
ಬೆಂಗಳೂರು, ಜೂನ್ 19: ಜಾತಿ ಗಣತಿ (Caste Census) ಎಂಬ ರಾಜಕೀಯದ ಮಾಯಾ ಕುದುರೆ ಬೆನ್ನೇರಿ ಹೊರಡಲು ಸಿಎಂ ಸಿದ್ದರಾಮಯ್ಯ (Siddaramaiah) ಭರ್ಜರಿಯಾಗಿಯೇ ಪ್ಲಾನ್ ಮಾಡಿದ್ದರು. ಎಲ್ಲವು ಅಂದುಕೊಂಡಂತೆಯೇ ಆಗಿದ್ದರೆ ಕಾಂತರಾಜು ಮಾಹಿತಿ ಆಧಾರಿತ ಜಯಪ್ರಕಾಶ್ ಹೆಗ್ಡೆ ಸಾಮಾಜಿಕ ಶೈಕ್ಷಣಿಕ ವರದಿ ಜಾತಿ ಗಣತಿಯನ್ನು ಸಿದ್ದರಾಮಯ್ಯ ಸರ್ಕಾರ ಯಥಾವತ್ತಾಗಿ ಅನುಷ್ಠಾನ ಮಾಡಬೇಕಾಗಿತ್ತು. ಆದರೆ ಕಾಂಗ್ರೆಸ್ (Congress) ಸರ್ಕಾರದಲ್ಲಿ ಆಗಿದ್ದೇ ಬೇರೆ. ಹಾಗಾದರೆ, ಸರ್ಕಾರ ಕಾಂತರಾಜು ವರದಿಗೆ ಕೋಕ್ ಕೊಟ್ಟಿದ್ದು ಏಕೆ? ಸಂಪುಟ ಸಭೆಯಲ್ಲಿ ಅಂತಿಮ ಮುದ್ರೆ ಒತ್ತಲು ಮುಂದಾಗಿದ್ದ ಸಿಎಂ ಕೈ ಕಟ್ಟಿ ಹಾಕಿದವರು ಯಾರು? ವಿಧಾನ ಸೌಧದಿಂದ ಹೈಕಮಾಂಡ್ ಅಂಗಳಕ್ಕೆ ಎಂಟ್ರಿ ಕೊಟ್ಟವರು ಯಾರು?
ಜೂನ್ 6 ರಂದು ನಡೆದ ಸಂಪುಟ ಸಭೆಯಲ್ಲಿ ಯಾರು ಏನೇ ಹೇಳಿದರೂ ಮುಂದಿನ ಕ್ಯಾಬಿನೆಟ್ನಲ್ಲಿ ಕಾಂತರಾಜು ವರದಿ ಅನುಷ್ಠಾನ ಪಕ್ಕಾ ಎಂದು ನೇರಾನೇರ ಹೇಳಲಾಗಿತ್ತು. ಜಾತಿ ಗಣತಿಗೆ ವರದಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಲಿಂಗಾಯತ ಮತ್ತು ಒಕ್ಕಲಿಗ ಸಚಿವರು, ಇದು ಸಾಧ್ಯವಿಲ್ಲ ಎಂದು ತಗಾದೆ ತೆಗಿದಿದ್ದರು. ಆದರೆ, ಯಾವುದಕ್ಕೂ ಡೋಂಟ್ ಕೇರ್ ಎಂದ ಸಿಎಂ ಸಿದ್ದರಾಮಯ್ಯ ಜೂನ್ 12ರ ಮುಹೂರ್ತ ನಿಗದಿ ಪಡಿಸಿದ್ದರು. ಇದಕ್ಕೆ ಬೇಕಾಗಿಯೇ ಲಿಂಗಾಯತ, ಒಕ್ಕಲಿಗ ಹಾಗೂ ಒಬಿಸಿ ಸಮುದಾಯದ ಸಚಿವರ ಲಿಖಿತ ಅಭಿಪ್ರಾಯವನ್ನು ಕೇಳಿದ್ದರು. ಲಿಂಗಾಯತ ಸಚಿವರು ಸಾಮೂಹಿಕವಾಗಿ ಪತ್ರ ಕೊಟ್ಟಾಗ ಅದನ್ನು ತಿರಸ್ಕರಿಸಿದ ಸಿಎಂ, ವ್ಯಕ್ತಿಗತವಾಗಿ ನೀಡಿ ಎಂದು ಸೂಚನೆ ಕೊಟ್ಟರು. ಹೀಗಾಗಿ ಬಳಿಕ ಅದೇ ವಿಷಯವನ್ನು ಲಿಂಗಾಯತ ಸಚಿವರು ತಮ್ಮ ತಮ್ಮ ಲೆಟರ್ ಹೆಡ್ನಲ್ಲಿ ನೀಡಿದ್ದರು.
