ಲೋಕಸಭೆ ಚುನಾವಣೆ ಪ್ರಚಾರದ ಅಖಾಡದಲ್ಲಿ ಚೊಂಬು, ಚಿಪ್ಪು, ಟಾಯ್ಲೆಟ್ಟು: ಟೀಕೆಗಳಲ್ಲೂ ಕ್ರಿಯಾಶೀಲತೆ ಉಂಟು!
Lok Sabha Elections: ಕರ್ನಾಟಕದ ಚುನಾವಣಾ ಪ್ರಚಾರ ಕಣದಲ್ಲಿ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ಸೃಜನಾತ್ಮಕತೆ ಮೆರೆದು ಗಮನ ಸೆಳೆದಿವೆ. ಚುನಾವಣಾ ರ‍್ಯಾಲಿಗಳು, ಅಬ್ಬರದ ಭಾಷಣಗಳಷ್ಟೇ ಅಲ್ಲದೆ, ಪತ್ರಿಕೆಗಳಲ್ಲಿ ಕ್ರಿಯಾಶೀಲ ಜಾಹಿರಾತುಗಳನ್ನು ನೀಡುತ್ತಿವೆ. ಮೊದಲಿಗೆ, ಕರ್ನಾಟಕಕ್ಕೆ ಕೇಂದ್ರ ಏನನ್ನೂ ನೀಡಿಲ್ಲ ಎಂಬ ಆರೋಪ ಮಾಡಿ ಖಾಲಿ ಚೊಂಬಿನ ಜಾಹೀರಾತನ್ನು ಕಾಂಗ್ರೆಸ್ ನೀಡಿದರೆ ಬಿಜೆಪಿಯೂ ನಂತರ ಅದೇ ಹಾದಿ ಹಿಡಿಯಿತು. ಕ್ರಿಯಾಶೀಲ ಜಾಹೀರಾತು ಸಮರದ ಇಣುಕುನೋಟ ಇಲ್ಲಿದೆ.
ಬೆಂಗಳೂರು, ಏಪ್ರಿಲ್ 22: ಲೋಕಸಭೆ ಚುನಾವಣೆಯ (Lok Sabha Elections) ಮೊದಲ ಹಂತದ ಮತದಾನ (Voting) ಈಗಾಗಲೇ ಮುಗಿದಿದ್ದು, ಎರಡನೇ ಹಂತದ ಮತದಾನ ಏಪ್ರಿಲ್ 26ರಂದು ನಡೆಯಲಿದೆ. ಅದೇ ದಿನ ಕರ್ನಾಟಕದ (Karnataka) 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ರಾಜಕೀಯ ಪಕ್ಷಗಳ ಪ್ರಚಾರ ಬಿರುಸುಗೊಂಡಿದ್ದು, ಬಹಿರಂಗ ಪ್ರಚಾರಕ್ಕೆ ತೆರೆಬೀಳಲು ಇನ್ನೆರಡೇ ದಿನ ಬಾಕಿ ಇದೆ. ಎಲ್ಲ ಕಡೆ ಲಕ್ಷಾಂತರ ಜನರನ್ನು ಸೇರಿಸಿ ರಾಜಕೀಯ ಪಕ್ಷಗಳು ರ‍್ಯಾಲಿ, ಸಮಾವೇಶಗಳನ್ನು ಮಾಡುತ್ತಿದ್ದರೆ ಕರ್ನಾಟಕದಲ್ಲಿ ಪ್ರಚಾರದ ಶೈಲಿ ತುಸು ಭಿನ್ನವಾಗಿದೆ! ರ‍್ಯಾಲಿ, ಸಮಾವೇಶಗಳಷ್ಟೇ ಅಲ್ಲದೆ ಕ್ರಿಯಾಶೀಲ ಜಾಹೀರಾತು, ಟ್ವೀಟ್ಗಳ ಮೂಲಕವೂ ರಾಜಕೀಯ ಪಕ್ಷಗಳು ಸಾರ್ವಜನಿಕರ ಗಮನ ಸೆಳೆಯುತ್ತಿವೆ. ಬಿಜೆಪಿ, ಕಾಂಗ್ರೆಸ್ ಜಾಹೀರಾತು – ಟ್ವೀಟ್ ಸಮರಗಳಲ್ಲಿ ಉಭಯ ರಾಜಕೀಯ ಪಕ್ಷಗಳೂ ಕ್ರಿಯಾಶೀಲತೆ ಮೆರೆದಿದ್ದು, ಗಮನ ಸೆಳೆದಿವೆ.
