AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳದ ವಿರುದ್ಧ ಸಿಡಿದೆದ್ದ ಸಿಎಂ ಸಿದ್ದರಾಮಯ್ಯ: ಪಿಣರಾಯ್ ವಿಜಯನ್​ಗೆ ಖಡಕ್ ಸಂದೇಶ

ಕೋಗಿಲು ಲೇಔಟ್ ಅಕ್ರಮ ಮನೆಗಳ ತೆರವು ವಿಚಾರದಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ಮಾಡಿದ್ದ ಒಂದು ಎಕ್ಸ್​ ಸಂದೇಶಕ್ಕೆ ತಕ್ಷಣ ಪ್ರತಿಕ್ರಿಯಿಸಿ ಕ್ರಮಕ್ಕೆ ಮುಂದಾಗಿದ್ದ ಸಿಎಂ ಸಿದ್ದರಾಮಯ್ಯ ಇದೀಗ ಕಾಸರಗೋಡು ಕನ್ನಡಿಗರ ವಿಚಾರದಲ್ಲಿ ಕೇರಳ ಸಿಎಂಗೆ ಖಡಕ್ ಸಂದೇಶ ಕಳುಹಿಸಿದ್ದಾರೆ. ಕೇರಳ ಸರ್ಕಾರ ಜಾರಿಗೆ ತರಲು ಹೊರಟಿರುವ ‘ಮಲಯಾಳ ಭಾಷಾ ಮಸೂದೆ 2025’ರಿಂದ ಕಾಸರಗೋಡಿನ ಕನ್ನಡಿಗರಿಗೆ ಆಗುವ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತಿದ್ದಾರೆ.

ಕೇರಳದ ವಿರುದ್ಧ ಸಿಡಿದೆದ್ದ ಸಿಎಂ ಸಿದ್ದರಾಮಯ್ಯ: ಪಿಣರಾಯ್ ವಿಜಯನ್​ಗೆ ಖಡಕ್ ಸಂದೇಶ
‘ಮಲಯಾಳ ಭಾಷಾ ಮಸೂದೆ 2025’: ಕಾಸರಗೋಡು ಕನ್ನಡಿಗರ ಪರ ನಿಂತ ಸಿದ್ದರಾಮಯ್ಯ
Ganapathi Sharma
|

Updated on: Jan 09, 2026 | 6:40 AM

Share

ಬೆಂಗಳೂರು, ಜನವರಿ 9: ಕೇರಳ (Kerala) ಸರ್ಕಾರ ಅನುಷ್ಠಾನಗೊಳಿಸಲು ಮುಂದಾಗಿರುವ ‘ಮಲಯಾಳ ಭಾಷಾ ಮಸೂದೆ 2025’ರಿಂದ (Malayalam language bill 2025) ಕಾಸರಗೋಡಿನ ಕನ್ನಡಿಗರಿಗೆ ತೀವ್ರ ಸಮಸ್ಯೆಯಾಗಲಿದ್ದು, ತಕ್ಷಣವೇ ಹಿಂತೆಗೆದುಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಕೇರಳ ಸರ್ಕಾರವನ್ನು ಹಾಗೂ ಅಲ್ಲಿನ ಸಿಎಂ ಪಿಣರಾಯಿ ವಿಜಯನ್ ಅವರನ್ನು ಆಗ್ರಹಿಸಿದ್ದಾರೆ. ಈ ಕುರಿತು ಎಕ್ಸ್​ನಲ್ಲಿ ಸುದೀರ್ಘ ಸಂದೇಶ ಪ್ರಕಟಿಸಿರುವ ಸಿದ್ದರಾಮಯ್ಯ, ಒಂದು ವೇಳೆ ಕಾಸರಗೋಡು ಕನ್ನಡಿಗರ ಹಿತ ನಿರ್ಲಕ್ಷಿಸಿ ಅವರ ಮೇಲೆ ಭಾಷೆಯನ್ನು ಹೇರಿದ್ದೇ ಆದಲ್ಲಿ ನಮ್ಮ ಸರ್ಕಾರ ಅವರ ಜತೆಯಲ್ಲಿ ನಿಂತು ಸರ್ವ ರೀತಿಯ ಬೆಂಬಲ ನೀಡಲಿದೆ ಎಂದಿದ್ದಾರೆ.

