ಬೆಂಗಳೂರು: ಕರ್ನಾಟಕದಲ್ಲಿ ಮಂಗಳವಾರ (ಏಪ್ರಿಲ್ 6) ಹೊಸದಾಗಿ 6,150 ಮಂದಿಯಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಕರ್ನಾಟಕದ ಒಟ್ಟು ಸೋಂಕಿತರ ಸಂಖ್ಯೆ 10,26,584ಕ್ಕೆ (10.26 ಲಕ್ಷ) ಏರಿಕೆಯಾಗಿದೆ. ಕೊರೊನಾದಿಂದ ರಾಜ್ಯದಲ್ಲಿ ಇಂದು 39 ಜನರು ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ 12,696ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 9,68,762 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 45,107 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಜಿಲ್ಲಾವಾರು ಸೋಂಕಿತರ ಮಾಹಿತಿ ಇಲ್ಲಿದೆ.
ಬೆಂಗಳೂರಿನಲ್ಲಿ ಇಂದು ಒಂದೇ ದಿನ 4,266 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 4,55,025ಕ್ಕೆ (4.55 ಲಕ್ಷ) ಏರಿಕೆಯಾಗಿದೆ. ಸೋಂಕಿತರ ಪೈಕಿ 4,17,726 ಜನರು ಗುಣಮುಖರಾಗಿದ್ದಾರೆ. ಕೊರೊನಾ ಸೋಂಕಿಗೆ ನಗರದಲ್ಲಿ 26 ಜನರು ಮೃತಪಟ್ಟಿದ್ದಾರೆ. ಮೃತರ ಒಟ್ಟು ಸಂಖ್ಯೆಯು 4,693ಕ್ಕೆ ಏರಿಕೆಯಾಗಿದೆ. 32,605 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರಿನ ಧರ್ಮರಾಯಸ್ವಾಮಿ ದೇಗುಲದ ಪಕ್ಕದ ಒಂದೇ ಕಟ್ಟಡದಲ್ಲಿ 40 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಜಿಲ್ಲಾವಾರು ಸೋಂಕು ಪ್ರಕರಣಗಳಲ್ಲೂ ಏರಿಕೆ ಕಂಡುಬಂದಿದೆ. ಬೆಂಗಳೂರು ನಗರ ಜಿಲ್ಲೆ ಹೊರತುಪಡಿಸಿದರೆ ಇತರ ಆರು ಜಿಲ್ಲೆಗಳಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಮೂರಂಕಿ ದಾಟಿದೆ. ಕಲಬುರ್ಗಿ 261, ಮೈಸೂರು 237, ಬೀದರ್ 167, ತುಮಕೂರು 157, ಹಾಸನ 110, ಮಂಡ್ಯ 102 ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ.
ಉಳಿದಂತೆ ದಕ್ಷಿಣ ಕನ್ನಡ 89, ಬಳ್ಳಾರಿ 87, ಬೆಂಗಳೂರು ಗ್ರಾಮಾಂತರ 80, ಉತ್ತರ ಕನ್ನಡ 66, ಉಡುಪಿ 57, ಕೋಲಾರ 56, ಶಿವಮೊಗ್ಗ 49, ಬೆಳಗಾವಿ 47, ದಾವಣಗೆರೆ 47, ಧಾರವಾಡ 43, ಚಿಕ್ಕಮಗಳೂರು 29, ರಾಯಚೂರು 29, ಕೊಡಗು 22, ವಿಜಯಪುರ 22, ಚಿತ್ರದುರ್ಗ 21, ಕೊಪ್ಪಳ 20, ಬಾಗಲಕೋಟೆ 18, ಚಿಕ್ಕಬಳ್ಳಾಪುರ 16, ಯಾದಗಿರಿ 16, ರಾಮನಗರ 14, ಗದಗ 12, ಚಾಮರಾಜನಗರ 5, ಹಾವೇರಿ 5 ಪ್ರಕರಣಗಳು ದಾಖಲಾಗಿವೆ.
ಕೊಪ್ಪಳ ಜಿಲ್ಲೆಯಲ್ಲಿ ಇಂದು 23 ಜನರಿಗೆ ಕೊರೊನಾ ಪಾಸಿಟಿವ್ ವರದಿ ಬರುವುದರೊಂದಿಗೆ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 14,147ಕ್ಕೇರಿದೆ. ಗಂಗಾವತಿ 6, ಕೊಪ್ಪಳ 7, ಕುಷ್ಟಗಿಯಲ್ಲಿ 10 ಜನರಲ್ಲಿ ಕೊರೊನಾ ದೃಢಪಟ್ಟಿದೆ. ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಹೊಸದಾಗಿ 102 ಜನರಲ್ಲಿ ಸೋಂಕು ದೃಢಪಟ್ಟಿದೆ. ಮಂಡ್ಯ ಜಿಲ್ಲೆಯಲ್ಲಿ ಸೋಂಕಿತರ ಒಟ್ಟು ಸಂಖ್ಯೆ 20,426ಕ್ಕೆ ಏರಿಕೆಯಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಇಂದು ಕೊರೊನಾಗೆ ಓರ್ವ ವ್ಯಕ್ತಿ ಬಲಿಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಕೊರೊನಾಗೆ ಬಲಿಯಾದವರ ಸಂಖ್ಯೆ 161 ಮುಟ್ಟಿದೆ.
ಮೈಸೂರು ಪಾಲಿಕೆಯ 194 ಸಿಬ್ಬಂದಿಗೆ ಇಂದು ಕೊರೊನಾ ಟೆಸ್ಟ್ ಮಾಡಲಾಯಿತು. ಪಾಲಿಕೆಯ 10 ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪಾಲಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ಎಲ್ಲ ಸಿಬ್ಬಂದಿಯನ್ನೂ ತಪಾಸಣೆಗೆ ಒಳಪಡಿಸಲಾಯಿತು.
ಇಂದಿನ 06/04/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/WoTLNOwQhQ @mla_sudhakar @PriyankKharge @BelladArvind @kiranshaw @WFRising @BangaloreBuzz @RCBTweets @NammaKarnataka_@ADinfodeptBIDAR @MangaloreCity pic.twitter.com/OCOijVehas
— K’taka Health Dept (@DHFWKA) April 6, 2021
ದೇಶದಲ್ಲಿ ಲಕ್ಷದ ಸನಿಹಕ್ಕೆ ಸೋಂಕಿನ ಸಂಖ್ಯೆ
ದೇಶದಲ್ಲಿ ಸೋಮವಾರ 96,982 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ. 446 ಮಂದಿ ಕೊರೊನಾ ಸಂಬಂಧಿತ ಸಮಸ್ಯೆಗಳಿಂದ ಮೃತಪಟ್ಟಿದ್ದಾರೆ. ದೇಶದ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 1,26,86,049ಕ್ಕೆ ಏರಿಕೆಯಾಗಿದ್ದು, ಮೃತರ ಸಂಖ್ಯೆ 1,65,547ಕ್ಕೆ ಮುಟ್ಟಿದೆ. ಸೋಮವಾರ ದಿನದಂತ್ಯದ ಹೊತ್ತಿಗೆ ದೇಶದಲ್ಲಿ 43 ಲಕ್ಷ ಮಂದಿಗೆ ಲಸಿಕೆ ಹಾಕಲಾಯಿತು. ಇದರೊಂದಿಗೆ ಲಸಿಕೆ ಪಡೆದವರ ಒಟ್ಟು ಸಂಖ್ಯೆ 8,31,10,926ಕ್ಕೆ ಮುಟ್ಟಿದೆ.