ಡಿಸಿಎಂ ಡಿಕೆ ಶಿವಕುಮಾರ್ ಆರಂಭವದಲ್ಲಿಯೇ ಅಭಿಪ್ರಾಯವನ್ನು ಸಂಪುಟದಲ್ಲಿ ಹೇಳಿದ್ದೇನೆ ಎಂದರೂ ಸಿಎಂ ಸೂಚನೆ ಹಿನ್ನಲೆ ಲಿಖಿತ ಉತ್ತರ ನೀಡಿದ್ದರು. ಯಾವಾಗ ಸಿಎಂ ವರದಿ ಅನುಷ್ಠಾನಕ್ಕೆ ಮುಂದಾದರೋ ಅತ್ತ ಲಿಂಗಾಯತ, ಒಕ್ಕಲಿಗ ಹಾಗೂ ಕೆಲ ಒಬಿಸಿ ಶಾಸಕರು ಸಭೆ ಸೇರಿ ಹೈಕಮಾಂಡ್ ವರಿಷ್ಠ ರಾಹುಲ್ ಗಾಂಧಿಗೆ ದೂರು ನೀಡಿದರು ಎನ್ನುವ ಅಂಶ ಬಯಲಾಗಿದೆ.
ಅದರಲ್ಲೂ ಕೆಲ ಒಬಿಸಿ ಸಮುದಾಯದ ಹಾಗೂ ಸಿಎಂ ಬಗ್ಗೆ ಅಪಾರ ಗೌರವ ಹೊಂದಿರುವ ಸಚಿವರೇ ತಮ್ಮ ಸಮುದಾಯದ ಅಂಕಿಅಂಶ ಹಾಗೂ ವರ್ಗಿಕರಣ ಮಾಡಿರುವದಕ್ಕೆ ತೀವ್ರ ಅಸಮಾಧಾನ ಹೊರಹಾಕಿದ್ದರು ಎನ್ನಲಾಗಿದೆ. ಮೇಲಾಗಿ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಕಾಂತರಾಜು ವರದಿ ಅನುಷ್ಠಾನದಿಂದ ಆಗಬಹುದಾದ ರಾಜಕೀಯ ನಷ್ಠದ ಬಗ್ಗೆ ವಿವರಿಸಿದ್ದಾರೆ. ಈ ವಿಷಯ ಗಂಭೀರವಾಗುತ್ತಾ ಇದ್ದಂತೆ ರಾಹುಲ್ ಗಾಂಧಿ ಸಹ ಎಂಟ್ರಿ ಕೊಟ್ಟಿದ್ದು, ಜಾತಿ ಗಣತಿ ವಿಚಾರ ಹಳಿ ತಪ್ಪದಂತೆ ನೋಡಿಕೊಳ್ಳಲು ಮುಂದಾದರು. ಅದರಲ್ಲೂ ಅಂಕಿಅಂಶಗಳ ಬಗ್ಗೆ ರಾಹುಲ್ ಗಾಂಧಿ ಕಳವಳ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಎಲ್ಲಾ ಸಮುದಾಯಗಳನ್ನು ವಿಶ್ವಾಸಕ್ಕೆ ಪಡೆಯುವ ನಿಟ್ಟಿನಲ್ಲಿ ಮರು ಜಾತಿ ಗಣತಿಗೆ ಸೂಚನೆ ಕೊಟ್ಟರು.