‘ಚೊಂಬು’ವಿನಿಂದ ಶುರುವಾದ ಜಾಹೀರಾತು ಸಮರ
ಕೇಂದ್ರ ಸರ್ಕಾರ ಹಾಗೂ ಬಿಜೆಪಿಯಿಂದ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬುದನ್ನು ಬಿಂಬಿಸಲು ಕಾಂಗ್ರೆಸ್ ಪಕ್ಷವು ಏಪ್ರಿಲ್ 19ರಂದು ರಾಜ್ಯದ ಹೆಚ್ಚಿನೆಲ್ಲ ದಿನಪತ್ರಿಕೆಗಳಿಗೆ ಜಾಹೀರಾತೊಂದನ್ನು ನೀಡಿತು. ಅದರಲ್ಲಿ, ದೊಡ್ಡದಾದ ಚೊಂಬಿನ ಫೋಟೊ ಪ್ರಕಟಿಸಿ, ಕರ್ನಾಟಕಕ್ಕೆ ಮೋದಿ ಸರ್ಕಾರ ಕೊಟ್ಟ ಕೊಡುಗೆ ಚೊಂಬು ಎಂದು ಕುಹಕವಾಡಿತು.
ಎಲ್ಲರ ಖಾತೆಗೆ 15 ಲಕ್ಷ ಹಣ ಹಾಕುವ ಚೊಂಬು, ತೆರಿಗೆ ಹಂಚಿಕೆಯಲ್ಲಿ ಚೊಂಬು, ರೈತರ ಆದಾಯ ಡಬಲ್ ಮಾಡುವ ಚೊಂಬು, ಬರ ನೆರೆ ಪರಿಹಾರದ ಚೊಂಬು, 27 ಜನ ಬಿಜೆಪಿ ಜೆಡಿಎಸ್ ಸಂಸದರು ರಾಜ್ಯಕ್ಕೆ ನೀಡಿದ ಕೊಡುಗೆ ಕೇವಲ ಚೊಂಬು. ಈ ಚುನಾವಣೆಯಲ್ಲಿ ಬಿಜೆಪಿಗೆ ನಾವು ನೀಡೋಣ ಇದೇ ಚೊಂಬು ಎಂದು ಕಾಂಗ್ರೆಸ್ ಜಾಹೀರಾತು ನೀಡಿತ್ತು.
ವ್ಯತ್ಯಾಸ ಇಷ್ಟೇ!
The Difference Is Very Clear!#ModiKiGuarantee pic.twitter.com/TOv3Kjk9Ji
— BJP Karnataka (@BJP4Karnataka) April 20, 2024
ಇದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್‌ಗೆ ತಿರುಗೇಟು ನೀಡಿದ ಬಿಜೆಪಿ, 2013ರಲ್ಲಿ ಸಿಎಂ ಸಿದ್ದರಾಮಯ್ಯ ಅವರು ಚೊಂಬು ಹಿಡಿದುಕೊಂಡು ಬಯಲುಶೌಚಕ್ಕೆ ಹೋಗುತ್ತಿರುವ ಮತ್ತು 2023ರಲ್ಲಿ ಚೊಂಬು ಹಿಡಿದುಕೊಂಡು ಶೌಚಾಲಯಕ್ಕೆ ಹೋಗುತ್ತಿರುವ ಎಡಿಟೆಡ್ ಚಿತ್ರವನ್ನು ಟ್ವೀಟ್ ಮಾಡಿ ‘ಇಷ್ಟೇ ವ್ಯತ್ಯಾಸ’ ಎಂದಿತು.
