ಬಿಜೆಪಿ ರಾಜ್ಯಾಧ್ಯಕ್ಷರ ಘೋಷಣೆ ಪ್ರಕ್ರಿಯೆ ಚುರುಕು, ಮಹತ್ವದ ಬದಲಾವಣೆಯ ಸುಳಿವು ಕೊಟ್ಟ ಉಸ್ತುವಾರಿ

ಬಹುದಿನಗಳಿಂದ ಚರ್ಚೆಯಲ್ಲಿರುವ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಗೊಂದಲಗಳಿಗೆ ಶೀಘ್ರದಲ್ಲೇ ತೆರೆಬೀಳುವ ನಿರೀಕ್ಷೆ ಇದೆ. ಇದಕ್ಕೆ ಪೂರಕವೆಂಬಂತೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಘೋಷಣೆಯ ಪ್ರಕ್ರಿಯೆ ಚುರುಕು ಪಡೆದಿದೆ. ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಶಿವಪ್ರಕಾಶ್ ಮತ್ತು ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಪಾಂಡಾ ಆಯ್ದ ಪ್ರಮುಖರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಇನ್ನು ಇದೇ ವೇಳೆ ಉಸ್ತುವಾರಿ ಬದಲಾವಣೆ ಗುಟ್ಟು ಬಿಚ್ಚಿಟ್ಟಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರ ಘೋಷಣೆ ಪ್ರಕ್ರಿಯೆ ಚುರುಕು, ಮಹತ್ವದ ಬದಲಾವಣೆಯ ಸುಳಿವು ಕೊಟ್ಟ ಉಸ್ತುವಾರಿ
Karnataka Bjp
Edited By:

Updated on: May 21, 2026 | 10:29 PM

ಬೆಂಗಳೂರು, (ಮೇ 21): ಕರ್ನಾಟಕದಲ್ಲಿ (karnataka) ಮತ್ತೆ ಉಪಚುನಾವಣೆ ಮತ್ತು ಜಿಬಿಎ ಚುನಾವಣೆ ಎದುರಾಗುತ್ತಿರುವ ಹೊತ್ತಿನಲ್ಲೇ ರಾಜ್ಯ ನಾಯಕತ್ವ ವಿಚಾರದಲ್ಲಿ ಸ್ಪಷ್ಟತೆ ನೀಡಲು ಬಿಜೆಪಿ (BJP) ಮುಂದಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ಘೋಷಣೆಗೆ ಅಂತಿಮ ಪ್ರಕ್ರಿಯೆ ‌ಶುರುವಾಗಿದೆ. ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಶಿವಪ್ರಕಾಶ್ ಮತ್ತು ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಪಾಂಡಾ ಆಯ್ದ ಪ್ರಮುಖರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಬೆಂಗಳೂರಿನ ಬಿಜೆಪಿ ರಾಜ್ಯ ಕಚೇರಿಯಲ್ಲಿ ಮೊದಲು ಸಭೆ ನಡೆಸಿದ ಶಿವಪ್ರಕಾಶ್ ಮತ್ತು ಪಾಂಡಾ ನಂತರ ಆಯ್ದ ಮುಖಂಡರ ಜೊತೆ ಪ್ರತ್ಯೇಕ ಪ್ರತ್ಯೇಕವಾಗಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಇನ್ನು ರಾಜ್ಯ ಬಿಜೆಪಿಯಲ್ಲಿ ಮಹತ್ವ ಬದಲಾವಣೆಯಾಗುವ ಬಗ್ಗೆ ಉಸ್ತುವಾರಿ ರಾಧಾ ಮೋಹನ್ ಅಗರವಾಲ್ ಸುಳಿವು ಕೊಟ್ಟಿದ್ದಾರೆ.

ಮುಖ್ಯಾಂಶಗಳು

  • ಕರ್ನಾಟಕದಲ್ಲಿ ಬಿಜೆಪಿಯಲ್ಲಿ ಬೀಸಿತು ಬದಲಾವಣೆಯ ಗಾಳಿ
  • ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಘೋಷಣೆಯ ಪ್ರಕ್ರಿಯೆ ಚುರುಕು
  • ರಾಜ್ಯ ಬಿಜೆಪಿಯ ಆಯ್ದ ಪ್ರಮುಖರ ಅಭಿಪ್ರಾಯವನ್ನು ಆಲಿಸಿದ ವರಿಷ್ಠರು
  • ಕರ್ನಾಟಕ ಬಿಜೆಪಿಯಲ್ಲಿ ಮಹತ್ವ ಬದಲಾವಣೆ ಸುಳಿವು ಕೊಟ್ಟ ಉಸ್ತುವಾರಿ