ಇನ್ನೊಂದೆಡೆ, ಕೇವಲ ಏಣಿಕೆ ಹೊರತುಪಡಿಸಿ ಉಳಿದೆಲ್ಲಾ ವಿಷಯಗಳನ್ನು ಕಾಂತರಾಜು ಮಾಡಲ್ ಅನ್ನೇ ಅನುಷ್ಠಾನ ಮಾಡಲು ಸಿಎಂ ಸಿದ್ಧರಾಗಿದ್ದರು. ಆದರೆ ಮತ್ತೆ ಜೂನ್ 12ರಂದು ನಡೆದ ಸಭೆಯಲ್ಲಿ ಕೆಲ ಸಚಿವರು, ಈಗಾಗಲೇ ದಲಿತ ಸಮುದಾಯವನ್ನು ಹೊಸದಾಗಿ ಎಣಿಕೆ ಮಾಡಲಾಗ್ತಾ ಇದೆ. ಸಂಪೂರ್ಣ ಹೊಸದಾಗಿ ಮಾಡದೇ ಹಳೇ ಅಂಶಗಳನ್ನೇ ಆಧಾರವಾಗಿಟ್ಟುಕೊಂಡು ಹೊಂದಿಸಿ ಬರೆಯಲು ಮುಂದಾದರೆ ಇತರೆ ಸಮುದಾಯಗಳು ಸಿಟ್ಟಾಗಬಹುದು. ಹೊಸದಾಗಿಯೇ ಸರ್ವೆ ಮಾಡಿ ಎಂದು ಪಟ್ಟು ಹಿಡಿದ್ದಾರೆ. ತೀವ್ರ ಒತ್ತಡದ ಪರಿಣಾಮ ಸಿಎಂ ಸಿದ್ದರಾಮಯ್ಯ ಹೊಸದಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ವರದಿ ನಡೆಸಲು ಮುಂದಾಗಿದ್ದಾರೆ.
ಈಗ ಹೊಸ ಜಾತಿ ಗಣತಿ ವಿಚಾರದಲ್ಲಿ ಸರ್ಕಾರ ನಿರ್ದಿಷ್ಟ ನಿಲುವಿಗೆ ಬಂದಿದ್ದು, ಯಾರಿಗೂ ತೊಂದರೆ ಆಗೋಲ್ಲ ಎಂಬ ಮಾತುಗಳನ್ನಾಡುತ್ತಾ ಇದೆ.
ಇದನ್ನೂ ಓದಿ: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಉತ್ಪನ್ನ ಮಳಿಗೆಗೆ ಅನುಮತಿ: ಡಿಕೆ ಶಿವಕುಮಾರ್ ಹೇಳಿದ್ದಿಷ್ಟು
ಅತ್ತ ತಜ್ಞರು ಸಹ ಜಾತಿ ಗಣತಿ ಬಗ್ಗೆ ತಮ್ಮದೇ ಆದ ಅಭಿಪ್ರಾಯ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರದ ಗಣತಿಯೇ ಬೇರೆ, ರಾಜ್ಯದ ಸಾಮಾಜಿಕ ಶೈಕ್ಷಣಿಕ ಸರ್ವೆಯೇ ಬೇರೆ. ಎಲ್ಲವನ್ನು ಅಳೆದು ತೂಗಿ ಮಾಡಬೇಕಿದೆ ಎಂದಿದ್ದಾರೆ. ಹೀಗೆ ಜಾತಿ ಗಣತಿಯ ಎಂಬ ಪಗಡೆ ಆಟದಲ್ಲಿ ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿರುವ ಮಂತ್ರಿಗಳೇ, ಸಿಎಂ ಆಟಕ್ಕೆ ಕೌಂಟರ್ ದಾಳ ಉರುಳಿಸಿರುವುದು ಬೆಳಕಿಗೆ ಬಂದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