
ಬೆಂಗಳೂರು, (ಮೇ 22): ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (chaluvadi narayanaswamy) ಅವರು ಸಚಿವ ಪ್ರಿಯಾಂಕ್ ಖರ್ಗೆ (priyank kharge )ಅವರನ್ನು ಶ್ವಾನಕ್ಕೆ ಹೋಲಿಸಿದ್ದರು. ಇದರಿಂದ ಆಕ್ರೋಶಗೊಂಡ ಪ್ರಿಯಾಂಕ್ ಖರ್ಗೆ ಅವರ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಚಿತ್ತಾಪೂರ ಪಟ್ಟಣದ ಪ್ರವಾಸಿ ಮಂದಿರದ ಎದರುಗಡೆ ಛಲವಾದಿ ನಾರಾಯಣಸ್ವಾಮಿಗೆ ಘೇರಾವ್ ಹಾಕಿದ್ದರು. ಅಲ್ಲದೇ ಅವರ ಕಾರಿನ ಮೇಲೆ ಬಣ್ಣ ಎರಚಿ, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನು ಬಿಜೆಪಿ ನಾಯಕರು ಖಂಡಿಸಿದ್ದು, ಇಂದು (ಮೇ 22) ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದರು. ತಕ್ಷಣ ಘಟನೆ ಸಂಬಂಧ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕು. ಅಲ್ಲದೇ ಸಚಿವ ಸ್ಥಾನದಿಂದ ಪ್ರಿಯಾಂಕ್ ಖರ್ಗೆ ಅವರನ್ನು ವಜಾ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾದ ಬಿಜೆಪಿ ನಿಯೋಗ, ಘಟನೆ ಸಂಬಂಧ ರಾಜ್ಯಪಾಲರು ತಕ್ಷಣ ಮಧ್ಯಪ್ರವೇಶ ಮಾಡಬೇಕು. ಸಚಿವ ಸ್ಥಾನದಿಂದ ಪ್ರಿಯಾಂಕ್ ಖರ್ಗೆಯನ್ನು ವಜಾ ಮಾಡಬೇಕು. ಅಲ್ಲದೇ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಮನವಿ ಪತ್ರ ನೀಡಿದರು. ಈ ವೇಳೆ ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್, ಚಲುವಾದಿ ನಾರಾಯಣಸ್ವಾಮಿ, ರವಿಕುಮಾರ್, ಅಶ್ವತ್ಥ್ ನಾರಾಯಣ ಸೇರಿದಂತೆ ಇತರರು ಇದ್ದರು.
ಇದೇ ವೇಳೆ ಮಾಧ್ಯಮಗಳಿಗೆ ಪ್ರತಕಿಕ್ರಿಯಿಸಿದ ಅಶೋಕ್, ನಿನ್ನೆ ಚಾರ್ಜ್ ಶೀಟ್ ಬಿಡುಗಡೆ ಮಾಡಿ ಕಲಬುರಗಿ ಕಾರ್ಯಕ್ರಮಕ್ಕೆ ಛಲವಾದಿ ನಾರಾಯಣಸ್ವಾಮಿ ಹೋಗಿದ್ದು, ಪರಿಷತ್ ವಿಪಕ್ಷ ನಾಯಕ ಸರ್ಕಾರವನ್ನು ಪ್ರಶ್ನೆ ಮಾಡುತ್ತಾರೆ. ಛಲವಾದಿ ನಾರಾಯಣಸ್ವಾಮಿಗೆ ಕಾರ್ಯಕ್ರಮಕ್ಕೆ ಹೋಗಲು ಅವಕಾಶ ಕೊಡಲಿಲ್ಲ. ಸತತ ಐದು ಗಂಟೆಗಳ ಕಾಲ ಛಲವಾದಿ ನಾರಾಯಣಸ್ವಾಮಿ ಅವರನ್ನು ಲಾಕ್ ಮಾಡಿದ್ದರು. ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದಾರೆ. ಪ್ರಿಯಾಂಕ್ ಖರ್ಗೆ ಇದರ ಹಿಂದೆ ಇದ್ದಾರೆ. ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿದ್ದೇವೆ ಎಂದರು.
