ಕರ್ನಾಟಕ ಮುಖ್ಯಮಂತ್ರಿ ಬದಲಾವಣೆ? – ಜುಲೈ 26ಕ್ಕೆ ಮೊದಲ ಮುಹೂರ್ತ, ತಪ್ಪಿದರೆ ಆಗಸ್ಟ್​ 15

ಒಂದುವೇಳೆ ಆಗಸ್ಟ್ 15 ರವರೆಗೆ ಯಡಿಯೂರಪ್ಪ ಅವರನ್ನು ಮುಂದುವರೆಸಿದಲ್ಲಿ ಮತ್ತೇನಾದರೂ ಬೆಳವಣಿಗೆಗಳು ಆಗಿ ಶಾಸಕರು ಯಡಿಯೂರಪ್ಪ ಜತೆ ನಿಂತುಬಿಟ್ಟರೆ ಅವರನ್ನು ಅಲುಗಾಡಿಸುವುದು ಕಷ್ಟ ಎನ್ನುವ ಮುಂದಾಲೋಚನೆ ಹೈಕಮಾಂಡ್ ತಲೆಹೊಕ್ಕಿದೆ.

ಕರ್ನಾಟಕ ಮುಖ್ಯಮಂತ್ರಿ ಬದಲಾವಣೆ? - ಜುಲೈ 26ಕ್ಕೆ ಮೊದಲ ಮುಹೂರ್ತ, ತಪ್ಪಿದರೆ ಆಗಸ್ಟ್​ 15
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿನ ಬೆಳವಣಿಗೆಗಳು ಭಾರೀ ಸಂಚಲನ ಮೂಡಿಸುತ್ತಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡುವ ಕಾಲ ಸನ್ನಿಹಿತವಾಯಿತಾ ಎಂಬ ಪ್ರಶ್ನೆ ಬಲವಾಗಿ ಕಾಡಲಾರಂಭಿಸಿದೆ. ಆದರೆ, ಜುಲೈ 26 ರಂದು ನಡೆಯಲಿರುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಎರಡು ಬಗೆಯ ಸಾಧ್ಯತೆಗಳು ವ್ಯಕ್ತವಾಗಬಹುದು ಎಂಬ ನಿರೀಕ್ಷೆಯನ್ನು ಮುಖ್ಯಮಂತ್ರಿ ಆಪ್ತ ವಲಯ ಇಟ್ಟುಕೊಂಡಿದ್ದು, ಜುಲೈ 26ರೊಳಗೆ ವರಿಷ್ಠರಿಂದ ಸೂಚನೆ ಬಂದಲ್ಲಿ ಯಡಿಯೂರಪ್ಪ ರಾಜೀನಾಮೆ ನೀಡಬಹುದು ಇಲ್ಲವೇ ಆಗಸ್ಟ್ 15ರವರೆಗೂ ಮುಂದುವರಿಯಬಹುದು ಎಂದು ಹೇಳಲಾಗುತ್ತಿದೆ.

ಈ ಎರಡು ಸಾಧ್ಯತೆಗಳನ್ನು ಆಪ್ತವಲಯ ಊಹಿಸಿದೆಯಾದರೂ ದೆಹಲಿ ವರಿಷ್ಠರು ಮಾತ್ರ ಜುಲೈ 26ರ ಮುಹೂರ್ತಕ್ಕೇ ಹೆಚ್ಚು ಒತ್ತು ನೀಡಬಹುದು ಎನ್ನಲಾಗುತ್ತಿದೆ. ಒಂದುವೇಳೆ ಆಗಸ್ಟ್ 15 ರವರೆಗೆ ಯಡಿಯೂರಪ್ಪ ಅವರನ್ನು ಮುಂದುವರೆಸಿದಲ್ಲಿ ಮತ್ತೇನಾದರೂ ಬೆಳವಣಿಗೆಗಳು ಆಗಿ ಶಾಸಕರು ಯಡಿಯೂರಪ್ಪ ಜತೆ ನಿಂತುಬಿಟ್ಟರೆ ಅವರನ್ನು ಅಲುಗಾಡಿಸುವುದು ಕಷ್ಟ ಎನ್ನುವ ಮುಂದಾಲೋಚನೆ ಹೈಕಮಾಂಡ್ ತಲೆಹೊಕ್ಕಿದೆ. ಆದ್ದರಿಂದ ಪಟ್ಟದಿಂದ ಇಳಿಸಲು ತೀರಾ ವಿಳಂಬ ಮಾಡುವ ದುಸ್ಸಾಹಸಕ್ಕೆ ಹೈಕಮಾಂಡ್ ಕೈ ಹಾಕುವುದಿಲ್ಲ ಎಂಬ ಮಾಹಿತಿಯನ್ನು ಪಕ್ಷದ ಮೂಲಗಳು ತಿಳಿಸಿವೆ.

