ಮಹದಾಯಿ ಯೋಜನೆ: ಪ್ರಧಾನಿ ಬಳಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯಲು ತೀರ್ಮಾನ
ಮಹದಾಯಿ ಯೋಜನೆಗೆ ವನ್ಯಜೀವಿ ಮಂಡಳಿ ಅನುಮತಿ ನಿರಾಕರಣೆ ಮಾಡಿದೆ, ಮತ್ತೊಂದೆಡೆ ಗೋವಾದ ವಿದ್ಯುತ್ ಯೋಜನೆಗೆ ವನ್ಯಜೀವಿ ಮಂಡಳಿ ಅನುಮತಿ ನೀಡಿದೆ. ಈ ಸಂಬಂಧ ಕರ್ನಾಟಕ ಸರ್ಕಾರ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿದ್ದು, ಪ್ರಧಾನಿ ಬಳಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯಲು ತೀರ್ಮಾನಿಸಲಾಗಿದೆ. ಅಲ್ಲದೇ ಕಾನೂನು ತಜ್ಞರ ಸಲಹೆಯಂತೆ ಸುಪ್ರೀಂಕೋರ್ಟ್ ಮೆಟ್ಟಿಲೇರಲು ನಿರ್ಧರಿಸಲಾಗಿದೆ.
ಬೆಂಗಳೂರು, ಸೆ.05: ಮಹದಾಯಿ(Mahadayi)ಯೋಜನೆಗೆ ವನ್ಯಜೀವಿ ಮಂಡಳಿ ಅನುಮತಿ ನಿರಾಕರಣೆ ಮಾಡಿದ ಹಿನ್ನಲೆ ಪ್ರಧಾನಿ ಬಳಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇಂದು(ಗುರುವಾರ) ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ, ‘ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್ಕೆ ಪಾಟೀಲ್(HK Patil), ‘ಗೋವಾದ ವಿದ್ಯುತ್ ಯೋಜನೆಗೆ ರಾಜ್ಯದ 435 ಎಕರೆ ಅರಣ್ಯ ಭೂಮಿ ಬಳಕೆಯಾಗುವ ಯೋಜನೆಗೆ ವನ್ಯಜೀವಿ ಮಂಡಳಿ ಅನುಮತಿ ಕೊಟ್ಟಿದೆ. ಆದರೆ, ನಮ್ಮ ರಾಜ್ಯದ ಮಹದಾಯಿ ಯೋಜನೆಗೆ ಅನುಮತಿ ಕೊಟ್ಟಿಲ್ಲ. ಇದರಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ ಎಂದರು.
ಕಾನೂನು ತಜ್ಞರ ಸಲಹೆಯಂತೆ ಸುಪ್ರೀಂ ಕೋರ್ಟ್ಗೆ ಅರ್ಜಿ ಹಾಕಲು ನಿರ್ಧಾರ
ಗೋವಾ – ತಮ್ನಾರ್ 400 ಕೆವಿ ವಿದ್ಯುತ್ ಪೂರೈಕೆ ಯೋಜನೆಗೆ ಅನುಮತಿ ಕೊಡಲಾಗಿದೆ. ಆದರೆ, ಮಹಾದಾಯಿ ಯೋಜನೆಗೆ ಅನುಮತಿ ಕೊಡದೆಯಿರುವ ಬಗ್ಗೆ ಸಂಪುಟ ಸಭೆಯಲ್ಲಿ ಆತಂಕ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ಸರ್ವಪಕ್ಷ ಸಭೆ ನಡೆಸಲು ತಿರ್ಮಾನಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಬಳಿಗೆ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಲು ತಿರ್ಮಾನಿಸಿದೆ. ಅಷ್ಟೇ ಅಲ್ಲದೆ ಕಾನೂನು ತಜ್ಞರ ಸಲಹೆಯಂತೆ ಸುಪ್ರೀಂ ಕೋರ್ಟ್ಗೆ ಅರ್ಜಿ ಹಾಕಲು ಸಹ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ:ಮಹದಾಯಿ ಜಲ ವಿವಾದ; ಕಣಕುಂಬಿಗೆ ಕೇಂದ್ರ ತಂಡ ಭೇಟಿ, ಹೋರಾಟದ ಎಚ್ಚರಿಕೆ ನೀಡಿದ ಅಶೋಕ ಚಂದರಗಿ
ಗೋವಾಕ್ಕೆ ಮಹದಾಯಿ ನದಿಯ ಪ್ರಾಮುಖ್ಯತೆ ಕುರಿತು ತಕರಾರು ಎತ್ತಿ ಗೋವಾ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿರುವ ಕಾರಣ ಮುಂದಿಟ್ಟುಕೊಂಡು ಕಳಸಾ ನಾಲಾ ತಿರುವು ಯೋಜನೆಗೆ ಅನುಮೋದನೆ ನೀಡಲು ರಾಷ್ಟ್ರೀಯ ವನ್ಯಜೀವಿ ಮಂಡಳಿ ನಿರಾಕರಿಸಿದೆ. ಕರ್ನಾಟಕದ 435 ಎಕರೆ ಅರಣ್ಯ ಬಳಕೆಯಾಗುವ ಗೋವಾ-ತಮ್ನಾರ್ 400 ಕೆ.ವಿ ವಿದ್ಯುತ್ ಮಾರ್ಗಕ್ಕೆ ಮಂಡಳಿ ಒಪ್ಪಿಗೆ ನೀಡಿದ್ದು, ರಾಜ್ಯಕ್ಕೆ ಕಹಿಯಾಗಿ ಪರಿಣಮಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