ಕಾಂಗ್ರೆಸ್ ಚೊಂಬನ್ನು ಅಕ್ಷಯ ಪಾತ್ರೆಯಾಗಿಸಿದ ದೇವೇಗೌಡ!
ಚಿಕ್ಕಬಳ್ಳಾಪುರದಲ್ಲಿ ಶನಿವಾರ ನಡೆದ ಬಿಜೆಪಿ ಜೆಡಿಎಸ್ ಮೈತ್ರಿ ಸಮಾವೇಶದಲ್ಲಿ ಮಾತನಾಡಿದ್ದ ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ, ಕೇಂದ್ರದಲ್ಲಿ ಹಿಂದಿನ ಯುಪಿಎ ಸರ್ಕಾರ ಹಗರಣಗಳ ಮೇಲೆ ಹಗರಣ ಮಾಡಿ 2014ರಲ್ಲಿ ಮೋದಿ ಕೈಗೆ ಚೊಂಬು ಕೊಟ್ಟು ಹೋಗಿತ್ತು. ನಂತರ ಪ್ರಧಾನಿಯಾದ ಮೋದಿಯವರು ಅದನ್ನು ಅಕ್ಷಯ ಪಾತ್ರೆಯನ್ನಾಗಿಸಿ ಬಡವರಿಗೆ ಕೊಟ್ಟರು ಎಂದು ಹೇಳಿದ್ದರು. ಆ ಮೂಲಕ ಕಾಂಗ್ರೆಸ್ನ ‘ಚೊಂಬು’ ಟೀಕೆಯನ್ನು ತಿರುಗುಬಾಣವಾಗಿಸಿ ಅದರತ್ತಲೇ ಬಿಟ್ಟಿದ್ದರು.
ಇದನ್ನೂ ಓದಿ: ‘ಕೈ’ಕೊಟ್ಟ ಚೆಂಬನ್ನು ಅಕ್ಷಯ ಪಾತ್ರೆಯಾಗಿಸಿ ಬಡವರಿಗೆ ಕೊಟ್ಟ ಮೋದಿ: ಹೆಚ್ಡಿ ದೇವೇಗೌಡ
ಮತ್ತೆ ‘ಚೊಂಬು’ ವಿಚಾರವಾಗಿ ಪ್ರತಿದಾಳಿ ನಡೆಸಿದ್ದ ಬಿಜೆಪಿ, ‘ಜನರಿಂದ ಕಾಂಗ್ರೆಸ್‌ಗೆ ಚೊಂಬೇ ಗ್ಯಾರಂಟಿ’ ಎಂದು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿತ್ತು.
ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಮತ್ತೆ ಜಾಹೀರಾತು ನೀಡಿದ ಕಾಂಗ್ರೆಸ್, ‘ಮೋದಿ ಸರ್ಕಾರಕ್ಕೆ ಕಟ್ಟುವ ಪ್ರತಿ 100 ರೂಪಾಯಿ ತೆರಿಗೆಯಲ್ಲಿ ಕರ್ನಾಟಕಕ್ಕೆ ಮರಳಿ ಸಿಗುವುದು 13 ರೂಪಾಯಿ ಮಾತ್ರ. ಈ ಅನ್ಯಾಯವನ್ನು ಎಲ್ಲಿಯವರೆಗೆ ಸಹಿಸಬೇಕು’ ಎಂದು ಉಲ್ಲೇಖಿಸಿದೆ.
ಕನ್ನಡಿಗರ ಶಾಂತಿ ನೆಮ್ಮದಿ ಹಾಗೂ ಸಮೃದ್ಧಿಯನ್ನು ಹಾಳುಗೆಡವಲು ಬಂದಿದೆ ಕಾಂಗ್ರೆಸ್!
ಕಾಂಗ್ರೆಸ್ ಅಂದ್ರೆ ಡೇಂಜರ್!
