
Karnataka Breaking News highlights: ಹುಬ್ಬಳ್ಳಿಯ ಹೃದಯಭಾಗದಲ್ಲಿರುವ ಈದ್ಗಾ ಮೈದಾನ(ಚೆನ್ನಮ್ಮ ಮೈದಾನ)ದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾನೆಗೆ ಅವಕಾಶ ಸಿಕ್ಕಿದೆ. ಕೊನೆಗೂ ಹುಬ್ಬಳ್ಳಿ-ಧಾರವಾಡ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಗಣೇಶೊತ್ಸವಕ್ಕೆ ಅನುಮತಿ ನೀಡಿದ್ದಾರೆ. ಈದ್ಗಾ ಮೈದಾನದಲ್ಲಿ 3 ದಿನ ಗಣೇಶ ಕೂರಿಸಲು ಅನುಮತಿಸಿದ್ದಾರೆ. ಈ ಆದೇಶ ಬರ್ತಿದ್ದಂತೆ ಬಿಜೆಪಿ ಕಾರ್ಯಕರ್ತರು, ಸಮಿತಿ ಸದಸ್ಯರು ಸಂಭ್ರಮಾಚರಣೆ ಮಾಡಿದರು(Hubballi Idgah Maidan Controversy). ಇನ್ನು ಮತ್ತೊಂದೆಡೆ ನಿನ್ನೆ ಸೋಪಿನ ನೊರೆ ಉಪಯೋಗಿಸಿ ಆತ್ಮಹತ್ಯೆಯ ಯತ್ನದ ನಾಟಕವಾಡಿದ್ದ ಕೋಟಿ ವಂಚನೆಯ ಆರೋಪಿ ಚೈತ್ರ ಕುಂದಾಪುರ(Chaitra Kundapura) ನಾಟಕಗಳ ಸರಮಾಲೆಯನ್ನೇ ರಚಿಸಿರುವುದು ಬೆಳಕಿಗೆ ಬರುತ್ತಿದೆ. MLA ಟಿಕೆಟ್ ಕೊಡಿಸುವುದಾಗಿ 5 ಕೋಟಿ ಹಣ ಪಡೆದು ವಂಚನೆ ಮಾಡಿದ್ದ ಚೈತ್ರ ಕುಂದಾಪುರ, ಸೋಪಿನ ನೊರೆ ಉಪಯೋಗಿಸಿ ತಮಗೆ ಮೂರ್ಛೆ ಬಂದಂತೆ ನಟಿಸಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ರು. ಸದ್ಯ ಕಳ್ಳಾಟ ಬಯಲಾಗಿದೆ. ಇನ್ನು ವಂಚನೆ ಕೇಸ್ ಸಂಬಂಧ ಸಿಸಿಬಿ ಪೊಲೀಸರು ಇಂದು ಕೂಡ ಹಲವು ಕಡೆ ಸ್ಥಳ ಮಹಜರು ಮಾಡುವ ಸಾಧ್ಯತೆ ಇದೆ. ರಾಜ್ಯದ ಪ್ರಸಕ್ತ ವಿದ್ಯಾಮಾನಗಳಿಗೆ ಸಂಬಂಧಿಸಿದ ಕ್ಷಣ ಕ್ಷಣದ ಮಾಹಿತಿಯನ್ನು ಟಿವಿ9 ಡಿಜಿಟಲ್ ಲೈವ್ನಲ್ಲಿ ವೀಕ್ಷಿಸಿ.
ಬೆಂಗಳೂರು: ಚೈತ್ರಾ ಕುಂದಾಪುರ ಗ್ಯಾಂಗ್ನಿಂದ ಉದ್ಯಮಿಗೆ 5 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ
ಅನಾರೋಗ್ಯದಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚೈತ್ರಾಳಿಗೆ ದಿಢೀರ್ ಎದೆನೋವು ಹಿನ್ನೆಲೆ ಜಯದೇವ ಆಸ್ಪತ್ರೆಗೆ ಶಿಫ್ಟ್ ಮಾಡಲು ವೈದ್ಯರು ನಿರ್ಧರಿಸಿದ್ದರು. ಇದೀಗ ಶಿಫ್ಟ್ ಮಾಡುವ ನಿರ್ಧಾರವನ್ನು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ಕೈಬಿಟ್ಟಿದ್ದಾರೆ.
