ಸಚಿವ ಸಂಪುಟ ಪುನಾರಚನೆಗೆ ಬಿಜೆಪಿ ಶಾಸಕರಿಂದ ಒತ್ತಡ.. ರಾಜ್ಯ ಬಿಜೆಪಿ ಕಚೇರಿಯಲ್ಲಿ ಅರುಣ್ ಸಿಂಗ್ ಸಭೆ

ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಕೂಗು ಏಳಲು, ವಿಜಯೇಂದ್ರ ತಮ್ಮ ವ್ಯಾಪ್ತಿ ಮೀರಿ ಹಲವು ಇಲಾಖೆಗಳಲ್ಲಿ ಕೈ ಹಾಕ್ತಿದ್ದಾರೆ ಅನ್ನೋ ಆರೋಪ ಕಾರಣವಾಗಿತ್ತು. ಇದು ರಾಜ್ಯ ಉಸ್ತುವಾರಿ ಶಾಸಕರ ಅಹವಾಲು ಆಲಿಸುವ ಮಟ್ಟಕ್ಕೆ ಹೋಗಿದೆ. ನಿನ್ನೆ ಹಲವು ಶಾಸಕರನ್ನ ಭೇಟಿಯಾಗಿದ್ದ ಅರುಣ್ ಸಿಂಗ್, ಗೃಹ ಸಚಿವ ಬೊಮ್ಮಾಯಿ, ವಿಜಯೇಂದ್ರರನ್ನೂ ಭೇಟಿಯಾಗಿದ್ರು. ಇವತ್ತು ಅರುಣ್ ಸಿಂಗ್ ಬೆಂಗಳೂರು ಭೇಟಿ ಎಂಡ್ ಆಗಲಿದೆ.

ಸಚಿವ ಸಂಪುಟ ಪುನಾರಚನೆಗೆ ಬಿಜೆಪಿ ಶಾಸಕರಿಂದ ಒತ್ತಡ.. ರಾಜ್ಯ ಬಿಜೆಪಿ ಕಚೇರಿಯಲ್ಲಿ ಅರುಣ್ ಸಿಂಗ್ ಸಭೆ
ಅರುಣ್ ಸಿಂಗ್
TV9kannada Web Team

| Edited By: Ayesha Banu

Jun 18, 2021 | 9:27 AM

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಕೂಗು. ಸಿಎಂ ಬಿಎಸ್ವೈ ವಿರೋಧಿ ಬಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ಕಾರಣವಾಗಿದ್ದು ಯಾರು? ಬಿಜೆಪಿಯಲ್ಲಿ ಸದ್ಯ ಎದ್ದಿರೋ ಗೊಂದಲಕ್ಕೆ ಕಾರಣ ಯಾರು ಅನ್ನೋ ಪ್ರಶ್ನೆಯನ್ನ ರಾಜಕಾರಣ.. ರಾಜಕೀಯ ಪರಿಸ್ಥಿತಿಯ ಕುರಿತು ಅರಿವಿರೋ ಯಾರನ್ನೇ ಕೇಳಿದ್ರೂ.. ಅವರು ಮೊದಲು ಹೇಳೋದೇ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಹೆಸರನ್ನ. ಅಷ್ಟರ ಮಟ್ಟಿಗೆ ಯಡಿಯೂರಪ್ಪ ಸರ್ಕಾರದಲ್ಲಿ ವಿಜಯೇಂದ್ರ ತಮ್ಮ ಛಾಪು ಮೂಡಿಸಿದ್ರು. ಹೆಸರಿಗೆ ಯಡಿಯೂರಪ್ಪ ಮುಖ್ಯಮಂತ್ರಿ ಆದ್ರೂ.. ವಿಜಯೇಂದ್ರ ಸೂಪರ್ ಸಿಎಂ ಆಗಿದ್ದಾರೆ ಅನ್ನೋ ಆರೋಪ ಬಹಳ ಹಿಂದಿನಿಂದಿಲೂ ಕೇಳಿ ಬರ್ತಿತ್ತು. ವಿಜಯೇಂದ್ರ ಹಸ್ತಕ್ಷೇಪ ಹೆಚ್ಚಿದೆ ಅನ್ನೋ ಆರೋಪದ ಕಾರಣಕ್ಕೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಶಾಸಕರು-ಸರ್ಕಾರದ ನಡುವಿನ ಗೊಂದಲ ಬಗೆ ಹರಿಸಲು ಕಸರತ್ತು ನಡೆಸಿದ್ದಾರೆ.

