Karnataka Breaking News Highlights: ಬೆಂಗಳೂರಿನಲ್ಲಿ ವಿದ್ಯುತ್ ತಂತಿ ತಗುಲಿ ತಾಯಿ-ಮಗು ಸಾವಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ನೇರ ಹೊಣೆ ಅಂತಾ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ. ಬೆಂಗಳೂರಿನ ಕೆ.ಆರ್.ಸರ್ಕಲ್ನಲ್ಲಿಂದು ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಲಿದ್ದು, ಪೊರಕೆ ಚಳವಳಿ ಮೂಲಕ ಇಂಧನ ಸಚಿವರ ರಾಜೀನಾಮೆಗೆ ಆಗ್ರಹಿಸಲಿದ್ದಾರೆ. ಬೆಸ್ಕಾಂ ಕಚೇರಿ ಎದುರು ಪೊರಕೆ ಚಳವಳಿ ನಡೆಸಲಿರುವ ವಾಟಾಳ್ ನಾಗರಾಜ್, ದುರಂತದ ಬಗ್ಗೆ ಹೈಕೋರ್ಟ್ ಸಿಜೆ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಇನ್ನು ಮತ್ತೊಂದೆಡೆ ನಿಗಮ ಮಂಡಳಿಗೆ ನೇಮಕಾತಿ ಪ್ರಕ್ರಿಯೆ ಸಂಬಂಧ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ನಡೆಸಲಾದ ಸಭೆ ಮುಕ್ತಾಯವಾಗಿದೆ. ನ.30ರಂದು ತೆಲಂಗಾಣದ 119 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಹಿನ್ನೆಲೆ ಬಿಜೆಪಿ ಸ್ಟಾರ್ ಪ್ರಚಾರಕ ಬಿ.ಎಸ್.ಯಡಿಯೂರಪ್ಪ ಅವರು ಜಹೀರಾಬಾದ್ನಲ್ಲಿಂದು ಚುನಾವಣಾ ಪ್ರಚಾರ ಮಾಡಲಿದ್ದಾರೆ. ಇದೆಲ್ಲದರ ಜೊತೆಗೆ ರಾಜ್ಯದ ಪ್ರಮುಖ ಸುದ್ದಿಗಳ ಮಾಹಿತಿಗಾಗಿ ಟಿವಿ9 ಡಿಜಿಟಲ್ ಲೈವ್ ಫಾಲೋ ಮಾಡಿ.
ಗೃಹಜ್ಯೋತಿ ಯೋಜನೆ ಪ್ರಗತಿ ಪರಿಶೀಲನೆ ನಡೆಸಿದ ಸಿಎಂ ಸಿದ್ದರಾಮಯ್ಯ, ಗೃಹಜ್ಯೋತಿ ಯೋಜನೆಯಡಿ ಈವರೆಗೆ 1.62 ಕೋಟಿ ಜನರು ನೋಂದಣಿ ಮಾಡಿದ್ದಾರೆ. 1.50 ಕೋಟಿ ಕುಟುಂಬಗಳಿಗೆ ಗೃಹಜ್ಯೋತಿ ಯೋಜನೆ ಸೌಲಭ್ಯ ಸಿಗುತ್ತಿದೆ. ಆಗಸ್ಟ್ ತಿಂಗಳಿನಿಂದ ಸರ್ಕಾರ ಈವರೆಗೆ 2900 ಕೋಟಿ ರೂ. ಭರಿಸಿದೆ ಎಂದು ಹೇಳಿದ್ದಾರೆ.
ಗೃಹಲಕ್ಷ್ಮೀ ಯೋಜನೆ ಪ್ರಗತಿ ಪರಿಶೀಲನೆ ನಡೆಸಿದ ಸಿಎಂ ಸಿದ್ದರಾಮಯ್ಯ, ನವೆಂಬರ್ ತಿಂಗಳವರೆಗೆ 1.17 ಕೋಟಿ ಫಲಾನುಭವಿಗಳ ನೋಂದಣಿ ಮಾಡಲಾಗಿದೆ. ಈವರೆಗೆ 1.10 ಕೋಟಿ ಫಲಾನುಭವಿಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ. 2 ಲಕ್ಷ ಫಲಾನುಭವಿಗಳಿಗೆ ಸಂಬಂಧಿಸಿದ ತೊಡಕು ನಿವಾರಿಸಲಾಗುತ್ತಿದೆ. ಬ್ಯಾಂಕ್ ಖಾತೆ ಮಾಹಿತಿಯಲ್ಲಿ ಗೊಂದಲ, ಆಧಾರ್ ಲಿಂಕ್ ಆಗದಿರುವುದು ಹಲವು ಕಾರಣಗಳಿಂದ ಫಲಾನುಭವಿಗಳಿಗೆ ಹಣ ವರ್ಗಾವಣೆಗೆ ತೊಡಕಾಗಿದೆ. ಫಲಾನುಭವಿಗಳನ್ನು ಬ್ಯಾಂಕ್ಗೆ ಕರೆದೊಯ್ದು ಸಮಸ್ಯೆ ಬಗೆಹರಿಸಲಾಗುತ್ತಿದೆ ಎಂದಿದ್ದಾರೆ.
ಬೆಳೆ ಸಮೀಕ್ಷೆಯಲ್ಲಿ ಕರ್ತವ್ಯಲೋಪ ಎಸಗಿದ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಚನ್ನಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕೆ.ಪಿ.ಮಾನೆ ಅಮಾನತಾದ ಅಧಿಕಾರಿ. ದೂದಿಹಳ್ಳಿ ಗ್ರಾಮದ ಬೆಳೆ ಅಂದಾಜು ಸಮೀಕ್ಷೆಯಲ್ಲಿ ಕರ್ತವ್ಯಲೋಪವೆಸಗಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬರೊಬ್ಬರಿ 130 ಕ್ಕೂ ಅಧಿಕ ಸೀಟ್ಗಳನ್ನು ಗೆದ್ದು ಆಡಳಿತ ಚುಕ್ಕಾಣಿಯನ್ನು ಹಿಡಿದಿದೆ. ಇನ್ನು ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್, 5 ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿತ್ತು. ಬಳಿಕ ಅಧಿಕಾರ ಹಿಡಿದ ಬಳಿಕ, ಹಂತ ಹಂತವಾಗಿ ಒಂದೊಂದೆ ಯೋಜನೆಗಳನ್ನು ಜಾರಿ ಮಾಡಿತ್ತು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು(ನ.22) ನಾಲ್ಕು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಕುರಿತಂತೆ ಸಂಬಂಧಿಸಿದ ಇಲಾಖೆಗಳ ಜೊತೆ ಸಭೆ ನಡೆಸಲಾಗಿದೆ.
ನಾಲ್ಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಗತಿ ಕುರಿತು ಸಿಎಂ ಅಧ್ಯಕ್ಷತೆಯಲ್ಲಿ ಸಭೆ;ಇಲ್ಲಿದೆ ವಿವರ
ತಮ್ಮ ಅನುಕೂಲಕ್ಕೆ ತಕ್ಕಂತೆ ಜಾತಿಗಣತಿ ವರದಿ ಮಾಡುತ್ತಿದ್ದಾರೆ ಎಂದು ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದಲ್ಲಿ ಜೆಡಿಎಸ್ ಶಾಸಕ ಎ.ಮಂಜು ಹೇಳಿದ್ದಾರೆ. ಮೊದಲು ಸದಾಶಿವ ವರದಿ ಜಾರಿಗೆ ಒಂದು ವರ್ಗ ವಿರೋಧಿಸಿತ್ತು. ಎಲ್ಲಾ ವರ್ಗದಲ್ಲೂ ಬಡವರು, ಶ್ರೀಮಂತರರು ಇದ್ದಾರೆ ಎಂದಿದ್ದಾರೆ.
