ಜಾತಿಗಣತಿ ಅಸ್ತ್ರಕ್ಕೆ ಬಿಜೆಪಿಯಿಂದ ಒಳ ಮೀಸಲಾತಿ ಬ್ರಹ್ಮಾಸ್ತ್ರ: ಒಳಮೀಸಲಾತಿ ಜಾರಿಗೆ ಒತ್ತಾಯಿಸಲು ಬಿಜೆಪಿ ನಿರ್ಧಾರ
ಮುಡಾ ಹಗರಣದ ಸಂಕಷ್ಟದ ಮಧ್ಯೆಯೇ ಜಾತಿ ಗಣತಿ ಅಸ್ತ್ರ ಪ್ರಯೋಗಿಸಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಒಳ ಮೀಸಲಾತಿ ಬ್ರಹ್ಮಾಸ್ತ್ರದ ಮೂಲಕ ತಿರುಗೇಟು ನೀಡಲು ಪ್ರತಿಪಕ್ಷ ಬಿಜೆಪಿ ಮುಂದಾಗಿದೆ.ಕಾಂಗ್ರೆಸ್ ಪಾಳೆಯವನ್ನು ಜಾತಿವ್ಯೂಹದಲ್ಲಿ ಸಿಲುಕಿಸಲು ಬಿಜೆಪಿ ಮುಂದಾಗಿರುವ ಬಗ್ಗೆ ಇಲ್ಲಿದೆ ವಿವರ.
ಬೆಂಗಳೂರು, ಅಕ್ಟೋಬರ್ 9: ಕರ್ನಾಟಕ ರಾಜಕೀಯದಲ್ಲಿ ಈಗ ಜಾತಿಯೇ ಅಸ್ತ್ರವಾಗಿದೆ. ಮುಡಾ ಹಗರಣ ಮರೆ ಮಾಚಲು ಜಾತಿಗಣತಿ ಮುನ್ನಲೆಗೆ ತಂದಿದ್ದಾರೆಂದು ಕಾಂಗ್ರೆಸ್ ನಾಯಕರನ್ನು ಆರೋಪಿಸುತ್ತಿದ್ದ ಬಿಜೆಪಿ ಇದೀಗ ಬ್ರಹ್ಮಾಸ್ತ್ರವೊಂದನ್ನ ಪ್ರಯೋಗಿಸಿದೆ. ಜಾತಿಗಣತಿ ವರದಿ ಮಂಡನೆ ಕುರಿತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲು ಸರ್ಕಾರ ನಿರ್ಧರಿಸಿದೆ. ಇದೇ ವೇಳೆ ಒಳ ಮೀಸಲಾತಿಯನ್ನೂ ಜಾರಿ ಮಾಡುವಂತೆ ಒತ್ತಡ ಹಾಕಲು ಬಿಜೆಪಿ ಮಾಸ್ಟರ್ ಪ್ಲ್ಯಾನ್ ಮಾಡಿದೆ.
ಈ ವಿಚಾರವಾಗಿ ಮಂಗಳವಾರ ಸಭೆ ನಡೆಸಿದ್ದ ಬಿಜೆಪಿ ನಾಯಕರು, ಎರಡ್ಮೂರು ದಿನಗಳಲ್ಲಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ಮನವಿ ಸಲ್ಲಿಸಿಲು ನಿರ್ಧರಿಸಿದ್ದಾರೆ. ಈ ಮೂಲಕ ಜಾತಿಗಣತಿ ಕೈಗೆತ್ತಿಕೊಂಡಿರುವ ಕಾಂಗ್ರೆಸ್ ಪಡೆಯನ್ನ ಜಾತಿವ್ಯೂಹದಲ್ಲಿ ಸಿಲುಕಿಸಲು ಕೌಂಟರ್ ಪ್ಲ್ಯಾನ್ ಮಾಡಿದ್ದಾರೆ.
ಜಾತಿಗಣತಿ ಬಗ್ಗೆ ಕಾಂಗ್ರೆಸ್‌ನಲ್ಲೇ ಭಿನ್ನರಾಗ
ಈ ಮಧ್ಯೆ, ಜಾತಿಗಣತಿ ವರದಿ ತಯಾರಿಕೆ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಕಾಂಗ್ರೆಸ್ ಶಾಸಕ ಎಸ್‌ಆರ್ ಶ್ರೀನಿವಾಸ್, ವರದಿ ಹೇಗೆ ತಯಾರಿಸಿದ್ದಾರೋ ಏನೋ ಎಂದು ಹೇಳಿದ್ದಾರೆ. ಹೀಗಾಗಿ ಎಲ್ಲರ ಜೊತೆ ಚರ್ಚಿಸಿ ಕ್ಯಾಬಿನೆಟ್ ಮುಂದೆ ತರಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಾತಿಗಣತಿ ಜಾರಿಗೆ ಕಾಂಗ್ರೆಸ್‌ನಲ್ಲಿ ಪರ-ವಿರೋಧದ ಅಲೆ ಎದ್ದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಸತೀಶ್ ಜಾರಕಿಹೊಳಿ, ಜಿ ಪರಮೇಶ್ವರ ಹಾಗೂ ಇತರರು, ವರದಿಯಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ಹೀಗಾಗಿ ಪರ-ವಿರೋಧ ಇರುವುದು ಸಹಜ. ಕ್ಯಾಬಿನೆಟ್‌ನಲ್ಲಿ ಚರ್ಚೆಯಾಗಲಿ ಎಂದಿದ್ದಾರೆ.
ಇದನ್ನೂ ಓದಿ: ಮುಡಾ ಸಂಕಷ್ಟದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಬೆನ್ನಿಗೆ ನಿಂತ ಡಿಕೆ ಸಹೋದರರು! ಧಿಢೀರ್ ವರಸೆ ಬದಲಿಸಲು ಇದೆ ಬಲವಾದ ಕಾರಣ
ಒಟ್ಟಿನಲ್ಲಿ ಜಾತಿಗಣತಿ ವಿಚಾರ ಕ್ಲೈಮ್ಯಾಕ್ಸ್ ಹಂತಕ್ಕೆ ಬರುತ್ತಿದೆ. ಕ್ಯಾಬಿನೆಟ್‌ನಲ್ಲಿ ಚರ್ಚೆಯಾದ ಬಳಿಕ ಸರ್ಕಾರದ ಮೇಲೆ ಒಳಮೀಸಲಾತಿಯ ಬಲೆ ಬೀಳುವ ಸಾಧ್ಯತೆ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