ಯಾರೆಲ್ಲಾ ಗೂಂಡಾಗಳು ಇದ್ದಾರೋ ಅವರ ಮೇಲೆ ದೂರು ತೆಗೆದುಕೊಳ್ಳಲು ಮನವಿ ಮಾಡಿದ್ದೇವೆ. ಕಾಂಗ್ರೆಸ್ ಗೂಂಡಾಗಳು ಐದು ಗಂಟೆಗಳ ಕಾಲ ಛಲವಾದಿ ನಾರಾಯಣಸ್ವಾಮಿ ಅವರನ್ನು ಕೂಡಿ ಹಾಕಿದ್ದರು. ಅಲ್ಲದೇ ಮುಗಿಸಿ ಹಾಕುತ್ತೇವೆ ಅಂತ ಆವಾಜ್ ಹಾಕಿದ್ದರು. ಅವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದಾರೆ. ನಾರಾಯಣ ಸ್ವಾಮಿ ಮೇಲಿನ ಹಲ್ಲೆಗೆ ಪೊಲೀಸರು ಏನೂ ಮಾಡಲಿಕ್ಕಾಗದ ಸ್ಥಿತಿ ಇತ್ತು. ಅವಾಚ್ಯ ಶಬ್ಧಗಳಿಂದ ಅವರನ್ನು ಬೈದು ಅವಮಾನಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಅವರಿಗೆ ಛಲವಾದಿ ಆಡಿರುವ ಪದ ಅವಾಚ್ಯ ಅನ್ನಿಸಿದ್ದರೆ ಕೋರ್ಟಿಗೆ ಹೋಗಬೇಕಿತ್ತು. ಕಾಂಗ್ರೆಸ್ ರಾಜ್ಯದಲ್ಲಿ ಗೂಂಡಾಗಿರಿ ಮಾಡುತ್ತಿದೆ. ಇದರ ಹಿಂದೆ ಪ್ರಿಯಾಂಕ್ ಖರ್ಗೆ ಇದ್ದಾರೆ ಎಂದು ಆರೋಪಿಸಿದರು.
ಇನ್ನು ಇದೇ ವೇಳೆ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ನರೇಂದ್ರ ಮೋದಿಗೆ ಕಾಂಗ್ರೆಸ್ ನಿಂದನೆ ಮಾಡುತ್ತಿದ್ದಾರಲ್ಲವೇ ಎನ್ನುವ ಪ್ರಶ್ನೆ ಬಂದಾಗ ನಾನು ಒಂದು ಗಾದೆ ಹೇಳಿದೆ. ಆನೆ ಏರಿ ಹೊರಟರೇನೂ ಶ್ವಾನ ಬೊಗಳದಿರೇನೂ ಕಚ್ಚುವುದೇ. ಇದು ಬಸವಣ್ಣನ ವಚನ/. ಆದರೆ ಪ್ರಿಯಾಂಕ್ ಖರ್ಗೆ ತನ್ನನ್ನೇ ನಾಯಿ ಎಂದರು ಎಂದು ಗೂಂಡಾಗಳನ್ನು ಕಳಿಸಿದರು. ಅವರು ನನ್ನನ್ನು ಹುಡುಕಿಕೊಂಡು ಬಂದಿದ್ದಾರೆ. ನನಗೆ ಪ್ರಾಣ ಬೆದರಿಕೆ ಇದೆ. ನನಗೆ ಏನಾದರೂ ಆದರೆ ಇದಕ್ಕೆ ಸರ್ಕಾರ, ಪ್ರಿಯಾಂಕ್ ಖರ್ಗೆಯೇ ಕಾರಣ ಎಂದರು.
ನನ್ನ ಮೇಲೆ ಪಿತೂರಿ ನಡೆಯುತ್ತಿದೆ. ನನ್ನನ್ನು ನಿನ್ನೆ ನಾಲ್ಕೈದು ಕಾರಿನಿಂದ ಹಿಂಬಾಲಿಸಿದ್ದಾರೆ. ಚಿತ್ತಾಪುರದಲ್ಲಿ ಒಂದು ಸಮಾರಂಭ ಇತ್ತು. ಬೇಗ ಹೋಗಿರುವ ಕಾರಣಕ್ಕೆ ಐಬಿಯಲ್ಲಿ ರೆಸ್ಟ್ ಮಾಡೋಣ ಅಂತ ಹೋಗಿದ್ದೆ. ಎಲ್ಲರೂ ಗೂಂಡಾಗಳು ಬಂದಿದ್ದರು, ನೂರಕ್ಕೂ ಹೆಚ್ಚು ಪೊಲೀಸರು ಇದ್ದರು. ಹೋಮ್ ಮಿನಿಸ್ಟರ್, ಪೊಲೀಸರಿಗೆ ಮಾತಾಡಿದ್ದೇನೆ. ನಮಗೆ ಅವಾಚ್ಯ ಪದಗಳಿಂದ ನಿಂದನೆ ಮಾಡಿ ಬಂಧನದಲ್ಲಿ ಇಟ್ಟಿದ್ದರು ಎಂದು ಆರೋಪಿಸಿದ್ದಾರೆ.