ಸದ್ಯದ ಬೆಳವಣಿಗೆಗಳನ್ನು ನೋಡಿದರೆ ಸಿಎಂ ಸ್ಥಾನದಲ್ಲಿ ಯಡಿಯೂರಪ್ಪ ಮುಂದುವರಿಕೆ ಬಗ್ಗೆ ಅನಿಶ್ಚಿತತೆ ಮೂಡಲಾರಂಭಿಸಿದ್ದು, ಬೇರೆ ಬೇರೆ ಲೆಕ್ಕಾಚಾರಗಳು ಹುಟ್ಟಿಕೊಳ್ಳಲಾರಂಭಿಸಿವೆ. ಜುಲೈ 26 ರಂದು ನಡೆಯಲಿರುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯೇ ಮಹತ್ತರ ಬದಲಾವಣೆ, ಬೆಳವಣಿಗೆಗೆ ನಾಂದಿ ಹಾಡಬಹುದು ಎನ್ನುವ ಮಾತುಗಳಿದ್ದು, ದೆಹಲಿ ಭೇಟಿ ವೇಳೆಯೂ ನಾವು ತಿಳಿಸುತ್ತೇವೆ ಎಂದಷ್ಟೇ ಹೈಕಮಾಂಡ್​ ಮುಖ್ಯಮಂತ್ರಿಗೆ ಹೇಳಿ ಕಳುಹಿಸಿದ್ದಾರೆ ಎಂಬ ಮಾಹಿತಿ ಸಿಎಂ ಆಪ್ತ ಬಳಗದಿಂದ ಲಭ್ಯವಾಗಿದೆ.

ಸದ್ಯ ನಮ್ಮ ರಾಜ್ಯದಲ್ಲಿ ಸಿಎಂ ಸ್ಥಾನ ಖಾಲಿ ಇಲ್ಲ: ಲಕ್ಷ್ಮಣ ಸವದಿ
ಮುಖ್ಯಮಂತ್ರಿ ಬದಲಾವಣೆ ಕುರಿತು ಮಾತನಾಡಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ನಮ್ಮದು ರಾಷ್ಟ್ರೀಯ ಪಕ್ಷ. ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಮುಖ್ಯಮಂತ್ರಿಗಳೇ ಬದಲಾವಣೆ ಇಲ್ಲ ಅಂದಿದ್ದಾರೆ. ಅಂದ ಮೇಲೆ ನಾನು ಹೇಳೋ ಅಗತ್ಯ ಇಲ್ಲ ಎಂದಿದ್ದಾರೆ. ನೀವು ಸಿಎಂ ಆಗುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ ಸಿಎಂ ಆಗಬೇಕೆಂದು ಎಲ್ಲರಿಗೂ ಆಸೆ, ಬಯಕೆ ಇರುತ್ತೆ. ಆದರೆ, ಸದ್ಯ ನಮ್ಮ ರಾಜ್ಯದಲ್ಲಿ ಸಿಎಂ ಸ್ಥಾನ ಖಾಲಿ ಇಲ್ಲ. ಸಿಎಂ ಸ್ಥಾನ ಖಾಲಿಯಾದಾಗ ಈ ಪ್ರಶ್ನೆಗೆ ಉತ್ತರಿಸಬಹುದು. ಏನೇ ಆದರೂ ನಾನು ಸಿಎಂ‌ ಆಗುವ ಪ್ರಶ್ನೆಯೇ ಬರಲ್ಲ ಎಂದು ಹೇಳಿದ್ದಾರೆ.

