
ಬೆಂಗಳೂರು, ನವೆಂಬರ್ 22: ಕರ್ನಾಟಕ ಕಾಂಗ್ರೆಸ್‌ನಲ್ಲಿ (Congress) ಅಧಿಕಾರ ಹಂಚಿಕೆ ಸಂಬಂಧಿತ ರಾಜಕೀಯ ಬೆಳವಣಿಗೆಗಳು ತೀವ್ರ ಸ್ವರೂಪ ಪಡೆದುಕೊಂಡಿವೆ. ಈಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಎಚ್ಚರಿಕೆ ಹೆಜ್ಜೆ ಇಡುತ್ತಿದ್ದು, ಆಪ್ತ ಸಚಿವರೊಂದಿಗೆ ಸಭೆಗಳನ್ನು ನಡೆಸುತ್ತಿದ್ದಾರೆ. ಡಿನ್ನರ್ ಮೀಟಿಂಗ್ ನಂತರ ಇದೀಗ ಇಂದೂ ಕೂಡ ಸಿದ್ದರಾಮಯ್ಯ ಆಪ್ತ ಸಚಿವರ ಜತೆ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸಭೆಯಲ್ಲಿ ಮುಂದಿನ ರಾಜಕೀಯ ನಡೆಗಳು ಮತ್ತು ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.
ಅಧಿಕಾರ ಹಸ್ತಾಂತರದ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಈ ಬೆಳವಣಿಗೆಗಳಿಂದ ಬಹಿರಂಗವಾಗಿದೆ. ಸಿಎಂ ಸಿದ್ದರಾಮಯ್ಯ ಅವರು ತಾವು ಇನ್ನೂ ಎರಡುವರೆ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯುವುದಲ್ಲದೆ, ಎರಡು ಬಜೆಟ್‌ಗಳನ್ನು ಸಹ ಮಂಡಿಸುವುದಾಗಿ ಈಗಾಗಲೇ ಬಹಿರಂಗ ಹೇಳಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ‘ಆಲ್ ದಿ ಬೆಸ್ಟ್’ ಎಂದು ಹೇಳಿರುವುದೇನೋ ನಿಜ. ಆದರೆ, ಆಂತರಿಕವಾಗಿ ಡಿಕೆ ಶಿವಕುಮಾರ್ ಅವರಿಂದಲೂ ಸಿಎಂ ಪಟ್ಟಕ್ಕಾಗಿ ಪ್ರಯತ್ನಗಳು ನಡೆಯುತ್ತಿರುವುದು ಸ್ಪಷ್ಟವಾಗಿದೆ ಎಂಬುದು ತಿಳಿದುಬಂದಿದೆ.
ಡಿಕೆ ಶಿವಕುಮಾರ್ ಆಪ್ತ ಶಾಸಕರು ದೆಹಲಿಗೆ ಭೇಟಿ ನೀಡಿ ವರಿಷ್ಠರ ಮೇಲೆ ಮಧ್ಯಪ್ರವೇಶಿಸಲು ಒತ್ತಡ ಹೇರುವ ತಂತ್ರ ಅನುಸರಿಸಿದ್ದಾರೆ. ಈ ಬೆಳವಣಣಿಗೆಗಳ ಬೆನ್ನಲ್ಲೇ ಸಿದ್ದರಾಮಯ್ಯ ಅವರ ಬಣ ಮಹತ್ವದ ಸಭೆಗಳನ್ನು ಆಯೋಜಿಸಿದೆ. ಡಿಕೆ ಬೆಂಬಲಿತ ಶಾಸಕರಿಗೆ ಹೇಗೆ ಪ್ರತಿತಂತ್ರ ರೂಪಿಸಬೇಕು, ಪಕ್ಷದೊಳಗೆ ತಮ್ಮ ಸ್ಥಾನಮಾನವನ್ನು ಹೇಗೆ ಬಲಪಡಿಸಿಕೊಳ್ಳಬೇಕು ಎಂಬ ಬಗ್ಗೆ ಈ ಸಭೆಗಳಲ್ಲಿ ಚರ್ಚೆ ನಡೆಯುತ್ತಿದೆ. ಬಹಿರಂಗವಾಗಿ ಯಾವುದೇ ಹೇಳಿಕೆಗಳನ್ನು ನೀಡದಂತೆ ಹೈಕಮಾಂಡ್‌ನಿಂದ ಸೂಚನೆ ಇದ್ದರೂ, ನಾಯಕತ್ವ ಬದಲಾವಣೆಯ ಬಗ್ಗೆ ಆಗಾಗ್ಗೆ ಹೇಳಿಕೆಗಳು ಬರುತ್ತಿರುವುದು ಪಕ್ಷದೊಳಗೆ ಬಿಕ್ಕಟ್ಟನ್ನು ಇನ್ನಷ್ಟು ಹೆಚ್ಚಿಸಿದೆ.
