
ಚಿಕ್ಕಬಳ್ಳಾಪುರ, (ಜುಲೈ 02): ಹಲವರ ವಿರೋಧದ ನಡುವೆಯೂ ರಾಮನಗರ (Ramanagara) ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲಾಗಿದೆ. ಇದರ ಬೆನ್ನಲ್ಲೇ ಇದೀಗ ಬೆಂಗಳೂರು ಗ್ರಾಮಾಂತರ (Bengaluru rural) ಜಿಲ್ಲೆಯನ್ನು ಬೆಂಗಳೂರು ಉತ್ತರ (Bengaluru north)ಜಿಲ್ಲೆಯನ್ನಾಗಿ ಮಾಡಲು ಸಿದ್ದರಾಮಯ್ಯ (Siddaramaiah) ಸರ್ಕಾರ ಮುಂದಾಗಿದ್ದು, ಈ ಪ್ರಸ್ತಾವನೆಗೆ ಇಂದು(ಜುಲೈ 02) ಚಿಕ್ಕಬಳ್ಳಾಪುರದ ನಂದಿ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಹ ಗ್ರೀನ್ ಸಿಗ್ನಲ್ ನೀಡಿದೆ. ಇದರ ಜೊತೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ (bagepalli )ಹೆಸರು ಬದಲಾವಣೆಗೂ ಒಪ್ಪಿಗೆ ಸೂಚಿಸಿದ್ದು, ಭಾಗ್ಯನಗರ ಎಂದು ಮರು ನಾಮಕರಣಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ಪ್ರತಿಪಕ್ಷಗಳ ವಿರೋಧದ ನಡುವೆಯೂ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಸರ್ಕಾರ ಬದಲಾವಣೆ ಮಾಡಿತ್ತು. ಇದರ ಬಳಿಕ ತುಮಕೂರು ಜಿಲ್ಲೆಗೆ ಬೆಂಗಳೂರು ಉತ್ತರ ಜಿಲ್ಲೆ ಎಂದು ಹೆಸರಿಸಬೇಕೆಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೇರಿ ಕೆಲವರು ಒತ್ತಾಯಿಸಿದ್ದರು. ಆದರೆ, ಸರ್ಕಾರ ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಹೆಸರು ಬದಲಾಯಿಸುವ ಸಂಬಂಧ ಇಂದಿನ ಸಚಿವ ಸಂಪುಟದಲ್ಲಿ ಚರ್ಚೆ ನಡೆದಿದ್ದು, ಅಂತಿಮವಾಗಿ ಹೆಸರು ಬದಲಾವಣೆಗೆ ಒಪ್ಪಿಗೆ ಸೂಚಿಸಿದೆ.
1986ರಲ್ಲಿ ಬೆಂಗಳೂರು ನಗರ ಜಿಲ್ಲೆಯಿಂದ ಪ್ರತ್ಯೇಕವಾಗಿ ಬೆಂಗಳೂರು ಗ್ರಾಮಾಂತ ಎಂದು ಹೊಸ ಜಿಲ್ಲೆಯಾಗಿ ರೂಪುಗೊಂಡಿತ್ತು. ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಳ, ರಾಂನಗರ, ಮಾಗಡಿ, ಕನಕಪುರ, ಚನ್ನಪಟ್ಟಣ ತಾಲೂಕು ಒಳಗೊಂಡು ಪ್ರತ್ಯೇಕ ಜಿಲ್ಲೆ ಅಸ್ತಿತ್ವಕ್ಕೆ ಬಂದಿತ್ತು. ಆದ್ರೆ, 2007ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಮತ್ತೆ ರಾಮನಗರ ಜಿಲ್ಲೆಯಾಗಿ ವಿಭಜಿಸಲಾಗಿತ್ತು. ಬೆಂಗಳೂರು ಗ್ರಾಮಾಂತರ ವ್ಯಾಪ್ತಿಗೆ ಬರುವ ದೊಡ್ಡಬಳ್ಳಾಪುರ, ಹೊಸಕೋಟೆ, ದೇವನಹಳ್ಳಿ ಒಳಗೊಂಡಿದ್ದು, ಇದುವರೆಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಯಾವುದೇ ಜಿಲ್ಲಾ ಕೇಂದ್ರ ಇಲ್ಲ. ಹೀಗಾಗಿ ಜಿಲ್ಲಾ ಕೇಂದ್ರವೇ ಇಲ್ಲದ ರಾಜ್ಯದ ಏಕೈಕ ಜಿಲ್ಲೆ ಬೆಂಗಳೂರು ಗ್ರಾಮಾಂತರ ಎನಿಸಿಕೊಂಡಿದೆ.
ವ್ಯಾಪಕ ವಿರೋಧದ ನಡುವೆಯೂ ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾವಣೆ ಮಾಡಲಾಗಿತ್ತು. ಬೆಂಗಳೂರಿನ ಬ್ರ್ಯಾಂಡ್ ಹೆಚ್ಚಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಮಜಾಯಿಷಿ ನೀಡಿದ್ದರು. ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಸರನ್ನು ’ಬೆಂಗಳೂರು ಉತ್ತರ’ ಎಂದು ಮರುನಾಮಕರಣ ಮಾಡಲು ನಿರ್ಧರಿಸಲಾಗಿದೆ. ರಾಮನಗರ ಜಿಲ್ಲೆಯ ಹೆಸರು ಬದಲಾವಣೆಗೆ ಏನು ಕಾರಣ ಕೊಡಲಾಗಿತ್ತೋ, ಇಲ್ಲೂ ಅದೇ ಕಾರಣವನ್ನು ನೀಡಲಾಗಿದೆ.
ಇನ್ನು, ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯ ಬಾಗೇಪಲ್ಲಿಯ ಹೆಸರನ್ನೂ ಬದಲಾಯಿಸಲು ಸ್ಥಳೀಯ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಬಾಗೇಪಲ್ಲಿಯ ಹೆಸರು ’ಭಾಗ್ಯನಗರ’ ಎಂದು ಬದಲಾವಣೆ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದರು. ಇದೀಗ ಈ ಪ್ರಸ್ತಾವನೆಗೂ ಸಹ ಇಂದಿನ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಬಾಗೇಪಲ್ಲಿ ಇನ್ಮುಂದೆ ’ಭಾಗ್ಯನಗರ’ ಎಂದು ಬದಲಾಗಲಿದೆ.
Published On - 4:20 pm, Wed, 2 July 25