ಬೆಂಗಳೂರು: ಗೌರಿ-ಗಣೇಶ ಹಬ್ಬದ ಹಿನ್ನಲೆ ಮೆಜೆಸ್ಟಿಕ್ನಿಂದ ರಾಜ್ಯದ ವಿವಿಧ ಸ್ಥಳಗಳಿಗೆ ತೆರಳುತ್ತಿರುವ ಪ್ರಯಾಣಿಕರಿಗೆ, ಖಾಸಗಿ ಬಸ್ ಸಿಬ್ಬಂದಿ ಅವರು ನಿಗದಿಗಿಂತ ಹೆಚ್ಚಿನ ಟಿಕೆಟ್ ದರ ವಸೂಲಿ ಹಿನ್ನಲೆ RTO ಅಧಿಕಾರಿಗಳು ಪರಿಶೀಲನೆ ನಡೆಸಿ ದಂಡ ವಿಧಿಸುತ್ತಿದ್ದಾರೆ.
ಬೆಂಗಳೂರು: ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಕೊಲೆ ಮಾಡಿದ ಘಟನೆ ಮಹದೇವಪುರದ ಟಿನ್ ಫ್ಯಾಕ್ಟರಿ ಬಸ್ ನಿಲ್ದಾಣದಲ್ಲಿ ನಡೆದಿದೆ. ರಫೀಕ್ ಅಹ್ಮದ್ ಅಲಿಯಾಸ್ ತಾರೀಖ್(28) ಕೊಲೆಯಾದ ವ್ಯಕ್ತಿ. ಈ ಕುರಿತು ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಪ್ರಕರಣ ದಾಖಲಾಗಿದೆ.
ವಿಜಯಪುರ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರವಿಲ್ಲ, ತಾಲಿಬಾನ್ ಸರ್ಕಾರವಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ. ‘ರಾತ್ರಿ ವೇಳೆ ಹಿಂದೂಗಳು ಸುತ್ತಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಹಿಂದೂಗಳ ಮೇಲೆ ದಾಳಿಯಾಗ್ತಿದೆ. ಮೈಸೂರಿನಲ್ಲಿ ಕೊಲೆಯಾಯಿತು, ಶಿವಮೊಗ್ಗದಲ್ಲಿ ಗಲಾಟೆಯಾಯಿತು. ಗಣೇಶ ಹಬ್ಬಕ್ಕೆ ಅನುಮತಿ ಪಡೆಯಬೇಕು ಎಂದು ಸರ್ಕಾರ ಹೇಳುತ್ತಿದೆ. ಕಾಂಗ್ರೆಸ್ ಆಡಳಿತದಲ್ಲಿರುವುದರಿಂದ ನಮ್ಮ ಸಭೆಗೆ ಪೊಲೀಸರು ಬಂದಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ದಾವಣಗೆರೆ: ಚೈತ್ರಾ ಕುಂದಾಪುರ ಗ್ಯಾಂಗ್ನಿಂದ ಉದ್ಯಮಿಗೆ 5 ಕೋಟಿ ವಂಚನೆ ಕೇಸ್ ಪ್ರಕರಣದ ಎ3 ಅಭಿನವ ಹಾಲಶ್ರೀ ವಿರುದ್ಧ ಆರೋಪ ವಿಚಾರ ‘ಡೀಲ್ ಪ್ರಕರಣಕ್ಕೂ, ಮಠಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಹಿರೇಹಡಗಲಿ ಗ್ರಾಮದಲ್ಲಿ ಹಾಲಸ್ವಾಮಿ ಮಠದ ಶ್ರೀಗಳು ಹೇಳಿದ್ದಾರೆ.
ಗದಗ: 1.5 ಲಕ್ಷ ರೂ. ಲಂಚ ಪಡೆಯುವಾಗ ಸಿಡಿಪಿಒ ಹಾಗೂ ಸಿಬ್ಬಂದಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ನಡೆದಿದೆ. ಸಿಡಿಪಿಒ ಬಸಮ್ಮ ಹೂಲಿ, ಕಚೇರಿ ಸಿಬ್ಬಂದಿ ಜಗದೀಶ್ ಲೋಕಾ ಬಲೆಗೆ ಬಿದ್ದ ಅಧಿಕಾರಿಗಳು. ಅಂಗನವಾಡಿಗಳಿಗೆ ಆಹಾರ ಪೂರೈಸುತ್ತಿದ್ದ ವ್ಯಕ್ತಿಯಿಂದ 42 ಲಕ್ಷ ರೂ. ಬಿಲ್ ಪಾವತಿಸಲು 1.6 ಲಕ್ಷಕ್ಕೆ ಬೇಡಿಕೆ ಸಿಡಿಪಿಒ ಇಟ್ಟಿದ್ದ. ಇದನ್ನು ಕಚೇರಿಯ ಸಿಬ್ಬಂದಿ ಜಗದೀಶ್ ಮೂಲಕ ಲಂಚ ಸ್ವೀಕರಿಸುತ್ತಿದ್ದಾಗ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.
ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮವಾಗಿ ಆಡಳಿತ ನಡೆಸುತ್ತಿದ್ದು, ಅವರೇ ಸಿಎಂ ಆಗಿ 5 ವರ್ಷಗಳ ಕಾಲ ಆಡಳಿತ ನಡೆಸುತ್ತಾರೆ ಎಂದು ಕಲಬುರಗಿಯಲ್ಲಿ ಕೆಕೆಆರ್ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಹೇಳಿದ್ದಾರೆ.
ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚೈತ್ರಾ ಕುಂದಾಪುರಗೆ ಚಿಕಿತ್ಸೆ ಮುಂದುವರೆದಿದ್ದು, ಸಿಸಿಬಿ ಅಧಿಕಾರಿಗಳಿಗೆ ನೋಡಲ್ ಆಫೀಸರ್ ಅಸೀಮಾ ಬಾನು ಅವರು ಆಸ್ಪತ್ರೆ ಮುಂಭಾಗದಲ್ಲೇ ಮಾಹಿತಿ ನೀಡಿದ್ದಾರೆ.
ಶಿವಮೊಗ್ಗ: ಮುದ್ದಣ್ಣನ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆದಿದ್ದಾರೆ ಎಂಬ ಆರೋಪ ಇದೆ. ಈ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು. ಕೆಲವು ಪ್ರಮುಖ ಇಲಾಖೆಗಳ ಸಭೆ ನಡೆಸಿದ್ದು, ಸ್ಮಾರ್ಟ್ ಸಿಟಿ, ಮೆಸ್ಕಾಂ, ಪ್ರವಾಸೋದ್ಯಮ, ನೀರಾವರಿ ಇಲಾಖೆಯ ಸಭೆ ನಡೆಸಿದ್ದೇನೆ ಎಂದರು.
ಮಂಗಳೂರು: ಕರ್ತವ್ಯದಲ್ಲೇ ಗುಪ್ತಚರ ಇಲಾಖೆ ಸಿಬ್ಬಂದಿಗೆ ಹೃದಯಾಘಾತವಾಗಿದ್ದು, ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಉರ್ವ ಮಾರಿಗುಡಿ ನಿವಾಸಿ ರಾಜೇಶ್ ಬಿ.ಯು (45) ಮೃತ ವ್ಯಕ್ತಿ.
ಶಿವಮೊಗ್ಗ: ರಾಜ್ಯದಲ್ಲಿ ಎನ್ಇಪಿ ರದ್ದುಪಡಿಸಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಅವರು ಶಿವಮೊಗ್ಗದಲ್ಲಿ ಹೇಳಿದರು. ಈಗ ಹೊಸದಾಗಿ ಎಸ್ಇಪಿ ಅನುಷ್ಠಾನಗೊಳ್ಳಬೇಕಿದ್ದು, ಪಿಯುಸಿ ಪೂರಕ ಪರೀಕ್ಷೆಯಿಂದ ವಿದ್ಯಾರ್ಥಿಗಳಿಗೆ ಅನುಕೂಲ ಆಗಿದೆ. ಚುನಾವಣಾ ಪ್ರಣಾಳಿಕೆಯಲ್ಲಿನ ಭರವಸೆ ಒಂದೊಂದೇ ಈಡೇರಿಸುತ್ತಿದ್ದೇವೆ ಎಂದರು. ಇನ್ನು ಇದೇ ವೇಳೆ ಶಿವಮೊಗ್ಗ ಜಿಲ್ಲೆಯ 7 ತಾಲೂಕು ಬರಪೀಡಿತ ಎಂದು ಘೋಷಿಸಲಾಗಿದೆ. ಬರ ಪರಿಹಾರ ನೀಡುವ ಬಗ್ಗೆ ಕ್ರಮ ವಹಿಸಲಾಗುವುದು ಎಂದರು.