ಸಿಎಂ ನಿವಾಸಕ್ಕೆ ಮುನಿರತ್ನ ಭೇಟಿ
ಈ ನಡುವೆ ಸಿಎಂ ಅಧಿಕೃತ ನಿವಾಸ ಕಾವೇರಿಗೆ ಶಾಸಕ ಮುನಿರತ್ನ ಆಗಮಿಸಿದ್ದು, ಈ ಬಾರಿ ಸಂಪುಟ ವಿಸ್ತರಣೆಯಾದರೆ ಮುನಿರತ್ನಗೆ ಮಂತ್ರಿ ಪದವಿ ಸಿಗಲಿದೆ ಎಂಬ ಚರ್ಚೆಯಿದ್ದ ಕಾರಣ ಈ ಭೇಟಿ ಕುತೂಹಲ ಮೂಡಿಸಿದೆ. ಮಿತ್ರ ಮಂಡಳಿ ಸದಸ್ಯರ ಪೈಕಿ ಮುನಿರತ್ನ ಮಾತ್ರ ಸಚಿವ ಸ್ಥಾನದಿಂದ ವಂಚಿತರಾಗಿದ್ದು, ಇದೀಗ ಮುಖ್ಯಮಂತ್ರಿ ಬದಲಾವಣೆ ಆಗ್ತಾರೆ ಎನ್ನುವ ವದಂತಿ ಹಿನ್ನೆಲೆಯಲ್ಲಿ ಸಿಎಂ ಭೇಟಿಗಾಗಿ ಶಾಸಕ ಮುನಿರತ್ನ ಆಗಮಿಸಿದ್ದಾರೆ.

ಒಬ್ಬ ಭ್ರಷ್ಟ ಮುಖ್ಯಮಂತ್ರಿ ರಾಜೀನಾಮೆ ಕೊಡಲಿದ್ದಾರೆ ಅನ್ನೋದು ಮುಖ್ಯ: ಸಿದ್ದರಾಮಯ್ಯ
ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಿಎಂ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡ್ತಾರೆ ಅಂತ ನಾನು ಮೊದಲೇ ಹೇಳಿದ್ದೆ. ಆಗ ಯಾರೂ ನಂಬಿರಲಿಲ್ಲ, ಈಗ ಆ ಕಾಲ ಸನ್ನಿಹಿತವಾಗಿದೆ. ಒಬ್ಬ ಭ್ರಷ್ಟ ಸಿಎಂ ಹೋಗಬೇಕು. ಯಡಿಯೂರಪ್ಪ ಬದಲಾವಣೆಯಿಂದ ಕಾಂಗ್ರೆಸ್​ಗೆ ಪ್ಲಸ್ ಮೈನಸ್ ಮುಖ್ಯ ಅಲ್ಲ. ಒಬ್ಬ ಕರೆಪ್ಟ್ ಮುಖ್ಯಮಂತ್ರಿ ಹೋಗ್ತಿದ್ದಾರೆ ಅನ್ನೋದು ಮುಖ್ಯ ಎಂದು ಹೇಳಿದ್ದಾರೆ. ನಳಿನ್ ಕುಮಾರ್ ಕಟೀಲ್ ಆಡಿಯೋ ಬಹಿರಂಗ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಹೈಕಮಾಂಡ್​ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನ ಕಟೀಲ್ ಹೇಳಿಕೊಂಡಿರಬಹುದು. ಆದರೆ, ಇದು ತಾವು ಹೇಳಿದ್ದಲ್ಲ, ತಮ್ಮದಲ್ಲ ಅಂತ ಕಟೀಲ್ ಹೇಳಿಕೊಂಡಿದ್ದಾರೆ. ಆಡಿಯೋ ಬಗ್ಗೆ ತನಿಖೆ ನಡೆಸಲು ಸಿಎಂಗೆ ಮನವಿ ಮಾಡೊದಾಗಿ ಹೇಳಿದ್ದಾರೆ. ಶೆಟ್ಟರ್ ಮತ್ತು ಈಶ್ವರಪ್ಪ ಅವರನ್ನ ಬದಲಾವಣೆ ಮಾಡುವ ಬಗ್ಗೆಯೂ ಆಡಿಯೋದಲ್ಲಿ ಇದೆ. ಹೀಗಾಗಿ ಸಿಎಂ ಬದಲಾದ ಮೇಲೆ ಕೆಲವು ಸಚಿವರ ಬದಲಾವಣೆ ಕೂಡ ಆಗಬಹುದು ಎಂದಿದ್ದಾರೆ.

