ಬೆಂಗಳೂರಿನಲ್ಲಿ ಇಂದಿನಿಂದ ಪುಸ್ತಕ ಸಂತೆ ಆರಂಭ, ಸಿಎಂ ಖರೀದಿಸಿದ 7 ಪುಸ್ತಕಗಳು ಯಾವುವು ಗೊತ್ತಾ?
ಹೆಚ್ಎಸ್ಆರ್ ಬಡಾವಣೆಯಲ್ಲಿ ನಡೆಯುತ್ತಿರುವ 2 ದಿನಗಳ ಪುಸ್ತಕ ಸಂತೆಯನ್ನು ಸಿಎಂ ಸಿದ್ದರಾಮಯ್ಯನವರು ಉದ್ಘಾಟನೆ ಮಾಡಿದರು. ಈ ವೇಳೆ ಮಾತನಾಡಿದ ಸಿಎಂ ಅನೇಕ ವಿಷಯಗಳ ಮೇಲೆ ಲೇಖಕರು ಪುಸ್ತಕಗಳನ್ನ ಬರೆದಿದ್ದಾರೆ. ಜ್ಞಾನ ವಿಕಸನಕ್ಕೆ ಪುಸ್ತಕ ಬೇಕು. ದುಡ್ಡು ಕೊಟ್ಟು ಪುಸ್ತಕ ಖರೀದಿಸಿ ಓದಬೇಕು. ಇನ್ನೊಬ್ಬರು ತೆಗೆದುಕೊಂಡ ಪುಸ್ತಕದಿಂದ ಓದಬಾರದು ಎಂದರು.

ಬೆಂಗಳೂರು, ಫೆ.10: ಬೆಂಗಳೂರಿನಲ್ಲಿ ಇಂದಿನಿಂದ ಪುಸ್ತಕ ಸಂತೆ (Pustaka Sante) ಆರಂಭವಾಗಿದೆ. ಹೆಚ್ಎಸ್ಆರ್ ಬಡಾವಣೆಯಲ್ಲಿ ನಡೆಯುತ್ತಿರುವ 2 ದಿನಗಳ ಪುಸ್ತಕ ಸಂತೆಯನ್ನು ಸಿಎಂ ಸಿದ್ದರಾಮಯ್ಯನವರು (Siddaramaiah) ಉದ್ಘಾಟನೆ ಮಾಡಿದರು. ಈ ವೇಳೆ ಸಿಎಂ 7 ಪುಸ್ತಕಗಳನ್ನು ಖರೀದಿಸಿದರು. ಇನ್ನು ಪುಸ್ತಕ ಸಂತೆಯಲ್ಲಿ ಒಟ್ಟು 100ಕ್ಕೂ ಹೆಚ್ಚು ಪುಸ್ತಕಗಳ ಸ್ಟಾಲ್ ಹಾಕಲಾಗಿದೆ. 100ಕ್ಕೂ ಹೆಚ್ಚು ಸಾಹಿತಿಗಳು ಪುಸ್ತಕ ಸಂತೆಯಲ್ಲಿ ಭಾಗಿಯಾಗಿದ್ದಾರೆ. ಈ ಪುಸ್ತಕ ಸ್ಟಾಲ್ನಲ್ಲಿ 55 ಸಾವಿರಕ್ಕೂ ಹೆಚ್ಚು ಪುಸ್ತಕಗಳು ಒಂದೇ ವೇದಿಕೆಯಲ್ಲಿ ಸಿಗಲಿವೆ. ರಿಯಾಯಿತಿ ದರದಲ್ಲಿ ಪುಸ್ತಕಗಳ ಬೆಲೆ ನಿಗದಿ ಮಾಡಲಾಗಿದೆ. ಪುಸ್ತಕ ಸಂತೆಯಲ್ಲಿ ಪುಡ್ ಸ್ಟಾಲ್ ಸೇರಿದಂತೆ ಮನರಂಜನಾ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿದೆ.
