ಬೆಂಗಳೂರು: ಕರ್ನಾಟಕ ರಾಜ್ಯದ ವಿವಿಧ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಬಿಎಸ್ಸಿ ಅಗ್ರಿ ಮತ್ತು ಇತರ ಸಮಾನ ಕೋರ್ಸ್‌ಗಳಲ್ಲಿ ರೈತರ ಮಕ್ಕಳಿಗೆ ಇದ್ದ ಮೀಸಲಾತಿ ಪ್ರಮಾಣವನ್ನು ಶೇ 40ರಿಂದ ಶೇ 50ಕ್ಕೆ ಹೆಚ್ಚಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಸಚಿವ ಸಂಪುಟ ಸಭೆಯ ನಂತರ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾಧ್ಯಮ ಪ್ರತಿನಿಧಿಗಳಿಗೆ ಸಂಪುಟ ಸಭೆಯ ತೀರ್ಮಾನಗಳನ್ನು ತಿಳಿಸಿದರು.
ಬೆಳಗಾವಿ ರಾಣಿ ಚೆನ್ನಮ್ಮ ವಿವಿಯಲ್ಲಿ ₹110 ಕೋಟಿ ವೆಚ್ಚದಲ್ಲಿ ಆಡಳಿತ ಸೌಧ ಮತ್ತು ಇತರ ನಿರ್ಮಾಣ ಕಾಮಗಾರಿಗಳನ್ನು ನಿರ್ವಹಿಸಲು ಸಭೆಯು ಆಡಳಿತಾತ್ಮಕ ಅನುಮೋದನೆ ನೀಡಿತು. ರಾಜ್ಯದ ಸಾದಿಲ್ವಾರು ನಿಧಿಯನ್ನು ₹ 2500 ಕೋಟಿಗೆ ಹೆಚ್ಚಿಸಲು, ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ವಿವಿಧ ಕಾಮಗಾರಿ ನಿರ್ವಹಣೆಗೆ ₹ 154 ಕೋಟಿ, ₹ 200 ಕೋಟಿ ವೆಚ್ಚದಲ್ಲಿ 100 ಪೊಲೀಸ್ ಠಾಣೆಗಳ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳನ್ನು ನಿರ್ವಹಿಸಲು ಅನುದಾನ ಒದಗಿಸಲು ಸಂಪುಟ ಸಭೆ ಸಮ್ಮತಿಸಿತು.
ರಾಜ್ಯದ ವಿವಿಧ ಪುರಸಭೆಗಳ ವ್ಯಾಪ್ತಿಯಲ್ಲಿ ಲೋಡರ್ಗಳು ಮತ್ತು ಡ್ರೈವರ್ಗಳನ್ನು ವಿಶೇಷ ನಿಯಮಗಳ ಅಡಿ ನೇಮಿಸಿಕೊಳ್ಳಲು ಸಭೆಯು ಸಮ್ಮತಿಸಿತು. ಕರ್ನಾಟಕ ಟೌನ್ ಪ್ಲಾನಿಂಗ್ ಆಕ್ಟ್ 1961ಗೆ ತಿದ್ದುಪಡಿ ಮಾಡಲು ಸಭೆಯು ಸಮ್ಮತಿಸಿತು. ಟಿಡಿಆರ್ ಕೊಡುವ ವ್ಯವಸ್ಥೆಯನ್ನು ಯಾರು ಸಮೀಕ್ಷೆ ಮಾಡಿ ಕೊಡುತ್ತಾರೆ ಅದೇ ಅಂತಿಮ ಎಂಬ ನಿಯಮವನ್ನು ಸಡಿಸಲಾಗುವುದು. ಬಿಡಿಎ ಸಮೀಕ್ಷೆಗೆ ಬಿಡಿಎ ಒಪ್ಪಿಗೆ ನೀಡಬೇಕು. ಸಕಾಲದಲ್ಲಿ ಪ್ರತಿಕ್ರಿಯಿಸಿದ್ದರೆ ಡೀಮ್ಡ್ ಒಪ್ಪಿಗೆ ಅಂತ ತೀರ್ಮಾನ ಮಾಡಲು ಸಂಪುಟ ಸಭೆಯು ನಿರ್ಧರಿಸಿತು.
