ಡಿಕೆಶಿ-ಸಿದ್ದು ಬಣ ಬಡಿದಾಟ ನಡುವೆ ತೂರಿ ಹೋಗಿ ರಾಹುಲ್ ಗಾಂಧಿ ಭೇಟಿಯಾದ ಬಿಕೆ ಹರಿಪ್ರಸಾದ್

ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಎರಡುವರೆ ವರ್ಷ ಪೂರ್ಣಗೊಳ್ಳುತ್ತಿದ್ದಂತೆಯೇ ಅಧಿಕಾರ ಹಂಚಿಕೆ ಕಿತ್ತಾಟ ಮುನ್ನೆಲೆಗೆ ಬಂದಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಕುರ್ಚಿ ಕದನ ದಿನಕ್ಕೊಂದು ಬೆಳವಣಿಗೆ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಬಗ್ಗೆ ಯಾವುದೇ ಕ್ರಮಕೈಗೊಳ್ಳದೇ ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ, ರಾಹುಲ್ ಗಾಂಧಿಯತ್ತ ಬೊಟ್ಟು ಮಾಡಿ ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಬಿಕೆ ಹರಿಪ್ರಸಾದ್ ಅವರು ಸೈಲೆಂಟ್ ಆಗಿಯೇ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ್ದು, ಸದ್ಯ ರಾಜ್ಯದಲ್ಲಿ ಆಗುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಡಿಕೆಶಿ-ಸಿದ್ದು ಬಣ ಬಡಿದಾಟ ನಡುವೆ ತೂರಿ ಹೋಗಿ ರಾಹುಲ್ ಗಾಂಧಿ ಭೇಟಿಯಾದ ಬಿಕೆ ಹರಿಪ್ರಸಾದ್
BK Hariprasad Meets Rahul Gandhi

Updated on: Nov 24, 2025 | 5:39 PM

ನವದೆಹಲಿ, (ನವೆಂಬರ್ 24): ಸಿದ್ದರಾಮಯ್ಯ (Siddaramaiah)-ಡಿಕೆ ಶಿವಕುಮಾರ್ (DK Shivakumar) ನಡುವೆ ಕುರ್ಚಿ ಕದನ ದಿನಕ್ಕೊಂದು ಬೆಳವಣಿಗೆ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಡಿಕೆ ಶಿವಕುಮಾರ್ ಅವರನ್ನ ಎರಡುವರೆ ವರ್ಷದ ಅವಧಿಗೆ ಸಿಎಂ ಮಾಡಬೇಕೆಂದು ಅವರ ಬೆಂಬಲಿಗರು ದೆಹಲಿ ಪರೇಡ್ ನಡೆಸಿದ್ದಾರೆ. ಈಗಾಗಲೇ ಡಿಕೆಶಿ ಬಣ ಎರಡು ತಂಡಗಳಾಗಿ ದೆಹಲಿಯಲ್ಲೇ ಬೀಡುಬಿಟ್ಟಿದ್ದು, ಹೈಕಮಾಂಡ್ ನಾಯಕರ ಭೇಟಿಗೆ ಕಸರತ್ತು ನಡೆಸಿವೆ. ಇನ್ನು ಡಿಕೆ ಶಿವಕುಮಾರ್​​​ ಭೇಟಿಗೆ ರಾಹುಲ್ ಗಾಂಧಿ ಸಮಯ ಕೊಟ್ಟಿಲ್ಲ. ಹೀಗಾಗಿ ಡಿಕೆಶಿ ಖರ್ಗೆ ಅವರನ್ನ ಭೇಟಿ ಮಾಡಿಬಂದು ಇದೀಗ ತಮ್ಮದೇ ದಾಳ ಉರುಳಿಸುತ್ತಿದ್ದಾರೆ. ಇನ್ನೊಂದೆಡೆ ಡಿಕೆಶಿಯನ್ನೇ ಕಟ್ಟಿ ಹಾಕಲು ಸಿದ್ದರಾಮಯ್ಯ ಬಣ ಸೈಲೆಂಟ್​ ದಾಳ ಉರುಳಿಸುತ್ತಿದೆ. ಹೀಗೆ ಕರ್ನಾಟಕ ಕಾಂಗ್ರೆಸ್​​ನಲ್ಲಿ ಬಣ ರಾಜಕೀಯ ಉಲ್ಭಣವಾಗಿದ್ದರೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮಿಂದ ಏನು ಆಗುತ್ತಿಲ್ಲ ಎಂದು ಕೈಚೆಲ್ಲಿ ಅಸಹಾಯಕತೆ ತೋಡಿಕೊಂಡಿದ್ದಾರೆ. ಈ ಎಲ್ಲಾ ಬೆಳವಣಿಗಳ ನಡುವೆ ವಿಧಾನಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ , ಸೈಲೆಂಟ್ ಆಗಿಯೇ ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ್ದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಇನ್ನು ಡಿಕೆಶಿ ಭೇಟಿಗೆ ಸಮಯ ಕೊಡದ ರಾಹುಲ್, ಹರಿಪ್ರಸಾದ್​​ಗೆ ಕೊಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ.