ಸಚಿವ ಸಂಪುಟ ಪುನಾರಚನೆಗೆ ಬಿಜೆಪಿ ಶಾಸಕರಿಂದ ಒತ್ತಡ ಉಸ್ತುವಾರಿ ಅರುಣ್ ಸಿಂಗ್ ಎದುರು ಶಾಸಕರು ಸಚಿವ ಸಂಪುಟ ಪುನಾರಚನೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ನಮಗೂ ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದಾರೆ. ಮಂತ್ರಿಗಿರಿಗೆ ತಿಪ್ಪಾರೆಡ್ಡಿ, A.S.ಪಾಟೀಲ್ ನಡಹಳ್ಳಿ ಬೇಡಿಕೆ ಇಟ್ಟಿದ್ದಾರೆ. ಸಮುದಾಯಕ್ಕೆ ಅವಕಾಶ ಕೊಡಿ ಎಂದು ಪೂರ್ಣಿಮಾ ಕೇಳಿದ್ದಾರೆ. ಸಚಿವರ ವಿಚಾರದಲ್ಲಿ ಹಲವು ಶಾಸಕರಲ್ಲಿ ಆಕ್ಷೇಪಗಳಿವೆ. ಶಾಸಕರ ಕೆಲಸಗಳ ಬಗ್ಗೆ ನಿರ್ಲಕ್ಷ್ಯ. ಸಚಿವರಿಂದ ಅವರವರ ಇಲಾಖೆಯ ವರದಿ ಸಂಗ್ರಹ. ಶಾಸಕರ ಜೊತೆ ಚರ್ಚೆ ವೇಳೆಯೂ ಅಭಿಪ್ರಾಯ ಸಂಗ್ರಹ, ಸಚಿವರ ಕಾರ್ಯವೈಖರಿ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಹೀಗಾಗಿ ಸಚಿವ ಸಂಪುಟ ಪುನಾರಚನೆ ಬಗ್ಗೆ ಸದ್ಯದಲ್ಲೇ ಬಿಜೆಪಿಯಲ್ಲಿ ಚಟುವಟಿಕೆ ಶುರುವಾಗುವ ಸಾಧ್ಯತೆ ಇದೆ.

ಇಂದು ಬಿಜೆಪಿ ಪದಾಧಿಕಾರಿಗಳ ಜೊತೆ ಅರುಣ್ ಸಿಂಗ್ ಸಭೆ ಇಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರು ಭೇಟಿ ಅಂತ್ಯವಾಗಲಿದೆ. ಈಗಾಗಲೇ ಸಚಿವರು, ಆಯ್ದ ಶಾಸಕರ ಜೊತೆ ಸಭೆ ನಡೆಸಿರೋ ಅರುಣ್ ಸಿಂಗ್ ಇವತ್ತು ಬೆಳಗ್ಗೆ 9 ಗಂಟೆಗೆ ರಾಜ್ಯ ಬಿಜೆಪಿ ಪದಾಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಪ್ರಧಾನ ಕಾರ್ಯದರ್ಶಿಗಳು, ವಿವಿಧ ಮೋರ್ಚಾಗಳ ಅಧ್ಯಕ್ಷರು ಭಾಗಿಯಾಗಲಿದ್ದಾರೆ. ಇದಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ನಡೆಯಲಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಇಂದು ಸಂಜೆ ನಾಲ್ಕು ಗಂಟೆಗೆ ಬಿಜೆಪಿ ರಾಜ್ಯ ಕಚೇರಿಯಲ್ಲಿ ಕೋರ್ ಕಮಿಟಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಅರುಣ್ ಸಿಂಗ್, ಸಿಎಂ ಬಿಎಸ್ವೈ, ರಾಜ್ಯಾಧ್ಯಕ್ಷ ಕಟೀಲು, ಮೂವರು ಡಿಸಿಎಂಗಳು ಭಾಗಿಯಾಗಲಿದ್ದಾರೆ. ಕೋರ್ ಕಮಿಟಿ ಸಭೆಯಲ್ಲಿ ನಾಯಕತ್ವ ಬದಲಾವಣೆ ಕುರಿತು ಪಕ್ಷದ ಶಾಸಕರು ಹೊಂದಿರೋ ನಿಲುವು.. ರಾಜ್ಯದಲ್ಲಿ ಪಕ್ಷದ ಸಂಘಟನೆ.. ಶಾಸಕರು.. ಸಚಿವರು ಹೊಂದಿರೋ ಅಸಮಾಧಾನ ತಣಿಸಲು ಕೈಗೊಳ್ಳಬೇಕಿರೋ ಕ್ರಮಗಳ ಕುರಿತು ಚರ್ಚಿಸೋ ಸಾಧ್ಯತೆ ಇದೆ. ಇದೆಲ್ಲಾ ಆದ ಬಳಿಕ ಇಂದು ರಾತ್ರಿ 7.45ಕ್ಕೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ದೆಹಲಿ ಫ್ಲೈಟ್ ಹತ್ತಲಿದ್ದಾರೆ.