ಜಾತಿಗಣತಿ ವರದಿ ಬಗ್ಗೆ ಸರ್ಕಾರ ಏನು ನಿರ್ಧಾರ ಮಾಡುತ್ತೋ ನೋಡೋಣ ಎಂದು ಬೀದರ್ನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಜಾತಿಗಣತಿ ವರದಿ ಬಗ್ಗೆ ಸ್ಪಷ್ಟವಾಗಿ ಏನೂ ಹೇಳುವುದಕ್ಕೆ ಇಷ್ಟಪಡುವುದಿಲ್ಲ. ಜನರ ಅಭಿಪ್ರಾಯ ಪಡೆದು ಮುಂದಿನ ನಡೆ ಬಗ್ಗೆ ತೀರ್ಮಾನ ಮಾಡ್ತೇವೆ. ಜಾತಿಗಣತಿ ವರದಿಗೆ ವೀರಶೈವ ಲಿಂಗಾಯತ, ಒಕ್ಕಲಿಗರ ವಿರೋಧವಿದೆ ಎಂದು ಹೇಳಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್ಗೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಸರ್ಕಾರದ ಸಮ್ಮತಿ ಪ್ರಶ್ನಿಸಿದ್ದ ಮೇಲ್ಮನವಿ ವಿಚಾರಣೆ ಡಿ.ಕೆ.ಶಿವಕುಮಾರ್, ಸಿಬಿಐ ವಕೀಲರ ಮನವಿ ಮೇರೆಗೆ ಮುಂದೂಡಲಾಗಿದೆ. ವಾದ ಮಂಡನೆಗಾಗಿ ವಿಚಾರಣೆಯನ್ನು ನ.29ಕ್ಕೆ ಹೈಕೋರ್ಟ್ ನಿಗದಿಪಡಿಸಿದೆ. ಸಿಬಿಐ ತನಿಖೆಗೆ ಸರ್ಕಾರದ ಅನುಮತಿಯನ್ನು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಪೋಸ್ಟರ್ ಅಂಟಿಸಿದ ವಿಚಾರವಾಗಿ ಕಾಂಗ್ರೆಸ್ ಮುಖಂಡ ಎಸ್.ಮನೋಹರ್ ವಿರುದ್ಧ ಬೆಂಗಳೂರು ಪೊಲೀಸ್ ಆಯುಕ್ತರಿಗೆ JDS ಮುಖಂಡರು ದೂರು ನೀಡಿದ್ದಾರೆ. JDS ಕಚೇರಿ, ಕುಮಾರಸ್ವಾಮಿ ನಿವಾಸದ ಬಳಿ ಪೋಸ್ಟರ್ ಅಂಟಿಸಿದ್ದಾನೆ ಎಂದು ಎಸ್.ಮನೋಹರ್ ವಿರುದ್ಧ ಮಾಜಿ ಎಂಎಲ್ಸಿ ರಮೇಶ್ ಗೌಡ ವಾಗ್ದಾಳಿ ಮಾಡಿದ್ದಾರೆ.
ಯಡಿಯೂರಪ್ಪ ಪುತ್ರ ಅಂತಾ ಹೈಕಮಾಂಡ್ ನನಗೆ ಜವಾಬ್ದಾರಿ ಕೊಟ್ಟಿಲ್ಲ. ನನ್ನ ಕೆಲಸ ಗುರುತಿಸಿ ಜವಾಬ್ದಾರಿಯನ್ನು ಕೊಟ್ಟಿದೆ ಎಂದು ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಯಡಿಯೂರಪ್ಪ, ಅನಂತಕುಮಾರ್ ಸೇರಿ ಹಲವರಿಂದ ಪಕ್ಷ ಬೆಳೆದಿದೆ. ಮೋದಿ ಮತ್ತೆ ಪ್ರಧಾನಿ ಆಗೋದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಜಾತಿಗಣತಿ ವರದಿ ಮರು ಪರಿಶೀಲನೆ ಮಾಡಬೇಕೆಂಬುದು ನಮ್ಮೆಲ್ಲರ ಅಭಿಪ್ರಾಯ ಎಂದು ಬೀದರ್ನಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ. ಒಕ್ಕಲಿಗ ಸಮುದಾಯದ ಶ್ರೀಗಳು,ಮುಖಂಡರು ಸಹಿ ಮಾಡಿದ್ದಾರೆ. ಆ ಪತ್ರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹಿ ಇತ್ತು. ಸಚಿವ ಸುಧಾಕರ್ ಕೂಡ ಸಹಿ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಹೈಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಡಿಸೆಂಬರ್ 23ರಂದು 545 ಪಿಎಸ್ಐ ಹುದ್ದೆಗಳಿಗೆ ಮರುಪರೀಕ್ಷೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ದಿನಾಂಕ ಪ್ರಕಟಣೆ ಮಾಡಿದೆ.
