ಮುಡಾ ಹಗರಣ: ಇಡಿ ತಾತ್ಕಾಲಿಕ ಜಪ್ತಿ ಆದೇಶದಲ್ಲಿ ಹೆಸರು, ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ ಹೀಗಿತ್ತು

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ 14 ನಿವೇಶನ ಹಂಚಿಕೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪಗಳನ್ನು ಇಡಿ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಆರೋಪಗಳನ್ನು ತಳ್ಳಿಹಾಕಿದ್ದು, ಇಡಿ ವರದಿಯು ಕೇವಲ ಜಪ್ತಿ ವರದಿಯಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳ ತಡೆಯಲು ಸರ್ಕಾರ ಸುಗ್ರೀವಾಜ್ಞೆ ಹೊರಡಿಸುವುದಾಗಿ ತಿಳಿಸಿದ್ದಾರೆ.

ಮುಡಾ ಹಗರಣ: ಇಡಿ ತಾತ್ಕಾಲಿಕ ಜಪ್ತಿ ಆದೇಶದಲ್ಲಿ ಹೆಸರು, ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ ಹೀಗಿತ್ತು
ಸಿಎಂ ಸಿದ್ದರಾಮಯ್ಯ
Edited By:

Updated on: Jan 31, 2025 | 12:42 PM

ಮೈಸೂರು, ಜನವರಿ 31: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ 14 ನಿವೇಶನ ಹಂಚಿಕೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ಇತರರು ಅಕ್ರಮವಾಗಿ ಹಣ ವರ್ಗಾವಣೆ ಮಾಡಲು ಯತ್ನಿಸಿದ್ದಾರೆೆಂದು ಜಾರಿ ನಿರ್ದೇಶನಾಲಯದ (ED) ತಾತ್ಕಾಲಿಕ ಜಪ್ತಿ ಆದೇಶ ಪ್ರತಿ ಉಲ್ಲೇಖವಾಗಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದು, ಅಕ್ರಮವಾಗಿ ಹಣ ಪ್ರಶ್ನೆ ಇದರಲ್ಲಿ ಎಲ್ಲಿ ಬರುತ್ತದೆ ಹೇಳಿ? ಎಂದು ಪ್ರಶ್ನಿಸಿದ್ದಾರೆ.

ನಂಜನಗೂಡು ತಾಲೂಕಿನ ಸುತ್ತೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಟೇಶ್​ಗೆ ಈ ವಿಚಾರದಲ್ಲಿ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಅದರ ಅರ್ಥ ಕಾನೂನು ಪ್ರಕಾರ ಇಲ್ಲ ಎಂಬುದು ತಾನೇ? ಅಕ್ರಮ ಹಣ ವರ್ಗಾವಣೆಯಾಗಿದ್ದರೇ ನ್ಯಾಯಾಲಯ ಏಕೆ ತಡೆ ಕೊಡುತ್ತಿತ್ತು? ನನ್ನ ಹೆಸರನ್ನು ಕೆಡಿಸಲು ಇಷ್ಟೆಲ್ಲ ಪ್ರಯತ್ನಗಳು ನಡೆಯುತ್ತಿವೆ. ಇಡಿ ಬಿಡುಗಡೆ ಮಾಡಿದ್ದು ತನಿಖಾ ವರದಿಯಲ್ಲ, ಕೇವಲ ಜಪ್ತಿ ವರದಿ ಎಂದರು.

ಇಡಿ ತನಿಖೆ ರಾಜಕೀಯ ಪ್ರೇರಿತ ಎಂಬುದು ಎಲ್ಲರಿಗೂ ಗೊತ್ತಿದೆ. ನನ್ನ ವಿಚಾರದಲ್ಲಿ ಮಾತನಾಡಲು ಇವರಿಗೆ ಏನೂ ಸಿಕ್ಕಿಲ್ಲ. ಈ ವಿಚಾರ ಇಟ್ಟುಕೊಂಡು ನನ್ನ ಹೆಸರಿಗೆ ಮಸಿ ಬಳಿಯಲು ಯತ್ನಿಸ್ತಿದ್ದಾರೆ. ಅದರಲ್ಲಿ ಬಿಜೆಪಿ ಯಶಸ್ವಿಯಾಗುವುದಿಲ್ಲ. ಮುಡಾ ವಿಚಾರದಲ್ಲಿ ನಮ್ಮ ಕುಟುಂಬದವರು ಯಾವ ತಪ್ಪು ಮಾಡಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣ: ಇಡಿ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