ಸೈಲೆಂಟ್ ಆಗಿಯೇ ರಾಹುಲ್​ ಭೇಟಿಯಾದ ಹರಿಪ್ರಸಾದ್

ಹೌದು…ಬೆಂಗಳೂರಿನಲ್ಲಿ ಡಿಕೆಶಿ ಹಾಗೂ ಸಿದ್ದರಾಮಯ್ಯ ಬಣ ಪ್ರತ್ಯೇಕವಾಗಿ ರಹಸ್ಯ ಸಭೆ ನಡೆಸುತ್ತಿವೆ. ಮಾಧ್ಯಮಗಳ ಮುಂದೆ ತಮ್ಮ ತಮ್ಮ ನಾಯಕರ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಡಿಕೆ ಶಿವಕುಮಾರ್ ಸಹ ದೆಹಲಿಗೆ ತೆರಳಿ ರಾಹುಲ್ ಗಾಂಧಿ ಭೇಟಿ ಯತ್ನ ವಿಫಲವಾಗಿದ್ದು, ಅಸಮಾಧಾನದಿಂದಲೇ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಆದ್ರೆ, ಸೋನಿಯಾ ಗಾಂಧಿ ಹಾಗೂ ರಾಹುಲ್​​ ಗಾಂಧಿಗೆ ಅತ್ಯಾಪ್ತರಾಗಿರುವ  ಬಿಕೆ ಹರಿಪ್ರಸಾದ್ ಸೈಲೆಂಟ್ ಆಗಿಯೇ ಏಕಾಂಗಿಯಾಗಿ ದೆಹಲಿ ತೆರಳಿ ಇಂದು (ನವೆಂಬರ್ 24) ಮಧ್ಯಾಹ್ನ 12 ಗಂಟೆಗೆ ರಾಹುಲ್ ಗಾಂಧಿ ಅವರನ್ನ ಭೇಟಿ ಮಾಡಿದ್ದು, ಕರ್ನಾಟಕ ಕಾಂಗ್ರೆಸ್​​ನಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಶೀಘ್ರವೇ ಎಲ್ಲಾ ಗೊಂದಲಗಳಿಗೆ ಬ್ರೇಕ್ ಹಾಕುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಹೇಳುವುದಕ್ಕೆ ನನ್ನ ಹತ್ತಿರ ಏನೂ ಇಲ್ಲ: ಸಿಎಂ ಕುರ್ಚಿ ಕಿತ್ತಾಟಕ್ಕೆ ಅಸಹಾಯಕತೆ ಹೊರಹಾಕಿದ ಖರ್ಗೆ

ರಾಹುಲ್ ಗಾಂಧಿಗೆ ಹರಿಪ್ರಸಾದ್ ಹೇಳಿದ್ದೇನು?

ಡಿಕೆ ಶಿವಕುಮಾರ್ ಬಣದ ದೆಹಲಿ ಭೇಟಿ ಹೆಚ್ಚಾದರೆ ಸಿಎಂ ಸಿದ್ದರಾಮಯ್ಯನವರ ಬಣದಿಂದಲೂ ಒತ್ತಡ ಹೆಚ್ಚಾಗಬಹುದು. ಇದರಿಂದ ಪಕ್ಷಕ್ಕೆ ಹೆಚ್ಚು ಡ್ಯಾಮೇಜ್ ಆಗಲಿದೆ. ಹೀಗಾಗಿ ಶೀಘ್ರವೇ ಒಂದು ಅಂತಿಮ ತೀರ್ಮಾನಕ್ಕೆ ಬಂದು ಈ ಬಣ ರಾಜಕೀಯಕ್ಕೆ ಬ್ರೇಕ್ ಹಾಕಬೇಕೆಂದು ಮನವಿ ಮಾಡಿದ್ದಾರೆ.

