ಬೆಂಗಳೂರು, ಫೆಬ್ರವರಿ 13: ಆಡಳಿತಾರೂಢ ಕಾಂಗ್ರೆಸ್ನಲ್ಲಿ ಸಿಎಂ ಹುದ್ದೆಗಾಗಿ ನಡೆಯುತ್ತಿರುವ ಪೈಪೋಟಿ ದಿನಕ್ಕೊಂದು ಸ್ವರೂಪ, ತಂತ್ರಗಾರಿಕೆ, ಕ್ಷಣಕ್ಕೊಂದು ತಿರುವು ಪಡೆಯುತ್ತಲೇ ಇದೆ. ಹಳ್ಳಿಯಿಂದ ಹಿಡಿದು ದೆಹಲಿಯ ತನಕ ಪಟ್ಟದ ರಾಜಕಾರಣ ಜೋರಾಗಿ ನಡೆಯುತ್ತಿದೆ. ಕಳೆದ ಹತ್ತು ದಿನಗಳಿಂದ ಮಂಡಿ ನೋವಿನಿಂದ ಓಡಾಡಲು ಅಸಾಧ್ಯವಾದರೂ ಕುಳಿತಲ್ಲೇ ಇರುವಂತಾಗಿದ್ದರೂ ಸಿಎಂ ಸಿದ್ದರಾಮಯ್ಯ ಉರುಳಿಸುತ್ತಿರುವ ದಾಳ ಅಸಾಧ್ಯವಾದ್ದು. ಸಿಎಂ ಸಿದ್ದರಾಮಯ್ಯ ಇದೀಗ ಮನಸ್ಸಿನ ಮಾತೊಂದನ್ನು ಬಿಚ್ಚಿಟ್ಟಿದ್ದು ಕಾಂಗ್ರೆಸ್‌ನ ಆಂತರಿಕ ರಾಜಕಾರಣ ಅಷ್ಟು ಸುಲಭ ಇಲ್ಲ ಎಂಬುದನ್ನು ಬಿಂಬಿಸಿದೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಸಿಎಂ ಸಿದ್ದರಾಮಯ್ಯ, ಚುನಾವಣಾ ರಾಜಕೀಯದಿಂದ ನಿವೃತ್ತಿ ಆಗುವುದಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ, ‘ಲಾಂಗೆಸ್ಟ್ ಚೀಫ್ ಮಿನಿಸ್ಟರ್ ಆಫ್ ಕರ್ನಾಟಕ’ ಎಂಬ ದಾಖಲೆಯ ಖ್ಯಾತಿ ತಮಗೇ ಸಿಗಬಹುದು ಎಂಬ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಮಾಜಿ ಸಿಎಂ ದಿವಂಗತ ದೇವರಾಜ ಅರಸು ಸುದೀರ್ಘ ಅವಧಿಗೆ ಸಿಎಂ ಆಗಿ ಸ್ಥಾನ ಅಲಂಕರಿಸಿದ್ದರು. ಬರೋಬ್ಬರಿ ಏಳು ವರ್ಷ ಏಳು ತಿಂಗಳ ಕಾಲ ದೇವರಾಜ ಅರಸು ಸಿಎಂ ಆಗಿ ಅಧಿಕಾರ ನಡೆಸಿದ್ದರು. ದೇವರಾಜ ಅರಸು ಬಳಿಕ ಐದು ವರ್ಷ ಪೂರ್ಣಾವಧಿ ಮುಗಿಸಿದ ಸಿಎಂ ಅಂದರೆ ಅದು ಸಿದ್ದರಾಮಯ್ಯ. ಇದೀಗ ದೇವರಾಜ ಅರಸು ಅವರ ಸುದೀರ್ಘ ಅವಧಿಯ ಸಿಎಂ ಎಂಬ ದಾಖಲೆಯನ್ನು ಮುರಿಯುವುದಕ್ಕೆ ಸಿದ್ದರಾಮಯ್ಯ ಇನ್ನೂ ಕೆಲವು ತಿಂಗಳು ಅಧಿಕಾರದಲ್ಲಿ ಮುಂದುವರಿಯಲೇಬೇಕಿದೆ. ಡಿಸಂಬರ್ ವರೆಗೆ ಸಿದ್ದರಾಮಯ್ಯ ಅನಾಯಾಸವಾಗಿ ಅಧಿಕಾರದಲ್ಲಿ ಮುಂದುವರಿದರೆ ದೇವರಾಜ ಅರಸು ದಾಖಲೆ ಮುರಿದು ಸುದೀರ್ಘ ಅವಧಿಯ ಸಿಎಂ ಎಂಬ ಖ್ಯಾತಿ ಸಿದ್ದರಾಮಯ್ಯಗೆ ಸಿಗಲಿದೆ. ಇದರ ಬಗ್ಗೆ ತನಗೆ ನಂಬಿಕೆ ಇದೆ ಎಂದಿರುವ ಸಿದ್ದರಾಮಯ್ಯ ಮಾತು ಹೊಸ ಕಿಚ್ಚು ಹಚ್ಚಿಸಿದೆ.