ಸುಗ್ರೀವಾಜ್ಞೆ ಮೂಲಕ ಕಠಿಣ ಕ್ರಮ: ಸಿಎಂ

ರಾಜ್ಯದ ಹಲವೆಡೆ ಮೈಕ್ರೋ ಫೈನಾನ್ಸ್​ ಸಿಬ್ಬಂದಿ ಕಿರುಕುಳ ನೀಡುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಸುಗ್ರೀವಾಜ್ಞೆ ಮೂಲಕ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಜನರು ಎಲ್ಲಿ ಸಾಲ ಸಿಗುತ್ತೆ ಅಲ್ಲಿ ತೆಗೆದುಕೊಳ್ಳುತ್ತಿದ್ದಾರೆ. ಆದರೆ ಮೈಕ್ರೋ ಫೈನಾನ್ಸ್​ನವರು ಬಡ್ಡಿ ಜಾಸ್ತಿ ಹಾಕುತ್ತಾರೆ. ಹಣ ವಸೂಲಿ ಮಾಡುವಾಗ ಫೈನಾನ್ಸ್​ನವರು ಹಿಂಸೆ ಕೊಡುತ್ತಾರೆ. ರೌಡಿಗಳನ್ನು ಬಿಟ್ಟು ವಸೂಲಿ ಮಾಡುತ್ತಿದ್ದಾರೆ ಎಂದು ಹೇಳಿದರು.

ಮೈಕ್ರೋ ಫೈನಾನ್ಸ್​ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುತ್ತದೆ. ಈಗ ಸುಗ್ರೀವಾಜ್ಞೆ ಮೂಲಕ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ನಾನು ಮನವಿ ಮಾಡುತ್ತೇನೆ, ಯಾರೂ ಅತ್ಮಹತ್ಯೆ ಮಾಡಿಕೊಳ್ಳಬೇಡಿ. ಜನರು ಯಾವುದೇ ರೀತಿಯ ನಿರ್ಧಾರ ಕೈಗೊಳ್ಳಬೇಡಿ. ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.

ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಜಿ ಪರಮೇಶ್ವರ್ ಸಭೆ ವಿಚಾರವಾಗಿ ಮಾತನಾಡಿದ ಅವರು, ಊಟ ಮಾಡಿದರೆ, ಸಭೆ ಮಾಡಿದರೆ ತಪ್ಪಲ್ಲ. ಅದರಲ್ಲಿ ಊಹೆ ಮಾಡುವುದಕ್ಕೆ ಏನಿಲ್ಲ ಎಂದು ಹೇಳಿದರು.

ಕುಂಭ ಮೇಳದ ಬಗ್ಗೆ ಮಾತನಾಡುವವರು ಅಯೋಗ್ಯರು ಎಂಬ ಬಿ ವೈ ವಿಜಯೇಂದ್ರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅವರ ಪಕ್ಷದಲ್ಲಿ ಅವರು ಸರಿಯಿಲ್ಲ ಅಂತಿದ್ದಾರೆ, ನಾನೇನು ಹೇಳಲಿ? ವಿಜಯೇಂದ್ರದು ಬಾಲಿಶ ಹೇಳಿಕೆ ಎಂದು ವಾಗ್ದಾಳಿ ಮಾಡಿದರು.

ಕೇಂದ್ರ ಬಜೆಟ್ ಬಗ್ಗೆ ನಾನು ಏನು ನಿರೀಕ್ಷೆ ಮಾಡಲ್ಲ. ಭದ್ರಾ ಮೇಲ್ದಂಡೆ ಯೋಜನೆ ದುಡ್ಡು ಕೊಡುತ್ತೇನೆಂದು ಬಜೆಟ್​ನಲ್ಲಿ ಘೋಷಣೆ ಮಾಡಿದರು. ಒಂದು ರೂಪಾಯಿ ಹಣ ಕೊಟ್ಟಿಲ್ಲ. ಹೀಗಾಗಿ ನಾನು ಏನು ನಿರೀಕ್ಷೆ ಮಾಡಲ್ಲ. ನಮ್ಮ ರಾಜ್ಯಕ್ಕೆ ಅನ್ಯಯವಾಗಿದೆ‌. ನಾಲ್ಕು ಲಕ್ಷ ಕೋಟಿ ರೂಪಾಯಿ ತೆರಿಗೆ ಕೊಡುತ್ತೇವೆ. ಕೇವಲ 68 ಸಾವಿರ ಕೋಟಿ ರೂಪಾಯಿ ತೆರಿಗೆ ವಾಪಸ್​ ಕೊಡುತ್ತಾರೆ. ನಬಾರ್ಡ್​ದಲ್ಲಿ ಶೇ 58 ರಷ್ಟು ಕಟ್ ಮಾಡಿದ್ದಾರೆ. ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ‌ ಎಂದು ಆರೋಪ ಮಾಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:33 pm, Fri, 31 January 25