ಸುಮಾರು 35 ಆಯ್ದ ಕೋರ್ ಕಮಿಟಿ ಸದಸ್ಯರು, ಸಂಸದರು, ಶಾಸಕರು ಮತ್ತು ರಾಜ್ಯ ಪದಾಧಿಕಾರಿಗಳಿಗೆ ಇಂದಿನ ಸಭೆಗೆ ವರಿಷ್ಠರಿಂದಲೇ ಆಹ್ವಾನ ನೀಡಲಾಗಿತ್ತು. ಎಲ್ಲರೂ ಒಟ್ಟಾಗಿ ಹೋಗಿ ಎನ್ನುವ ಮೂಲಕ ಸಭೆಯಲ್ಲಿ ಪರೋಕ್ಷವಾಗಿ ಹಾಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮುಂದುವರಿಕೆ ಬಗ್ಗೆ ಹೈಕಮಾಂಡ್ ನಾಯಕರ ಸುಳಿವು ನೀಡಿದ್ದಾರೆ. ಹಾಲಿ ರಾಜ್ಯಾಧ್ಯಕ್ಷರು ಮುಂದುವರಿಯಬೇಕೋ ಬೇಡವೋ, ಬದಲಾವಣೆ ಮಾಡುವುದಾದರೆ ಯಾರನ್ನು ಮಾಡಬೇಕು ಎಂದು ಅಭಿಪ್ರಾಯ ಸಂಗ್ರಹಿಸಲಾಗಿದೆ. ಇದಕ್ಕೆ ಪೂರಕವಾಗಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ಅಗರವಾಲ್ ಕೂಡಾ ಶೀಘ್ರ ರಾಜ್ಯಾಧ್ಯಕ್ಷರ ಘೋಷಣೆ ಮಾಡುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿ ಸೇರಿದ ರಾಜಣ್ಣ: ಹಿರಿಯೂರು ಕ್ಷೇತ್ರದ ಮೇಲೆ ಜೆಡಿಎಸ್ ಕಣ್ಣು, ಉಪಚುನಾವಣೆ ಅಖಾಡಕ್ಕೆ ರಂಗು

ಮಹತ್ವದ ಬದಲಾವಣೆ ಸುಳಿವು ಕೊಟ್ಟ ಉಸ್ತುವಾರಿ

ಪಕ್ಷದ ನಾಯಕರು ಏನು ಮಾಡುತ್ತಿದ್ದಾರೆ ಎಂದು ತಿಳಿಯಲು ದೆಹಲಿ ನಾಯಕರು ಇಲ್ಲಿಗೆ ಬರಬೇಕಾಗಿಲ್ಲ.
ನಾನೇ ಮಾಹಿತಿ ಕೊಡಬಹುದು. ನಾನು ಅಧ್ಯಕ್ಷರ ಕಾರ್ಯಕರ್ತ ಅಲ್ಲ, ಪಕ್ಷದ ಕಾರ್ಯಕರ್ತ. ಕೆಲವೇ ದಿನಗಳಲ್ಲಿ ಅಧ್ಯಕ್ಷರ ಹೆಸರು ಘೋಷಣೆ ಮಾಡುತ್ತೇವೆ . ಹೊಸ ಟೀಂ ಬರುತ್ತದೆ. ಕೆಲಸ ಮಾಡದವರು ಬದಲಾಗುತ್ತಾರೆ ಎಂದು ಹೇಳುವ ಮೂಲಕ ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬದಲಾವಣೆಯ ಸುಳಿವು ನೀಡಿದ್ದಾರೆ.

ಕೋರ್ ಕಮಿಟಿಯಲ್ಲಿ ಯಾರು ಇರುತ್ತಾರೆ ಎಂದು ಹೈಕಮಾಂಡ್ ತೀರ್ಮಾನ ಮಾಡುತ್ತದೆ.ಅಧ್ಯಕ್ಷ ಈಗ ಇರುವವರು ಅಧ್ಯಕ್ಷರು ಅಷ್ಟೇ. ಮುಂದುವರಿಕೆ, ಹೊಸಬರು ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನೌಕರರ ರೀತಿ ಯಾವುದೇ ಟೈಂ ಬಾಂಡ್ ಇರಲ್ಲ. ಈಗಿರುವ ಅಧ್ಯಕ್ಷ ಪವರ್ ಫುಲ್, ಹೊಸ ಅಧ್ಯಕ್ಷರಿಗೂ ಅಷ್ಟೇ ಪವರ್ ಇರುತ್ತದೆ. ಯಾರು ಅಧ್ಯಕ್ಷರಾಗುತ್ತಾರೋ ಅವರ ಅಧ್ಯಕ್ಷತೆಯಲ್ಲಿ ಮುಂದಿನ ಚುನಾವಣೆ ನಡೆಯುತ್ತದೆ. ಮೂರು ವರ್ಷದ ಅವಧಿ ಎಂದು ಇಲ್ಲ. ಗರಿಷ್ಠ ಎರಡು ಅವಧಿಗೆ ಆಯ್ಕೆ ಮಾಡಲು ಅವಕಾಶ ಇದೆ ಎಂದು ಸ್ಪಷ್ಟಪಡಿಸಿದರು.

ಇಂದಿನ ಅಭಿಪ್ರಾಯ ಸಂಗ್ರಹದಲ್ಲಿ ಬಹುತೇಕ ವಿಜಯೇಂದ್ರ ಪರವಾಗಿಯೇ ಸಲ್ಲಿಕೆಯಾಗಿದೆ ಎನ್ನಲಾಗಿದ್ದು, ಶೀಘ್ರದಲ್ಲೇ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಗೆ ವರದಿ ಸಲ್ಲಿಕೆಯಾಗಲಿದೆ. ಬಹುತೇಕ ಜೂನ್ ತಿಂಗಳಿನಲ್ಲಿ ಅಧ್ಯಕ್ಷ ಸ್ಥಾನದ ಘೋಷಣಾ ಪ್ರಕ್ರಿಯೆ ನಡೆಯುವ ನಿರೀಕ್ಷೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Kiran Haniyadka
Follow Us