ಇವರಿಂದ ಎಚ್ಚರ! ಎಚ್ಚರ! ಎಚ್ಚರ! pic.twitter.com/7r4RVVTWrT
— BJP Karnataka (@BJP4Karnataka) April 22, 2024
ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಮತ್ತೆ ಜಾಹೀರಾತು ಸಮರಕ್ಕಿಳಿದ ಬಿಜೆಪಿ, ಹೆಚ್ಚಿನೆಲ್ಲ ಪತ್ರಿಕೆಗಳಿಗೆ ಮತ್ತೊಂದು ಜಾಹೀರಾತು ನೀಡಿತು. ‘ಕಾಂಗ್ರೆಸ್ ಡೇಂಜರ್’ ಎಂಬ ಜಾಹೀರಾತಿನಲ್ಲಿ ಲವ್ ಜಿಹಾದ್, ಕುಕ್ಕರ್ ಬಾಂಬ್, ವಿಧಾನಸೌಧ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಸೇರಿದಂತೆ ಹಲವು ವಿಚಾರಗಳನ್ನು ಬಿಜೆಪಿ ಉಲ್ಲೇಖಿಸಿತು. ಜತೆಗೆ, ಭದ್ರತೆ ಮತ್ತು ಸುರಕ್ಷತೆಗಾಗಿ ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿತು.
ಗಮನ ಸೆಳೆದ ಬಿಜೆಪಿಯ ‘ಚಿಪ್ಪು’ ಜಾಹೀರಾತು
ಈ ಮಧ್ಯೆ, ‘ಕನ್ನಡಿಗರ ಕೈಗೆ ಚಿಪ್ಪು ನೀಡಿದ ಕಾಂಗ್ರೆಸ್’ ಎಂದು ಬಿಜೆಪಿ ಜಾಹೀರಾತು ನೀಡಿತು. ಅದರಲ್ಲಿ, ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕ ಜನತೆ ಕೈಗೆ ಚಿಪ್ಪು ನೀಡಲಾಗಿದೆ ಎಂದು ಉಲ್ಲೇಖಿಸಿತು. ಮುಂದುವರಿದು, ಕಾಂಗ್ರೆಸ್ ಆಡಳಿತದಲ್ಲಿ ಆಟೋ ಮತ್ತು ಕ್ಯಾನ್ ಚಾಲಕರಿಗೆ ಚಿಪ್ಪು, ಬರದಿಂದ ತತ್ತರಿಸಿದ ರೈತರ ಕೈಗೆ ಚಿಪ್ಪು, ಕಾವೇರಿ ನೀರು ತಮಿಳುನಾಡಿಗೆ ಬಿಟ್ಟು ಬೆಂಗಳೂರಿಗರ ಕೈಗೆ ಚಿಪ್ಪು, ದಲಿತರ 11 ಸಾವಿರ ಕೋಟಿ ದುರ್ಬಳಕೆ ಮಾಡಿಕೊಂಡು ತಳಸಮುದಾಯದ ಕೈಗೆ ಚಿಪ್ಪು, ಪ್ರತಿದಿನ ಪ್ರಯಾಣ ಮಾಡುವ ಕಾರ್ಮಿಕರಿಗೆ ಕೈಗೆ ಚಿಪ್ಪು, ವಿದ್ಯಾನಿಧಿ ನೀಡದೆ ವಿದ್ಯಾರ್ಥಿಗಳ ಕೈಗೆ ಚಿಪ್ಪು, ಅಲ್ಪಸಂಖ್ಯಾತರ ಓಲೈಕೆಯಿಂದ ಹಿಂದುಗಳ ಕೈಗೆ ಚಿಪ್ಪು, ಕಿಸಾನ್ ಸಮ್ಮಾನ್ ನ 24000 ಸ್ಥಗಿತಗೊಳಿಸಿ ರೈತರ ಕೈಗೆ ಚಿಪ್ಪು, ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಕೈಗೆ ಚಿಪ್ಪು ನೀಡಿದೆ ಎಂದು ಉಲ್ಲೇಖಿಸಿತು.
ಹೀಗೆ, ಈ ಬಾರಿ ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಉಭಯ ಪಕ್ಷಗಳ ಕ್ರಿಯಾಶೀಲತೆ ಸಾರ್ವಜನಿಕರ ಗಮನ ಸೆಳೆಯುತ್ತಿರುವುದಂತೂ ಸುಳ್ಳಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:29 am, Mon, 22 April 24