ಸಂವಿಧಾನದ ಭಾಷಾ ಸ್ವಾತಂತ್ರ್ಯದ ಮೇಲಿನ ಪ್ರಹಾರ: ಸಿದ್ದರಾಮಯ್ಯ

ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಲಿಕೆಯನ್ನು ಕಡ್ಡಾಯಗೊಳಿಸುವ ಕೇರಳ ಸರ್ಕಾರದ ಪ್ರಸ್ತಾಪಿತ ಮಲೆಯಾಳಿ ಭಾಷಾ ಮಸೂದೆ-2025 ಸಂವಿಧಾನ ಖಾತರಿ ಮಾಡಿರುವ ಭಾಷಾ ಸ್ವಾತಂತ್ರ್ಯದ ಮೇಲಿನ ಪ್ರಹಾರವಾಗಿದೆ ಎಂದು ಹೇಳಲು ವಿಷಾದಿಸುತ್ತೇನೆ. ಇಂತಹದ್ದೊಂದು ಕಾನೂನು ಜಾರಿಗೆ ಬಂದರೆ ಕೇರಳದ ಗಡಿಜಿಲ್ಲೆಗಳಲ್ಲಿ ಮುಖ್ಯವಾಗಿ ಕಾಸರಗೋಡಿನಲ್ಲಿ ವಾಸಿಸುತ್ತಿರುವ ಕನ್ನಡಿಗರು ಮಾತೃಭಾಷೆಯನ್ನು ಕಲಿಯುವ ಅವಕಾಶದಿಂದ ವಂಚಿತರಾಗಲಿದ್ದಾರೆ. ಭಾಷಾ ಅಲ್ಪಸಂಖ್ಯಾತರ ಮೂಲಭೂತ ಹಕ್ಕನ್ನು ದಮನ ಮಾಡುವ ಇಂತಹ ನಡೆಯನ್ನು ಕೇರಳದ ಕಮ್ಯುನಿಸ್ಟ್ ಸರ್ಕಾರದಿಂದ ನಾವು ನಿರೀಕ್ಷಿಸಿರಲಿಲ್ಲ ಎಂದು ಎಕ್ಸ್ ಸಂದೇಶದಲ್ಲಿ ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.

ಭಾವನಾತ್ಮಕವಾಗಿ ಕರ್ನಾಟಕದೊಂದಿಗಿದೆ ಕಾಸರಗೋಡು: ಸಿಎಂ

ಕಾಸರಗೋಡು ಇಂದು ಆಡಳಿತಾತ್ಮಕವಾಗಿ ಕೇರಳ ರಾಜ್ಯಕ್ಕೆ ಸೇರಿದ್ದರೂ ಅದು ಭಾವನಾತ್ಮಕವಾಗಿ ಕರ್ನಾಟಕ ರಾಜ್ಯಕ್ಕೆ ಸೇರಿದ್ದಾಗಿದೆ. ಅಲ್ಲಿನ ಜನ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯದ ಜೊತೆ ಮಿಳಿತವಾಗಿದ್ದಾರೆ. ಅವರು ಕರ್ನಾಟಕದ ಕನ್ನಡಿಗರಿಗಿಂತ ಕಡಿಮೆ ಕನ್ನಡಿಗರೇನಲ್ಲ. ಅವರ ಹಿತವನ್ನು ರಕ್ಷಿಸುವುದು ನಮ್ಮ ಸರ್ಕಾರದ ಕರ್ತವ್ಯವಾಗಿದೆ. ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವ ಭಾರತದ ಪ್ರತಿಯೊಬ್ಬ ಪ್ರಜೆಗೂ ಅವರ ಮಾತೃಭಾಷೆಯಲ್ಲಿ ಕಲಿಯುವ ಸ್ವಾತಂತ್ರ್ಯ ಇದೆ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.

