ಬೆಂಗಳೂರು/ಕಲಬುರಗಿ, (ಸೆಪ್ಟೆಂಬರ್ 05): ಮುಂದಿನ ಸಚಿವ ಸಂಪುಟ ಸಭೆಯನ್ನು ಕಲಬುರಗಿಯಲ್ಲಿ ರಾಜ್ಯ ಸರ್ಕಾರ ತೀರ್ಮಾನಸಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇತರೆ ಸಚಿವರು ಸಹ ಒಪ್ಪಿಗೆ ಸೂಚಿಸಿದ್ದು, ಕಲ್ಯಾಣ ಕರ್ನಾಟಕ ಭಾಗದ ವಿಷಯಗಳ ಕುರಿತು ಚರ್ಚಿಸಲು ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದೆ. ಇನ್ನು ಈ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿ ಮಾಹಿತಿ ನೀಡಿದ್ದಾರೆ. ಆದ್ರೆ, ದಿನಾಂಕ ಮಾತ್ರ ನಿಗದಿಯಾಗಿಲ್ಲ. ಪ್ರತಿ ಗುರುವಾರದಂತೆ ಕಲಬುರಗಿಯಲ್ಲಿ ಮುಂದಿನ ಗುರುವಾರದ ಸಚಿವ ಸಂಪುಟ ಸಭೆ ನಡೆಯಬಹುದು.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ . ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿ ಹಾಗೂ ಕೈಗೊಳ್ಳಬೇಕಿರುವ ಜನಪರ ಕೆಲಸಗಳ ಕುರಿತು ಸಮಗ್ರ ಚರ್ಚೆ ನಡೆಸಲು ಮುಂದಿನ ಸಚಿವ ಸಂಪುಟ ಸಭೆಯನ್ನು ಕಲಬುರಗಿ ಯಲ್ಲಿ ನಡೆಸಲು ಮುಖ್ಯಮಂತ್ರಿ ಗಳಾದ ಸಿದ್ದರಾಮಯ್ಯ ಹಾಗೂ ಸಂಪುಟದ ಎಲ್ಲ ಸಚಿವರು ಒಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಅನ್ನಭಾಗ್ಯದ 5 ಕೆಜಿ ಅಕ್ಕಿಯ ಹಣ ನೀಡುವುದು ಮುಂದುವರಿಕೆ: ಸಚಿವ ಸಂಪುಟದ ತೀರ್ಮಾನಗಳು ಇಲ್ಲಿವೆ
ಈ ಭಾಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಉದ್ದೇಶದಿಂದ ಸಿಎಂ ಅವರಿಗೆ ಕಲಬುರಗಿ ಯಲ್ಲಿ ಸಚಿವ ಸಂಪುಟ ಸಭೆ ನಡೆಸಲು ಮನವಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸಿಎಂ ಹಾಗೂ ಸಚಿವರು ಸಭೆ ನಡೆಸಲು ಒಪ್ಪಿಗೆ ಸೂಚಿಸಿದ್ದು ಸಭೆಯ ದಿನಾಂಕ ಸಧ್ಯದಲ್ಲೇ ನಿಗದಿಪಡಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ದಿಗಾಗಿ ಸಂವಿಧಾನ ಕಲಂ 371 ಕ್ಕೆ ತಿದ್ದುಪಡಿ ತಂದು ಜೆ ಸೇರಿಸಿ ಶಿಕ್ಷಣ, ಉದ್ಯೋಗ ಹಾಗೂ ಅನುದಾನ ಒದಗಿಸಿಕೊಡುವುದಕ್ಕೆ ವಿಶೇಷ ಸ್ಥಾನಮಾನ ಜಾರಿಗೆ ಬಂದು ದಶಕಗಳು ಕಳೆದಿರುವ ಈ ಸಂದರ್ಭದಲ್ಲಿ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಿ ಈ ಭಾಗದ ಅಭಿವೃದ್ದಿಗೆ ಸಹಕಾರಿಯಾಗುವಂತ ಯೋಜನೆಗಳನ್ನು ಜಾರಿಗೊಳಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ಇಡೀ ಸಚಿವ ಸಂಪುಟ ಕಲಬುರಗಿ ಗೆ ಆಗಮಿಸುತ್ತಿರುವುದು ಹರ್ಷ ತಂದಿದೆ. ನನ್ನ ಮನವಿಗೆ ಓಗೊಟ್ಟು ಸಭೆ ನಡೆಸಲು ಒಪ್ಪಿರುವ ಮುಖ್ಯಮಂತ್ರಿಗಳಿಗೆ ವೈಯಕ್ತಿಕವಾಗಿ ನನ್ನ,ನಮ್ಮ ಭಾಗದ ಎಲ್ಲ ಶಾಸಕರ ಹಾಗೂ ಈ ಭಾಗದ ಎಲ್ಲ ಜನರ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ.
ಕಲಬುರಗಿ ಯಲ್ಲಿ ಸಚಿವ ಸಂಪುಟ ಸಭೆ ನಡೆಸುವುದರಿಂದ ಶಿಕ್ಷಣ, ಆರೋಗ್ಯ, ಮೂಲಭೂತ ಸೌಲಭ್ಯದಂತ ಕ್ಷೇತ್ರಗಳ ಅಭಿವೃದ್ದಿಗೆ ಸಹಕಾರಿಯಾಗಲಿದೆ ಮತ್ತು ಇದರಿಂದ ಮಹತ್ತರ ಬೆಳವಣಿಗೆಯಾಗಲಿದೆ.ಈ ಭಾಗದ ಅಭಿವೃದ್ದಿಗೆ ನಾನು ಹಾಗೂ ನಮ್ಮ ಸರ್ಕಾರ ಸದಾ ಕಟಿಬದ್ಧವಾಗಿದ್ದು ಉದ್ದೇಶಿತ ಸಭೆ ನಮ್ಮೆಲ್ಲ ಆಶೋತ್ತರಗಳಿಗೆ ಸ್ಪಂದಿಸಲಿದೆ ಎಂದು ಖರ್ಗೆ ಹೇಳಿದ್ದಾರೆ.
ಈ ಹಿಂದೆಯೂ ಹಲವು ಬಾರಿ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆಯನ್ನು ಮಾಡಲಾಗಿದೆ. 2008 ರಿಂದ 2013ರ ತನಕ 5 ಬಾರಿ ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆದಿತ್ತು. ಅಲ್ಲದೇ 2014 ಮತ್ತು 2021ರಲ್ಲೂ ಸಹ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆದಿತ್ತು. ಇದೀಗ ಮತ್ತೆ ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆದಿದ್ದು, ಈ ಭಾಗದ ಜನರಲ್ಲಿ ಹೆಚ್ಚಿನ ನಿರೀಕ್ಷೆಗಳು ಗರಿಗೆದರಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