ವಿಜಯಪುರ: ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಶಂಖನಾದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಯತ್ನಾಳ ‘ಹಿಂದೂ ಸನಾತನ ಧರ್ಮ ಕಾಗೆ ಇದ್ದ ಹಾಗೆ ಎಂದು ಪ್ರಕಾಶ ರಾಜ್ ಹೇಳಿದ್ದ. ಅದಕ್ಕೆ ನಾನು ಪ್ರಕಾಶ ರಾಜ್ ಹಂದಿ ಎಂದು ಉತ್ತರ ಕೊಟ್ಟಿದ್ದೆ. ಸುಖಾಸುಮ್ಮನೆ ಮಾತನಾಡದೇ ಬರೋಬ್ಬರಿಯಾಗಿ ಉತ್ತರಿಸಬೇಕೆಂದು ಕಾರ್ಯಕರ್ತರಿಗೆ ಯತ್ನಾಳ ಸೂಚಿಸಿದ್ದು, ಮರ್ಯಾದೆ ಕೊಟ್ಟರೆ ಮರ್ಯಾದೆ ಕೊಡೋಣಾ, ಯಾಕಲೋ ಎಂದರೆ ಯಾಕೋ ಮಗನೇ ಎನ್ನಬೇಕೆಂದು ಹೇಳಿದ್ದಾರೆ.
ಬೆಂಗಳೂರು: ಕರ್ನಾಟಕ IPS ಅಸೋಸಿಯೇಷನ್ ಅಧ್ಯಕ್ಷರಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿರುವ ಬಿ.ದಯಾನಂದ ನೇಮಕವಾಗಿದ್ದಾರೆ. ಅಸೋಸಿಯೇಷನ್ ಅಧ್ಯಕ್ಷರಾಗಿ ಸರ್ವಾನುಮತದಿಂದ ಬಿ.ದಯಾನಂದ ಅವರು ಆಯ್ಕೆಗೊಂಡಿದ್ದಾರೆ.
ಬೆಂಗಳೂರು: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಸಿಗದ ವಿಚಾರದ ಜೊತೆಗೆ ಟೆಂಡರ್ ಹಾಗೂ ಔಷಧಿಗಳ ಖರೀದಿಯಲ್ಲಿ ಪಾರದರ್ಶಕತೆ ಇಲ್ಲದೆ ಅಕ್ರಮ ನಡೆದಿರುವ ಬಗ್ಗೆ ವ್ಯಾಪಕ ದೂರು ಬಂದ ಹಿನ್ನೆಲೆ ಸಮಿತಿ ರಚಿಸಿ ವರದಿ ನೀಡುವಂತೆ ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದಾರೆ. ಐಎಎಸ್ ಅಧಿಕಾರಿ ನೇತೃತ್ವದಲ್ಲಿ ಕಮಿಟಿ ರಚಿಸಿ, ಸಹಕಾರ ಇಲಾಖೆಯ ಒಬ್ಬ ಅಧಿಕಾರಿ ಮತ್ತು ಆರ್ಥಿಕ ಇಲಾಖೆಯ ಅಧಿಕಾರಿಗಳನ್ನೊಗೊಂಡ ತಂಡ ರಚಿಸಿ 2 ವಾರಗಳೊಳಗೆ ವರದಿ ನೀಡುವಂತೆ ಸಿಎಂ ಆದೇಶ ಮಾಡಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುರುಡುಮಲೆ ವಿನಾಯಕ ದೇಗುಲಕ್ಕೆ ನಾಳೆ ಮಾಜಿ ಸಿಎಂ ಯಡಿಯೂರಪ್ಪ ಭೇಟಿ ನೀಡಲಿದ್ದಾರೆ. ಲೋಕಸಭೆ ಚುನಾವಣೆ ಹಿನ್ನಲೆ ಪಕ್ಷ ಸಂಘಟನೆಗೆ ಸಜ್ಜಾಗುತ್ತಿರುವ ಬಿಎಸ್ವೈ ನಾಳೆ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಇಲ್ಲಿಂದಲೇ ಲೋಕಸಭಾ ಚುನಾವಣಾ ಪ್ರಚಾರಕ್ಕೂ ಚಾಲನೆ ನೀಡಲಿದ್ದಾರೆ. ಬಿಎಸ್ ಯಡಿಯೂರಪ್ಪ ಅವರಿಗೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ರಾಜ್ಯಾಧ್ಯಕ್ಷ್ಯ ನಳಿನ್ ಕುಮಾರ್ ಕಟಿಲ್, ಗೋವಿಂದ ಕಾರಜೋಳ ಸೇರಿ ಹಲವು ನಾಯಕರು ಸಾಥ್ ನೀಡಲಿದ್ದಾರೆ.
