ಕಾಂಗ್ರೆಸ್ ಸರ್ಕಾರಕ್ಕೆ ಸಾಲು ಪ್ರಕರಣಗಳಲ್ಲಿ ಹಿಂದೂ ವಿರೋಧಿ ಪಟ್ಟ: ಕಳೆದ ಅವಧಿಯಂತೆ ಈ ಬಾರಿಯೂ ‘ಧರ್ಮ’ ಸಂಕಟ

ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಎರಡನೇ ಅವಧಿಯಲ್ಲೂ ‘ಹಿಂದೂ ವಿರೋಧಿ’ ಎಂಬ ಆರೋಪಗಳು ಜೋರಾಗುತ್ತಿವೆ. ಉದಯಗಿರಿ, ನಾಗಮಂಗಲ, ಮದ್ದೂರು ಮುಂತಾದೆಡೆಗಳಲ್ಲಿ ನಡೆದ ಗಲಭೆಗಳು ಮತ್ತು ಗಣೇಶೋತ್ಸವದ ಮೇಲಿನ ನಿರ್ಬಂಧಗಳು, ಚಾಮುಂಡಿ ಬೆಟ್ಟದ ಕುರಿತ ಹೇಳಿಕೆಗಳು ಇದಕ್ಕೆ ಕಾರಣವಾಗಿವೆ. ಸರ್ಕಾರಕ್ಕೆ ‘ಹಿಂದೂ ವಿರೋಧಿ’ ಹಣೆಪಟ್ಟಿ ಕಟ್ಟಲು ಕಾರಣವಾದ ಪ್ರಕರಣಗಳ ಸಂಪೂರ್ಣ ವಿವರ ಇಲ್ಲಿದೆ.

ಕಾಂಗ್ರೆಸ್ ಸರ್ಕಾರಕ್ಕೆ ಸಾಲು ಪ್ರಕರಣಗಳಲ್ಲಿ ಹಿಂದೂ ವಿರೋಧಿ ಪಟ್ಟ: ಕಳೆದ ಅವಧಿಯಂತೆ ಈ ಬಾರಿಯೂ ‘ಧರ್ಮ’ ಸಂಕಟ
ಕಾಂಗ್ರೆಸ್ ಸರ್ಕಾರಕ್ಕೆ ಸಾಲು ಪ್ರಕರಣಗಳಲ್ಲಿ ಹಿಂದೂ ವಿರೋಧಿ ಪಟ್ಟ (ಸಾಂದರ್ಭಿಕ ಚಿತ್ರ)
Edited By:

Updated on: Sep 10, 2025 | 7:38 AM

ಬೆಂಗಳೂರು, ಸೆಪ್ಟೆಂಬರ್ 10: ಕರ್ನಾಟಕ ಕಾಂಗ್ರೆಸ್ (Congress) ಸರ್ಕಾರದ ವಿರುದ್ದ ವಿರೋಧ ಪಕ್ಷಗಳಿಗೆ ಮತ್ತೊಂದು ಟೀಕಾಸ್ತ್ರ ಸಿಕ್ಕಿದೆ. ಸಿದ್ದರಾಮಯ್ಯ (Siddaramaiah) ಸರ್ಕಾರದ ವಿರುದ್ದ ಬಿಜೆಪಿ ಯಾವಾಗಲೂ ಅಲ್ಪಸಂಖ್ಯಾತ ತುಷ್ಟೀಕರಣದ ಆರೋಪ ಮಾಡುತ್ತಲೇ ಇರುತ್ತದೆ. ಹೀಗಿರುವಾಗ ಕಳೆದ ಕೆಲ ತಿಂಗಳುಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಕೆಲ ಘಟನೆಗಳು ಕಾಂಗ್ರೆಸ್​ಗೆ ಮತ್ತಷ್ಟು ‘ಧರ್ಮ’ ಸಂಕಟವನ್ನು ತಂದಿಟ್ಟಿದೆ. ಸರ್ಕಾರಕ್ಕೆ ಹಿಂದೂ ವಿರೋಧಿ ಪಟ್ಟ ಕಟ್ಟುವಂತೆ ಮಾಡಿವೆ. ಕೆಲವು ಪ್ರಕರಣಗಳನ್ನು ನಿಭಾಯಿಸುವ ವೇಳೆ ಸರ್ಕಾರ ಎಡವುತ್ತಿರುವುದು ಕೂಡ ಅತಿಯಾದ ಓಲೈಕೆ ಎಂಬಂತೆಯೇ ಬಿಂಬಿತವಾಗುತ್ತಿದೆ. ಸೂಕ್ಷ್ಮ ಘಟನೆಗಳ ಕುರಿತು ಎಚ್ಚರಿಕೆ ವಹಿಸಬೇಕಾದ ವೇಳೆ ಎಡವಟ್ಟು ಮಾಡಿಕೊಳ್ಳುತ್ತಿರುವ ಸರ್ಕಾರ ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿಲ್ಲವೇ ಎಂಬ ಅನುಮಾನಗಳು ಮೂಡುವಂತೆ ಮಾಡಿದೆ.