ನನಗೆ ನಿಜವಾಗಿಯೂ ಪ್ರಾಣ ಬೆದರಿಕೆ ಇದೆ. ನನಗೆ ಏನೇ ಆದರೂ ಅದಕ್ಕೆ ಪ್ರಿಯಾಂಕ ಖರ್ಗೆ ಕುಟುಂಬ ಕಾರಣ . ನನ್ನನ್ನು ಸಂಪೂರ್ಣವಾಗಿ ಮುಗಿಸಲು ಪ್ಲಾನ್ ಮಾಡಿದ್ದಾರೆ. ಡಿಜಿಪಿ ಹಾಗೂ ಹೋಮ್ ಮಿನಿಸ್ಟರ್, ಸಿಎಂಗೆ ದೂರು ಕೊಡುತ್ತೇವೆ. ಐದು ಗಂಟೆಗಳ ಕಾಲ ನನ್ನನ್ನು ಕೆಲಸದಿಂದ ತಡೆದಿದ್ದಾರೆ. ನಾನು ಐಬಿಯಿಂದ ಹೊರ ಬಂದಾಗ ಗೂಂಡಾಗಳೇ ಇದ್ದರು. ಕಂಠಪೂರ್ತಿ ಕುಡಿದು ಬಂದಿದ್ದರು . ಮೊಟ್ಟೆಗಳನ್ನು, ಕಲ್ಲುಗಳನ್ನು ಇಂಕ್ ತಂದಿದ್ದರು. ಪೊಲೀಸರು ಸಹಕರಿಸಿ ಸರ್ ಅಂತಿದ್ದರು, ಏನು ಸಹಕರಿಸುವುದು? ಬಂದ ಗೂಂಡಾಗಳನ್ನು ನೂರಕ್ಕೂ ಹೆಚ್ಚು ಇದ್ದ ಪೊಲೀಸರು ಕಳಿಸಲು ಆಗಲಿಲ್ಲ. ಪೊಲೀಸ್ ಅಧಿಕಾರಿಗಳು ತುಂಬಾ ಜನ ಇದ್ದರೂ ನನ್ನನ್ನು ಹೊರಗೆ ಕಳಿಸಲಿಲ್ಲ. ಅವರಿಗಿಂತ ಇವರೇ ನನ್ನನ್ನು ಬಂಧನದಲ್ಲಿಟ್ಟಿದ್ದರು ಎಂದರು ಹೇಳಿದರು.
ನನಗೆ ಮಾರಣಾಂತಿಕ ಹಲ್ಲೆ ಮಾಡಲು ಮುಂದಾಗಿದ್ದರು. ನಮ್ಮ ಮಾಜಿ ಜಿಲ್ಲಾಧ್ಯಕ್ಷರ ಮೇಲೆ ಹಲ್ಲೆ ಮಾಡಿ 3 ಗಂಟೆವರೆಗೆ ಕೂಡಿ ಹಾಕಿದ್ದಾರೆ. ನಾನು ಅಮಿತ್ ಶಾ ಅವರಿಗೂ ಪತ್ರ ಬರೆಯುತ್ತೇನೆ. ತಕ್ಷಣ ಪ್ರಿಯಾಂಕ್ ಖರ್ಗೆಯವರನ್ನು ಸಿಎಂ ಸಂಪುಟದಿಂದ ಹೊರಗೆ ಹಾಕಬೇಕು. ನನಗೆ ಪ್ರಿಯಾಂಕ್ ಖರ್ಗೆಯಿಂದ ಪ್ರಾಣ ಬೆದರಿಕೆ ಇದೆ. ನನ್ನ ಪ್ರಾಣಕ್ಕೆ ಏನಾದರೂ ಆದ್ರೆ ಪ್ರಿಯಾಂಕ್ ಕಾರಣ. ನನ್ನನ್ನು ಮುಗಿಸುವ ಸಂಚು ಮಾಡಿದ್ದಾರೆ. ಅವರ ಸೈಟ್ ಪ್ರಕರಣ ಬಯಲಿಗೆ ತಂದ ನನ್ನ ವಿರುದ್ಧ ಪಿತೂರಿ ಮಾಡಿದ್ದಾರೆ. ಸಿದ್ದರಾಮಯ್ಯ ಕಾರಿಗೆ ಕೊಡಗಿನಲ್ಲಿ ಮೊಟ್ಟೆ ಬಿಸಾಕಿದಾಗ ಅವರು ಎಷ್ಟು ಮಾತಾಡಲಿಲ್ಲ? ಈಗ ಸಿದ್ದರಾಮಯ್ಯ ಯಾಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:10 pm, Thu, 22 May 25