ಚೈತ್ರಾ ಕುಂದಾಪುರ ಗ್ಯಾಂಗ್ನಿಂದ ಉದ್ಯಮಿಗೆ 5 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಉದ್ಯಮಿ ಗೋವಿಂದಬಾಬು ಪೂಜಾರಿ ವಿರುದ್ಧವೇ ಅಭಿನವ ಹಾಲಶ್ರೀ ದೂರು ನೀಡಿದ್ದಾರೆ. MLA ಟಿಕೆಟ್ ಕೊಡಿಸುವುದಾಗಿ ವಂಚಿಸಿದ್ದಾರೆಂದು ಅಪಪ್ರಚಾರ ನಡೆಯುತ್ತಿದೆ. ತನ್ನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೀತಿದೆ ಎಂದು ಉದ್ಯಮಿ ಗೋವಿಂದಬಾಬು & ಆಪ್ತರ ವಿರುದ್ಧ ಅಭಿನವ ಹಾಲಶ್ರೀ ದೂರು ಸಲ್ಲಿಸಿದ್ದಾರೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ನಾರಮಾಕನಹಳ್ಳಿಯಲ್ಲಿ ಅರಣ್ಯ ಭೂಮಿ ಒತ್ತುವರಿ ತೆರವು ವೇಳೆ ಜೆಸಿಬಿ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ 16 ಜನರನ್ನು ಬಿಡುಗಡೆ ಮಾಡಲಾಗಿದೆ. ಒತ್ತುವರಿ ತೆರವಿಗೆ ವಿರೋಧಿಸಿದ್ದ ಹಿನ್ನೆಲೆಯಲ್ಲಿ ಸಂಸದ ಮುನಿಸ್ವಾಮಿ ಸೇರಿ 25 ಜನರ ವಿರುದ್ಧ ದೂರು ದಾಖಲಾಗಿತ್ತು. ಸೆ.9ರಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು.
ದಸರಾ ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನದ ಮೇಲೂ ಬರದ ಛಾಯೆ ಆವರಿಸಿದೆ. ಭೀಕರ ಬರಗಾಲ ಪರಿಸ್ಥಿತಿ ಹಿನ್ನೆಲೆ ಸಾಹಿತ್ಯ ಸಮ್ಮೇಳನ ಮುಂದೂಡಲಾಗಿದೆ. ಮಂಡ್ಯದಲ್ಲಿ ನಡೆಯಬೇಕಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದೂಡಲಾಗಿದೆ. ಜೊತೆಗೆ ಹಂಪಿ ಉತ್ಸವ ಆಯೋಜನೆಗೂ ಸರ್ಕಾರ ಹಿಂದೇಟು ಹಾಕುತ್ತಿದೆ. ಈ ಹಿಂದೆ ಬರಗಾಲ ಎದುರಾದಾಗ ಸರಳವಾಗಿ ದಸರಾ ಆಚರಣೆ ಮಾಡಿರುವ ಸರ್ಕಾರ ಈ ಬಾರಿಯೂ ಸರಳ ದಸರಾ ಆಚರಣೆ ಮಾಡಲಾಗುತ್ತಾ ಎಂಬ ಬಗ್ಗೆ ಚರ್ಚೆ ನಡೆಸುತ್ತಿದೆ.
ಬೆಂಗಳೂರಿನಲ್ಲಿ ಕೋಟ್ಯಂತರ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಮೂವರು ವಿದೇಶಿಯರು ಸೇರಿ 14 ಆರೋಪಿಗಳ ಬಂಧನವಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ದಯಾನಂದ್ ತಿಳಿಸಿದರು. ಬಂಧಿತರಿಂದ 7.83 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.