ಸಚಿವರಾದ ಸತೀಶ್ ಜಾರಕಿಹೊಳಿ, ಪರಮೇಶ್ವರ್, ಮಹಾದೇವಪ್ಪ ಸೇರಿದಂತೆ ಸಿದ್ದರಾಮಯ್ಯ ಅವರ ಆಪ್ತ ವಲಯದ ಸಚಿವರು ಐದು ವರ್ಷಗಳ ಕಾಲ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂದು ಪ್ರತಿಪಾದಿಸುತ್ತಿದ್ದಾರೆ. ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರೂ, ಸಿದ್ದರಾಮಯ್ಯನವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಶಾಸಕರನ್ನು ಹಿಡಿದಿಟ್ಟುಕೊಳ್ಳುವ ತಂತ್ರಗಳನ್ನು ರೂಪಿಸಬೇಕಿದೆ ಎಂದು ಈ ಸಚಿವರು ಅಭಿಪ್ರಾಯಪಟ್ಟಿದ್ದಾರೆ. ಈ ಕಾರಣಕ್ಕಾಗಿಯೇ ಇಂದಿನ ಸಭೆ ಮಹತ್ವ ಪಡೆದುಕೊಂಡಿದೆ.
ಇದನ್ನೂ ಓದಿ: ಯಡಿಯೂರಪ್ಪ ಸಿಎಂ ಆಗೋ ಮುನ್ನ ಪೂಜೆ ಸಲ್ಲಿಸಿದ್ದ ಜೇನುಕಲ್ ಸಿದ್ದೇಶ್ವರ ಸ್ವಾಮಿ ಪಾದುಕೆಗೆ ಡಿಕೆಶಿ ಮನೇಲಿ ಪೂಜೆ!
ಇದಲ್ಲದೆ, ಇಂದು ಸಂಜೆ ಸಿಎಂ ಸಿದ್ದರಾಮಯ್ಯ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸದಾಶಿವನಗರದಲ್ಲಿರುವ ಅವರ ನಿವಾಸದಲ್ಲಿ ಭೇಟಿ ಮಾಡಲಿದ್ದಾರೆ. ಈ ಭೇಟಿಯಲ್ಲಿ ರಾಜ್ಯದ ರಾಜಕೀಯ ಬೆಳವಣಿಗೆಗಳು, ಬಣ ರಾಜಕೀಯ ಮತ್ತು ಪಕ್ಷದೊಳಗಿನ ಭಿನ್ನಾಭಿಪ್ರಾಯಗಳ ಕುರಿತು ಚರ್ಚಿಸುವ ಸಾಧ್ಯತೆ ಇದೆ. ಕಾಂಗ್ರೆಸ್ ಹೈಕಮಾಂಡ್ ಅಧಿಕಾರ ಹಂಚಿಕೆಯ ‘ಬಿಸಿ ತುಪ್ಪ’ವನ್ನು ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಮತ್ತೊಂದೆಡೆ, ಕಾಂಗ್ರೆಸ್ ಶಾಸಕರ ದೆಹಲಿ ಯಾತ್ರೆ ಮುಂದುವರಿಯುವ ಸುಳಿವು ದೊರೆತಿದೆ. ಈಗಾಗಲೇ ಡಿಕೆಶಿ ಬಣದ ಒಂದಷ್ಟು ಮಂದಿ ಶಾಸಕರು ದೆಹಲಿಗೆ ಹೋಗಿದ್ದು, ಇನ್ನೊಂದು ಸುತ್ತಿನಲ್ಲಿ ಸೋಮವಾರ ದೆಹಲಿಗೆ ಹೋಗಲು ಹಲವು ಮಂದಿ ಶಾಸಕರು ಸಿದ್ಧರಾಗಿದ್ದಾರೆ. ಪಕ್ಷದ ಉಸ್ತುವಾರಿ ರಣದೀಪ್ ಸುರ್ಜವಾಲಾ ಟ್ವಿಟ್‌ಗೆ ತಲೆಕೆಡಿಸಿಕೊಳ್ಳದ ಶಾಸಕರು, ಸಮಯ-ಸಂದರ್ಭ ಪರಿಶೀಲಿಸಿ ದೆಹಲಿಗೆ ತೆರಳಲು ಉದ್ದೇಶಿಸಿದ್ದಾರೆ. ಪ್ರತೇಕವಾಗಿ ಶಾಸಕರು ದೆಹಲಿಗೆ ತೆರಳಲು ಪ್ಲ್ಯಾನ್ ಮಾಡಿದ್ದಾರೆ. ಬೇರೆ ಬೇರೆ ಸ್ಥಳಗಳಿಂದ ದೆಹಲಿಗೆ ತೆರಳಲು ಶಾಸಕರು ಸಿದ್ಧರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.