ಜಾತಿಗಣತಿ ವರದಿ ಬಗ್ಗೆ ಬಿಜೆಪಿಯಿಂದ ಯಾವುದೇ ವಿರೋಧ ಇಲ್ಲ ಎಂದು ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು. ರಾಜಕೀಯ ಉದ್ದೇಶಕ್ಕಾಗಿ ದುರುಪಯೋಗಪಡಿಸಿಕೊಳ್ಳಬಾರದು. ಕಾಂಗ್ರೆಸ್ ಸರ್ಕಾರದ ಈ ರೀತಿಯ ನಡೆ ಬಿಜೆಪಿ ಖಂಡಿತ ಒಪ್ಪಲ್ಲ. ಜಾತಿಗಣತಿ ಬಗ್ಗೆ ಬಿಜೆಪಿಯ ನಿಲುವು ಸ್ಪಷ್ಟವಿದೆ. ಸಿದ್ದರಾಮಯ್ಯ ಈ ಹಿಂದೆ ಸಿಎಂ ಆಗಿದ್ದಾಗ ಪ್ರಕ್ರಿಯೆ ಮುಗಿದಿತ್ತು. ಆದರೆ ಸ್ಪಷ್ಟ ನಿಲುವನ್ನು ತೆಗೆದುಕೊಳ್ಳಲು ಯಾಕೆ ಸಾಧ್ಯ ಆಗಿಲ್ಲ. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಸ್ತಾಪ ಮಾಡ್ತಿದ್ದಾರೆ. ತಯಾರಾಗಿರುವ ಕಾಂತರಾಜು ವರದಿ ಬಗ್ಗೆ ಮಾಹಿತಿ ತೆಗೆದುಕೊಂಡಿಲ್ಲ. ಒಳಜಾತಿ ಪಕ್ಕಕ್ಕಿಟ್ಟು ಅವರಿಗೆ ಅನುಕೂಲ ಆಗುವ ವರದಿ ನೀಡಿದ್ದಾರೆ. ಸದ್ಯ ಈ ರೀತಿಯ ಚರ್ಚೆ ನಡೆಯುತ್ತಿದೆ ಎಂದರು.
ಐದಾರು ತಿಂಗಳಲ್ಲೇ ಕಾಂಗ್ರೆಸ್ ಸರ್ಕಾರ ಜನಪ್ರಿಯತೆ ಕಳೆದುಕೊಂಡಿದೆ ಎಂದು ಮಂಗಳೂರಿನಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ವಿಜಯೇಂದ್ರ ಹೇಳಿದರು. ಇದು ರೈತ ವಿರೋಧಿ ಸರ್ಕಾರ, ಬರಗಾಲ ಇದ್ದರೂ ಜವಾಬ್ದಾರಿ ಇಲ್ಲ. ಮುಖ್ಯಮಂತ್ರಿ ಹಾಗೂ ಮಂತ್ರಿಮಂಡಲ ಸಂಪೂರ್ಣ ವಿಫಲವಾಗಿದೆ. ಒಬ್ಬ ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಬರ ಪ್ರವಾಸ ಮಾಡಿಲ್ಲ. ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡುತ್ತೆ ಅಂತಾ ಭಾವಿಸಿದ್ದೆವು. ಆದರೆ ನಿನ್ನೆ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಬೇರೆ ಚರ್ಚೆ ಆಗಿದೆ. ಬರದ ಬದಲು ಲೋಕಸಭಾ ಚುನಾವಣೆ ಗೆಲ್ಲುವ ಬಗ್ಗೆ ಚರ್ಚೆ ಆಗಿದೆ ಎಂದು ಕಾಂಗ್ರೆಸ್ ವಿರುದ್ಧ ವಿಜಯೇಂದ್ರ ವಾಗ್ದಾಳಿ ನಡೆಸಿದರು.
ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಬಳಿ ಇರುವ ಹಿರಿಯ ನಟಿ ಲೀಲಾವತಿ ತೋಟದ ಗೇಟ್ ಬಳಿ ಚಿರತೆ ಪ್ರತ್ಯಕ್ಷವಾಗಿದೆ. ನಿನ್ನೆ ರಾತ್ರಿ 10.30ರ ಸುಮಾರಿಗೆ ಚಿರತೆ ಕಾಣಿಸಿಕೊಂಡಿದೆ. ಸೋಲದೇವನಹಳ್ಳಿ, ಬಾಣಸವಾಡಿ, ಆಗಳಗುಪ್ಪೆ, ಚೋಡಸಂದ್ರ, ಹಂದಿಗುಟ್ಟೆ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದ್ದು ಚಿರತೆ ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಡಿಸೆಂಬರ್ 4ರಿಂದ ಬೆಳಗಾವಿ ಅಧಿವೇಶನ
ನವೆಂಬರ್ 25ರಂದು ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಹೆಚ್ಎಎಲ್ ಏರ್ಪೋರ್ಟ್ಗೆ ಆಗಮಿಸಲಿರುವ ಪ್ರಧಾನಿ ಮೋದಿ HAL ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕಾರ್ಯಕ್ರಮದ ಬಳಿಕ ತೆಲಂಗಾಣಕ್ಕೆ ತೆರಲಿ ತೆಲಂಗಾಣ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ.