ಆರ್ಎಸ್ಎಸ್ ತತ್ವ ನಂಬಿ ಯಾರು ಉದ್ಧಾರ ಆಗಿದ್ದಾರೆ ತೋರಿಸಿ. RSS ತತ್ವ ಪ್ರಜಾಪ್ರಭುತ್ವ ವಿರೋಧಿ, ದೇಶ ವಿರೋಧಿಯಾಗಿದೆ. ಆರ್ಥಿಕ ಸಮಾನತೆ ಇಲ್ಲ, ದೇಶಭಕ್ತಿಯೂ ಇಲ್ಲ ಎಂದು ಆರ್ಎಸ್ಎಸ್ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಮತ್ತೆ ವಾಗ್ದಾಳಿ ನಡೆಸಿದರು. ನಾನೇನು ಆರ್ಎಸ್ಎಸ್ ಬಗ್ಗೆ ಮಾತನಾಡಲು ಭಯ ಪಡುವುದಿಲ್ಲ. ಸರ್ಕಾರದ ಶೈಕ್ಷಣಿಕ ಕೇಂದ್ರಗಳಲ್ಲಿ ಕೇಸರಿಕರಣ ನಡೆಯಬಾರದು. ಆರ್ಎಸ್ಎಸ್ನವರಿಗೆ ಆಸಕ್ತಿ ಇದ್ದರೆ ಖಾಸಗಿಯಾಗಿ ನಡೆಸಲಿ ಎಂದರು.
ರಾಜ್ಯದಲ್ಲಿ ನಿರಂತರ ರೈತರ ಆತ್ಮಹತ್ಯೆ ಹಿನ್ನೆಲೆ ಹೆಚ್ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. ಬೆಳ್ಳಂಬೆಳಗ್ಗೆಯೇ ರೈತ ಆತ್ಮಹತ್ಯೆ ವರದಿ ಓದಿದಾಕ್ಷಣ ಸಂಕಟವಾಯಿತು. ಕಣ್ಣಾಲಿಗಳು ತುಂಬಿ ಬಂದವು, ಇನ್ನೆಷ್ಟು ದಿನ ಇಂತಹ ಸಾವು ನೋಡಬೇಕು. ಕೇವಲ ಪ್ರಚಾರ, ಅಧಿಕಾರದ ಸುಖ ಅನುಭವಿಸುತ್ತಿರುವ ಸರ್ಕಾರಕ್ಕೆ ಅನ್ನದಾತನ ಸಾವಿನ ಕೇಕೆ ಸವಿಗಾನವಾಗಿದೆಯಾ? ವಾಸ್ತವ ಅರಿವಿಲ್ಲವೆ?ಸರ್ಕಾರಕ್ಕೆ ರೈತನ ಬದುಕಿಗೆ ಗ್ಯಾರಂಟಿ ಕೊಡಲು ಸಾಧ್ಯವಿಲ್ಲವೇ? ಜೀವಬಿಟ್ಟ ರೈತ ಕುಟುಂಬಗಳಿಗೆ ಮಾನವೀಯತೆಯ ನೆರವು ಕೊಡಬೇಕು ಎಂದು ಟ್ವೀಟ್ ಮೂಲಕ ಸರ್ಕಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಬೆಳ್ಳಂ ಬೆಳಗ್ಗೆಯೇ ಈ ವರದಿ ಓದಿದಾಕ್ಷಣ ಬಹಳ ಸಂಕಟವಾಯಿತು, ಕಣ್ಣಾಲಿಗಳು ತುಂಬಿ ಬಂದವು. ಇನ್ನೆಷ್ಟು ದಿನ ಇಂತಹ ಸಾವುಗಳನ್ನು ನೋಡಬೇಕು. ಕೇವಲ ಪ್ರಚಾರ, ಅಧಿಕಾರದ ಸುಖ ಅನುಭವಿಸುತ್ತಿರುವ @INCKarnataka ಸರಕಾರಕ್ಕೆ ಅನ್ನದಾತನ ಸಾವಿನ ಕೇಕೆ ಸವಿಗಾನವಾಗಿದೆಯಾ? ಇವರಿಗೆ ವಾಸ್ತವ ಅರಿವಿಲ್ಲವೆ? 1/5
ಗ್ಯಾರಂಟಿಗಳನ್ನು ಕೊಟ್ಟೆವೆಂದು… pic.twitter.com/Tqe1DB9a8m
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) September 16, 2023
ಚೈತ್ರಾ ಕುಂದಾಪುರ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಹಾಲಶ್ರೀ ಕಾರು ಚಾಲಕನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರು ಚಾಲಕನನ್ನ ವಿಚಾರಣೆ ನಡೆಸಿದರೆ ಶ್ರೀಗಳ ಸುಳಿವು ಪತ್ತೆ ಸಾಧ್ಯತೆ. ಆದ್ದರಿಂದ ಚಾಲಕನನ್ನ ಸಿಸಿಬಿ ಕಚೇರಿಗೆ ಕರೆ ತರಲಾಗುತ್ತಿದೆ.