ಈ ಬಾರಿ ಗಣೇಶ ಹಬ್ಬದ ಆಚರಣೆಗೆ ಷರತ್ತು ಹಾಕಿದ್ದ ಸರ್ಕಾರ ಡಿಜೆಗೆ ನಿರ್ಬಂಧ ಹೇರಿದ್ದು ಕೂಡ ಹಿಂದೂಗಳ ಭಾವನೆ ಕೆರಳಿಸಿತ್ತು. ಕಾನೂನು ಸುವ್ಯವಸ್ಥೆ ನೆಪದಲ್ಲಿ ಹಿಂದೂ ಧಾರ್ಮಿಕ ಆಚರಣೆಗಳಿಗೆ ಕಡಿವಾಣ ಹಾಕಲಾಗುತ್ತಿದೆ ಎಂದು ಬಹುದೊಡ್ಡ ಆಕ್ಷೇಪ ಕೇಳಿ ಬಂದಿತ್ತು. ಇದೀಗ ಮದ್ದೂರಿನಲ್ಲಿ ಆದ ಘಟನೆ ಬೇರೆ ಬೇರೆ ಜಿಲ್ಲೆಗಳಿಗೂ ವ್ಯಾಪಿಸಲು ಕಾರಣ ಆಗುತ್ತಿದೆ. ಕಳೆದ ವರ್ಷ ಇದೇ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದ್ದ ಘಟನೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿತ್ತು. ಜಿಲ್ಲೆಯ ಬೇರೆ ಬೇರೆ ತಾಲೂಕಿನ ಬಗ್ಗೆಯೂ ಎಚ್ಚರಿಕೆ ವಹಿಸಬೇಕಿತ್ತು. ಆದರೆ ಮಂಡ್ಯ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಎಚ್ಚರಿಕೆ ಸಾಕಾಗದ ಹಿನ್ನೆಲೆಯಲ್ಲಿ ಮಸೀದಿಯ ಒಳಗಿಂದಲೇ ಕಲ್ಲುಗಳು ತೂರಿ ಬರುವಂತೆ ಮಾಡಿದೆ.

ಕಾಂಗ್ರೆಸ್​​ ಸರ್ಕಾರಕ್ಕೆ ಸಂಕಷ್ಟ ತಂದಿಟ್ಟ ಪ್ರಕರಣಗಳು

ಪ್ರಕರಣ 1: ಉದಯಗಿರಿ ಗಲಭೆ

  • ಪೊಲೀಸರ ಮೇಲೆಯೇ ಮುಸ್ಲಿಂ ಸಮುದಾಯದ ಕಿಡಿಗೇಡಿಗಳು ಕಲ್ಲು ತೂರಿದ್ದರು.
  • ಆರೋಪಿ ಬಂಧನ ಆಗಿದ್ದಾಗ ಸ್ಟೇಷನ್ ಎದುರು ಜಮಾಯಿಸಿ ಗಲಭೆ ನಡೆಸಿದ್ದರು.
  • ಗಲಭೆ, ಕಲ್ಲು ತೂರಾಟದಿಂದ ಹಲವು ಪೊಲೀಸರರಿಗೆ ಗಾಯಗಳಾಗಿದ್ದವು.
  • ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವ ಕಾರಣಕ್ಕೆ ಧೈರ್ಯವಾಗಿ ಗಲಭೆ ಮಾಡುತ್ತಾರೆ ಎಂಬ ಟೀಕೆ ವ್ಯಕ್ತವಾಗಿತ್ತು.

