
ಬಾಗಲಕೋಟೆ: ಕನ್ನಡದ ಕೋಟ್ಯಾಧಿಪತಿಯಲ್ಲಿ ಭಾಗವಹಿಸಿದ್ದ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಅಮಲಝರಿ ಗ್ರಾಮದಲ್ಲಿ ನಡೆದಿದೆ. ಹೆಸ್ಕಾಂ ಲೈನ್ ಮನ್ ಆಗಿದ್ದ ತಿಮ್ಮಣ್ಣ ಗುರಡ್ಡಿ (27) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲದ ಹೊರೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.
ಮುಧೋಳ ತಾಲೂಕಿನ ಮಂಟೂರ ವ್ಯಾಪ್ತಿಯ ತೋಟದ ಮನೆಯಲ್ಲಿ ತಿಮ್ಮಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಟ ರಮೇಶ್ ಅರವಿಂದ್ ನಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಧಿಪತಿಯಲ್ಲಿ ತಿಮ್ಮಣ್ಣ ಭಾಗವಹಿಸಿದ್ದರು. ಎಸ್ಎಸ್ಎಲ್ಸಿ ಓದಿದ್ದ ತಿಮ್ಮಣ್ಣ ಕನ್ನಡದ ಕೋಟ್ಯಧಿಪತಿಯಲ್ಲಿ 6.40 ಲಕ್ಷ ರೂ. ಗೆದ್ದಿದ್ದರು. ಟಿಕ್ ಟಾಕ್, ಹಾಸ್ಯ, ಸಂಗೀತದ ಮೂಲಕ ಅಭಿಮಾನಿಗಳನ್ನು ಹೊಂದಿದ್ದ ತಿಮ್ಮಣ್ಣ ಖೋ ಖೋ ಕ್ರೀಡಾಪಟು ಸಹ ಆಗಿದ್ದರು.
ಇಂದು ತಿಮ್ಮಣ್ಣನವರ ಹೊಸಮನೆ ಗೃಹಪ್ರವೇಶ ಇತ್ತು. ತಿಮ್ಮಣ್ಣ ತಾನು ದುಡಿದ ಹಾಗೂ ಸಾಲ ಮಾಡಿಕೊಂಡು ನಿರ್ಮಿಸಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. 18 ಲಕ್ಷ ರೂ. ಖರ್ಚು ಮಾಡಿ ಮನೆ ಕಟ್ಟಿಸಿದ್ದರು. ಗೃಹಪ್ರವೇಶಕ್ಕೆ ಬಬಲಾದಿ ಸ್ವಾಮೀಜಿಗೆ ಆಹ್ವಾನಿಸಲಾಗಿತ್ತು. ಹೊಸಮನೆ ಪ್ರವೇಶಕ್ಕೂ ಮುನ್ನವೇ ತಿಮ್ಮಣ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಜಗಳ ವಿಕೋಪಕ್ಕೆ ತಿರುಗಿ ಪತ್ನಿಯ ಕತ್ತು ಹಿಸುಕಿ ಕೊಲೆಗೈದ ಪತಿ
ಬೆಂಗಳೂರು ಗ್ರಾ. ಜಿಲ್ಲೆ ನೆಲಮಂಗಲ ತಾಲೂಕಿನ ದಾಬಸ್‌ಪೇಟೆಯ ಅನ್ನಪೂರ್ಣೇಶ್ವರಿ ಲೇಔಟ್‌ನಲ್ಲಿ ಪತ್ನಿಯ ಕತ್ತು ಹಿಸುಕಿ ಪತಿ ಕೊಲೆ ಮಾಡಿರುವ ಘಟನೆ ನಡೆದಿದೆ. ವನಿತಾ(25)ಳನ್ನು ಕೊಂದು ಪತಿ ರಾಮು(27) ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆ. ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಯಲ್ಲಿ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ
ಗಂಡ ಮತ್ತು ಗಂಡನ ಮನೆಯವರ ಕಿರುಕುಳದಿಂದ ಬೇಸತ್ತು ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೊಡ್ಡಬಳ್ಳಾಪುರ ನಗರದ ತ್ಯಾಗರಾಜನಗರದಲ್ಲಿ ನಡೆದಿದೆ. ವಂದನಾ ಮೃತ ದುರ್ದೈವಿ. ಆರು ವರ್ಷಗಳ ಕಾಲ ಪ್ರೀತಿಸಿ ಕಳೆದ ವರ್ಷವಷ್ಟೇ ಮದುವೆಯಾಗಿದ್ದ ವಂದನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತ್ಯಾಗರಾಜನಗರ ನಿವಾಸಿ ಗೌತಮ್ ನನ್ನ ಪ್ರೀತಿಸಿ ಮನೆಯವರ ಒಪ್ಪಿಗೆ ಮೆರೆಗೆ ವಂದನಾ ವಿವಾಹವಾಗಿದ್ದರು. ಅಂತರಜಾತಿ ವಿವಾಹವಾದ್ರು ಮಗಳ ಪ್ರೀತಿ ಒಪ್ಪಿ ಕುಟುಂಬಸ್ಥರು ಮದುವೆ ಮಾಡಿದ್ದರು. ಆದ್ರೆ ಮದುವೆಯಾದ ಒಂದು ತಿಂಗಳಿಗೆ ಅತ್ತೆ ಮನೆಯಲ್ಲಿ ವಂದನಾಗೆ ಕಿರುಕುಳ ಆರೋಪ ಕೇಳಿ ಬಂದಿದೆ. ವರದಕ್ಷಿಣೆ, ಸಂಬಳ ಸೇರಿದಂತೆ ಹಲವು ವಿಚಾರದಲ್ಲಿ ಕಿರುಕುಳ ಆರೋಪ ಕೇಳಿ ಬಂದಿದ್ದು ಈ ಬಗ್ಗೆ ಹಲವು ಭಾರಿ ರಾಜಿ ಪಂಚಾಯಿತಿ ಕೂಡ ನಡೆದಿದೆ. ಆದ್ರೂ ಗಂಡ ಡ್ರಗ್ಸ್ ಗೆ ಅಡಿಟ್ ಆಗಿ ವಂದನಾಗೆ ಕಿರುಕುಳ ನೀಡ್ತಿದ್ದಾಗಿ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಕಳೆದ ಎರಡು ತಿಂಗಳಿಂದ ವಂದನಾ ತಾಯಿ ಮನೆಯಲ್ಲಿ ನೆಲಸಿದ್ದರು. ಈ ನಡುವೆ ಮತ್ತದೆ ಗಂಡನ ಕಿರುಕುಳದಿಂದ ಬೇಸತ್ತು ಮನೆಯಲ್ಲಿ ಪ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಂದನಾ ಸಾವಿಗೆ ಗಂಡ ಮತ್ತು ಅತ್ತೆಯ ಮನೆಯವರೆ ಕಾರಣ ಅಂತ ವಂದನಾ ತವರು ಮನೆಯವರು ಆರೋಪಿಸಿದ್ದಾರೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾದಕ ವಸ್ತು ಮಾರಾಟಗಾರರ ಬಂಧನ
ಪರಪ್ಪನ ಅಗ್ರಹಾರ ಪೊಲೀಸರು ಕಾರ್ಯಾಚರಣೆ ನಡೆಸಿ ಮಾದಕ ವಸ್ತು, ಹ್ಯಾಶಿಷ್ ಆಯಿಲ್ ಮಾರಾಟ ಮಾಡುತ್ತಿದ್ದ ದಂಧೆಕೋರರನ್ನು ಬಂಧಿಸಿದ್ದಾರೆ. ಆಂಧ್ರ ಮೂಲದ ಪುರುಷೋತ್ತಮ್(52), ಮಲ್ಲೇಶ್ವರ ರಾವ್ ಬಂಧಿತ ಆರೋಪಿಗಳು. ಆರೋಪಿಗಳಿಂದ 1 ಕೆಜಿ 164 ಗ್ರಾಂ ತೂಕದ ಹ್ಯಾಶಿಷ್ ಆಯಿಲ್ ವಶಕ್ಕೆ ಪಡೆಯಲಾಗಿದೆ. ಖಚಿತ ಮಾಹಿತಿ ಮೇರೆಗೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮಾದಕ ವಸ್ತು ಮಾರಾಟ ಮಾಡುವಾಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.