ಹಾಸನ ತಾಲೂಕಿನ ಖೋನಾಪುರ ಗ್ರಾಮದ ಬಳಿ ಕೆರಗೋಡು ಪಿಹೆಚ್ಸಿಯಲ್ಲಿ ವೈದ್ಯರಾಗಿದ್ದ ಚಂದ್ರಶೇಖರ್ ಅವರು ಹೇಮಾವತಿ ನದಿ ಹಿನ್ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ನಿನ್ನೆ ಕರ್ತವ್ಯಕ್ಕೂ ಮುನ್ನ ಹೇಮಾವತಿ ನದಿ ಹಿನ್ನೀರಿನ ರಂಗನಾಥಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಲು ತೆರಳಿದ್ದ ಚಂದ್ರಶೇಖರ್, ನದಿಯಲ್ಲಿ ಸ್ನಾನ ಮಾಡಿ ಪೂಜೆ ಸಲ್ಲಿಸುತ್ತಿದ್ದ ವೇಳೆ ನದಿಗೆ ಇಳಿದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಗಣೇಶ ಹಬ್ಬ ಹಿನ್ನೆಲೆಯಲ್ಲಿ ಖಾಸಗಿ ಬಸ್ಗಳ ಟಿಕೆಟ್ ದರ ಹೆಚ್ಚಳವಾಗಿದೆ. ಸಾರಿಗೆ ಇಲಾಖೆ ಆಯುಕ್ತರ ಎಚ್ಚರಿಕೆ ನಡುವೆಯೂ ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ. ಸಾಮಾನ್ಯ ದಿನಗಳಲ್ಲಿ 500-700 ರೂಪಾಯಿ ಇರುವ ಟಿಕೆಟ್ ದರ ಈಗ ಹಬ್ಬ ಹಿನ್ನೆಲೆ 1500- 2500 ರೂ. ನಿಗದಿ ಮಾಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸೋಮನಕಾಡು ಬಳಿ 100 ಅಡಿ ಪ್ರಪಾತಕ್ಕೆ ಲಾರಿ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪುತ್ತೂರಿನಿಂದ ಚಿತ್ರದುರ್ಗಕ್ಕೆ ನೀರಿನ ಬಾಟಲ್ ಸಾಗಿಸುತ್ತಿದ್ದ ಲಾರಿ ದಟ್ಟ ಮಂಜು ಹಾಗೂ ಮಳೆಯಿಂದ ದಾರಿ ಕಾಣದೆ ಪಲ್ಟಿಯಾಗಿದೆ.
ಹಳೆಯ ವಾಹನಗಳಿಗೆ HSRP(ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್) ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ ಮಾಡಲಾಗಿದೆ. ಏಪ್ರಿಲ್ 2019ಕ್ಕಿಂತ ಮೊದಲು ನೋಂದಣಿಯ ವಾಹನಗಳಿಗೆ ನಿಯಮ ಅನ್ವಯವಾಗಲಿದೆ. ನವೆಂಬರ್ 17ರಂದು HSRP ನಂಬರ್ ಪ್ಲೇಟ್ ಅಳವಡಿಕೆಗೆ ಕೊನೆಯ ದಿನ. ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ಲಘು ಮೋಟಾರು ವಾಹನ, ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳು, ಟ್ರ್ಯಾಕ್ಟರ್, ಪ್ರಯಾಣಿಕರ ಕಾರು ಸೇರಿ ಎಲ್ಲ ಹಳೆಯ ವಾಹನಗಳಿಗೆ ನಿಯಮ ಅನ್ವಯವಾಗಲಿದೆ. transport.karnataka.gov.in, www.siam.inನಲ್ಲಿ ನೋಂದಣಿಗೆ ಅವಕಾಶ.