ಜಾತಿ ಗಣತಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಆಗುತ್ತೆ. ಜಾತಿಗಣತಿ ವರದಿ ಬಿಡುಗಡೆ ಬಗ್ಗೆ ನಾನು ಏನೂ ಹೇಳಲು ಹೋಗಲ್ಲ ಎಂದು ಶಿವಮೊಗ್ಗದಲ್ಲಿ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ. ನಿಗಮ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರ ನೇಮಕ ಮಾಡಲೇಬೇಕು. ಶಾಸಕರಿಗೆ ನಿಗಮ ಮಂಡಳಿ ಸ್ಥಾನ ಕೊಡುವುದರಲ್ಲಿ ತಪ್ಪೇನು ಇಲ್ಲ. ಕಾರ್ಯಕರ್ತರಿಗೂ ನಿಗಮ ಮಂಡಳಿಯಲ್ಲಿ ಅವಕಾಶ ಕೊಡ್ತಾರೆ ಎಂದರು.
ಬಾಯ್ಲರ್ ಬೆಲ್ಟ್‌ಗೆ ಸಿಲುಕಿ ಕಾರ್ಮಿಕ ರಾಕೇಶ್(22) ಮೃತಪಟ್ಟ ಘಟನೆ ಮಂಡ್ಯದ ಮೈಶುಗರ್ ಕಾರ್ಖಾನೆಯಲ್ಲಿ ನಡೆದಿದೆ. ಇತ್ತೀಚೆಗಷ್ಟೇ ಕೆಲಸಕ್ಕೆ ಸೇರಿದ್ದ ಬಿಹಾರ ಮೂಲದ ರಾಕೇಶ್ ಅವರು ಬೆಳಗ್ಗೆ ಬೂದಿ ತೆಗೆಯುವ ಮಷೀನ್ ಬೆಲ್ಟ್‌ಗೆ ಸಿಲುಕಿ ಮೃತಪಟ್ಟಿದ್ದಾರೆ. ತಕ್ಷಣವೇ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟಿದ್ದಾರೆ.
ಬೆಂಗಳೂರಿನಲ್ಲಿ ಸಿಲಿಂಡರ್ ಸ್ಫೋಟಗೊಂಡು ಐವರಿಗೆ ಗಾಯಗಳಾಗಿವೆ. ವೀವರ್ಸ್ ಕಾಲೋನಿ ಬಳಿಯ ಮಾರುತಿ ಬಡಾವಣೆಯಲ್ಲಿ ಉತ್ತರ ಪ್ರದೇಶದ ವಾರಾಣಸಿ ಮೂಲದ ಜಮಾಲ್, ನಾಜಿಯಾ, ಇರ್ಫಾನ್, ಗುಲಾಬ್, ಶಹಜಾದ್ಗೆ ಸಿಲಿಂಡರ್ ಸ್ಫೋಟದಿಂದ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಂಜಾನೆ 5.30ರ ಸುಮಾರಿಗೆ ಸಿಲಿಂಡರ್ ಸೋರಿಕೆಯಾಗಿ ಸ್ಫೋಟವಾಗಿದೆ. ಸಿಲಿಂಡರ್ ಸ್ಫೋಟಗೊಂಡ ತೀವ್ರತೆಗೆ ಮನೆಯ ಕಿಟಕಿಗಳು ಛಿದ್ರವಾಗಿವೆ.