ಪ್ರಕರಣ 2: ನಾಗಮಂಗಲ ಕೋಮುಗಲಭೆ

  • ನಾಗಮಂಗಲ ಗಣೇಶ ವಿಸರ್ಜನೆ ವೇಳೆ ಮುಸ್ಲಿಮರಿಮದ ಕಲ್ಲು ತೂರಾಟ.
  • ಶಾಂತಿಯುತವಾಗಿದ್ದ ಮಂಡ್ಯದಲ್ಲಿ ಕೋಮಗಲಭೆ ಬಿರುಗಾಳಿ.
  • ಗಲಭೆ ಪ್ರಕರಣದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿದವರ ಮೇಲೆ ಕೇಸ್ ದಾಖಲಿಸಿದ್ದು ಹಿಂದೂಗಳ ಭಾವನೆ ಕೆರಳಿಸಿತ್ತು.

ಪ್ರಕರಣ 3: ಮದ್ದೂರು ಗಣೇಶ ವಿಸರ್ಜನೆ ಗಲಾಟೆ

  • ಮದ್ದೂರಿನಲ್ಲಿ ಮಸೀದಿಯಲ್ಲಿದ್ದವರಿಂದ ಕಲ್ಲು ತೂರಾಟ.
  • ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಿದ‌ ಕಿಡಿಗೇಡಿಗಳು.
  • ಆರೋಪಿಗಳ ಬಂಧಿಸಿ ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರ ಪ್ರಯತ್ನ.
  • ಆದರೆ, ಕಲ್ಲು ತೂರಾಟ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಲಾಠಿ ಚಾರ್ಜ್ ಮಾಡಿದ ಪೊಲೀಸರು.

ಪ್ರಕರಣ 4: ಧರ್ಮಸ್ಥಳ ಕೇಸ್

  • ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದಾರೆ ಎನ್ನಲಾದ ಪ್ರಕರಣ.
  • ಆರೋಪಿ ಚಿನ್ನಯ್ಯನ ಪೂರ್ವಾಪರ ಪರಿಶೀಲನೆಗೂ ಮುನ್ನ ಎಸ್‌ಐಟಿ ರಚಿಸಿದ್ದ ಸರ್ಕಾರ.
  • ಏಕಾಏಕಿ‌ ಎಸ್‌ಐಟಿ ಮಾಡಿ ಉತ್ಖನನ ಮಾಡಿದ್ದು ಕೂಡ ಹಿಂದೂ ಧಾರ್ಮಿಕ ಕೇಂದ್ರಗಳ ಮೇಲೆ‌ ಸರ್ಕಾರಕ್ಕೆ ಆಸಕ್ತಿ ಇಲ್ಲ ಎನ್ನುವ ಚರ್ಚೆ ಜೋರಾಗಲು ಕಾರಣವಾಯಿತು.

ಪ್ರಕರಣ 5: ಗಣೇಶೋತ್ಸವ ಆಚರಣೆಗೆ ಹಲವು ನಿರ್ಬಂಧ

  • ಗಣೇಶೋತ್ಸವ ಆಚರಣೆಗೆ ಹಲವು ನಿರ್ಬಂಧಗಳನ್ನು ವಿಧಿಸಿದ್ದು ಹಿಂದೂ ವಿರೋಧಿ ನಿಲುವು ಎಂಬ ಟೀಕೆಗೆ ಕಾರಣವಾಯಿತು.
  • ಡಿಜೆಗಳಿಗೆ ನಿರ್ಬಂಧ ಹಾಕಿದ್ದು ಹಿಂದೂಗಳ ಆಚರಣೆಗೆ ಸರ್ಕಾರ ಉದ್ದೇಶಪೂರ್ವಕವಾಗಿ ಮಾಡಿದೆ ಎಂಬ ಭಾವನೆ ಮೂಡಿಸಿತು.
  • ಸರ್ಕಾರದ ಈ ವರ್ತನೆ ಗಣೆಶೋತ್ಸವದ ಮೆರವಣಿಗೆ ವೇಳೆ ಆಕ್ರೋಶಕ್ಕೂ ಕಾರಣವಾಯಿತು.