ಮಸೂದೆ ಹಿಂಪಡೆಯಲು ಪಿಣರಾಯಿ ವಿಜಯನ್​ಗೆ ಆಗ್ರಹ

ಈ ಹಿನ್ನೆಲೆಯಲ್ಲಿ ಕೇರಳ ವಿಧಾನಸಭೆ ಅಂಗೀಕರಿಸಿರುವ ಮಲೆಯಾಳಿ ಭಾಷಾ ಮಸೂದೆ-2025 ಅನ್ನು ತಕ್ಷಣ ಹಿಂದೆಗೆದುಕೊಳ್ಳಬೇಕೆಂದು ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರನ್ನು ಆಗ್ರಹಿಸುತ್ತೇನೆ. ಭಾಷಾ ಅಲ್ಪಸಂಖ್ಯಾತರಿಗೆ ಮಾತೃಭಾಷೆ ಎನ್ನುವುದು ಕೇವಲ ಭಾಷೆ ಅಲ್ಲ, ಅದು ಅವರಿಗೆ ಘನತೆಯ ಬದುಕು ನೀಡುವ ಅಸ್ಮಿತೆಯಾಗಿರುತ್ತದೆ. ಮಾತೃಭಾಷೆಯಲ್ಲಿ ಕಲಿಯುವ ಮಕ್ಕಳು ಸುಲಭದಲ್ಲಿ ವಿಷಯಗಳನ್ನು ಗ್ರಹಿಸುತ್ತಾರೆ ಎನ್ನುವದು ವೈಜ್ಞಾನಿಕವಾಗಿ ಸಾಬೀತಾಗಿದೆ. ಅವರ ಮೇಲೆ ಅನ್ಯಭಾಷೆಯನ್ನು ಹೇರುವುದರಿಂದ ಅವರ ಕಲಿಕಾ ಸಾಮರ್ಥ್ಯವನ್ನು ಕುಂದಿಸುವುದು ಮಾತ್ರವಲ್ಲ, ಒಂದು ಸ್ವತಂತ್ರಭಾಷೆಯ ಅವಸಾನಕ್ಕೆ ದಾರಿ ಮಾಡಿಕೊಟ್ಟ ಹಾಗಾಗುತ್ತದೆ ಎಂದು ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.

ಕಾಸರಗೋಡಿನ ಜನ ಹಲವು ತಲೆಮಾರುಗಳಿಂದ ಕನ್ನಡ ಮಾಧ್ಯಮದಲ್ಲಿ ಓದಿದ್ದಾರೆ, ನಿತ್ಯದ ಬದುಕಿನಲ್ಲಿ ಕನ್ನಡವನ್ನು ನಿರಂತರವಾಗಿ ಬಳಸುತ್ತಾ ಬಂದಿದ್ದಾರೆ. ಕಾಸರಗೋಡು ಜಿಲ್ಲೆಯ ಶೇಕಡಾ 70ರಷ್ಟು ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಮತ್ತು ಕನ್ನಡ ಮಾಧ್ಯಮದಲ್ಲಿಯೇ ಕಲಿಯುವುದನ್ನು ಬಯಸುತ್ತಾರೆ ಎಂಬುದು ಅಲ್ಲಿನ ಕನ್ನಡಿಗರ ಒಕ್ಕೊರಲ ಅಭಿಪ್ರಾಯವಾಗಿದೆ. ಯಾವುದೇ ಒಂದು ಭಾಷೆ ಮತ್ತೊಂದು ಭಾಷೆಯ ವಿರುದ್ಧವಾಗಿ ಇರುವುದಿಲ್ಲ. ಭಾರತ ಬಹುಭಾಷೆ, ಬಹುಸಂಸ್ಕೃತಿ ಮತ್ತು ಬಹುಧರ್ಮದ ತೊಟ್ಟಿಲಾಗಿದೆ. ಈ ಬಹುತ್ವದ ವಾತಾವರಣಕ್ಕೆ ಧಕ್ಕೆ ಉಂಟು ಮಾಡುವ ಪ್ರಯತ್ನ ಅಪಾಯಕಾರಿಯಾಗಿದೆ ಎಂದು ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಎಕ್ಸ್ ಸಂದೇಶ