ರಾಜ್ಯದ 52 ಡ್ಯಾಂಗಳ ನವೀಕರಣ, ಹೂಳೆತ್ತುವುದು, ಎಲ್ಲವೂ ಸೇರಿ ವಿಶ್ವಬ್ಯಾಂಕ್ ನೆರವಿನಡಿ 1500 ಕೋಟಿ ಅನುದಾನ ಬಳಸಿಕೊಳ್ಳಲು ಸಂಪುಟ ಸಭೆ ತೀರ್ಮಾನಿಸಿತು.
ಸಚಿವ ಸಂಪುಟ ಸಭೆಯ ನಂತರ ವಲಸಿಗ ಸಚಿವರು ಪ್ರತ್ಯೇಕವಾಗಿ ಸಭೆ ನಡೆಸಿದರು. ವಿಧಾನಸೌಧದಲ್ಲಿ ಸಚಿವ ಭೈರತಿ ಬಸವರಾಜ್ ಕಚೇರಿಯಲ್ಲಿ ಪ್ರತ್ಯೇಕ ಸಭೆ ನಡೆಯಿತು. ಎಸ್.ಟಿ.ಸೋಮಶೇಖರ್, ಡಾ.ಸುಧಾಕರ್, ಬಿ.ಸಿ.ಪಾಟೀಲ್, ಶ್ರೀಮಂತ ಪಾಟೀಲ್, ಭೈರತಿ ಬಸವರಾಜ್ ಪ್ರತ್ಯೇಕವಾಗಿ ಚರ್ಚೆ ನಡೆಸಿದರು. ಯಾವ ವಿಚಾರದ ಬಗ್ಗೆ ಚರ್ಚೆ ನಡೆಯಿತು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.
ಹಾಸನದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ₹ 193.65 ಕೋಟಿ, ಅಂಕೋಲಾ ತಾಲೂಕಿನಲ್ಲಿ ಸೇತುವೆ ನಿರ್ಮಾಣಕ್ಕೆ ₹ 25 ಕೋಟಿ, ಭಟ್ಕಳ, ಚಳ್ಳಕೆರೆ ಮಿನಿ ವಿಧಾನಸೌಧ ಕಟ್ಟಡಗಳ ಪರಿಷ್ಕೃತ ಅಂದಾಜಿಗೆ ಅನುಮೋದನೆ, ಅಥಣಿಯಲ್ಲಿ ಪಶು ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸಂಪುಟ ಅನುಮೋದನೆ ನೀಡಿತು. ಇದೇ ವೇಳೆ ಶಾಲಾ ವಿದ್ಯಾರ್ಥಿಗಳ ಮಕ್ಕಳ ಸಮವಸ್ತ್ರ ಖರೀದಿಗೆ ₹ 83 ಕೋಟಿ ಒದಗಿಸಲು ಸಂಪುಟ ಸಭೆಯು ಸಮ್ಮತಿಸಿತು.
(Karnataka Cabinet Decision More Reservation for Farmers Children in Agriculture Universities)
ಇದನ್ನೂ ಓದಿ: ಸಚಿವ ಸಂಪುಟ ಪುನಾರಚನೆಗೆ ಬಿಜೆಪಿ ಶಾಸಕರಿಂದ ಒತ್ತಡ.. ರಾಜ್ಯ ಬಿಜೆಪಿ ಕಚೇರಿಯಲ್ಲಿ ಅರುಣ್ ಸಿಂಗ್ ಸಭೆ
ಇದನ್ನೂ ಓದಿ: DAP ರಸಗೊಬ್ಬರ ಖರೀದಿ ಸಬ್ಸಿಡಿ 700 ರೂಪಾಯಿಗೆ ಹೆಚ್ಚಳ: ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ
Published On - 7:30 pm, Mon, 21 June 21