ಇನ್ನು ಕರ್ನಾಟಕ ಕಾಂಗ್ರೆಸ್​​ನಲ್ಲಿ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳ ಬಗ್ಗೆ ರಾಹುಲ್ ಗಾಂಧಿ, ಹರಿಪ್ರಸಾದ್ ಅವರಿಂದ ಸಂಪೂರ್ಣವಾಗಿ ಪಡೆದುಕೊಂಡಿದ್ದು, ಮುಂದೆ ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎನ್ನುವುದೇ ತೀವ್ರ ಕುತೂಹಲ ಮೂಡಿಸಿದೆ.

ಇನ್ನು ರಾಹುಲ್ ಗಾಂಧಿ ಭೇಟಿ ಮಾಡಿ ಆಚೆ ಬಂದ ಹರಿಪ್ರಸಾದ್, ಏನೆಲ್ಲಾ ಚರ್ಚೆ ಆಯ್ತು ಎನ್ನುವ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಲು ನಿರಾಕರಿಸಿದ್ದು, ಎಲ್ಲವೂ ಸುಭೀಕ್ಷವಾಗಿದೆ ಎಂದಷ್ಟೆ ಹೇಳಿ ತೆರಳಿದರು

ನಾಳೆ ಖರ್ಗೆ ಜೊತೆ ರಾಹುಲ್ ಮಾತುಕತೆ ಸಾಧ್ಯತೆ

ಇನ್ನು ಬೆಂಗಳೂರಿನಲ್ಲೇ ಇದ್ದುಕೊಂಡು ಕರ್ನಾಟಕ ಕಾಂಗ್ರೆಸ್​​ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಅವರು ನಾಳೆ (ನವೆಂಬರ್ 25) ದೆಹಲಿಗೆ ತೆರಳಲಿದ್ದಾರೆ. ಬಳಿಕ ರಾಹುಲ್ ಗಾಂಧಿ ಹಾಗೂ ಖರ್ಗೆ ಮುಖಾಮುಖಿ ಭೇಟಿಯಾಗಿ ರಾಜ್ಯ ಕಾಂಗ್ರೆಸ್​​ನಲ್ಲಿ ಉಲ್ಬಣಿಸಿರುವ ಬಣ ರಾಜಕೀಯ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಒಂದು ವೇಳೆ ನಾಯಕತ್ವ ಬದಲಾವಣೆ ಮಾಡಿದ್ರೆ ಏನಾಗುತ್ತೆ? ಮಾಡದೇ ಇದ್ದರೆ ಏನಾಗಬಹುದು ಎಂದು ಖರ್ಗೆ ಅವರು ರಾಹುಲ್​​ ಗಾಂಧಿ ಮುಂದೆ ವಿವರಿಸಲಿದ್ದಾರೆ. ಈ ಎಲ್ಲಾ ಸಾಧಕ ಬಾಧಕಗಳನ್ನು ಅವಲೋಕಿಸಿ ರಾಹುಲ್ ಗಾಂಧಿ ಒಂದು ತೀರ್ಮಾನಕ್ಕೆ ಬಂದು ಸದ್ಯ ಕಾಂಗ್ರೆಸ್​​​ನಲ್ಲಿ ಬಣ ಬಡಿದಾಟಕ್ಕೆ ಬ್ರೇಕ್ ಹಾಕುವ ಎಲ್ಲಾ ಸಾಧ್ಯತೆಗಳಿವೆ. ಒಂದು ವೇಳೆ ಇದನ್ನು ಹಾಗೆ ಬಿಟ್ಟರೆ ಪರಿಸ್ಥಿತಿ ಇನ್ನೊಂದು ಹಂತಕ್ಕೆ ಹೋಗಲಿದೆ. ಇದರಿಂದ ಇದಕ್ಕೆ ಆಸ್ಪದ ನೀಡದೇ ರಾಹುಲ್ ಗಾಂಧಿ ಡಿಕೆಶಿ-ಸಿದ್ದರಾಮಯ್ಯ ಬಣ ರಾಜಕೀಯಕ್ಕೆ ಇತಿಶ್ರೀ ಹಾಡಲಿದ್ದಾರೆ.

ಒಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​ ಬಣ ಬಡಿದಾಟ ಕ್ಲೈಮ್ಯಾಕ್ಸ್​ ಹಂತಕ್ಕೆ ಬಂದಿದ್ದು, ಖರ್ಗೆ-ರಾಹುಲ್ ಗಾಂಧಿ ಸಭೆ ಮಾಡಿ ಯಾವ ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನುವುದೇ ಕುತೂಹಲಕ್ಕೆ ಕಾರಣವಾಗಿದೆ.