ಭಾಷೆಯೂ ಸೇರಿದಂತೆ ಅಲ್ಪಸಂಖ್ಯಾತರ ಹಿತರಕ್ಷಣೆಯ ವಿಚಾರದಲ್ಲಿ ನಾವೆಲ್ಲರೂ ಗೌರವಿಸುವ ಸಂವಿಧಾನದಲ್ಲಿ ಸ್ಪಷ್ಟವಾಗಿದೆ. ಸಂವಿಧಾನದ 29 ಮತ್ತು 30ನೇ ಪರಿಚ‍್ಛೇದಗಳು ದೇಶದ ಯಾವುದೇ ಭಾಗದಲ್ಲಿ ವಾಸಿಸುತ್ತಿರುವವರಿಗೆ ತಮ್ಮ ಭಾಷೆ, ಲಿಪಿ ಮತ್ತು ಸಂಸ್ಕೃತಿ ರಕ್ಷಿಸಿಕೊಳ್ಳುವ ಹಕ್ಕನ್ನು ನೀಡಿದೆ. ಅವರಿಗೆ ತಮ್ಮ ಆಯ್ಕೆಯ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ ನಡೆಸುವ ಹಕ್ಕನ್ನೂ ನೀಡುತ್ತದೆ. ಸಂವಿಧಾನದ 350 (ಎ) ಪ್ರಾಥಮಿಕ ಹಂತದಲ್ಲಿ ಮಾತೃಭಾಷೆಯಲ್ಲಿ ಕಲಿಯುವ ಸ್ವಾತಂತ್ರ್ಯವನ್ನು ನೀಡಿದೆ. ಸಂವಿಧಾನದ 350(ಬಿ) ಅಲ್ಪಸಂಖ್ಯಾತರ ರಕ್ಷಣೆಯ ಖಾತರಿಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಸರ್ಕಾರ ಅಲ್ಪಸಂಖ್ಯಾತರ ಭಾಷಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಮಾಡಬಾರದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಕಾಂಗ್ರೆಸ್ ಸರ್ಕಾರದ ‘ಬುಲ್ಡೋಜರ್ ರಾಜ್’ ನೀತಿಯಿಂದ ಬೀದಿಗೆ ಬಂದ ಮುಸ್ಲಿಂ ಕುಟುಂಬ: ಪಿಣರಾಯಿ ವಿಜಯನ್ ಆಕ್ರೋಶ

ಕರ್ನಾಟಕದಲ್ಲಿ ನಾವು ಕನ್ನಡ ಭಾಷೆಯನ್ನು ಪೊರೆಯುವ ಕೆಲಸ ಮಾಡಿದ ಹಾಗೆ, ಕೇರಳ ರಾಜ್ಯದಲ್ಲಿ ಮಲೆಯಾಳಿ ಭಾಷೆಯನ್ನು ಬೆಳೆಸುವ ಮತ್ತು ಉಳಿಸುವ ಸರ್ವ ಸ್ವಾತಂತ್ರ್ಯ ಅಲ್ಲಿನ ರಾಜ್ಯ ಸರ್ಕಾರಕ್ಕೆ ಇದೆ. ಆದರೆ ಒಂದು ಭಾಷೆಯ ಮೇಲೆ ಇನ್ನೊಂದು ಭಾಷೆಯನ್ನು ಹೇರುವ ಪ್ರಯತ್ನ ಸಲ್ಲದು.

ಕಾಸರಗೋಡು ಕನ್ನಡಿಗರಿಗೆ ಸರ್ವ ರೀತಿಯ ಬೆಂಬಲ: ಸಿದ್ದರಾಮಯ್ಯ

ಕೇರಳ ಸರ್ಕಾರ ಈ ಮಸೂದೆಯನ್ನು ಜಾರಿಗೊಳಿಸಲು ಹೊರಟರೆ ಕನ್ನಡಿಗರು ಇದನ್ನು ಒಕ್ಕೊರಲಿನಿಂದ ವಿರೋಧಿಸಲಿದ್ದಾರೆ. ಕಾಸರಗೋಡಿನ ಕನ್ನಡಿಗರ ಜೊತೆಯಲ್ಲಿ ನಿಂತು ಅವರ ಭಾಷಾ ಸ್ವಾತಂತ್ರ್ಯದ ರಕ್ಷಣೆಗೆ ಸರ್ವರೀತಿಯ ಬೆಂಬಲವನ್ನು ನೀಡಲಿದ್ದಾರೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್
ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್