ಜಾತಿಗಣತಿ ವರದಿ ರಾಜಕೀಯ ಪ್ರೇರಿತ ಎಂದು ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಡಾ.ಅಶ್ವತ್ಥ್ ನಾರಾಯಣ ಹೇಳಿಕೆ ನೀಡಿದ್ದಾರೆ. ರಾಜ್ಯ ಸರ್ಕಾರ ಸದುದ್ದೇಶದಿಂದ ಜಾತಿಗಣತಿ ವರದಿ ಪಡೆಯುತ್ತಿಲ್. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಿನಿಂದ ರಾಜಕೀಯ ಮಾಡ್ತಿದ್ದಾರೆ. ಈ ಸಮೀಕ್ಷೆ ಸರಿಯಾಗಿ ಆಗಿಲ್ಲ ಅಂತಾ ಪ್ರತಿಯೊಬ್ಬರೂ ಹೇಳ್ತಿದ್ದಾರೆ. ಜಾತಿ ಗಣತಿಗೆ ನಮ್ಮ ಸಂಪೂರ್ಣ ವಿರೋಧ ಇದೆ. ಸರ್ಕಾರ ಈವರೆಗೆ ಒಂದೂ ಭರವಸೆದಾಯಕ ಕೆಲಸ ಮಾಡಿಲ್ಲ. ರಾಹುಲ್ ಹೇಳಿದರೆಂದು ವರದಿ ಮೇಲೆ ರಾಜಕೀಯ ಮಾಡ್ತಿದ್ದಾರೆ. ಸರ್ಕಾರದ ನಿಲುವು ನೋಡಿಕೊಂಡು ನಾವು ಮುಂದುವರಿಯುತ್ತೇವೆ ಎಂದರು.
ಕೆಇಎಯಿಂದ ಎಫ್ಡಿಎ ಹುದ್ದೆಗಳ ನೇಮಕಾತಿ ಪರೀಕ್ಷಾ ಹಗರಣ ಸಂಬಂಧ ಪ್ರಕರಣದ ಪ್ರಮುಖ ಆರೋಪಿ ಬಂಧಿಸಲು ನಿರ್ಲಕ್ಷ್ಯ ಆರೋಪ ಹಿನ್ನೆಲೆ ಕಲಬುರಗಿ ಜಿಲ್ಲೆ ಅಫಜಲಪುರ ಸಿಪಿಐ ಪಂಡಿತ ಸಗರ ಅಮಾನತುಗೊಳಿಸಲಾಗಿದೆ. ಅಫಜಲಪುರ ಸಿಪಿಐ ಪಂಡಿತ ಸಗರ ಸಸ್ಪೆಂಡ್ ಮಾಡಿ ಐಜಿಪಿ ಆದೇಶ ಹೊರಡಿಸಿದ್ದಾರೆ.
ಆಟವಾಡುತ್ತಿದ್ದ ಮಗುವಿನ ಮೇಲೆ ಗೇಟ್ ಬಿದ್ದು ಮಗು ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗ್ರಾಮದ ಪಡುಕರೆಯಲ್ಲಿ ನಡೆದಿದೆ. ಸುಧೀರ್ ಮೊಗವೀರ ಅವರ ಪುತ್ರ ಸುಶಾಂತ್ (3) ಮೃತಪಟ್ಟ ಮಗು.
ಇನ್ಮುಂದೆ ನೈಸ್ ರಸ್ತೆಯಲ್ಲೂ ಬಿಎಂಟಿಸಿ ಬಸ್ಗಳು ಸಂಚರಿಸಲಿವೆ. ಪ್ರಯಾಣಿಕರ ಬೇಡಿಕೆ ಮೇರೆಗೆ ನೈಸ್ ರಸ್ತೆಯಲ್ಲೂ ಬಿಎಂಟಿಸಿ ಬಸ್ ಗಳ ಸಂಚಾರ. ಎಲೆಕ್ಟ್ರಾನಿಕ್ ಸಿಟಿಯಿಂದ ಮಾದವಾರ ರೂಟ್ ಗೆ ಹೊಸ ಮಾರ್ಗವಾಗಿ ಬಿಎಂಟಿಸಿ ಬಸ್ ಗಳ ಸೇವೆ. ಈ ಎರಡು ಸ್ಥಳಗಳಿಗೆ ನೈಸ್ ರೋಡ್ ಮೂಲಕವಾಗಿ ಬಿಎಂಟಿಸಿ ಬಸ್ ಗಳು ಸಂಚಾರ ನಡೆಸಲಿವೆ.