ಪುಸ್ತಕ ಸಂತೆ ಉದ್ಘಾಟನೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಮ್ಮ ಮ್ಯಾನಿಫೆಸ್ಟೋ ಕಮಿಟಿ ಬಂದಿದೆ. ನಾನು ಹೆಚ್ಚು ಹೊತ್ತು ಇರೋಕೆ ಆಗೊಲ್ಲ. ಭಾಷಣ ಮಾಡೊಲ್ಲ ಅಂತ ಉಗ್ರಪ್ಪಗೆ ಹೇಳಿ ಹೋಗಿದ್ದೆ. ಸಂತೋಷದಿಂದ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದೇನೆ. ದೇಶ ಸುತ್ತು ಕೋಶ ಓದು ಅಂತ ನಾಣ್ಣುಡಿ ಇದೆ. ಜ್ಞಾನದ ಬೆಳವಣಿಗೆ ಆಗಬೇಕಾದ್ರೆ ಪುಸ್ತಕ ಓದಲೇಬೇಕು. ಅನೇಕ ವಿಷಯಗಳ ಮೇಲೆ ಲೇಖಕರು ಪುಸ್ತಕಗಳನ್ನ ಬರೆದಿದ್ದಾರೆ. ಜ್ಞಾನ ವಿಕಸನಕ್ಕೆ ಪುಸ್ತಕ ಬೇಕು. ದುಡ್ಡು ಕೊಟ್ಟು ಪುಸ್ತಕ ಖರೀದಿಸಿ ಓದಬೇಕು. ಇನ್ನೊಬ್ಬರು ತೆಗೆದುಕೊಂಡ ಪುಸ್ತಕದಿಂದ ಓದಬಾರದು. ಪತ್ರಿಕೆ ತರ ಓದಬಾರದು. ರಾಮೇಗೌಡ ಅಂತ ಒಬ್ಬ ಇದ್ದ. ನಾನು ಓದು ಮುಗಿಸೋದನ್ನ ಕಾದು ನಂತರ ಅವನೇ ಆ ಪೇಪರ್ ತೆಗೆದುಕೊಂಡು ಹೋಗ್ತಿದ್ದ. ಈಗ ಅವನು ಕಾಲವಾಗಿದ್ದಾನೆ ಎಂದು ಸಿಎಂ ಅವರು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಪುಸ್ತಕ ಸಂತೆ
ಇದನ್ನೂ ಓದಿ: ಮಂಗಳೂರು: ಹಿಂದೂ ಜಾಗರಣಾ ವೇದಿಕೆ ಮುಖಂಡರ ಗಡಿಪಾರಿಗೆ ನ್ಯಾಯಾಲಯ ತಡೆ
ಇನ್ನು ಇಲ್ಲಿ 135 ಸ್ಟಾಲ್ ಓಪನ್ ಮಾಡಿದ್ದಾರೆ. ಈ ಭಾಗದ ಜನರಿಗೆ ಪುಸ್ತಕ ಓದಲು ಅವಕಾಶ ಇದೆ. ಪುಸ್ತಕ ಬರೆದ್ಮೇಲೆ ಪ್ರಕಾಶಕರು ಬೇಕು. ಮುದ್ರಣಕ್ಕೂ ಪ್ರಕಾಶಕರು ಬೇಕು. ಈ ಪಾರ್ಕ್ ಉಳಿಯಬೇಕಾದ್ರೆ ಉಗ್ರಪ್ಪನವರೇ ಕಾರಣ. ಈ ಪಾರ್ಕ್ ನ ಉದ್ಘಾಟನೆ ಮಾಡಿದ್ದೇ ನಾನು ಎಂದರು.
ಪುಸ್ತಕ ಸಂತೆಯಲ್ಲಿ ಪುಸ್ತಕ ಖರೀದಿಸಿದ ಸಿಎಂ
ಇನ್ನು ಸಿಎಂ ಸಿದ್ದರಾಮಯ್ಯನವರು ಪುಸ್ತಕ ಸಂತೆಯಲ್ಲಿ 7 ಪುಸ್ತಕಗಳನ್ನು ಖರೀದಿಸಿದರು. ಇದೇ ವೇಳೆ ದುಡ್ಡು ಕೊಟ್ಟು ಪುಸ್ತಕ ಖರೀದಿಸಬೇಕಪ್ಪ ಎಂದು ಉಗ್ರಪ್ಪರಿಗೆ ಹೇಳಿದರು. ಒಂದು ಸಾವಿರ ರೂ. ಕೊಟ್ಟು 7 ಪುಸ್ತಕಗಳನ್ನು ಸಿಎಂ ಖರೀದಿಸಿದರು. ಕರ್ನಾಟಕ ರಾಣಿಯರ ಆಡಳಿತ ನೀತಿ, ಮೂಲಭೂತ ಹಕ್ಕುಗಳು, ಸಂಸದೀಯ ಇತಿಹಾಸ, 1897ರ ಸಾಮಾನ್ಯ ಖಂಡಗಳ ಅಧಿನಿಯಮ, ವಕೀಲೆ ಮತ್ತು ಧರ್ಮವೃತ್ತಿ, ಪ್ರಜಾಪ್ರಭುತ್ವ ಮತ್ತು ಚುನಾವಣೆ ಪದ್ದತಿ ಎಂಬ 7 ಪುಸ್ತಕಗಳನ್ನ ಸಿಎಂ ಸಿದ್ದರಾಮಯ್ಯ ಖರೀದಿಸಿದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:17 pm, Sat, 10 February 24