ಪ್ರಕರಣ 6: ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿ ಅಲ್ಲ ಎಂಬ ಹೇಳಿಕೆ

  • ಚಾಮುಂಡೇಶ್ವರಿ ಬೆಟ್ಟ ಹಿಂದೂಗಳ ಆಸ್ತಿ ಅಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದರು.
  • ಸಹಜವಾಗಿಯೇ ಡಿಕೆ ಶಿವಕುಮಾರ್ ಹೇಳಿಕೆ ಹಿಂದೂಗಳ ಕೆಂಗಣ್ಣಿಗೆ ಗುರಿಯಾಯಿತು.
  • ರಾಜಮನೆತನದವರು ಕೂಡ ಡಿಕೆಶಿ ಹೇಳಿಕೆ ಖಂಡಿಸಿದರು.
  • ಹಿಂದೂಗಳ ಆಸ್ತಿಯಾಗಿರುವುದಕ್ಕೇ ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದೆ ಎಂಬ ವಾದಗಳೂ ಕೇಳಿಬಂದವು.

ಪ್ರಕರಣ 7: ದಸರಾ ಉದ್ಘಾಟನೆ ವಿವಾದ

  • ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಹ್ವಾನಿಸಿದ್ದು ವಿವಾದವಾಗಿದೆ.
  • ದಸರಾ ನಾಡ ಹಬ್ಬವಾದರೂ ಧಾರ್ಮಿಕ ಆಚರಣೆಗಳು ಒಳಗೊಂಡಿದೆ. ಹೀಗಾಗಿ ಮುಸ್ಲಿಂ ಸಮುದಾಯದ, ಅದರಲ್ಲೂ ಭುವನೇಶ್ವರಿಯನ್ನು ದೇವಿಯಾಗಿ ಒಪ್ಪದ ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡಬಾರದು ಎಂಬ ಕೂಗು ಕೇಳಿಬಂತು.

ಇದನ್ನೂ ಓದಿ: ಮಸೀದಿ ಕಡೆಯಿಂದ ಕಲ್ಲೆಸೆತ ಮಾಡಲಾಗಿದೆ, 21 ಮಂದಿ ಮುಸ್ಲಿಮರನ್ನು ಬಂಧಿಸಲಾಗಿದೆ: ಸಚಿವ ಚಲುವರಾಯಸ್ವಾಮಿ

ಹೀಗೆ ಸಾಲು ಸಾಲು ಪ್ರಕರಣಗಳಲ್ಲಿ ಕಾಂಗ್ರೆಸ್ ಸರ್ಕಾರ ಎಡವಟ್ಟು ಮಾಡುತ್ತಿದೆಯಾ ಅಥವಾ ಮತ ಬ್ಯಾಂಕ್​​ನ ಬೆನ್ನು ಬಿದ್ದುಉದ್ದೇಶಪೂರ್ವಕವಾಗಿ ಹೀಗೆ ಮಾಡುತ್ತಿದೆಯಾ ಎಂಬ ಅನುಮಾನ ಮೂಡಿದೆ. ಅಥವಾ ವೋಟ್​​ ಬ್ಯಾಂಕ್​ಗಾಗಿ ತಪ್ಪನ್ನು ತಪ್ಪು ಎನ್ನುವ ಛಾತಿಯನ್ನೇ ಸರ್ಕಾರ ಕಳೆದುಕೊಂಡಿದೆಯಾ ಎಂಬ ಅನುಮಾನಗಳನ್ನು ಹುಟ್ಟುಹಾಕಿದೆ. ವಿರೋಧ ಪಕ್ಷಗಳು ಹಿಂದೂ ವಿರೋಧಿ ಸರ್ಕಾರ ಎಂದು ಹಣೆಪಟ್ಟಿ ಕಟ್ಟಲು ಈ ಎಲ್ಲ ಬೆಳವಣಿಗೆಗಳೂ ವೇದಿಕೆ ಕಲ್ಪಿಸಿಕೊಟ್ಟಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