ವಿಜಯಪುರ; ಹೈದರಾಬಾದ್ – ವಿಜಯಪುರಎಕ್ಸ್ಪ್ರೆಸ್ ರೈಲಿನಲ್ಲಿ ಇಲಿಗಳ ಓಡಾಟ ಹೆಚ್ಚಾಗಿದೆ. ಯಾರ ಭಯವೂ ಇಲ್ಲದೆ ಸ್ವಚ್ಚಂದವಾಗಿ ಬೋಗಿಗಳಲ್ಲಿ ಇಲಿಗಳು ಓಡಾಡುತ್ತಿವೆ. ಜನರಲ್ ಬೋಗಿಗಳಲ್ಲಿ ಇಲಿಗಳು ಬಿಂದಾಸ್ ಆಗಿ ಓಡಾಡುತ್ತಿವೆ.
ಕೊಪ್ಪಳ ತಾಲೂಕಿನ ಹಳೇಬಂಡಿಹರ್ಲಾಪುರ ಗ್ರಾಮದಲ್ಲಿ ಅನುಚಿತ ವರ್ತನೆ ಹಿನ್ನೆಲೆ ಮೈಕ್ರೋಫೈನಾನ್ಸ್ ಸಿಬ್ಬಂದಿಗೆ ಥಳಿಸಲಾಗಿದೆ. ಲೋನ್ ಕೊಡುವ ನೆಪದಲ್ಲಿ ಮಹಿಳೆ ಜೊತೆ ಅನುಚಿತ ವರ್ತನೆ ತೋರಿದ ಹಿನ್ನೆಲೆ ಗೋದಾವರಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಯಮನೂರಪ್ಪಗೆ ನಾಗಮ್ಮ ಎಂಬುವರು ಚಪ್ಪಲಿಯಿಂದ ಥಳಿಸಿದ್ದು ವಿಡಿಯೋ ವೈರಲ್ ಆಗಿದೆ.
ಸರ್ಕಾರ ಬರ ಪೀಡಿತ ತಾಲೂಕುಗಳ ಘೋಷಣೆ ಮಾಡಿದ್ದು ಗದಗ ಜಿಲ್ಲೆ ಮುಂಡರಗಿ ತಾಲೂಕಿನಲ್ಲಿ ಸರ್ಕಾರದ ವಿರುದ್ಧ ರೈತರು ಕೆಂಡಾಮಂಡಲರಾಗಿದ್ದಾರೆ. ಭೀಕರ ಬರ ಆವರಿಸಿದ್ರು ಕೂಡಾ ಬರ ಪೀಡಿತ ಪಟ್ಟಿಯಿಂದ ಮುಂಡರಗಿ ತಾಲೂಕು ಕೈಬಿಟ್ಟಿದಕ್ಕೆ ರೈತರು ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಮುಂಡರಗಿ ತಾಲೂಕಿನ ಹಳ್ಳಿಗುಡಿ ರೈತರು ಆಕ್ರೋಶ ಹೊರ ಹಾಕಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬಂಗಾರಪ್ಪ ನಗರದಲ್ಲಿ ಯುವಕನ ಮೇಲೆ ಹಲ್ಲೆ ನಡೆದಿದೆ. ಹಿಂದೂ ದೇವರ ಅವಹೇಳನ ಮಾಡಿದ ದಲಿತ ಮುಖಂಡನ ಚಿತ್ರೀಕರಣ ಮಾಡಿದ ಮಾರುತಿ ವಾಲ್ಮೀಕಿ ಎಂಬ ಯುವಕನ ಮೇಲೆ ಹಲ್ಲೆ ನಡೆದಿದೆ. ಕಳೆದ ತಿಂಗಳು ದಲಿತ ರಕ್ಷಣಾ ವೇದಿಕೆ ಅಧ್ಯಕ್ಷ ಎಲಿಷಾ ಎಲಕಪಾಟಿ ಹಿಂದೂ ದೇವರ ಮೇಲೆ ಅವಹೇಳನಕಾರಿಯಾಗಿ ಮಾತನಾಡಿ ಬಂಧನಕ್ಕೊಳಗಾಗಿದ್ದರು. ದಲಿತ ಮುಖಂಡನ ಮಾತುಗಳನ್ನು ಚಿತ್ರೀಕರಣ ಮಾಡಿ ದೂರು ನೀಡುದ್ದ ಮಾರುತಿ ವಾಲ್ಮೀಕಿ ಮೇಲೆ ತಡ ರಾತ್ರಿ ದಲಿತ ಮುಖಂಡನ ಕುಟುಂಬದವರು ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
Published On - 7:59 am, Sat, 16 September 23