ಸಿದ್ದರಾಮಯ್ಯ ಹೀಗೆ ದಾಖಲೆಯ ಅವಧಿಯ ಬಗ್ಗೆ ಪ್ತಸ್ತಾಪ ಮಾಡುತ್ತಿದ್ದಂತೆಯೇ ಸಿದ್ದರಾಮಯ್ಯ ಆಪ್ತ ಸಚಿವರು ಹಿತೈಷಿಗಳು ಜೈ ಎಂದಿದ್ದಾರೆ.
ಸಿದ್ದರಾಮಯ್ಯ ಎರಡೂವರೆ ವರ್ಷದ ಬಳಿಕ ಸಿಎಂ ಸ್ಥಾನವನ್ನು ಡಿಕೆಶಿವಕುಮಾರ್ ಗೆ ಬಿಟ್ಟು ಕೊಡುತ್ತಾರೆ ಎಂಬ ಅಧಿಕಾರ ಹಂಚಿಕೆ ಸೂತ್ರ ಕಾಂಗ್ರೆಸ್‌ನ ಆಂತರಿಕ ವಲಯದಲ್ಲಿ ಚರ್ಚೆಯಲ್ಲಿದೆ ಎನ್ನಲಾಗುತ್ತಿದೆ. ಆದರೆ ಇದನ್ನು ಅಲ್ಲಗಳೆದಿರುವ ಡಾ. ಜಿ ಪರಮೇಶ್ವರ್, ಅಂತಹ ಯಾವುದೇ ಸೂತ್ರದ ಬಗ್ಗೆ ತಮಗೆ ಗೊತ್ತಿಲ್ಲ. ಸಿದ್ದರಾಮಯ್ಯ ಐದು ವರ್ಷ ಪೂರ್ಣ ಅವಧಿಗೆ ಸಿಎಂ ಆಗಿರಲಿ ಎಂದಿದ್ದಾರೆ. ಎಂಬಿ ಪಾಟೀಲ್, ಎಚ್ಸಿ ಮಹದೇವಪ್ಪ ಕೂಡ ಇದಕ್ಕೆ ದನಿಗೂಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಅಭಿವೃದ್ಧಿ ಸಚಿವರನ್ನು ಬದಲಾಯಿಸಿ: ಸಿಎಂ ಸಿದ್ದರಾಮಯ್ಯಗೆ ಶಾಸಕ ಮುನಿರತ್ನ ಪತ್ರ
ಸದ್ಯ ಕಾಂಗ್ರೆಸ್ನಲ್ಲಿ ಆಂತರಿಕ ಬೇಗುದಿ ಹೆಚ್ಚಿಸಿರುವುದೇ ಸಿದ್ದರಾಮಯ್ಯ ಅಧಿಕಾರ ಮೊಟಕಾಗುತ್ತದಾ ಎಂಬ ಪ್ರಶ್ನೆಯಿಂದ. ಇದೀಗ ಸಿದ್ದರಾಮಯ್ಯ ಅವರೇ ದಾಖಲೆಯ ಅವಧಿಗೆ ತಾವು ಮುಂದುವರಿಯುತ್ತೇನೆ ಎನ್ನುವ ಮೂಲಕ ಪವರ್ ಶೇರಿಂಗ್ ಅಷ್ಟು ಸುಲಭದ ವಿಷಯವಲ್ಲ ಎಂದು ಪರೋಕ್ಷವಾಗಿ ಸಂದೇಶ ರವಾನಿಸಿದ್ದಾರೆ.
ಇದರ ಮಧ್ಯೆ ದಾಖಲೆಯ ಅವಧಿಗೆ ಸಿಎಂ ಆದ ಬಳಿಕ ಸಿದ್ದರಾಮಯ್ಯ ಸೀಟು ಬಿಟ್ಟುಕೊಡ್ತಾರಾ? ಅಥವಾ ದಾಖಲೆಯನ್ನು ಮಾಡುವುದಕ್ಕೆ ಸಿದ್ದರಾಮಯ್ಯಗೆ ಡಿಕೆಶಿವಕುಮಾರ್ ಅವಕಾಶ ಬಿಟ್ಟುಕೊಡ್ತಾರಾ? ಇದೇ ಸದ್ಯದ ಪ್ರಶ್ನೆಯಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