2000 ಕೋಟಿ ರೂಪಾಯಿ ಕೊಡ್ತೀನಿ ಸಿಎಂ ಮಾಡಿ ಎಂದು ದೆಹಲಿಗೆ ಹೋದವರಿದ್ದಾರೆ: ಯತ್ನಾಳ್
ಈ ಎಲ್ಲಾ ಬೆಳವಣಿಗೆ ಬಗ್ಗೆ ಮಾತನಾಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಿಎಂ ಮಾಡಿ 2000 ಕೋಟಿ ರೂಪಾಯಿ ಕೊಡ್ತೇವೆಂದು ಕೆಲವರು ದೆಹಲಿಗೆ ಹೋಗಿದ್ದರು. ಬೇರೆ ಬೇರೆ ಆಸೆ ಆಮಿಷವೊಡ್ಡಲು ತೆರಳಿದ್ದರು. ಆದರೆ, ನಮ್ಮ ಪಕ್ಷ ಬಿಜೆಪಿ ಹಾಗಿಲ್ಲ. ನಮ್ಮ ಪ್ರಧಾನಿಗಳು, ಕೇಂದ್ರ ಸಚಿವ ಸಂಪುಟದಲ್ಲಿ ದಲಿತರಿಗೆ ಹಿಂದುಳಿದವರಿಗೆ ಅವಕಾಶ ನೀಡಿದ್ದಾರೆ. ಎಲ್ಲಾ ಸಮುದಾಯದವರಿಗೂ ಕೇಂದ್ರ ಸಂಪುಟದಲ್ಲಿ ಸಚಿವರನ್ನಾಗಿ ಮಾಡಿದ್ದಾರೆ. 2000 ಕೋಟಿ ರೂಪಾಯಿ ಕೊಡುತ್ತೇನೆ ಎಂದರೆ ಕಪಾಳಕ್ಕೆ ಹೊಡೆದು ಕಳುಹಿಸುತ್ತಾರೆ ಎಂದು ಹೇಳಿದ್ದಾರೆ.

ಶಾಸಕಾಂಗ ಪಕ್ಷದ ಸಭೆ ಕರೆದ ಬಗ್ಗೆ ಇನ್ನೂ ಮಾಹಿತಿ ನೀಡಿಲ್ಲ. ಆಧಿಕೃತವಾಗಿ ನಮಗೆ ಇನ್ನೂ ಮಾಹಿತಿ ಇಲ್ಲ. ಶಾಸಕಾಂಗ ಸಭೆ ಕರೆದರೆ ನಾವು ಹೋಗಲೇಬೇಕಾಗುತ್ತದೆ. ಸಭೆಗೆ ಹೋಗುವುದು ನಮ್ಮ ಕರ್ತವ್ಯ ಮತ್ತು ಹಕ್ಕು ಎಂದಿದ್ದಾರೆ. ಸಭೆಯನ್ನು ನಾವು ಉಪಯೋಗ ಮಾಡಿಕೊಂಡೇ ಮಾಡಿಕೊಳ್ಳುತ್ತೇವೆ. ಏನು ಹೇಳಬೇಕೋ ಅದನ್ನ ನಾವು ಶಾಸಕಾಂಗ ಸಭೆಯಲ್ಲಿ ಹೇಳುತ್ತೇವೆ. ಮತಕ್ಷೇತ್ರದ ಕೆಲಸ ಕಾರ್ಯಗಳು ಹಾಗೂ ಪಕ್ಷದ ಮುಂದಿನ ಭವಿಷ್ಯದ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದಿದ್ದಾರೆ.

ಇದೇ ವೇಳೆ ವಿರೋಧ ಪಕ್ಷಗಳ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಅವರು, ರಾಜ್ಯದಲ್ಲಿ ವಿರೋಧ ಪಕ್ಷಗಳು ಸತ್ತಿವೆ, ಮಾರಾಟವಾಗಿವೆ. ನಿನ್ನೆ ಒಬ್ಬ ನಾಯಕರು ಜಿಲ್ಲೆಗೆ ಬಂದಿದ್ದರು, ಎಲ್ಲಾ ಮಾರಾಟವಾಗಿದ್ದಾರೆ. ಆ್ಯಂಡ್ ಕಂಪನಿ ಆಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ:
ನಳಿನ್​ ಕುಮಾರ್​ ಕಟೀಲ್​ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ತುಣುಕಿನಲ್ಲಿ ಇರುವ ಸೀಕ್ರೇಟ್ ಏನು? ಇಲ್ಲಿದೆ ಸಂಪೂರ್ಣ ವಿವರ 

ರಾಜೀನಾಮೆ ನೀಡುವ ಪ್ರಶ್ನೆ ಇಲ್ಲ; ಮತ್ತೆ ಆಗಸ್ಟ್ ಮೊದಲ ವಾರದಲ್ಲಿ ದೆಹಲಿಗೆ ಬರುತ್ತೇನೆ – ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