ಬಿಜೆಪಿ ರಾಜ್ಯ ಉಸ್ತುವಾರಿ ಭೇಟಿ ಮಾಡಿದ ಸಿಎಂ ಪುತ್ರ ವಿಜಯೇಂದ್ರ ಬುಧವಾರ ರಾಜ್ಯಕ್ಕೆ ಆಗಮಿಸಿರೋ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಚಿವರ ಜೊತೆಗೆ ಸಭೆ ನಡೆಸಿದ್ರು. ಬಳಿಕ ನಿನ್ನೆ ಶಾಸಕರ ಜೊತೆ ಒನ್ ಟು ಒನ್ ಮೀಟಿಂಗ್ ನಡೆಸಿದ್ರು. ಈ ವೇಳೆ ಬಹುತೇಕ ಶಾಸಕರು ಸಿಎಂ ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿದ್ದಾರೆ. ಕೆಲವರು ಪಕ್ಷದ ನಿರ್ಧಾರಕ್ಕೆ ಬದ್ಧ ಅನ್ನೋ ಮಾತು ಹೇಳಿದ್ದಾರೆ. ಇಬ್ಬರು ಮಾತ್ರ ಸಿಎಂ ವಿರುದ್ಧ ಮಾತನಾಡಿದ್ರು. ಇದಾದ ಬಳಿಕ ಬಿಜೆಪಿ ರಾಜ್ಯ ಉಸ್ತುವಾರಿಯನ್ನ ಯಡಿಯೂರಪ್ಪ ಪುತ್ರ ವಿಜಯೇಂದ್ರ ಕುಮಾರ ಕೃಪಾ ಗೆಸ್ಟ್ ಹೌಸ್ನಲ್ಲಿ ಭೇಟಿಯಾಗಿದ್ರು. ರಾತ್ರಿ 8.30ಕ್ಕೆ ಕೆ.ಕೆ.ಗೆಸ್ಟ್ಹೌಸ್ಗೆ ಆಗಮಿಸಿದ ವಿಜಯೇಂದ್ರ ಸುಮಾರು 45 ನಿಮಿಷ ಅರುಣ್ ಸಿಂಗ್ ಜೊತೆಗೆ ಮಾತುಕತೆ ನಡೆಸಿದ್ರು. ಈ ವೇಳೆ ಹಲವು ಸಲಹೆ-ಸೂಚನೆಗಳನ್ನ ಅರುಣ್ ಸಿಂಗ್, ವಿಜಯೇಂದ್ರಗೆ ನೀಡಿದ್ದಾರೆ ಎನ್ನಲಾಗಿದೆ.

ವಿಜಯೇಂದ್ರ ಜೊತೆ ಅರುಣ್ ಸಿಂಗ್ ಮಾತುಕತೆ ನಡೆಸುತ್ತಿದ್ದ ಸಂದರ್ಭದಲ್ಲೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೂಡ ಕುಮಾರ ಕೃಪಾ ಗೆಸ್ಟ್ಹೌಸ್ಗೆ ಆಗಮಿಸಿದ್ರು. ರಾತ್ರಿ ಸುಮಾರು 9 ಗಂಟೆ ವೇಳೆಗೆ ಆಗಮಿಸಿದ ಬಸವರಾಜ ಬೊಮ್ಮಾಯಿ ಸುಮಾರು ಹೊತ್ತು ಅರುಣ್ ಸಿಂಗ್ ಜೊತೆ ಚರ್ಚೆ ನಡೆಸಿದ್ರು. ಈ ವೇಳೆ ನಾಯಕತ್ವ ಬದಲಾವಣೆ ರಾಗ ಹಾಡ್ತಿರೋರು ಸಿಎಂ ಪರ ಇರೋರು ಮತ್ತು ತಟಸ್ಥ ನಿಲುವು ಹೊಂದಿರೋರು ಹೇಳಿದ್ದ ವಿಷಯಗಳ ಕುರಿತು ಬೊಮ್ಮಾಯಿ ಜೊತೆ ಅರುಣ್ ಸಿಂಗ್ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಮೂರು ದಿನ ಬೆಂಗಳೂರಿನಲ್ಲಿ ಠಿಕಾಣಿ ಹೂಡಿ ರಾಜ್ಯ ಬಿಜೆಪಿಯಲ್ಲಿ ಹೊಗೆಯಾಡ್ತಿರೋ ಅಸಮಾಧಾನ ತಣಿಸಲು ಅರುಣ್ ಸಿಂಗ್ ಪ್ರಯತ್ನಿಸಿದ್ರು. ಇದರ ಭಾಗವಾಗಿ ಸಚಿವರ ಸಭೆ.. ಶಾಸಕರ ಜೊತೆ ಒನ್ ಟು ಒನ್ ಮೀಟಿಂಗ್ ಎಲ್ಲವನ್ನ ನಡೆಸಿದ್ದಾರೆ. ಈ ಎಲ್ಲ ಪ್ರಯತ್ನಗಳು ಎಷ್ಟರ ಮಟ್ಟಿಗೆ ಫಲ ನೀಡುತ್ತವೆ ಅನ್ನೋದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಎಸ್​ಐಟಿ ವಿಚಾರಣೆ ವೇಳೆ ಕಿಂಗ್​ಪಿನ್ ಶ್ರವಣ್ ಮೌನ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada