಾಗಿ ಅರುಣ್ ಶಹಾಪುರ, ಸಹ ಸಂಚಾಲಕರಾಗಿ ಸಂತೋಷ್ ದೇವರೆಡ್ಡಿ ಆಯ್ಕೆಯಾಗಿದ್ದಾರೆ. ಆಗ್ನೇಯ ಪದವೀಧರ ಕ್ಷೇತ್ರ-ಸಂಚಾಲಕರಾಗಿ ವೈ.ಎ.ನಾರಾಯಣಸ್ವಾಮಿ, ಸಹ ಸಂಚಾಲಕರಾಗಿ ಚಿದಾನಂದ ಎಂ.ಗೌಡಗೆ ಜವಾಬ್ದಾರಿ ನೀಡಲಾಗಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರ-ಸಂಚಾಲಕರಾಗಿ ಕೇಶವ ಪ್ರಸಾದ್ ಮತ್ತು ಸಹ ಸಂಚಾಲಕರಾಗಿ ಎಸ್.ಎನ್.ರಾಜಣ್ಣ ನೇಮಿಸಿ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಆದೇಶಿಸಿದ್ದಾರೆ.
ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಹೊಸ ಮುಖ?
ಪರಿಷತ್ ಪದವೀಧರ & ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆ ಆಗ್ನೇಯ ಪದವೀಧರ ಕ್ಷೇತ್ರಕ್ಕೆ BJP ಅಭ್ಯರ್ಥಿಯ ಹುಡುಕಾಟದಲ್ಲಿದೆ. MLC ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಈಗಾಗಲೇ ಚಿದಾನಂದಗೌಡ ತಿಳಿಸಿರುವ ಕಾರಣ ಹೊಸ ಅಭ್ಯರ್ಥಿ ಕಣಕ್ಕಿಳಿಸಲು ಪಕ್ಷ ಮುಂದಾಗಿದೆ. ಬಿಜೆಪಿ ಕಾನೂನು ಪ್ರಕೋಷ್ಠದ ಸಂಚಾಲಕ ವಸಂತಕುಮಾರ್ & ಮಾಜಿ MLC ವೈ.ಎ.ನಾರಾಯಣಸ್ವಾಮಿ ಹೆಸರು ಚರ್ಚೆಯಲ್ಲಿದ್ದು, ನಾರಾಯಣಸ್ವಾಮಿ ಕಳೆದ ಬಾರಿಯೂ ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದರು. ಈ ಬಾರಿಯೂ ಅವರು ಟಿಕೆಟ್ ಆಕಾಂಕ್ಷಿ ಎನ್ನಲಾಗಿದೆ.
ಇದನ್ನೂ ಓದಿ: ‘ಟನಲ್ ರೋಡ್ ಬಿಡಿ ಸ್ವಾಮಿ, ಪಾಲಿಕೆ ಶಿಕ್ಷಕರಿಗೆ ಮೊದಲು ಸಂಬಳ ಕೊಡಿ’: ಡಿಕೆ ಶಿವಕುಮಾರ್ ಕಾಲೆಳೆದ ಆರ್ ಅಶೋಕ್
ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನ JDS ಪಾಲು?
ಇನ್ನು ಅಭ್ಯರ್ಥಿಗಳ ಆಯ್ಕೆ ಸಂಬಂಧ ಈಗಾಗಲೇ ಬಿಜೆಪಿ ತಯಾರಿ ನಡೆಸಿದ್ದು, 2 ಕ್ಷೇತ್ರಗಳಲ್ಲಿ ಈಗಾಗಲೇ ಆರ್.ಅಶೋಕ್ ನೇತೃತ್ವದಲ್ಲಿ ಸಭೆ ನಡೆದಿದೆ. ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಹಾಲಿ ಎಂಎಲ್ಸಿ ಶಶೀಲ್ ನಮೋಶಿಗೆ ಮತ್ತೊಂದು ಬಾರಿಗೆ ಟಿಕೆಟ್ ನೀಡಲು ನಿರ್ಧರಿಸಲಾಗಿದ್ದು, ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿಯೂ ಹಾಲಿ ಎಂಎಲ್ಸಿ ಎಸ್.ವಿ.ಸಂಕನೂರ್ಗೆ ಟಿಕೆಟ್ ಸಾಧ್ಯತೆ ಇದೆ. ಆದರೆ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಹೊಸ ಅಭ್ಯರ್ಥಿ ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನ JDSಗೆ ಬಿಟ್ಟುಕೊಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬಂದಿವೆ.
ಮತ್ತಷ್ಟು ರಾಜಕೀಯ ಸಂಬಂಧಿತ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



