ಬೆಂಗಳೂರು, ಅಕ್ಟೋಬರ್ 11: ‘ದುಷ್ಟ ಶಕ್ತಿ ಎದುರು ಸತ್ಯದ ಜಯ. ಸರ್ಕಾರವನ್ನ ಅಸ್ಥಿರಗೊಳಿಸಲು ವಾಮಮಾರ್ಗ, ಮೋಸದಿಂದ ಯತ್ನಿಸುತ್ತಿರುವ ದುಷ್ಟಶಕ್ತಿಗಳನ್ನು ತಾಯಿ ಚಾಮುಂಡೇಶ್ವರಿ ನಿಗ್ರಹಿಸಲಿ.’ ಇದು ಕರ್ನಾಟಕ ಕಾಂಗ್ರೆಸ್ ಸರ್ಕಾರದ ಜಾಹೀರಾತು! ಇಂದು ಬೆಳ್ಳಂಬೆಳಗ್ಗೆಯೇ ಎಲ್ಲಾ ಪತ್ರಿಕೆಗಳ ಮುಖಪುಟದಲ್ಲೇ ಮೊಳಗಿದ ಜಾಹೀರಾತಿದು. ದಸರಾ ಶುಭಾಶಯ ಕೋರುವ ಜಾಹೀರಾತು ನೆಪದಲ್ಲೇ ವಿರೋಧ ಪಕ್ಷಕ್ಕೆ ಕಾಂಗ್ರೆಸ್ ಕೌಂಟರ್ ಕೊಟ್ಟಿದೆ.
ಮುಡಾ ಹಗರಣದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ, ಇದು ಸರ್ಕಾರದ ಅಸ್ಥಿರಗೊಳಿಸಲು ಬಿಜೆಪಿಯಿಂದ ಷಡ್ಯಂತ್ರ ಅಂತಾ ಆರೋಪಿಸುತ್ತಲೇ ಬಂದಿದ್ದಾರೆ. ಇದೀಗ ದಸರಾಗೆ ಶುಭಾಶಯ ಕೋರುವ ಸರ್ಕಾರದ ಜಾಹೀರಾತಿನ ಮೂಲಕ ಬಿಜೆಪಿ ಹಾಗೂ ಜೆಡಿಎಸ್ಗೆ ಕಾಂಗ್ರೆಸ್ ತಿರುಗೇಟು ಕೊಟ್ಟಿದೆ. ವಾಮಮಾರ್ಗದಿಂದ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ನಡೆಯುವುದಿಲ್ಲ ಎಂದು ದೋಸ್ತಿ ನಾಯಕರಿಗೆ ಜಾಹೀರಾತು ಮೂಲಕ ಕಾಂಗ್ರೆಸ್ ಸರ್ಕಾರ ಮತ್ತೊಂದು ತಿರುಗೇಟು ನೀಡಿದೆ.
ಇದಿಷ್ಟೇ ಅಲ್ಲ, ನವರಾತ್ರಿಯಲ್ಲಿ ಸಂಹರಿಸಬೇಕಾದ ವಿನಾಶಕಾರಿ ಶಕ್ತಿಗಳನ್ನೂ ಜಾಹೀರಾತಿನಲ್ಲಿ ಉಲ್ಲೇಖ ಮಾಡಲಾಗಿದೆ.
ಇವಿಷ್ಟು ವಿಚಾರಗಳನ್ನು ಕಾಂಗ್ರೆಸ್ ಪಕ್ಷ ಪತ್ರಿಕೆಗಳಿಗೆ ನೀಡಿದ ಜಾಹೀರಾತಿನಲ್ಲಿ ಉಲ್ಲೇಖಿಸಿದೆ.
ಕಾಂಗ್ರೆಸ್ ಜಾಹೀರಾತಿನ ಬಗ್ಗೆ ಆಕ್ರೋಶ ಹೊರಹಾಕಿದ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ, ರಾಜ್ಯವನ್ನು ಮೋಸದಿಂದ ಸ್ಥಿರಗೊಳಿಸಲು ಸರ್ಕಾರ ಹೊರಟಿದೆ. ಸ್ಥಿರಗೊಳಿಸುವುದು, ಅಸ್ಥಿರಗೊಳಿಸುವುದು ನಮ್ಮ ಕೈಯಲ್ಲಿ ಇಲ್ಲ, ಚಾಮುಂಡಿ ತಾಯಿ ಕೈಯಲ್ಲಿ ಇದೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಪರೋಕ್ಷವಾಗಿ ಪ್ರತ್ಯೇಕ ಭಾರತದ ಮಾತು ಆಡಿದ ಕಾಂಗ್ರೆಸ್ ಮಾಜಿ ಸಂಸದ ಡಿಕೆ ಸುರೇಶ್
ದುಷ್ಟಶಕ್ತಿಗಳು ಯಾರು ಎಂಬುದನ್ನು ಜನರು ತೀರ್ಮಾನ ಮಾಡುತ್ತಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರದ ಹಣವನ್ನು ಇಂಥಾ ಜಾಹೀರಾತಿಗೆ ಖರ್ಚು ಮಾಡಿ ಲೂಟಿ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಲೋಕಸಭೆ ಚುನಾವಣೆ ಪ್ರಚಾರದ ಅಖಾಡದಲ್ಲಿ ಚೊಂಬು, ಚಿಪ್ಪು, ಟಾಯ್ಲೆಟ್ಟು: ಟೀಕೆಗಳಲ್ಲೂ ಕ್ರಿಯಾಶೀಲತೆ ಉಂಟು!
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