ದಾವಣಗೆರೆಯಲ್ಲಿ ಕಾಂಗ್ರೆಸ್ ಮುಖಂಡ ಪೊಲೀಸ್ ಇನ್ಸ್ಪೆಕ್ಟರ್ ಮೇಲೆ ಗೂಂಡಾ ವರ್ತನೆ ತೋರಿದ್ದಾರೆ. ಕಾಂಗ್ರೆಸ್ ಮುಖಂಡ ಅಯೂಬ್ ಪೈಲ್ವಾನ್ ಮತ್ತು ಪುತ್ರ ಗೂಂಡಾ ವರ್ತನೆ ತೋರಿದ್ದಾರೆ. ಅವಾಚ್ಯ ಶಬ್ದಗಳಿಂದ ಸಿಪಿಐ, ಸಿಬ್ಬಂದಿಗೆ ಅವಾಜ್ ಹಾಕಿದ್ದಾರೆ. ಎಸ್ಪಿ ಆದೇಶದಂತೆ ರಾತ್ರಿ 11 ಕ್ಕೆ ಅಂಗಡಿ-ಮುಂಗಟ್ಟು ಬಂದ್ ಮಾಡಿಸಲು ಪೊಲೀಸರು ಮುಂದಾಗಿದ್ದರು. 11 ಗಂಟೆ ಬಳಿಕ ಅಂಗಡಿ ಬಾಗಿಲು ಹಾಕಿ ಎಂದಿದ್ದಕ್ಕೆ, ನಾವು ಬಾಗಿಲು ಹಾಕಲ್ಲ, ಏನ್ ಮಾಡಿಕೊಳ್ತಿರಿ ಅಂತ ಅವಾಜ್ ಹಾಕಿದ್ದಾರೆ.
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಯಲ್ಲಿ ಟಿಕೆಟ್ ಗಾಗಿ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕ್ಷೇತ್ರದಲ್ಲಿ ಪ್ರಮೋದ್ ಮಧ್ವರಾಜ್ ಪ್ರಚಾರ ಶುರು ಮಾಡಿದ್ದಾರೆ. ಉಡುಪಿ, ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಓಡಾಟ ನಡೆಸುತ್ತಿದ್ದಾರೆ. ಪ್ರಮೋದ್ ಆಂಡ್ ಟೀಮ್ ಬಿಜೆಪಿ ಮುಖಂಡರು ,ಕಾರ್ಯಕರ್ತರ ಸಂಪರ್ಕ ಮಾಡುತ್ತಿದ್ದಾರೆ.
ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲೂಕಿನ ಮೂಡಲಬೀಡು ಗ್ರಾಮದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ. ಹಲವು ದಿನಗಳಿಂದ ಸಾಕು ಪ್ರಾಣಿಗಳ ಮೇಳೆ ದಾಳಿ ಮಾಡುತ್ತಿದ್ದ ಚಿರತೆ ಸೆರೆಯಾಗಿದೆ. ಚಿರತೆ ಸೆರೆಯಿಂದ ನಿಟ್ಟುಸಿರುಬಿಟ್ಟ ಗ್ರಾಮಸ್ಥರು.
ಮೈಸೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆ ಬಂದ್ಗೆ ಜಿಲ್ಲಾಧಿಕಾರಿ ಆದೇಶ
ಬೀದರ್, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಬರ ಅಧ್ಯಯನ ಕೈಗೊಂಡಿದ್ದಾರೆ. ಅಧಿವೇಶನದಲ್ಲಿ ಬರದ ಬಗ್ಗೆ ಪ್ರಸ್ತಾಪಿಸಲು ನಿರ್ಧರಿಸಿದ್ದಾರೆ. ರೈತರ ಸಮಸ್ಯೆ ಬಗ್ಗೆ ನಿಲುವಳಿ ಸೂಚನೆ ಮಂಡಿಸಲು ನಿರ್ಧರಿಸಿದ್ದಾರೆ.
ನ.30ರಂದು ತೆಲಂಗಾಣದ 119 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಹಿನ್ನೆಲೆ ಬಿಜೆಪಿ ಸ್ಟಾರ್ ಪ್ರಚಾರಕ ಬಿ.ಎಸ್.ಯಡಿಯೂರಪ್ಪ ಅವರು ಜಹೀರಾಬಾದ್ನಲ್ಲಿಂದು ಚುನಾವಣಾ ಪ್ರಚಾರ ಮಾಡಲಿದ್ದಾರೆ.
Published On - 8:03 am, Wed, 22 November 23