ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಪಕ್ಷ ನಾಯಕ ಸಿದ್ದರಾಮಯ್ಯ ಕ್ಷೇತ್ರವಾದ ಬಾಗಲಕೋಟೆ ಜಿಲ್ಲೆಯ ಬಾದಾಮಿ ಬಜೆಟ್ನಲ್ಲಿ ಬಂಪರ್ ಅನುದಾನ ಘೋಷಿಸಿದ್ದಾರೆ. ಜನೇವರಿ 11ರಂದು 50 ಕೋಟಿ ವೆಚ್ಚದಲ್ಲಿ ಜವಳಿ ಪಾರ್ಕ್ ಸ್ಥಾಪನೆಗೆ ಸಿದ್ದರಾಮಯ್ಯ ಮನವಿ ಮಾಡಿದ್ದರು. ಅವರ ಮನವಿ ಪುರಸ್ಕರಿಸಿದ ಸಿಎಂ ಯಡಿಯೂರಪ್ಪ ಗುಳೇದಗುಡ್ಡದಲ್ಲಿ ಜವಳಿ ಪಾರ್ಕ್ ಸ್ಥಾಪನೆಗೆ ಅಸ್ತು ಎಂದಿದ್ದಾರೆ. ಇದೊಂದೇ ಯೋಜನೆಯಲ್ಲದೇ ಈ ಬಾರಿ ಬಜೆಟ್ನಲ್ಲಿ ಬಾದಾಮಿ ಕ್ಷೇತ್ರಕ್ಕೆ ಇನ್ನೊಂದು ಯೋಜನೆ ಘೋಷಣೆಯಾಗಿದೆ. ಬಾದಾಮಿ ಕ್ಷೇತ್ರದಲ್ಲಿ ಎಲೆಕ್ಟ್ರಿಕ್ ಬೈಕ್, ಟ್ಯಾಕ್ಸಿ, ಯೋಜನೆ ಆರಂಭಿಸಲು 25 ಕೋಟಿಯನ್ನು ರಾಜ್ಯ ಸರ್ಕಾರ ಒದಗಿಸಲಿದೆ.
ಸಿದ್ದರಾಮಯ್ಯ ಸರ್ಕಾರದ ಅವಧಿಯ ‘ಅನುಗ್ರಹ ಯೋಜನೆ’ ಮುಂದುವರಿಕೆ ಮಾಡಲಾಗಿದ್ದು, ಕುರಿ, ಮೇಕೆ ಆಕಸ್ಮಿಕವಾಗಿ ಸತ್ತರೆ ಪರಿಹಾರ ನೀಡುವ ಅನುಗ್ರಹ ಯೋಜನೆ ಮುಂದುವರಿಕೆ ಮಾಡಲಾಗಿದೆ. ಈ ಮೂಲಕ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಆರಂಭಿಸಿದ ಯೋಜನೆಯನ್ನು ಮುಂದುವರೆಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀರ್ಮಾನಿಸಿದ್ದಾರೆ.
ಸಭಾತ್ಯಾಗ ಮಾಡಿದದ್ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಶಾಸಕರು
ಬಜೆಟ್ ಮಂಡನೆ ಆರಂಭದ ಅರ್ಧ ಗಂಟೆಗೆ ಮುನ್ನ ರಾಜ್ಯ ಸರ್ಕಾರವು ನೈತಿಕತೆಯನ್ನು ಕಳೆದುಕೊಂಡಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದರು. ಸಿಡಿ ಪ್ರಕರಣವನ್ನು ಉಲ್ಲೇಖಿಸಿದ್ದ ಅವರು, ‘ನಾನು ತಪ್ಪು ಮಾಡಿಲ್ಲ, ಹೀಗಾಗಿ ಕೋರ್ಟ್ಗೆ ಹೋಗಿಲ್ಲ ಎಂದು ಸಚಿವ ಗೋಪಾಲಯ್ಯ ಹೇಳಿದ್ದಾರೆ. ಆದರೆ ಉಳಿದವರು ಏನು ಮಾಡಿದ್ದಾರೆ? ಇವರೆಲ್ಲ ಪ್ರಮಾಣ ವಚನ ಸ್ವೀಕರಿಸಿ, ಸಚಿವರಾದವರು. ಈಗ ಭಯ ಇದೆ ಎಂದು ಕೋರ್ಟ್ಗೆ ಹೋಗಿದ್ದಾರೆ. ಮುಖ್ಯಮಂತ್ರಿ ಸೇರಿದಂತೆ ರಾಜ್ಯ ಸರ್ಕಾರಕ್ಕೆ ಯಾವ ನೈತಿಕತೆ ಇದೆ. ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಆಗಿ ಮುಂದುವರಿಯಲು ಹಾಗೂ ಬಜೆಟ್ ಮಂಡಿಸಲು ನೈತಿಕತೆ ಇಲ್ಲ’ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಟೀಕಾ ಪ್ರಹಾರ ನಡೆಸಿದ ನಂತರ ವಿಧಾನಸಭೆಗೆ ಆಗಮಿಸಿದ್ದ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಶಾಸಕರು, ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಲಾಪ ಆರಂಭಿಸುತ್ತಿದ್ದಂತೆ ಗದ್ದಲ ಆರಂಭಿಸಿದರು. ನಂತರ ಮತ್ತೊಮ್ಮೆ ರಾಜ್ಯ ಸರ್ಕಾರವನ್ನು ಟೀಕಿಸಿ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಶಾಸಕರು ಸಭಾತ್ಯಾಗ ಮಾಡಿದ್ದರು.
ಸಿದ್ದರಾಮಯ್ಯ ಮನವೊಲಿಕೆಗೆ ಯತ್ನ
ವಿಪಕ್ಷ ಕಾಂಗ್ರೆಸ್ ಮನವೊಲಿಕೆಗೆ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಮತ್ತು ವಸತಿ ಸಚಿವ ಸೋಮಣ್ಣ ಅವರು ಪ್ರಯತ್ನಿಸುತ್ತಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಕಚೇರಿಗೆ ಆಗಮಿಸಿ ಮನವೊಲಿಕೆ ಯತ್ನ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಬಜೆಟ್ 2021: ರಾಜ್ಯ ಸರ್ಕಾರಕ್ಕೆ ಬರುವ ಆದಾಯ ಹಾಗೂ ವೆಚ್ಚದ ಲೆಕ್ಕಾಚಾರ ಹೀಗಿದೆ
Published On - 2:20 pm, Mon, 8 March 21