Covid-19; ರಾಜ್ಯದಲ್ಲಿ ಮತ್ತೆ ಏರುಗತಿಯಲ್ಲಿ ಕೋವಿಡ್; 1,400ರ ಗಡಿ ದಾಟಿದ ಸಕ್ರಿಯ ಪ್ರಕರಣ
ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಹಾವಳಿ ಮತ್ತೆ ಹೆಚ್ಚಾಗುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,400 ದಾಟಿದೆ.
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ (Coronavirus) ಸೋಂಕಿನ ಹಾವಳಿ ಮತ್ತೆ ಹೆಚ್ಚಾಗುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,400 ದಾಟಿದೆ. ಈ ಪೈಕಿ ಬೆಂಗಳೂರು ನಗರ (Bengaluru Urban) ವ್ಯಾಪ್ತಿಯಲ್ಲೇ ಶೇ 59ರಷ್ಟು ಹೊಸ ಪ್ರಕರಣಗಳು ದೃಢಪಟ್ಟಿವೆ. ಏಪ್ರಿಲ್ 1ರಂದು ರಾಜ್ಯದಲ್ಲಿ 284 ಕೋವಿಡ್ ಪ್ರಕರಣಗಳು ವರದಿಯಾಗಿದ್ದವು. ರಾಜ್ಯದ ದೈನಂದಿನ ಪಾಸಿಟಿವಿಟಿ ಪ್ರಮಾಣ ಸದ್ಯ ಶೇ 3.2ರಷ್ಟಿದೆ. ಬೆಂಗಳೂರಿನಲ್ಲಿ ಮಾರ್ಚ್ 1ರ ನಂತರ ಈವರೆಗೆ ಕೋವಿಡ್‌ನಿಂದಾಗಿ ಮೂರು ಸಾವು ಸಂಭವಿಸಿವೆ. XBB.1.16 ರೂಪಾಂತರವು ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಲು ಕಾರಣವಾಗುತ್ತಿವೆ. ಪತ್ತೆಯಾದ ಪ್ರಕರಣಗಳ ಪೈಕಿ ಹೆಚ್ಚಿನವರಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ. ಕೆಲವರಲ್ಲಿ ಸೌಮ್ಯ ಲಕ್ಷಣಗಳು ಕಂಡುಬಂದಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಿ. ರಣದೀಪ್ ತಿಳಿಸಿದ್ದಾರೆ.
ಮೃತಪಟ್ಟವರಲ್ಲಿ ಏಕಕಾಲಕ್ಕೆ ಎರಡೆರಡು ಸೋಂಕು ಪತ್ತೆಯಾಗಿದ್ದವು. ಸಾವಿಗೆ ಪ್ರಾಥಮಿಕ ಕಾರಣ ಕೋವಿಡ್ ಅಲ್ಲ ಎಂದು ರಣದೀಪ್ ತಿಳಿಸಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ಕೋವಿಡ್ ಪ್ರಕರಣಗಳಲ್ಲಿ ದಿಢೀರ್ ಹೆಚ್ಚಳ ಕಂಡುಬಂದಿರುವುದು ಕಳವಳಕಾರಿಯಾಗಿದೆ. ಆದರೆ, ಆಸ್ಪತ್ರೆಗೆ ದಾಖಲಾಗುತ್ತಿರುವವರ ಪ್ರಮಾಣ ಹೆಚ್ಚಾಗದಿರುವುದು ನಾವು ನಿಕಟವಾಗಿ ಗಮನಿಸಿದಾಗ ತಿಳಿದುಬಂದಿದೆ. ಸೋಂಕಿತರಲ್ಲಿ ಹೆಚ್ಚಿನವರು ಲಕ್ಷಣರಹಿತರು ಮತ್ತು ಸೌಮ್ಯ ಲಕ್ಷಣಗಳನ್ನು ಹೊಂದಿರುವವರಾಗಿದ್ದಾರೆ ಎಂದು ರಣದೀಪ್ ಮಾಹಿತಿ ನೀಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ: ಸಾತನೂರಿನಲ್ಲಿ ಮುಸ್ಲಿಂ ಯುವಕನ ಬಳಿ 2 ಲಕ್ಷ ನೀಡುವಂತೆ ಪೀಡಿಸಿ ನಂತರ ಕೊಂದಿದ್ದಾರೆ: ಡಿಕೆ ಶಿವಕುಮಾರ್ ಆರೋಪ
XBB.1.16. ರೂಪಾಂತರದಿಂದ ಹರಡುವ ಕೋವಿಡ್ ಸೋಂಕಿನಲ್ಲಿ ಆಸ್ಪತ್ರೆಗೆ ದಾಖಲಾತಿ ಕಡಿಮೆ ಇರಲಿದೆ ಎಂದು ಬೆಂಗಳೂರಿನ ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆಯ ನಿರ್ದೇಶಕ ಡಾ. ನಾಗರಾಜ್ ತಿಳಿಸಿದ್ದಾರೆ. ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ, ಕಳೆದ 20 ದಿನಗಳಲ್ಲಿ ಕೋವಿಡ್‌ನಿಂದಾಗಿ ಐವರು ರೋಗಿಗಳನ್ನು ದಾಖಲಿಸಿಕೊಳ್ಳಲಾಗಿದೆ. ಈ ಪೈಕಿ ಹೆಚ್ಚಿನವರು ಬೇರೆ ಸೋಂಕಿನಿಂದಲೂ ಬಳಲುತ್ತಿದ್ದರು ಎಂದು ಖಾಸಗಿ ಆಸ್ಪತ್ರೆಗಳ ಮತ್ತು ನರ್ಸಿಂಗ್ ಹೋಮ್ಗಳ ಸಂಘಟನೆಯ ಅಧ್ಯಕ್ಷ ಡಾ. ಗೋವಿಂದಯ್ಯ ಯತೀಶ್ ತಿಳಿಸಿರುವುದಾಗಿ ವರದಿ ಹೇಳಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:44 pm, Mon, 3 April 23